ನವದೆಹಲಿ: ಗುಜರಾತ್ ಪಾಟೀದಾರ್ ಯುವ ನಾಯಕ ಹಾರ್ದಿಕ್ ಪಟೇಲ್ ಸಲ್ಲಿಸಿದ್ದ ತುರ್ತು ವಿಚಾರಣೆ ಮನವಿಯನ್ನು ಸುಪ್ರೀಂ ಕೋರ್ಟು ತಳ್ಳಿಹಾಕಿದೆ. ಈ ಮೂಲಕ ಅತ್ಯಲ್ಪ ಕಾಲದಲ್ಲಿ ಗುಜರಾತಿನ ಪ್ರಬಲ ಸಮುದಾಯವೊಂದರ ನಾಯಕನಾಗಿ ಹೊರಹೊಮ್ಮಿ, ಗುಜರಾತಿನಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆಯುಂಟು ಮಾಡಿರುವ ಹಾರ್ದಿಕ್ ಪಟೇಲ್ ಈ ಸಲ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಮಂಕಾಗಿದೆ.
2015ರಲ್ಲಿ ನಡೆದ ಪಾಟೀದಾರ್ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಗೆ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ತಡೆಯಾಜ್ಞೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿತ್ತು. ಹೈಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಹಾರ್ದಿಕ್ ಪಟೇಲ್ ಸೋಮವಾರ ಸುಪ್ರೀಂ ಕೋರ್ಟಿನಲ್ಲಿ ತ್ವರಿತ ವಿಚಾರಣೆಗೆ ಕೋರಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠದ ಮುಂದೆ ಈ ಪ್ರಕರಣ ಪ್ರಸ್ತಾಪಗೊಂಡ ನಂತರ ಪೀಠವು, ‘ಈ ಪ್ರಕರಣದಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕೋರ್ಟ್ ಆದೇಶ ನೀಡಿದ್ದರಿಂದ ಇದರ ತ್ವರಿತ ವಿಚಾರಣೆಗೆ ಅಂತಹ ಅವಸರವೇನಿಲ್ಲ’ ಎಂದು ಅಭಿಪ್ರಾಯಪಟ್ಟಿತು.
ಗುಜರಾತಿನ ಮೆಹಸಾನಾ ಜಿಲ್ಲೆಯ ವಿಸ್ನಗರದ ಸೆಶನ್ಸ್ ನ್ಯಾಯಾಲಯವು ಹಾರ್ದಿಕ್ ಪಟೇಲ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕಳೆದ ಆಗಸ್ಟ್ ತಿಂಗಳಿನಲ್ಲಿ ತೀರ್ಪು ನೀಡಿತ್ತು. ಆ ತೀರ್ಪಿನ ವಿರುದ್ಧ ಹಾರ್ದಿಕ್ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ ನಂತರ ಸೆಶನ್ಸ್ ನ್ಯಾಯಾಲಯವ ವಿಧಿಸಿದ್ದ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿಡಲಾಗಿತ್ತು.
ಈ ನಡುವೆ ಮಾರ್ಚ್ 12ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಹಾರ್ದಿಕ್ ಪಟೇಲ್ ಗುಜರಾತಿನ ಜಮನಾಗರದಿಂದ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದರು. ಆದರೆ ಜನಪ್ರತಿನಿಧಿ ಕಾಯಿದೆಯ ಪ್ರಕಾರ ಅಭ್ಯರ್ಥಿಯೊಬ್ಬನಿಗೆ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದ್ದರೆ, ಆ ತೀರ್ಪಿಗೆ ತಡೆಯಾಜ್ಞೆ ತರದ ಹೊರತು ಆ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಹಾರ್ದಿಕ್ ಪಟೇಲ್ ಗೆ ವಿಧಿಸಿದ್ದ ಶಿಕ್ಷೆಯನ್ನು ಅಮಾನತಿನಲ್ಲಿಡಲಾಗಿತ್ತಾದರೂ ಶಿಕ್ಷೆಗೆ ತಡೆಯಾಜ್ಞೆ ದೊರೆತಿರಲಿಲ್ಲ. ಈ ಕಾರಣದಿಂದ ಗಡಬಡಿಸಿಕೊಂಡು ಶಿಕ್ಷೆಗೆ ತಡೆಯಾಜ್ಞೆ ಕೋಡಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಗುಜರಾತ್ ಹೈ ಕೋರ್ಟ್ ಮಾರ್ಚ್ 29ರಂದು ‘ತಡೆಯಾಜ್ಞೆ ಕೋರಿಕೆಯನ್ನು ತಳ್ಳಿ ಹಾಕಿತ್ತು.
ಅತ್ಯಂತ ಅಪರೂಪದಲ್ಲೇ ಅಪರೂಪದ ಪ್ರಕರಣದಲ್ಲಿ ಮಾತ್ರ ನ್ಯಾಯಾಲಯ ವಿಧಿಸಿದ ಶಿಕ್ಷೆಗೆ ತಡೆಯಾಜ್ಞೆ ವಿಧಿಸಬಹುದು ಎಂದು ಕಾನೂನು ಹೇಳುತ್ತದೆ. ಹಾರ್ದಿಕ್ ಪಟೇಲ್ ಪ್ರಕರಣ ಈ ರೀತಿಯ ಪ್ರಕರಣ ಅಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿತ್ತು.
ಹೈಕೋರ್ಟಿನ ಈ ತೀರ್ಪನ್ನು ಮತ್ತೆ ಪ್ರಶ್ನಿಸಿ ಹಾರ್ದಿಕ್ ಪಟೇಲ್ ಸುಪ್ರೀ ಕೋರ್ಟಿಗೆ ಮೊರೆಹೋಗಿ ತ್ವರಿತ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದರು.
ನಾಮಪತ್ರ ಸಲ್ಲಿಸಲು ಇರುವ ಕಡೆಯ ದಿನಾಂಕ ಏಪ್ರಿಲ್ 4 ಆಗಿದೆ. ಗುಜರಾತಿನ 26 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ.