ಒಂದಾನೊಂದು ಕಾಲದಲ್ಲಿ, ಹಾಗೆಂದು ತುಂಬಾ ಹಿಂದಿನ ಕಾಲದಲ್ಲಿ ಅಲ್ಲ, ಬಹಳ ರೀಸೆಂಟಾಗಿಯೇ, ಅಲ್ಲೊಂದು ಒಂದು ಕಾಡಿತ್ತು, ಅದು ಡೆಮಕ್ರಾಟಿಕ್ ಆಗಿತ್ತು. ಹೇಗೇ ಇದ್ದರೂ ಕಾಡು ಕಾಡೇ ಬಿಡಿ.
ಆ ಕಾಡಿನಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆ ಹತ್ತಿರ ಬಂತು. ಕಾಡಿನ ರಾಜ ಇದ್ದನಲ್ಲ ಟಾಕುಠೀಕಿನ ಮೃಗರಾಜ, ಸಿಂಹರಾಜ ಒಂದು ದಿನ ಆ ಕಾಡಿನ ಎಲ್ಲಾ ಪ್ರಾಣಿಗಳನ್ನು ಕರೆದ.
“ನನ್ನ ಪ್ರೀತಿಯ ನಿಷ್ಟಾವಂತ ಪ್ರಜೆಗಳೇ ನೀವೆಲ್ಲಾ ನನ್ನನ್ನು ಮುಂದಿನ ಐದು ವರ್ಷಕ್ಕೆ ಮತ್ತೆ ರಾಜನನ್ನಾಗಿ ಆರಿಸುತ್ತೀರಿ ಎಂದು ಬಲವಾಗಿ ನಂಬಿದ್ದೇನೆ” ಎಂದ ಸಿಂಹರಾಜ.
ಪ್ರಾಣಿಗಳೆಲ್ಲಾ ನಡುಗತೊಡಗಿದವು, ಒಳಗೊಳಗೇ ಗುಜುಗುಜು ಶುರುವಾಯಿತು.
ಆಗ ಮುಂದುವರೆದ ವನರಾಜ ಮತ್ತೆ ಹೇಳಿದ, “ಕಳೆದ ಐದು ವರ್ಷ ನಾನು ಅದ್ಭುತ ಕೆಲಸ ಮಾಡಿದ್ದೇನೆ. ಇಡೀ ಪ್ರಪಂಚವೇ ಈಗ ನಮ್ಮ ಕಾಡು ಇಡೀ ವಿಶ್ವದಲ್ಲೇ ಬಲಿಷ್ಠ ಕಾಡು ಎಂದು ಹೊಗಳುತ್ತಿದೆ. ಇದೆಲ್ಲಾ ಸಾಧ್ಯವಾಗಿದ್ದು ಕೇವಲ ನನ್ನಿಂದ. ನೀವು ನನ್ನನ್ನು ಮತ್ತೊಂದು ಅವಧಿಗೆ ಆರಿಸದೇ ಇರಲು ಕಾರಣವೇ ಇಲ್ಲ”.
ಸಂದಿಯಲ್ಲಿ ಕುಳಿತಿದ್ದ ಮೊಲವೊಂದು ಕೈ ಎತ್ತಿ ಹೇಳಿತು, “ಆದ್ರೆ…ಆದ್ರೆ…ಓ ಮಹಾರಾಜಾ, ನೀವು ಕಳೆದ ಸಲ ಹೇಳಿದ್ರಿ, ನಾನು ರಾಜನಾದ್ರೆ ಇಡೀ ಕಾಡಿನ ಪ್ರಾಣಿಗಳಿಗೆಲ್ಲಾ ಹೊಟ್ಟೆ ತುಂಬಾ ಊಟ ಕೊಡಿಸ್ತೀನಿ ಅಂತ. ಈಗ ನಾವೆಲ್ಲಾ ಹಸಿದಿದ್ದೇವೆ, ಮಾತ್ರವಲ್ಲ ಮೊಲಗಳನ್ನು ಬೇರೆ ಪ್ರಾಣಿಗಳೆಲ್ಲಾ ತಿನ್ನುತ್ತಾ ಇವೆ” ಎಂದಿತು.

ಸಿಂಹರಾಜ ಮುಗುಳ್ನಕ್ಕು ಉತ್ತರಿಸಿತು, “ಮೊಲಗಳನ್ನು ತಿನ್ನುವವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ. ಇನ್ನೂ ಯಾರನ್ನೂ ಹಿಡಿದಿಲ್ಲ, ಆದರೆ ಅವರನ್ನೆಲ್ಲಾ ಶಿಕ್ಷಿಸುತ್ತೇವೆ”
ಆನೆಯೊಂದು ಮುಂದೆ ಬಂದು ಸೊಂಡಿಲೆತ್ತಿ ಹೇಳಿತು. “ಅಲ್ಲಾ ರಾಜರೇ, ಎಲ್ಲರಿಗೂ ನೀರು ಸಿಗುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಿರಿ, ಆದರೆ ಎಲ್ಲಾ ನೀರಿನ ಬಾವಿಗಳೂ, ಕೆರೆ ತೊರೆಗಳೂ ಬತ್ತಿ ಹೋಗುತ್ತಿವೆಯಲ್ಲಾ” ಎಂದಿತು.
ಹೀಗೆ ಕೇಳಿದ ಆನೆಯನ್ನು ಕೆಕ್ಕರಿಸಿ ನೋಡಿದ ಸಿಂಹರಾಜ, “ಹೀಗೆ ಯಾಕೆ ಆಗಿದೆ ಎಂದರೆ ನಿಮ್ಮನ್ನು 70 ವರ್ಷ ಆಳಿದ ಹಿಂದಿನ ರಾಜ ಎಲ್ಲಾ ನೀರನ್ನೂ ಕುಡಿದುಬಿಟ್ಟ, ಈಗ ನಾನೇನು ಮಾಡಲು ಸಾಧ್ಯ? 70 ವರ್ಷದ ಹಿಂದೆಯೇ ನೀವು ನನ್ನ ಮುತ್ತಾತನನ್ನು ರಾಜನನ್ನಾಗಿ ಮಾಡಿದ್ದರೆ ಈ ಪರಿಸ್ಥಿತಿ ಇರುತ್ತಿರಲಿಲ್ಲ, ತಿಳಿಯಿತೇ?” ಎಂದು ಗದರಿತು.
ನರಿಯೊಂದು ಮೇಲೆ ಕೆಳಗೆ ನೋಡಿ ಚಾಣಾಕ್ಷತನದಿಂದ ಕೇಳಿತು, “ಅಲ್ಲಾ ಮಹಾರಾಜರೇ, ಈ ಕಾಡಿನಲ್ಲಿ ಮರ ಕಡಿದು ನಾಶ ಮಾಡಲು ಯಾರಿಗೂ ಅವಕಾಶ ಕೊಡುವುದಿಲ್ಲ, ಕಾಡನ್ನು ಪ್ರಾಣಿಗಳಿಗೇ ಉಳಿಸುತ್ತೇನೆ ಎಂದು ಮಾತು ಕೊಟ್ಟಿದ್ರಿ. ಆದರೆ ಯಾರೋ ಕೆಲವು ನಿರ್ದಿಷ್ಟ ವ್ಯಕ್ತಿಗಳು ನಮ್ಮ ಕಾಡನ್ನು ಮುಕ್ತವಾಗಿ ಬೇಕಾಬಿಟ್ಟಿ ಲೂಟಿ ಮಾಡಲು ಅವಕಾಶ ಕೊಟ್ಟಿದ್ದೀರಿ. ಕಾಡಿನ ಲೂಟಿ ಮಿತಿಮೀರಿ ನಮ್ಮ ಅಸ್ತಿತ್ವವೇ ಅಪಾಯಕ್ಕೆ ಸಿಲುಕಿದೆ” ಎಂದಿತು.
ಸಿಂಹರಾಜ ಸ್ವಲ್ಪ ಕಸಿವಿಸಿಯಿಂದಲೇ ಉತ್ತರಿಸಿತು, “ಆದರೆ ಇದರಿಂದ ನಿಮಗೆಲ್ಲಾ ಒಳ್ಳೇಯದಾಗುತ್ತದೆ. ನಿಮಗೆಲ್ಲಾ ವಿದ್ಯುತ್ ಮತ್ತು ಮೊಬೈಲ್ ಸಂಪರ್ಕ ಸಿಗುತ್ತದೆ. ಅದರಿಂದ ನಿಮಗೆ ಅಷ್ಟೇನೂ ಪ್ರಯೋಜನ ಇಲ್ಲ ಎಂಬುದೂ ನಂಗೊತ್ತು. ಆದರೆ ನಾವು ನಮ್ಮ ಈ ಕಾಡನ್ನು ಸ್ಮಾರ್ಟ್ ಜಂಗಲ್ ಆಗಿ, ಡಿಜಿಟಲ್ ಕಾಡಾಗಿ ಮಾಡಬೇಕಲ್ಲಾ..” ಎಂದಿತು.
ಕತ್ತೆಯೊಂದು ಬಹಳ ಭಯಪಟ್ಟುಕೊಂಡು ಕಿರುಚಿಕೊಂಡು ಕೇಳಿತು, “ಬೇರೆ ಕಾಡಿನಿಂದ ಪ್ರಾಣಿಗಳ ನಮ್ಮ ಮೇಲೆ ದಾಳಿ ನಡೆಸುತ್ತಿವೆ ಮಹಾರಾಜ. ಅವರ ಮೇಲೆ ನೀವೂ ಪ್ರತಿದಾಳಿ ನಡೆಸಿದ್ದೀರಿ ಎಂದು ಗೊತ್ತು. ಆದರೆ ಅವರ ದಾಳಿ ನಿಲ್ಲಲಿಲ್ಲವಲ್ಲ ಮಹಾರಾಜರೇ?” ಎಂದಿತು.
ಈಗ ಸಿಂಹರಾಜ ಜೋರಾಗಿ, ಕೂಗಿ ಹೇಳಿತು, “ಏಯ್ ಎಷ್ಟು ಧೈರ್ಯ ನಿನಗೆ? ಏನು ನಿನ್ನ ಮಾತಿನ ಅರ್ಥ? ನಾನು ಪ್ರತಿದಾಳಿ ಮಾಡಿಯೇ ಇಲ್ಲ ಎಂದು ಹೇಳುತ್ತಿರುವೇಯಾ? ನೀನು ನಮ್ಮ ಇಡೀ ಕಾಡನ್ನೇ ಪ್ರಶ್ನೆ ಮಾಡುತ್ತಿದ್ದೀಯ. ಇಡೀ ಕಾಡಿಗೇ ಅವಮಾನ ಮಾಡುತ್ತಿದ್ದೀಯ. ನಾನು ಈಗ ನಿನಗೆ ಸಾಕ್ಷಿ ಕೊಡುವುದಿಲ್ಲ. ಆದರೆ ನೀನು ಮತ್ತೆ ಪ್ರಶ್ನೆ ಮಾಡುವ ಧೈರ್ಯ ತೋರಿಸಿದ್ದೇ ಆದರೆ ನಿನ್ನನ್ನು ಕಾಡಿನಿಂದಲೇ ಹೊರಕ್ಕೆ ಅಟ್ಟಬೇಕಾಗುತ್ತದೆ” ಎಂದೂ ಘರ್ಜಿಸುತ್ತಾ ಗದರಿದ್ದೇ ತಡ, ಪಕ್ಕದಲ್ಲೇ ತಯಾರಾಗಿ ಗುಂಪಾಗಿ ನಿಂತಿದ್ದ ಸೀಳುನಾಯಿಗಳ ಪಡೆಯೊಂದು ಕತ್ತೆಯ ಕಡೆ ನೋಡುತ್ತಾ ಜೋರಾಗಿ ಕಾಡಿಗೆ ಕಾಡೇ ಸಿಡಿದು ಹೋಗುವಂತೆ ಬೊಗಳತೊಡಗಿದವು. ಕೆಲವು ಕತ್ತೆಕಿರುಬಗಳಂತೂ ಹಾರಿ ಹಾರಿ ಬಂದು ಕತ್ತೆಯ ಮೇಲೆ ದಾಳಿ ನಡೆಸುವಂತೆ ವರ್ತಿಸಿದವು.
ಸೀಳುನಾಯಿಗಳು ಬೊಗಳುವ ಹೊಡೆತಕ್ಕೆ, ಕತ್ತೆಕಿರುಬಗಳ ಬೆದರಿಕೆಗೆ ಸಾಕಷ್ಟು ಭೀತಿಗೊಂಡ ಪ್ರಾಣಿಗಳೆಲ್ಲಾ ಸುಮ್ಮನಾಗಿಬಿಟ್ಟವು. ತಮ್ಮ ತಮ್ಮ ಸ್ಥಳಗಳಿಗೆ ಹೊರಟವು. ಈಗ ವನರಾಜ ಅದೇ ಠೀವಿಯಿಂದ ನಸುನಗುತ್ತಾ ತನ್ನ ಗೆಳೆಯ ಒಂದು ಒರಂಗೊಟಾನ್ ಜೊತೆಗೂಡಿ ತನ್ನ ಗುಹೆಯ ಕಡೆ ಹೆಜ್ಜೆ ಹಾಕತೊಡಗಿದ. ಒರಂಗುಟಾನ್ ತನ್ನ ಕೈ ಕೈ ಉಜ್ಜಿಕೊಳ್ಳುತ್ತಾ, “ವನರಾಜಾ, ಅದ್ಭುತವಾಗಿ ಮಾತಾಡಿದಿರಿ. ಒಳ್ಳೆಯ ವಿಚಾರವೂ ಇತ್ತು. ಆದರೆ.. ಕಾಡಿನ ಪ್ರಾಣಿಗಳೆಲ್ಲಾ ಇದನ್ನು ಒಪ್ಪಿಕೊಳ್ಳುತ್ತವೆ ಅನಿಸುತ್ತದೆಯೇ? ಎಂದು ತನ್ನ ಅನುಮಾನ ಮುಂದಿಟ್ಟಿತು.
ಆಗ ಹುಷಾರಾಗಿ ತನ್ನ ಪೋಷಾಕನ್ನು ಬಿಚ್ಚುತ್ತಾ ದೊಡ್ಡದಾಗಿ ಹಲ್ಲುಬಿಟ್ಟಿತು ಸಿಂಹರಾಜನ ಗೆಟಪ್ಪಿನಲ್ಲಿದ್ದ ಮಂಕಿರಾಜ. “ಕಳೆದ 5 ವರ್ಷದಿಂದಲೂ ಅವರು ನನ್ನ ಒರಿಜಿನಲ್ ಮುಖವನ್ನು ಗುರುತಿಸಿಲಿಕ್ಕೇ ಆಗಲಿಲ್ಲ. ನಾನೇನು ಹೇಳುತ್ತಿದ್ದೀನೋ ಅದೆಲ್ಲವನ್ನೂ ಬಾಯಿ ಕಳೆದುಕೊಂಡು ಕೇಳಿಕೊಂಡು ನಂಬಿಕೊಂಡೇ ಬರುತ್ತಿದ್ದಾರೆ… ನೋಡು ಇವತ್ತು ಪ್ರಶ್ನೆ ಕೇಳಿದ ಮೂರ್ನಾಲ್ಕು ಜನ ಬಿಟ್ರೆ ಉಳಿದ ಪ್ರಾಣಿಗಳೆಲ್ಲಾ ನನ್ನ ಬೆಂಬಲಿಗರೆ, ಅದರಲ್ಲೂ ಆ ಸೀಳುನಾಯಿಗಳು, ಕತ್ತೆ ಕಿರುಬಗಳು ನನ್ನ ಮೇಲೆ ಭಯಂಕರ ಭಕ್ತಿ ಇಟ್ಟುಕೊಂಡಿವೆ. ಖಂಡಿತವಾಗಿಯೂ ಈ ಸಲವೂ ಅವರು ನನ್ನನ್ನೇ ಮತ್ತೆ 5 ವರ್ಷಕ್ಕೆ ಆರಿಸುವುದರಲ್ಲಿ ಅನುಮಾನವೇ ಇಲ್ಲ. ಇವರೆಲ್ಲರ ದಡ್ಡತನದ ಮೇಲೆ ನನಗೆ ಟೂ ಹಂಡ್ರೆಡ್ ಪರ್ಸೆಂಟ್ ನಂಬಿಕೆ ಇದೆ” ಎಂದು ಹೇಳುವಷ್ಟರಲ್ಲಿ ಕತ್ತಲೆಯಾಗಿತ್ತು.
#ಮಂಕಿಬಾತ್
ಸೂಚನೆ: ಈ ಬರೆಹವು #ಮಹಾನ್_ನಾಯಕರ ಬಗ್ಗೆ ಬರೆದಿರುವುದಂತೂ ಖಂಡಿತಾ ಅಲ್ಲ. ಯಾಕೆಂದರೆ ಅವರು ಯಾವತ್ತೂ ಈ ಕತೆಯಲ್ಲಿ ಬರುವ ಕಾಡಿನ ರಾಜನಂತೆ ಬಹಿರಂಗ ಮುಕ್ತ ಚರ್ಚೆ ನಡೆಸುವುದೇ ಇಲ್ಲ. ಅವರೆಂದೂ ಮೊದಲೇ ಸಿದ್ಧಪಡಿಸಿಕೊಳ್ಳದ ಭಾಷಣ ಇಲ್ಲದೇ ಮಾತಾಡುವುದೇ ಇಲ್ಲ.
ಟ್ವಿಟರಿನಲ್ಲಿ ಬಂದ ಆಂಗ್ಲ ಕಥೆಯಿಂದ ಪ್ರೇರಿತ: