ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೇಲೆ ದಾಳಿ ನಡೆಸಿರುವ CBI ಅಧಿಕಾರಿಗಳ ತಂಡ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಎಚ್ ಆರ್ ನಾಗೇಶ್ ಸಿಬಿಐ ಬಲೆಗೆ ಬಿದ್ದಿದ್ದಾರೆ.
ಈ ಹಿಂದೆ ಮಾರ್ಚ್ 6 ರಂದು ವಿಂಡ್ಸರ್ ಡೆವೆಲಪರ್ಸ್ ಬಿಲ್ಡರ್ ಕಚೇರಿ ಮೇಲೆ ದಾಳಿ ನಡೆಸಿದ್ದ ತೆರಿಗೆ ಅಧಿಕಾರಿ ಕೇಸ್ ಖುಲಾಸೆಗೊಳಿಸಲು ಭಾರೀ ಪ್ರಮಾಣದ ಹಣಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ.
ಈ ಅಧಿಕಾರಿ ವಿಂಡ್ಸರ್ ಡೆವೆಲಪರ್ಸ್ ನ ಎಂಡಿ ಆಗಿದ್ದ ಶ್ರೀನಿವಾಸ್ ರಾವ್ ಅವರಿಗೆ ನೋಟೀಸ್ ನೀಡಿದ್ದರಲ್ಲದೇ ಕೇಸು ಖುಲಾಸೆಗೊಳಿಸಲು 40 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಹೇಳಲಾಗಿದೆ.
ಶ್ರೀನಿವಾಸ್ ರಾವ್ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ಹೊಂಚು ಹಾಕಿದ ಸಿಬಿಐ ಅಧಿಕಾರಿಗಳು ಬುಧವಾರ ಜಯನಗರ ಕೆಫೆ ಕಾಫಿ ಡೇಯಲ್ಲಿ ಎಚ್ ಆರ್ ನಾಗೇಶ್ 14 ಲಕ್ಷ ರೂಪಾಯಿ ಹಣ ಲಂಚ ಪಡೆಯುವಾಗ ಹೊಂಚು ಹಾಕಿ ಕುಳಿತಿದ್ದು ವಶಕ್ಕೆ ಅಧಿಕಾರಿಯನ್ನು ಪಡೆದಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ನರೇಂದರ್ ಸಿಂಗ್ ಅವರನ್ನು ಎಚ್ ಎಸ್ ಆರ್ ಲೇ ಔಟ್ ನ ಮನೆಯಲ್ಲಿ ಸಿಬಿಐ ತಂಡ ಬಂಧಿಸಿದೆ.