ಭ್ರಷ್ಟಾಚಾರ ಹೋಗಲಾಡಿಸುವುದು ಹೋಗಲಿ, ಕಪ್ಪುಹಣ ಮಾಡಿಕೊಂಡವರು ಮತ್ತಷ್ಟು ಹೊತ್ತುಕೊಂಡು ವಿದೇಶಕ್ಕೆ ಓಡಿಹೋಗಲು ದಾರಿ ತೊರಿಸಿದವರು ಬಿಜೆಪಿಯವರು: ವೈಎಸ್ ವಿ ದತ್ತ ಸಂದರ್ಶನ –ಭಾಗ 2
ನಾಡಿನ ಹಿರಿಯ ರಾಜಕಾರಣಿ, ನಾಡಿನ ಸಾಕ್ಷಿ ಪ್ರಜ್ಞೆ ಎಂದೇ ಹೇಳಬಹುದಾದ ಹಾಗೂ ರಾಜಕಾರಣಿಗಳಲ್ಲೇ ಅಪರೂಪದ ವ್ಯಕ್ತಿತ್ವ ವೈ ಎಸ್ ವಿ ದತ್ತ ಅವರದು. ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಟ್ರೂಥ್ ಇಂಡಿಯಾ ಅವರೊಡನೆ ನಡೆಸಿದ ಸಂದರ್ಶನದ ಪೂರ್ಣ ಪಾಠವನ್ನು ಎರಡು ಭಾಗಗಳಲ್ಲಿ ಪ್ರಕಟಿಸುತ್ತಿದ್ದೇವೆ. ಇದು ಕೊನೆಯ ಭಾಗ.
ಪ್ರಶ್ನೆ: ಕಾಂಗ್ರೆಸ್- ಜೆ ಡಿಎಸ್ ನಡುವೆ ಮೈತ್ರಿ ಎಷ್ಟು ಗಟ್ಟಿಯಾಗಿದೆ?
ವೈ ಎಸ್ ವಿ ದತ್ತ: ನಾವು ಕೋಮುವಾದಿ ಶಕ್ತಿಗಳನ್ನು ದೂರ ಇಡಬೇಕು, ಜಾತ್ಯತೀತ ಪಕ್ಷಗಳು ಒಂದಾಗಬೇಕು, ಅನ್ನುವ ಒಂದು ರಾಜಕೀಯ ತುರ್ತು ಮತ್ತು ಅನಿವಾರ್ಯತೆಯಿಂದ ನಾವು 37 ಸೀಟು ಪಡೆದಿದ್ದರೂ ಸಹ ಕಾಂಗ್ರೆಸ್ ನವರು ಪರಿಸ್ಥಿತಿಅರ್ಥ ಮಾಡಿಕೊಂಡು, ಸನ್ನಿವೇಶ ದುರ್ಬಳಕೆ ಆಗಬಾರದು, ಬಿಜೆಪಿ ಕೈಗೆ ಅಧಿಕಾರ ಹೋಗಬಾರದು ಎಂಬ ಕಾರಣಕ್ಕೆ ಹೆಚ್ಚು ಸ್ಥಾನಗಳನ್ನು ಪಡೆದ ಕಾಂಗ್ರೆಸ್ ಕಡಿಮೆ ಸ್ಥಾನಗಳನ್ನು ಪಡೆದ ನಮ್ಮ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು, ಅವರೂ ಕೂಡ ಒಂದು ಬಗೆಯ ಉದಾರತೆ ತೋರಿದರು. ಕಾಂಗ್ರೆಸ್ ನ ಉದಾರತೆಯನ್ನ ನಾನು ಶ್ಲಾಘಿಸುತ್ತೀನಿ. ಏಕಂದ್ರೆ, ಅವರಿಗೆ ಸ್ವಾರ್ಥಕ್ಕಿಂತ ಹೆಚ್ಚಿಗೆ ದೇಶದ ಅನಿವಾರ್ಯತೆ ಹಾಗೂ ಜನರ ಮನಸ್ಥಿತಿಯನ್ನು ಕಾಂಗ್ರೆಸ್ ಅರ್ಥ ಮಾಡಿಕೊಂಡಿತ್ತು.
ನಮ್ಮ ಪಕ್ಷ ಸಹ ಆ ದೃಷ್ಟಿಯಲ್ಲಿ ಜಾತ್ಯತೀತ ಪಕ್ಷಗಳು ಒಂದಾಗಬೇಕು ಅಂತ ನಮ್ಮ ಕಾಂಗ್ರೆಸ್ ಮಧ್ಯೆನೇ ತೀವ್ರವಾದ ಪೈಪೋಟಿ ಎದುರಾಗಿದ್ದರೂ, ನಾವು ಕಾಂಗ್ರೆಸ್ ನವರು ಎಷ್ಟೇ ಕಿತ್ತಾಡಿಕೊಂಡು ಚುನಾವಣೆ ಮಾಡಿದ್ದರೂ, ಚುನಾವಣೆ ನಂತರದ ಪರಿಸ್ಥಿತಿಯಲ್ಲಿ ನಾವು ಅನಿವಾರ್ಯವಾಗಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡೆವು. ಆದರೆ ಆ ಹೊಂದಾಣಿಕೆಗೆ ಅನಿವಾರ್ಯತೆ ಇದೆ, ಐತಿಹಾಸಿಕ ಅಗತ್ಯ ಇದೆ. ಇವತ್ತು ಜಾತ್ಯತೀತ ಶಕ್ತಿಗಳು ಒಗ್ಗೂಡಲೇಬೇಕಿದೆ ಅನ್ನೋಂತ ಕಾರಣಕ್ಕೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಮಾಡೋ ದಿನಾನೆ ಅದನ್ನು ಸದ್ಭಳಕೆ ಮಾಡಿಕೊಳ್ಳೋ ಪ್ರಯತ್ನ ಮಾಡಿದ್ವಿ.
ಅವತ್ತಿನ ವಿಧಾನಸೌಧದ ಮುಂದಿನ ವೇದಿಕೆ, ರಾಷ್ಟ್ರದ ಎಲ್ಲಾ ಜಾತ್ಯತೀತ ಪಕ್ಷಗಳು, ಜಾತ್ಯತೀತವಾಗಿದ್ದ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಟ್ಟಿಗೆ ಸೇರಿದ್ದವು. ಅವತ್ತಿಂದಾನೆ ನಾವು ಒಂದು ಸಂದೇಶ ಕೊಟ್ವಿ, ಕರ್ನಾಟಕದಲ್ಲಿ ನಾವು ಕಾಂಗ್ರೆಸ್ ಒಟ್ಟಿಗೆ ಹೋಗ್ತೀವಿ ಅಂತ. ಒಂದು ವರ್ಷದಿಂದ ನಮ್ಮ ಕಾರ್ಯಕರ್ತರನ್ನ ಮಾನಸಿಕವಾಗಿ ತಯಾರಿ ಮಾಡಿಕೊಂಡು ಬಂದ್ವಿ. ನಾವು ಲೋಕಸಭಾ ಚುನಾವಣೆನಾ ಈಗ ಹೇಗೆ ಮಾಡಿಕೊಂಡಿದ್ದೇವೋ ಹಾಗೇ ಮಾಡ್ಕೋಬೇಕು. ಎಲ್ಲೊ, ಎಪಿಎಂಸಿ, ಮುನ್ಸಿಪಾಲಿಟಿ, ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಕಚ್ಚಾಡಿರಬಹುದು. ಅದೆಲ್ಲಾ ಮರೆತು ಈ ನಡೀತಾ ಇರೋದು ಲೋಕಸಭಾ ಚುನಾವಣೆ. ಈ ಚುನಾವಣೆ ದೇಶದ ಜನತಂತ್ರ ಅಪಾಯದಲ್ಲಿದೆ, ಹಾಗಾಗಿ ನಾವು ಬಿಜೆಪಿನ ಸೋಲಿಸ್ಲೇ ಬೇಕು. ಆದ್ದರಿಂದ ಬೇಕಿದ್ದರೆ ಸ್ಥಳೀಯವಾದ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿ ಸ್ನೇಹಮಯ ಹೋರಾಟ ಮಾಡೋಣ, ಆದರೆ ರಾಷ್ಟ್ರೀಯ ದೃಷ್ಟಿಯಲ್ಲಿ ಮಾತ್ರ, ಈ ಲೋಕಸಭಾ ಚುನಾವಣೆಯಲ್ಲಿ ನಾವು ಒಂದಾಗೇ ಹೋಗ್ಬೇಕು ಅನ್ನೋಂಥ ತಯಾರೀನ ಎರಡೂ ಪಕ್ಷಗಳೂ ಮಾಡಿದ್ದೀವಿ, ಅದಕ್ಕೆ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ.
ಪ್ರಶ್ನೆ: ತತ್ವಬದ್ಧ ರಾಜಕಾರಣಕ್ಕೆ ಇಂದು ಬೆಲೆ ಇದೆ ಅಂತ ಭಾವಿಸ್ತೀರಾ?
ವೈ ಎಸ್ ವಿ ದತ್ತ: ಸೈದ್ಧಾಂತಿಕ ರಾಜಕಾರಣ, ತಾತ್ವಿಕ ರಾಜಕಾರಣ ಅರ್ಥ ಕಳೆದುಕೊಂಡಿದೆ. ಅದಕ್ಕೆ ಕಾರಣನ ಎಲ್ಲಾ ವೇದಿಕೆಗಳಲ್ಲೂ ಹೇಳಿದ್ದೀನಿ. ನಮ್ಮ ಪಕ್ಷ ನನ್ನ ಸ್ವಾತಂತ್ರನ ಹತ್ತಿಕ್ಕಲೂ ಆಗುವುದಿಲ್ಲ, ನಮ್ಮ ಪಕ್ಷದಲ್ಲಿ ಆಂತರಿಕ ಸ್ವಾತಂತ್ರ ಅಷ್ಟರ ಮಟ್ಟಿಗೆ ಇದೆ. ನಾನು ನಮ್ಮ ಪಕ್ಷವೂ ಸೇರಿಕೊಂಡಂತೆ ಎಲ್ಲಾ ರಾಜಕೀಯ ಪಕ್ಷ ಬಗ್ಗೆ ಹೇಳೋದಾದ್ರೆ, ಎಲ್ಲೂ ಕೂಡ ಸೈದ್ಧಾಂತಿಕವಾದ, ತಾತ್ವಿಕವಾದ ನೆಲೆಗಟ್ಟಿನಲ್ಲಿ ರಾಜಕಾರಣ ಮಾಡಬೇಕು ಅನ್ನೋ ಅಂತ ಒಂದು ವಾತಾವರಣಾನ ಸೃಷ್ಟಿ ಮಾಡೋದರಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿದೆ. ಒಂದು ಕಾಲದಲ್ಲಿ ಇತ್ತು, ಒಂದು ಪಕ್ಷ, ಆ ಪಕ್ಷದ ಹೋರಾಟ, ಅದರ ಪಾಲಿಸಿ, ಅದರ ಪ್ರೋಗ್ರಾಂ, ಜನಪರ ಹೋರಾಟ, ಜನರ ಸಮಸ್ಯೆ ಬಗ್ಗೆ ಹೋರಾಟ, ಚಳುವಳಿಯ ಮೂಲಕ ಒಬ್ಬ ನಾಯಕ ಹುಟ್ಟಿಕೊಳ್ತಾ ಇದ್ದ, ಆ ನಾಯಕ ಒಬ್ಬ ಮಾಸ್ ಲೀಡರ್ ಆಗಿ ಎಮರ್ಜ್ ಆಗ್ತಾ ಇದ್ದ, ಅವನ ಬದ್ಧತೆ, ಪಕ್ಷ ನಿಷ್ಠೆ ಅದನ್ನು ನೋಡಿ ಜನ ಮತ ಹಾಕ್ತಾ ಇದ್ದರು. ಅವನು ಯಾವ ಜಾತಿ ಅವನೋ, ದುಡ್ಡು ಇದ್ದೀಯೋ ಏನು ನೋಡದೇ, ಅವನ ಜನಪರತೆ, ಜನಸ್ಪಂದನೆ, ವ್ಯಕ್ತಿತ್ವ, ಹೋರಾಟ, ಸೈದ್ಧಾಂತಿಕ ಬದ್ಧತೆ ನೋಡಿ ಜನ ಮತ ಹಾಕ್ತಾ ಇದ್ದರು.
ಈಗ ಏನಾಗಿದೆ ಅಂದರೆ, ಅದೆಲ್ಲಾ ಸಂಪೂರ್ಣವಾಗಿ ಮಾಯವಾಗಿದೆ. ಹಿಂದೆ ಒಂದು ಕಾಲದಲ್ಲಿ ಕೋಟಿಗಟ್ಟಲೆ ದುಡ್ಡಿರೋ ಎಷ್ಟೇ ಶ್ರೀಮಂತರ ಆದರೂ ಅವನು ಚುನಾವಣೆಗೆ ನಿಲ್ಲುವ ಧೈರ್ಯ ಮಾಡ್ತಾ ಇರ್ಲಿಲ್ಲ. ಯಾಕಂದ್ರೆ ಹಣವಿದ್ದರೂ ಜನ ಒಳ್ಳೆಯ ವ್ಯಜಕ್ತಿಯನ್ನು ಆಯ್ಕೆ ಮಾಡ್ತಾರೆ ಅಂತ ಹಿಂಜರಿಯುತ್ತಿದ್ದರು. ಅವರು ದುಡ್ಡನ್ನ ಗೆಲ್ಲೋ ಅಂಥ ರಾಜಕೀಯ ಪಕ್ಷ ವ್ಯಕ್ತಿಗೆ ಕೊಟ್ಟು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಇಂದು ಬೆಳಗ್ಗೆ ರಾತ್ರಿ ಕಳೆದು ಬೆಳಿಗ್ಗೆ ಸೂರ್ಯ ಹುಟ್ಟುವುದರೊಳಗೆ ಫ್ಲೆಕ್ಸ್ ಗಳಲ್ಲಿ ನಾಯಕರು ಹುಟ್ಟಿಕೊಳ್ತಾ ಇದ್ದಾರೆ. ಮತ್ತೆ ಯಾರೋ, ರಿಯಲ್ ಎಸ್ಟೇಟ್, ಅಕ್ರಮ ಗಣಿಗಾರಿಕೆ, ದಂಧೆ ಮಾಡುವಂಥವರು, ಕೋಟಿಗಟ್ಟಲೆ ಸಂಪಾನೆ ಮಾಡಿರುವ ಶ್ರೀಮಂತರೆಲ್ಲಾ ಚುನಾವಣೆಗೆ ನಿಲ್ಲುತ್ತಾ ಇದ್ದಾರೆ, ಇದು ವಿಪರ್ಯಾಸ. ಹಾಗಾಗಿ ಏನಾಗಿದೆ ಎಂದರೆ, ರಾಜಕೀಯ ಪಕ್ಷಗಳು ಜನರನ್ನ ಭ್ರಷ್ಟರನ್ನಾಗಿ ಮಾಡಿದೆ, ದುಡ್ಡು ಕೊಟ್ಟರೆ ಜನ ಗೆಲ್ಲಿಸ್ತಾರೆ, ಜಾತಿ ಇದ್ದರೆ ಜನ ಗೆಲ್ಲಿಸ್ತಾರೆ ಅನ್ನೋ ಥರ ಬಂದಿರುವುದರಿಂದ, ಹಣ ಬಲ, ತೋಳ್ಬಲ, ಜಾತಿ ಬಲ ಇದ್ದರೆ ನಾವು ಗೆಲ್ಲಬಹುದು ಎಂಬ ಧೈರ್ಯ ಪಕ್ಷಗಳಿಗೆ ಹಾಗೂ ವ್ಯಕ್ತಿಗಳಿಗೆ ಬಂದಿದೆ. ಆ ಕಾರಣಕ್ಕೆ ಅವರು ಆ ಧೈರ್ಯ ಮಾಡ್ತಾ ಇದ್ದಾರೆ. ಪಕ್ಷಗಳು ಏನು ಮಾಡ್ತಾ ಇದೆ, ಯಾವ ಸಿದ್ಧಾಂತ, ಏನು ಇಲ್ಲ. ಗೆಲುವು ಸಾಧಿಸೋದು ಮುಖ್ಯ ಅಷ್ಟೇ. ಹಾಗಾಗಿ ಈ ಕ್ಷೇತ್ರದಲ್ಲಿ ದುಡ್ಡಿರುವ ಇಂಥವರನ್ನು ಹಾಕಿದರೆ ಗೆಲ್ತೀವಿ, ಹಾಗಾಗಿ ಇವರನ್ನು ಅಭ್ಯರ್ಥಿ ಮಾಡೋಣ ಎನ್ನುತ್ತಿದೆ. ಇದಕ್ಕೆ ಕಾರಣ ಬೀಜವೃಕ್ಷ ನ್ಯಾಯ. ರಾಜಕೀಯ ಪಕ್ಷಗಳು ಇಂಥಹ ಭಂಡರನ್ನು ಮುಂಚೂಣಿಗೆ ತಂದವೋ ಅಥವಾ ಭಂಡರನ್ನು ಮಾತ್ರ ಗೆಲ್ಲುಸ್ತೀವಿ ಅಂತ ಜನ ತೀರ್ಮಾನ ಮಾಡಿದ್ದಾರೋ ಯಾರ ಕಡೆಯಿಂದ ತಪ್ಪಾಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಮತದಾರರು ಒಂದು ಸಲ ಸರಿಯಾಗಿ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಕೊಡೋ ಥರ, ತೀರ್ಪು ಕೊಡೋ ಥರ ಪ್ರಾರಂಭವಾದರೆ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಳ್ಳುತ್ತದೆ.
ಈಗ ರಾಜಕೀಯ ಪಕ್ಷಗಳಿಗೆ ಟಿಕೆಟ್ ಹಂಚಿಕೆ ಹೇಗೆ ನಡೆಯುತ್ತಪ್ಪ ಅಂದರೆ, ಕಾಂಗ್ರೆಸ್ ನವರು ಒಬ್ಬ ರೌಡಿ ಹಾಕ್ತಾರಂತೆ ಸರ್, ಅವನು ಲಾಂಗ್ ಹಿಡಕೊಂಡು ತಿರುಗುತ್ತಾನಂತೆ, ಅಂತ ರೌಡಿಗೆ ಟಿಕೆಟ್ ಕೊಡ್ತಾರಂತೆ ಅಂದರೆ, ನಮ್ಮ ಪಕ್ಷ ಒಬ್ಬ ಸರಳ ಸಜ್ಜನನಿಗೆ ಕೊಡೋಣ, ಸಜ್ಜನ ಬೇಕೋ, ರೌಡಿ ಬೇಕೋ ಅಂತ ಆಯ್ಕೆ ಮಾಡೋಕೆ ಬ್ಲಾಕ್ ಅಂಡ್ ವೈಟ್ ಆಗಿ ಗೊತ್ತಾಗತ್ತೆ. ಅದನ್ನ ನಾವೊಬ್ಬ ಸಜ್ಜನನ್ನ ಹಾಕೋಣ ಅಂತ ನಾವು ಯೋಚನೆ ಮಾಡ್ತಿಲ್ಲ, ನಾವು ಕಲ್ಲು ಹಿಡಿದು ತಿರುಗುವಂತವರಿಗೆ ಕೊಡೋಣ ಅಂತ. ಈ ಥರದ ತೀರ್ಮಾನಗಳು ಬಂದರೆ ಬಹಳ ಕಷ್ಟ ಆಗತ್ತೆ. ಯಾಕೆ ಅಂಥ ರಿಯಲ್ ಎಸ್ಟೇಟ್ ನವರಿಗೆ, ರೌಡಿಗೆ ಟಿಕೆಟ್ ಕೊಟ್ಟಿದ್ದೀರಾ ಅಂತ ರಾಜಕೀಯ ಪಕ್ಷಗಳಿಗೆ ಕೇಳಿದರೆ, ಜನಕ್ಕೆ ಬೇಕಾಗಿರುವುದು ದುಡ್ಡು, ಅದಕ್ಕೋಸ್ಕರ ಆ ಆಭ್ಯರ್ಥಿನ ಹಾಕಿದ್ದೀವಿ ಅಂತಾರೆ. ಈ ಚಲನಚಿತ್ರಗಳು ಏಕೆ ಇತ್ತೀಚೆಗೆ ಕಳಪೆ ಗುಣಮಟ್ಟದಲ್ಲಿದೆ, ನೀತಿಯುವಾಗಿಲ್ಲ ಅಂತ ನಿರ್ಮಾಪಕನಿಗೆ ಕೇಳಿದ್ರೆ, ಜನ ಏನು ಬಯಸ್ತಾರೋ ಅದನ್ನ ನಾವಯ ಕೊಡ್ತಾ ಇದ್ದೀವಿ ಅಂತ ಅವರು ಹೇಳ್ತಾರೆ.
ಹಾಗೇನೆ ರಾಜಕೀಯ ಪಕ್ಷಗಳು ಏಕೆ ಇಂಥವರಿಗೆ ಬೆಲೆ ಕೊಡ್ತೀರಾ ಅಂದರೆ, ಜನ ಬಯಸ್ತಿರೋದು ಅಂಥವರನ್ನ, ನಾವು ಅವರನ್ನೇ ಹಾಕ್ತೀವಿ ಅಭ್ಯರ್ಥಿಯಾಗಿ ಅಂತ ಹೇಳ್ತಾರೆ. ಆ ಕಾರಣಕ್ಕೆ ಎಲ್ಲೊ ಒಂದು ಕಡೆ ಚುನಾವಣಾ ನೀತಿ ಸುಧಾರಣೆ ಆಗಬೇಕಿದೆ. ಚುನಾವಣಾ ವ್ಯವಸ್ಥೆ ಬದಲಾಗಬೇಕಿದೆ. ಮತದಾರರು ಮೊದಲಿಗೆ ಒಂದು ರೀತಿಯಲ್ಲಿ ಪ್ರಯೋಗಕ್ಕೆ ಮೂಂಚೂಣಿಗೆ ಮೊದಲಾಗಬೇಕಿದೆ.
ಪ್ರಶ್ನೆ: ಮಹಾಮೈತ್ರಿ ಹೆಸರಲ್ಲಿ ಭ್ರಷ್ಟರೆಲ್ಲಾ ಒಂದಾಗಿದ್ದಾರೆ ಎಂದು ಮೋದಿ ಹೇಳುತ್ತಿದ್ದಾರಲ್ಲ?
ವೈ ಎಸ್ ವಿ ದತ್ತ: ಭ್ರಷ್ಟಾಚಾರ ವಿಷಯವನ್ನು ನಾನು ವಿಶ್ಲೇಷಣೆ ಮಾಡೋಕೆ ಹೋಗಲ್ಲ. ಯಾಕಂದ್ರೆ, ನೋಟು ಅಮಾನ್ಯೀಕರಣ ಅನ್ನೋ ವ್ಯವಸ್ಥೆಯಲ್ಲಿ ಆ ಥರ ಭ್ರಷ್ಟರನ್ನು ಹಿಡಿದು, ಸದೆಬಡಿದಿದ್ದರೆ, ಹಾಗೇ ಕಪ್ಪು ಹಣಾನ ವಿದೇಶದಿಂದ ತಂದಿದ್ದರೆ, ನಮಗೆಲ್ಲಾ ಈಗ ನಮ್ಮ ಖಾತೆಗೆಲ್ಲಾ 15 ಲಕ್ಷ ಬರಬೇಕಿತ್ತು. ಹೊರಗಡೆಯಿಂದ ನಮ್ಮ ದೇಶದ ಕಪ್ಪು ಹಣನ ವಾಪಾಸು ತರೋದು ಇರಲಿ, ನಮ್ಮ ದೇಶದಿಂದಾನೇ ಕೋಟಿಗಟ್ಟಲೇ ದೋಚಿಕೊಂಡು ಹೊರದೇಶಗಳಿಗೆ ಹೋಗ್ತಿಲ್ವೇ, ಅದರ ಬಗ್ಗೆ ಚರ್ಚೆ ಮಾಡೋಕೆ ಹೋಗಲ್ಲಾ. ಆದರೆ ಒಂದೇ ಒಂದು ಪ್ರಶ್ನೇನಾ ಮೋದಿ ಅವರನ್ನು ಕೇಳ್ತೀನಿ, ನಿಜವಾಗಲೂ ಕೂಡ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ನೀವು ಏನು ಘೋಷಣೆ ಕೊಟ್ಟಿದ್ದಿರಿ ಎಂದರೆ, ಭ್ರಷ್ಟಾಚಾರಾನ ಹತ್ತಿಕ್ಕುತ್ತೀವಿ ಎಂದಿದ್ದಿರಿ. ಪ್ರಧಾನಿ ಮಂತ್ರಿಯೂ ಸೇರಿದಂತೆ ಭ್ರಷ್ಟಾಚಾರ ಯಾರೇ ಮಾಡಿದ್ದರೂ ಕೂಡ ಅವರನ್ನು ಹತ್ತಿಕ್ಕುವ ಕ್ರಮ ಕೈಗೊಳ್ತೇವೆ ಅಂತ ಹೇಳಿದ್ರಿ.
ಅಣ್ಣಾ ಹಜಾರೆ ಉಪವಾಸ ಕೂತು ಲೋಕಪಾಲ ಮಸೂದೆ ಮಂಡಿಸಬೇಕು ಅಂದಾಗ, ಓಡಿ ಹೋಗಿ ಬೆಂಬಲ ಕೋಡೋ ರೀತಿ ಫೋಸು ಕೊಟ್ಟವರು ಬಿಜೆಪಿಯವರು. ಐದು ವರ್ಷಗಳ ಅಧಿಕಾರ ಇತ್ತು. ನೀವಷ್ಟು ಪಾರದರ್ಶಕವಾದ, ಭ್ರಷ್ಟಾಚಾರ ರಹಿತವಾದ, ಹಗರಣ ಮುಕ್ತವಾದ ಸರ್ಕಾರವನ್ನು ಕೊಡ್ತೀವಿ ಅನ್ನೊದಾಗಿದ್ರೆ, ಲೋಕಪಾಲ ಮಸೂದೆ ಒಂದು ಜಾರಿಗೆ ತಂದು, ಅದರಲ್ಲಿ ಪ್ರಧಾನ ಮಂತ್ರಿಯೂ ಸೇರಿದಂತೆ ಯಾರೇ ಭ್ರಷ್ಟಾಚಾರದಲ್ಲಿ ಬಂದರೂ ಕೂಡ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೀವಿ ಅಂತ ಲೋಕಪಾಲ ಮಸೂದೆ ಮಾಡಿದ್ರೆ ನಮ್ಮ ಮೇಲೆ ಬೆರಳು ತೋರಿಸಲು ಒಂದು ನೈತಿಕತೆ ಇರ್ತಿತ್ತು. ರಫೇಲ್ ಹಗರಣದ ಒಳಗಡೆ ಇವತ್ತು ಏನೆಲ್ಲಾ ನಡೀತಿದೆ ಅನ್ನೊದನ್ನಾ ನೋಡಿದ್ದೀವಿ, ಆ ಒಂದು ಕಾರಣಕ್ಕೆ ನಮ್ಮ ಪ್ರಶಾಂತ್ ಭೂಷಣ್, ಯಶವಂತ್ ಸಿನ್ಹಾ ಅವರು ರಫೇಲ್ ಹಗರಣದ ಬಗ್ಗೆ ತನಿಖೆ ಆಗಬೇಕೆಂದು ಸಿಬಿಐಗೆ ಕೊಟ್ಟರೆ, ಸಿಬಿಐ ನಿರ್ದೇಶಕರು, ಕ್ರಮ ತೆಗೆದುಕೊಳ್ಳೋಣ, ಇದರ ಬಗ್ಗೆ ತನಿಖೆ ಮಾಡ್ತೀನಿ ಅಂತ ಮುಂದಾದ ತಕ್ಷಣವೇ, 24 ಗಂಟೆಗಳಲ್ಲಿ ಸಿಬಿಐ ನಿರ್ದೇಶಕರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅವರನ್ನು ಎತ್ತಂಗಡಿ ಮಾಡಿದ್ದೀರಾ ಅಂದರೆ ಎಲ್ಲೊ ಒಂದು ಕಡೆ ನಿಮ್ಮ ಪ್ರಾಮಾಣಿಕತೆ ಪ್ರಶ್ನಾರ್ಹವಾಗತ್ತೆ. ಹಾಗಾಗಿ ಮೊದಲಿಗೆ ಅಂತ ಬದ್ಧತೆನೂ ತೋರಿಸಲಿಲ್ಲ, ನೋಟು ಅಮಾನ್ಯ ಇರಬಹುದು, ಮತ್ತೊಂದು ಇರಬಹುದು ಭ್ರಷ್ಟರನ್ನು ಬಲೀನೂ ಹಾಕಿಲ್ಲ, ಇನ್ನೂ ಕಾರ್ಪೊರೇಟ್ ಸೆಕ್ಟರ್ ಗಳು, ಬಂಡವಾಳಶಾಹಿಗಳು ಕೊಬ್ಬೋಕೆ ಕಾರಣ ಆದಿರಿ, ಬ್ಲಾಕ್ ಮನಿ ಇರೋರೆಲ್ಲಾ ಇನ್ನೂ ಒಂದಷ್ಟು ಹೊತ್ತುಕೊಂಡು ವಿದೇಶಕ್ಕೆ ಓಡಿಹೋಗೋಕೆ ಅವರಿಗೆ ಮಾರ್ಗ ತೋರಿಸಿದಿರಿ. ಹೀಗೆಲ್ಲಾ ಮಾಡ್ದೋರು ನಮ್ಮ ಬಗ್ಗೆ ಮಾತಾಡೋಕೆ ಅವರಿಗೆ ನೈತಿಕತೆ ಇಲ್ಲ.
ಪ್ರಶ್ನೆ: ರಾಜ್ಯದ ಮತದಾರರು, ಅದರಲ್ಲೂ ಯುವ ಮತದಾರರಿಗೆ ಯಾವ ಸಂದೇಶ ಕೊಡಲು ಬಯಸುತ್ತೀರಾ?
ವೈ ಎಸ್ ವಿ ದತ್ತ: ಇತ್ತೀಚೆಗೆ ಗಾಂಧಿ ಭವನದಲ್ಲಿ ಒಂದು ಉತ್ತಮ ಕಾರ್ಯಕ್ರಮ ಏರ್ಪಾಡಾಗಿತ್ತು. ಒಂದು ಆಶಾದಾಯಕ ಬೆಳವಣಿಗೆ ಅಂದರೆ, ಮೊದಲನೇ ಬಾರಿ ಸ್ವಲ್ಪ ಯುವ ಪೀಳಿಗೆಯವರು ಈ ಮೋದಿಯಿಂದ, ಮೋದಿಯ ಮೋಡಿಯಿಂದ, ಬಿಜೆಪಿಯ ಭಾವನಾತ್ಮಕ ವಿಷಯಗಳಿಂದ ಹೊರಗಡೆ ಬಂದು, ಸ್ವಲ್ಪ ತಮ್ಮ ವ್ಯಾಟ್ಸಾಪ್. ಫೇಸ್ ಬುಕ್, ಸಾಮಾಜಿಕ ಜಾಲತಾಣಗಳಲ್ಲಿ ಬರ್ತಾ ಇದ್ದಂಥ ಸುಳ್ಳಿನ ಸುದ್ದಿಗಳ ಬಗ್ಗೆ ಈ ಅವರಿಗೆ ಅರ್ಥ ಆಗಿ ಹೊರಗಡೆ ಬಂದಿದ್ದಾರೆ. ಈಗ ಯುವಪೀಳಿಗೆಗೆ ಗೊತ್ತಾಗ್ತಾ ಇದೆ, ನಮ್ಮನ್ನೆಲ್ಲಾ ದುರ್ಬಳಕೆ ಮಾಡಿಕೊಂಡರು ಮೋದಿ ಮತ್ತು ಪಕ್ಷ, ನಮ್ಮ ಬದುಕಿಗೆ ಭದ್ರತೆ ಕೊಡಲಿಲ್ಲ, ಬದುಕಿಗೆ ಆಸರೆ ಕೊಡಲಿಲ್ಲ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಬರೀ ನಮ್ಮನ್ನೆಲ್ಲಾ ಭಾವನಾತ್ಮ ವಿಷಯಗಳಲ್ಲಿ ಕಟ್ಟಿಹಾಕಿದ್ದರು ಎಂಬುದು ಈಗ ಅವರಿಗೆ ಅರಿವಾಗಿದೆ. ರಾಮಮಂದಿರ ಕಟ್ಟುತ್ತೀವಿ ಅಂತ ಹೊರಟರೇ ಇವತ್ತಿನ ಯಾವ ಯುವಪೀಳಿಗೆಯೂ ಕೂಡ, ಹಿಂದುತ್ವಾ, ರಾಮಮಂದಿರ ಎಂದು ಉನ್ಮಾದಕ್ಕೆ ಒಳಗಾಗುವ ಸ್ಥಿತಿ ಇಲ್ಲ. ರಾಮಮಂದಿರ ಕಟ್ಟುತ್ತೇವೆ ಎಂದರೆ, ರಾಮನಿಗೆ ಮನೆ ಇರಲಿ ಬಡವರಿಗೆ ಮನೆ ಕಟ್ಟಿಕೊಟ್ಟಿದ್ದೀರಾ ಎಂದು ಜನ ಕೇಳುತ್ತಿದ್ದಾರೆ. ಹಾಗಾಗಿ ಈಗ ಕಾಲ ಬದಲಾಗಿದೆ, ಯುವಕರೂ ಸಹ ಎಚ್ಚೆತ್ತುಕೊಂಡಿದ್ದಾರೆ. ನಾನು ಮತ್ತೆ ಮತ್ತೆ ಹೇಳೊದು ಭಾವೋನ್ಮಾದದಿಂದ ನಮ್ಮ ಯುವಪೀಳಿಗೆ ಹೊರಬರಬೇಕು, ನೀವು ನಿಮ್ಮ ಬದುಕಿನ ಬಗ್ಗೆ ಯೋಚನೆ ಮಾಡಿ, ನಿಮ್ಮ ಬದುಕನ್ನು ಕಟ್ಟಿಕೊಳ್ಳುವ ಕಡೆ ಗಮನ ಕೊಡಿ. ನಿಮ್ಮನ್ನು ಉನ್ಮಾದಕ್ಕೆ ದೂಡಿ ನಿಮ್ಮ ಬದುಕನ್ನು ಕಸಿಯುವ ಕೋಮುವಾದಕ್ಕೆ ಬಲಿಯಾಗಬೇಡಿ. ಅದರ ಬದಲಿಗೆ ನಿತ್ಯ ಭಾವೈಕ್ಯತೆ, ಏಕತೆ, ನಮ್ಮದು ವಿವಿಧತೆಯಲ್ಲಿ ಏಕತೆಯ ರಾಷ್ಟ್ರ. ಆದರೆ ಬಿಜೆಪಿ ಮಾಡೋಕೆ ಹೊರಟಿರೋದು ಏಕತೆ ಒಂದನ್ನು ಮಾತ್ರ. ಆ ವಿವಿಧತೆ ಕಾಪಾಡಿಕೊಂಡರೆ ಮಾತ್ರ ನಮ್ಮತನ, ನಾವು, ನಮ್ಮ ರಾಜ್ಯಗಳು ಉಳಿಯುತ್ತದೆ. ನಮ್ಮ ರೈತರು ಕಾರ್ಮಿಕರು, ಬಡವರು, ಬಲ್ಲಿದರು ಇದ್ದಾರೆ. ಆದ್ದರಿಂದ ನೀವು ಇಷ್ಟು ವರ್ಷ ಈ ಭಾವೋನ್ಮಾದಕ್ಕೆ ಒಳಗಾಗಿದದ್ದೀರಿ, ಯುವಪೀಳಿಗೆ ಹೊರಗಡೆ ಬಂದರೆ ಖಂಡಿತ ಹೊಸ ಬದಲಾವಣೆ ತರಬಹುದು. ಮುಂದೆ ಜನತಂತ್ರ ಮತ್ತು ಸಂವಿಧಾನವನ್ನು ಕಾಪಾಡೋ ಹಾಗೆ ಆಗತ್ತೆ. ನಿಮ್ಮ ಬಗ್ಗೆ ನಾವು ಆಸೆ ಇಟ್ಟುಕೊಂಡಿದ್ದೀವಿ. ನಮ್ಮ ಕಾಲ ಮುಗಿದಿದೆ. ಇದು ನಿಮ್ಮ ಕಾಲ, 2019ರ ಚುನಾವಣೆಯಲ್ಲಿ ಯುವಕರು, ಮಹಿಳೆಯರೇ ನಿರ್ಣಾಯಕ ಪಾತ್ರಧಾರಿಗಳು. ಹಾಗಾಗಿ ನಿಮ್ಮಿಬ್ಬರನ್ನೇ ನಾವು ನೆಚ್ಚಿಕೊಂಡಿದ್ದೀವಿ ಅಂತ ಎಲ್ಲಾ ಜನತಂತ್ರ ಪ್ರೇಮಿ, ಜಾತ್ಯತೀತ ಪಕ್ಷಗಳ ಪರವಾಗಿ ನಾನು ಮನವಿ ಮಾಡಿಕೊಳ್ಳುತ್ತೇನೆ.
ಬಿಜೆಪಿಯವರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದರೆ ಏನು ಬೇಕಾದರೂ ಮಾಡೋಕೆ ಹೆದರಲ್ಲ ಅವರು. ನಾವು ನೋಡಿದ್ದೀವಿ, ಇಂದಿನ ಯುವಕರಿಗೆ ಗೊತ್ತಿಲ್ಲ. ಹಿಂದೆ ಚುನಾವಣೆ ಬಂತು ಅಂದರೆ ಕೋಮುಗಲಭೆ ಆಗ್ಲೇ ಬೇಕು ಅಂತ ನಮಗೆ ಗೊತ್ತಾಗೋದು. ಮಹಾರಾಷ್ಟ್ರ ಚುನಾವಣೆ ಅಂದರೆ ಕೋಮುಗಲಭೆ, ಹಿಂದೂ-ಮುಸ್ಲಿಂ ಘರ್ಷಣೆ, 50 ಸಾವು ಅಂತ ಬರ್ಬೇಕಿತ್ತು. ಆ 50 ಹೆಣಗಳ ಮೇಲೆ ಬಿಜೆಪಿ ರಾಜಕಾರಣ ಮಾಡೋದು, ಇದನ್ನು ನಾವು ಕಂಡಿರೋದು ಸತ್ಯ. ಹಾಗಾಗಿ ದೇಶದಲ್ಲು ಕೂಡ ಚುನಾವಣೆ ಘೋಷಣೆ ಆಯ್ತು ಅಂದರೆ, ಕಾಶ್ಮೀರ ಧಗ-ಧಗ ಅನ್ನೋ ಸುದ್ದಿ ಬಂದು. ಕಾಶ್ಮೀರ ಧಗ-ಧಗ ಅನ್ನೋ ಸುದ್ದಿನೇ ಒಂದು ರೀತಿ ಉನ್ಮಾದ, ಉದ್ರೇಕಿಸುವ ಕೆಲಸ, ಚುನಾವಣೆ ವೇಳೆ ಯಾವ ಯಾವ ಕೀಳುಮಟ್ಟಕ್ಕೆ ಇಳಿಯುತ್ತಾರೆ ಹೇಳೋಕೆ ಆಗಲ್ಲ. ನಮ್ಮ ಎಚ್ಚರ ನಮ್ಮ ಕೈಯಲ್ಲಿ ಇರಬೇಕು, ಮುಖ್ಯವಾಗಿ ನಮ್ಮ ಯುವಕರು ಬಲಿಪಶುಗಳಾಗದೆ, ಎಚ್ಚರ, ಬುದ್ಧಿವಂತಿಕೆಯಿಂದ ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು ಎಂಬುದು ನನ್ನ ಅಭಿಪ್ರಾಯ.
Very Honest and a rare kind of politician.He is like an oasis in desert….But I feel highly upset and disappointed to admit that he is in a very very wrong place….probably he chosen a wrong Career, that too in a very wrong party. I love to watch him debating on TV , unfortunately his party heads are not allowing him to participate in TV programme simply because he is honest and may spill the truthful beans…..
Very Honest and a rare kind of politician.He is like an oasis in desert….But I feel highly upset and disappointed to admit that he is in a very very wrong place….probably he chosen a wrong Career, that too in a very wrong party. I love to watch him debating on TV , unfortunately his party heads are not allowing him to participate in TV programme simply because he is honest and may spill the truthful beans…..