ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಕೊಡಬೇಕು ಎಂಬ ವಿಷಯದಲ್ಲಿ ತೀವ್ರ ಗೊಂದಲಕ್ಕೆ ಬಿದ್ದಿದ್ದ ಕಾಂಗ್ರೆಸ್ ಅಂತಿಮವಾಗಿ ಪಕ್ಷದ ಲಿಂಗಾಯತ ಮುಖಂಡ ವಿನಯ ಕುಲಕರ್ಣಿಗೆ ಟಿಕೆಟ್ ನೀಡಿದೆ.
ಧಾರವಾಡದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಸಂಸದ ಐಜಿ ಸನದಿ ಅವರ ಪುತ್ತ ಶಾಕಿರ್ ಸನದಿ ಮತ್ತು ವಿನಯ ಕುಲಕರ್ಣಿಗಳಿಬ್ಬರ ನಡುವೆ ತೀವ್ರ ಪೈಪೋಟಿ ಇತ್ತಲ್ಲದೇ ಮತ್ತೊಬ್ಬ ಲಿಂಗಾಯತ ಪ್ರತಿನಿಧಿ ಸದಾನಂದ ಡಂಗಣ್ಣವರ್ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಮತ್ತೊಂದೆಡೆ ಮುಸ್ಲಿಂ ಮುಖಂಡರು ಸಹ ಧಾರವಾಡದಿಂದ ಮುಸ್ಲಿಂ ಅಭ್ಯರ್ಥಿಗೇ ನೀಡಬೇಕೆಂದು ಒತ್ತಡ ತಂದಿದ್ದರು. ರಾಜ್ಯದಲ್ಲಿ ಎರಡು ಕಡೆ ಮಾತ್ರ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಕಾರಣ ಧಾರವಾಡಕ್ಕೆ ಶಾಕಿರ್ ಸನದಿ ಅವರಿಗೇ ಟಿಕೆಟ್ ನೀಡಬೇಕು ಎಂಬ ಒತ್ತಾಯ ಮಾಡಿದ್ದರು. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅರ್ಷದ್ ರಿಜ್ವಾನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಕಾಂಗ್ರೆಸ್ ರಾಜ್ಯ ನಾಯುಕತ್ವ ಶಾಕಿರ್ ಮತ್ತು ಡಂಗಣ್ಣವರ್ ಇಬ್ಬರಲ್ಲಿ ಒಬ್ಬರನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿತ್ತೆನ್ನಲಾಗಿದೆ. ಈ ನಡುವೆ ವಿನಯ ಕುಲಕರ್ಣಿ ಮುನಿಸುಗೊಂಡು ತಮಗೆ ಟಿಕೆಟ್ ನೀಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸೂಚನೆಯನ್ನೂ ರಾಜ್ಯ ನಾಯಕತ್ವಕ್ಕೆ ನೀಡಿದ್ದರು. ತಮ್ಮ ಹೆಸರನ್ನು ಹೈಕಮಾಂಡ್ ಗೆ ಸೂಚಿಸದ ಬಗ್ಗೆ ವಿನಯ್ ಕುಲಕರ್ಣಿ ತಮ್ಮ ಅಸಮಧಾನ ಹೊರಹಾಕಿದ್ದರು.
ಅಂತಿಮವಾಗಿ ರಾಜ್ಯ ನಾಯಕತ್ವ ಯಾವುದೇ ತೀರ್ಮಾನ ಕೈಗೊಳ್ಳಲಾಗದೇ ಹೈಕಮಾಂಡ್ ತೀರ್ಮಾನಕ್ಕೇ ಬಿಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಧಾರವಾಡ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣೀ ಅವರ ಹೆಸರನ್ನು ಅಂತಿಮಗೊಳಿಸಿದೆ.
ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಹ್ಲಾದ ಜೋಶಿ ಮತ್ತು ವಿನಯ್ ಕುಲಕರ್ಣಿ ನಡುವೆ ನೇರ ಹಣಾಹಣಿ ಏರ್ಪಡಲಿದೆ.
ದಾವಣಗೆರೆಯಲ್ಲಿ ಶಾಮನೂರು ಬೆಂಬಲಿಗ ಮಂಜಪ್ಪ
ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಶಾಮನೂರು ಶಿವಶಂಕರಪ್ಪ ಸ್ಪರ್ಧಿಸಲು ನಿರಾಕರಿಸುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರೇ ಆದ ಎಚ್ ಬಿ ಮಂಜಪ್ಪ ಅವರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿ ಅಭ್ಯರ್ಥಿ ಎಂದು ಘೋಷಿಸಿದೆ.