ನವದೆಹಲಿ:ನವದೆಹಲಿ: ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ನಮೋ ಟಿವಿ ಕುರಿತು ಚುನಾವಣಾ ಚಾಯೋಗವನ್ನು ಪ್ರಶ್ನಿಸುತ್ತಿದ್ದಂತೆ ಎಚ್ಚೆತ್ತುಕೊಂಡು ಚುನಾವಣಾ ಆಯೋಗ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ವರದಿ ನೀಡಲು ನೋಟೀಸ್ ನೀಡಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರವನ್ನು 24/7 ಪ್ರಸಾರ ಮಾಡುವ ನಮೋ ಟೀವಿ ಮಾರ್ಚ್ 31ರಂದು ಆರಂಭಗೊಂಡಿತ್ತು.
ನೀತಿ ಸಂಹಿತೆ ಜಾರಿಯಾದ ನಂತರ ನಮೋ ಟಿವಿಯನ್ನು ಆರಂಭಿಸಲು ಹೇಗೆ ಅವಕಾಶ ಕೊಟ್ಟಿದ್ದೀರಾ, ಇದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಲ್ಲವೇ? ಎಂದು ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳು ಚುನಾವಣಾ ಆಯೋಗಕ್ಕೆ ಪ್ರಶ್ನಿಸಿದ ಬಳಿಕ ಇಸಿ ಈ ಬಗ್ಗೆ ಕ್ರಮಕ್ಕೆ ಮುಂದಾಗಿದೆ.
ದೂರದರ್ಶನಕ್ಕೂ ನೋಟಿಸ್:
ಈ ಸಂಬಂಧ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಮಾತ್ರವಲ್ಲದೆ ಚುನಾವಣಾ ಆಯೋಗ ದೂರದರ್ಶನಕ್ಕೂ ನೋಟಿಸ್ ನೀಡಿದೆ.
“ಮಾರ್ಚ್ 31ರಂದು ‘ಮೈ ಬಿ ಚೌಕಿದಾರ್’ ಎಂಬ ಸಾರ್ವಜನಿಕ ಕಾರ್ಯಕ್ರಮವನ್ನು ಒಂದು ಗಂಟೆಗೂ ಹೆಚ್ಚು ಕಾಲ ಹೇಗೆ ದೂರದರ್ಶನದಲ್ಲಿ ಪ್ರಸಾರ ಮಾಡಿದ್ದೀರಿ,’’ ಎಂದು ದೂರರ್ಶನಕ್ಕೆ ಆಯೋಗ ನೋಟಿಸ್ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಹೆಸರಿನ ಜತೆ ಅವರ ಭಾವಚಿತ್ರವುಳ್ಳ ಲೋಗೋವನ್ನು ನಮೋ ಟಿವಿ ಹೊಂದಿದ್ದು, ಪ್ರಧಾನಿ ಮೋದಿಯ ಸಾರ್ವಜನಿಕ ರ್ಯಾಲಿಯ ನೇರಪ್ರಸಾರ ಮಾತ್ರವಲ್ಲದೇ, ಮೋದಿಯವರ ಹಳೆಯ ಭಾಷಣಗಳನ್ನೂ ಪ್ರಸಾರ ಮಾಡುತ್ತಿದೆ.
ಅರವಿಂದ ಕೇಜ್ರಿವಾಲ್ ಅವರ ಎಎಪಿ ಕಾನೂನು ಘಟಕ ಇಸಿಗೆ ಸಲ್ಲಿಸಿರುವ ದೂರಿನಲ್ಲಿ, ಬಿಜೆಪಿ ಪ್ರಮುಖವಾದ ನಿಯಮವನ್ನೇ ಅಲ್ಲಗಳೆದು 24 ಗಂಟೆಗಳ ವಾಹಿನಿಯನ್ನು ಆರಂಭಿಸಿದೆ. ಈ ವಾಹಿನಿ ಪ್ರಸಾರ ಮಾಡುವ ವಿಷಯವನ್ನು ಯಾರು ನಿಗಾವಹಿಸುತ್ತಾರೆ. ವಾಹಿನಿಯಲ್ಲಿ ಪ್ರಸಾರವಾಗುವ ಮಾಹಿತಿಯ ವಿಷಯ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಬಿಜೆಪಿ ಮಾಧ್ಯಮ ಪ್ರಮಾಣೀಕರಣ ಕಮಿಟಿಗೆ ತಿಳಿಸಿದೆಯೇ? ಎಂದು ಮುಖ್ಯ ಚುನಾವಣಾ ಆಯೋಗಕ್ಕೆ ಪ್ರಶ್ನಿಸಿದೆ.
ಈ ಬಗ್ಗೆ ಇದುವರೆಗೂ ಬಿಜೆಪಿಗೆ ಏಕೆ ಶೋಕಾಸ್ ನೋಟಿಸ್ ಸಹ ನೀಡಿಲ್ಲ ಎಂದೂ ಎಎಪಿ ಪ್ರಶ್ನಿಸಿದೆ.
ವಾಹಿನಿ ಆರಂಭಕ್ಕೆ ಚುನಾವಣಾ ಆಯೋಗದ ಸಮ್ಮತಿ ಪಡೆದಿಲ್ಲ ಎಂದಾದರೆ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ ಎಂದೂ ಚುನಾವಣಾ ಆಯೋಗಕ್ಕೆ ಎಎಪಿ ಪ್ರಶ್ನೆಗಳ ಸುರಿಮಳೆಗೈದಿದೆ.
ಕಾಂಗ್ರೆಸ್ ಸಹ ಇಸಿಗೆ ಬರೆದ ಪತ್ರದಲ್ಲಿ, ಆರಂಭದಲ್ಲಿ ಮಾಹಿತಿಯ (ಕಂಟೆಂಟ್) ಟಿವಿ ಎಂದು ಹೇಳಿದ ನಮೋ ಟಿವಿ, ನಿಧಾನವಾಗಿ ಪ್ರಧಾನ ಮಂತ್ರಿ ಹಾಗೂ ಬಿಜೆಪಿ ಪರ, ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿತ್ತರಿಸುತ್ತಾ, ಮೋದಿಯ ವೈಯಕ್ತಿಕ ಸಾಧನೆಗಳು ರ್ಯಾಲಿಗಳು ಹಾಗೂ ಮೋದಿ ಸಂದರ್ಶನಗಳನ್ನು ಪ್ರಸಾರ ಮಾಡುತ್ತಿದೆ ಎಂದು ಚುನವಾಣಾ ಆಯೋಗದ ಕ್ರಮಕ್ಕೆ ಖಂಡನೆ ವ್ಯಕ್ತಪಡಿಸಿದೆ.
ಇದನ್ನೂ ಓದಿ: