ಬಾರ್ವಾನಿ: ಮಧ್ಯಪ್ರದೇಶ ರಾಜ್ಯದ ಬಾರ್ವಾನಿ ಜಿಲ್ಲೆಯ ಸೇಂದ್ವಾ ಪಟ್ಟಣದಲ್ಲಿ ಪೊಲೀಸರು ಸಂಜಯ್ ಯಾದವ್ ಎಂಬ ಬಿಜೆಪಿ ಮುಖಂಡನ ಮನೆಯಿಂದ 17 ನಾಡಬಾಂಬ್, 10 ಪಿಸ್ತೂಲು ಮತ್ತು 111 ಬುಲೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಭಾನುವಾರ ರಾತ್ರಿ ನಡೆದಿದೆ.
ಲೋಕಸಭೆಯ ಚುನಾವಣೆಗಳು ಸಮೀಪಿಸಿರುವ ಹಿನ್ನೆಲೆಯಲ್ಲಿ ಈ ಘಟನೆ ಮಹತ್ವ ಪಡೆದಿದೆ. ಖರಗಪುರ ಲೋಕಸಭಾ ಕ್ಷೇತ್ರದಲ್ಲಿ ಸೇಂದ್ವಾ ಪ್ರದೇಶ ಬಹಳ ಮುಖ್ಯ ಪಾತ್ರವಹಿಸುತ್ತದೆ. ಇಲ್ಲಿ ಮೇ 19ರ ಕೊನೆಯ ಹಂತದಲ್ಲಿ ಮತದಾನ ನಡೆಯಲಿದೆ.
ಸಂಜಯ್ ಯಾದವ್ ಎರಡು ವರ್ಷಗಳ ಹಿಂದೆ ತನ್ನ ಕಿರಿಯ ಸೋದರ ಜೀತು ಹಾಗೂ ತಾಯಿ ಬಸಂತಿ ಬಾಯಿ ಯಾದವ್ ಅವರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ. ಕಳೆದ ಜನವರಿಯಲ್ಲಿ ಬಸಂತಿ ಬಾಯಿ ಸೇಂದ್ವಾ ಪುರಸಭೆಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದರು. ಅವರ ವಿರುದ್ಧ ಇದ್ದ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಾಸು ಪಡೆದಿದ್ದರು. ಇದರಿಂದಾಗಿ ಸ್ಥಳೀಯ ಕಾಂಗ್ರೆಸ್ ಘಟಕ ಸಾಕಷ್ಟು ಮುಜುಗರ ಅನುಭವಿಸಿತ್ತು.
ಭಾನುವಾರ ತಡರಾತ್ರಿ ಪೊಲೀಸರ ತಂಡವೊಂದು ಯಾದವ್ ಮನೆಯ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ. ಬರ್ವಾನಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯಾಂಗ್ ಚೆನ್ ದೋಲ್ಕರ್ ಭೂಟಿಯಾ ಅವರು ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ್ದಾರೆ.
ಮನೆಯ ಛಾವಣಿಯ ಮೇಲೆ ಇರಿಸಿದ್ದ ಅಲ್ಮೆರಾದಲ್ಲಿ ದೊಡ್ಡ ಪೆಟ್ಟಿಗೆಯೊಂದರಲ್ಲಿ ಬಾಂಬು ಪಿಸ್ತೂಲುಗಳನ್ನು ಇಡಲಾಗಿತ್ತು ಎಂದು ಎಸ್ ಪಿ ತಿಳಿಸಿದ್ದಾರೆ. “ಈ ಶಸ್ತ್ರಾಸ್ತ್ರಗಳನ್ನು ಯಾಕೆ ಇಡಲಾಗಿತ್ತು ಎಂಬುದು ನಮಗೆ ಇನ್ನೂ ಖಚಿತವಾಗಿ ತಿಳಿದು ಬಂದಿಲ್ಲ. ಈ ಬಗ್ಗೆ ವಿಚಾರಣೆ ಪ್ರಗತಿಯಲ್ಲಿದೆ” ಎಂದು ಅವರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ಯಾದವ್, ಸಾಗರ್ ಚೌಧುರಿ, ದೀಪಕ್ ಮತ್ತು ಹೃತಿಕ್ ಎಂಬುವವರ ಮೇಲೆ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತು ಕಾಯ್ದೆ 1908ರ ಸೆಕ್ಷನ್ 25(1), ಸೆ. 27 ಅಡಿ ಕೇಸು ದಾಖಲಿಸಲಾಗಿದೆ.
ಆರೋಪಿ ಸಂಜಯ್ ಯಾದವ್ ಮೇಲೆ ಮೊದಲೇ 47 ಕ್ರಿಮಿನಲ್ ಕೇಸುಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.