ಭಾರತವೇನೋ ಚುನಾವಣೆಯ ಹೊಸ್ತಿಲಲ್ಲಿ ಮಿಶನ್ ಶಕ್ತಿ ಹೆಸರಿನ ಎ-ಸ್ಯಾಟ್ (ಉಪಗ್ರಹ ನಿಗ್ರಹ ಕ್ಷಿಪಣಿ) ಪ್ರಯೋಗಿಸಿ ನಾನೆಂತಹ ಸಾಧನೆಗೈದೆ ಎಂದು ಹೆಮ್ಮೆಯಿಂದ ಬೀಗಿತು. ಅಂತರಿಕ್ಷದಲ್ಲಿ ಭೂಮಿಯ ಸುತ್ತ ತಿರುಗುವ ಉಪಗ್ರಹಗಳನ್ನೇ ಗುರಿಪಡಿಸಿ ನಾಶಮಾಡುವ ತಂತ್ರಜ್ಞಾನ ಸಾಧಿಸಿರುವುದನ್ನು ನರೇಂದ್ರ ಮೋದಿಯವರು ಇಡೀ ದೇಶವನ್ನೇ ಕೆಲ ಹೊತ್ತು ಉಸಿರು ಬಿಗಿಹಿಡಿಯುವಂತೆ ಮಾಡಿಕೊಂಡು ನಂತರ ಘೋಷಿಸಿದರು.
ನೂರಾರು ಕಿಲೋಮೀಟರ್ ದೂರ ಕ್ರಮಿಸಿ ಗುರಿ ತಲುಪಬಲ್ಲ ಅಂತಹ ತಂತ್ರಜ್ಞಾನ ಸಾಧಿಸಿದ ನಾವು ಕೇವಲ ಆರಡಿ, ಎಂಟಡಿ ಮಲದ ಗುಂಡಿಗಳಲ್ಲಿ (ಮ್ಯಾನ್ ಹೋಲ್, ಸೆಪ್ಟಿಕ್ ಟ್ಯಾಂಕ್) ಇಳಿದು ಸ್ವಚ್ಚ ಮಾಡುವ ಯಂತ್ರಗಳನ್ನು ಕಂಡುಹಿಡಿಯುವುದು ಯಾವಾಗ?
ಮಲದ ಗುಂಡಿಗಳೆಂಬ ಸಾವಿನ ಗುಂಡಿಗಳನ್ನು ಇಳಿದು, ವಿಷಾನಿಲ ಸೇವಿಸಿ ಮತ್ತೆ ಮತ್ತೆ ಸಂಭವಿಸುತ್ತಲೇ ಇರುವ ಪೌರಕಾರ್ಮಿಕರ ಸಾವುಗಳು ಈ ಮೇಲಿನ ಪ್ರಶ್ನೆಯನ್ನು ಆಳುವವರಿಗೆ ಕೇಳುತ್ತಲೇ ಇವೆ.
ಮೊನ್ನೆ ಮಧ್ಯಪ್ರದೇಶದ ಇಂದೋರಿನಲ್ಲಿ ಒಬ್ಬ ಕಾರ್ಮಿಕ, ನೆನ್ನೆ ವಿಜಯಪುರದ ಇಂಡಿಯಲ್ಲಿ ಮೂವರು ಕಾರ್ಮಿಕರು, ವಾರದ ಹಿಂದೆ ಚೆನ್ನೈನಲ್ಲಿ ಆರು ಮಂದಿ ಕಾರ್ಮಿಕರು ಮ್ಯಾನ್ ಹೋಲ್ ಮತ್ತು ಶೌಚಗುಂಡಿಗಳ ಸ್ವಚ್ಛ ಮಾಡುವ ಕೆಲಸಲ್ಲಿ ವಿಷಾನಿಲ ಶ್ವಾಸಕೋಶಕ್ಕೆ ಬಡಿದು ಪ್ರಾಣ ಕಳೆದುಕೊಂಡಿದ್ದಾರೆ.
ಇಂಧೋರ್, ಮಧ್ಯಪ್ರದೇಶ: ಇಂದೋರ್ ಮುನಿಸಿಪಲ್ ಕಾರ್ಪೊರೇಷನ್ (IMC)ನಲ್ಲಿ ಗುತ್ತಿಗೆ ಪೌರಕಾರ್ಮಿಕನೊಬ್ಬ ಸೋಮವಾರ ಚರಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಸಾವನ್ನಪಿದ್ದಾನೆ. ಇದೇ ಘಟನೆಯಲ್ಲಿ ವಿಪತ್ತು ನಿರ್ವಹಣೆ ಪಡೆಯ (SDRF) ಇಬ್ಬರು ಸಿಬ್ಬಂದಿಗಳು ಪ್ರಜ್ಞೆ ಕಳೆದುಕೊಂಡಿರುವ ಪ್ರಕರಣ ನಡೆದಿದೆ. ಇಂದೋರ್ನ ಬನಗಂಗಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಜೀವ ಕಳೆದುಕೊಂಡ ಪೌರ ಕಾರ್ಮಿಕನನ್ನು ಕೊಲ್ಕತ್ತಾದ ಶೌಕಿತ್ ಇಸ್ಲಾಮ್ ಎಂದು ಗುರುತಿಸಲಾಗಿದೆ. ಕೆಲಸ ಮಾಡುವಾಗ ಆತ ಯಾವುದೇ ಸುರಕ್ಷತಾ ಸಾಧನವನ್ನೂ ಧರಿಸಿರಲಿಲ್ಲವೆಂದು ತಿಳಿದುಬಂದಿದೆ. ಚರಂಡಿಯನ್ನು ಸ್ವಚ್ಛಗೊಳಿಸುವಾಗ ಉಸಿರುಗಟ್ಟಿದ ಶೌಕತ್ನನ್ನು ಪಾರು ಮಾಡಲು ಹೋದ ಇನ್ನೊಬ್ಬ ಕಾರ್ಮಿಕನೂ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಾಕಷ್ಟು ಸಮಯ ಕಳೆದರೂ ಶೌಕಿತ್ ಚರಂಡಿಯಿಂದ ಹೊರ ಬರಲಿಲ್ಲವಾದಾಗ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುತ್ತಿಗೆದಾರನು ಶೆಹನ್ ಶಾ ಶೇಖ್ ಅವರನ್ನು ಚರಂಡಿಯೊಳಗೆ ಇಳಿಸಿ ಏನಾಗಿದೆ ಎಂದು ನೋಡಿ ಬಾ ಎಂದು ಹೇಳಿದ್ದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿ ಶರದ್ ಚಂದ್ರ ರೈ ಅವರು, ಶೆಹನ್ ಶಾ ಪ್ರಜ್ಞೆ ತಪ್ಪಿದ ಕೂಡಲೇ ಆತನನ್ನು ಹಗ್ಗದಿಂದ ಕಟ್ಟಿ ಮೇಲೆಳೆಯಲಾಯಿತು ಎಂದು ತಿಳಿಸಿದ್ದಾರೆ. ಆತನ ಕುತ್ತಿಗೆಗೆ ಹಗ್ಗ ಸುತ್ತಿಕೊಂಡಿದ್ದರೂ ಸಹ ಶೆಹೆನ್ ಶಾ ಬದುಕುಳಿದರು. ಶೆಹೆನ್ ಶಾ ಅವರನ್ನು ಮೇಲೆತ್ತಿದ ನಂತರ ಶೌಕಿತ್ರನ್ನು ಪಾರುಮಾಡಲು ಮತ್ತೊಬ್ಬ SDRF ಸಿಬ್ಬಂದಿ ಗೋವಿಂದ ಪಾಟೀಲರನ್ನು ಚೇಂಬರ್ ಒಳಗೆ ಇಳಿಸಲಾಯಿತು. ಶೌಕಿತ್ರನ್ನು ಚರಂಡಿಯಿಂದ ಹೊರತರುವಲ್ಲಿ ಅವರು ಯಶಸ್ವಿಯಾದರು, ಆದರೆ ಕೂಡಲೇ ಗೋವಿಂದ ಪಾಟೀಲ ಅವರೇ ಪ್ರಜ್ಞೆ ತಪ್ಪಿದ್ದರು ಎಂದೂ ಅವರು ತಿಳಿಸಿದ್ದಾರೆ.
ಈ ಯಾವ ಕಾರ್ಮಿಕರಿಗೂ ಮ್ಯಾನ್ ಹೋಲ್ ಗೆ ಇಳಿಯುವಾಗ ಯಾವುದೇ ಕನಿಷ್ಟ ಜೀವರಕ್ಷಕ ಸಾಧನಗಳನ್ನಿ ನೀಡಿರಲಿಲ್ಲ.
ಈ ಸಾವುಗಳು ಸಂಭವಿಸಲು ನಿರ್ಲಕ್ಷ್ಯ ಕಾರಣ ಎಂದು ಹೇಳಿರುವ ರೈ ಅವರು, ಈ ಕಾರ್ಮಿಕರು ಯಾವುದೇ ಸುರಕ್ಷತಾ ಉಪಕರಣವನ್ನು ಧರಿಸಿರಲಿಲ್ಲವೆಂಬ ಅಂಶವನ್ನು ಸ್ಪಷ್ಟಪಡಿಸಿದ್ದಾರೆ.
ಚೆನ್ನೈ: ಕಳೆದ ವಾರವಷ್ಟೇ (ಮಾರ್ಚ್ 27ರಂದು) ಚೆನ್ನೈನ ಶ್ರೀಪೆರಂಬುದೂರಿನಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ವಿಷಾನಿಲ ಸೇವಿಸಿ ಆರು ಪೌರಕಾರ್ಮಿಕರು, ಅದರಲ್ಲಿ ಒಬ್ಬ ತಂದೆ, ಇಬ್ಬರು ಮಕ್ಕಳು ಇತರ ಮೂವರು ಕಾರ್ಮಿಕರು ಸಾವನ್ನಪ್ಪಿದ ದುರಂತಮಯ ಘಟನೆ ಸಂಭವಿಸಿದೆ. ಅಲ್ಲೂ ಸಹ ಹೀಗೆ ತಂದೆ ಕೃಷ್ಣಮೂರ್ತಿ ಟ್ಯಾಂಕ್ ಒಳಗೆ ಇಳಿದು ವಿಷಾನಿಲ ಸೇವಿಸಿ ಬೀಳುತ್ತಿದ್ದಂತೆಯೇ ಅವರನ್ನು ರಕ್ಷಿಸಲು ಮಕ್ಕಳು ಇಳಿದಿದ್ದಾರೆ. ಅವರೂ ಬೀಳುತ್ತಿದ್ದಂತೆ ಉಳಿದವರು. ಹೀಗೆ ನೋಡನೋಡುತ್ತಿದ್ದಂತೆ ಆರು ಜನ ಸಾವಿಗೀಡಾಗಿದ್ದರು. ಕೊನೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹಗಳನ್ನು ಮೇಲೆತ್ತಿದ್ದರು.
ಇಂಡಿ, ವಿಜಯಪುರ: ಇಲ್ಲಿನ ಅಮರ್ ಇಂಟರ್ ನ್ಯಾಶನಲ್ ಹೊಟೆಲ್ ನ ಶೌಚಗುಂಡಿ ಸ್ವಚ್ಛಗೊಳಿಸಲು ಇಳಿದಿದ್ದ ಮೂವರು ಕೂಲಿಕಾರ್ಮಿಕರು ಮಂಗಳವಾರ ಬಲಿಯಾಗಿದ್ದಾರೆ. ಸ್ಥಳೀಯರಾದ ರಹಿಮಾನ್ ಸಾಬ್ ಎಕ್ಕೆವಾಲೆ (26), ಬುಡುಗಾನ್ ಸಾಬ್ ಬಾಗವಾನ (45), ಮುದುಕಪ್ಪ ಕಟ್ಟೀಮನಿ (35) ಮತಪಟ್ಟ ಕಾರ್ಮಿಕರು. ಮೇಲಿನ ಎರಡು ಘಟನೆಗಳಂತೆಯೇ ಇದೂ ನಡೆದಿದೆ. ಒಬ್ಬರಾದ ನಂತರ ಒಬ್ಬರು ಗುಂಡಿ ಇಳಿದು ವಿಷಾನಿಲ ಶ್ವಾಸಕ್ಕೆ ಬಡಿದು ಸತ್ತಿದ್ದಾರೆ. ಯಾರೂ ಮೇಲಕ್ಕೆ ಬರದಿದ್ದಾಗ ಹೊಟೆಲಿನವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಕರೆಸಿ ದೇಹಗಳನ್ನು ಮೇಲೆಕ್ಕೆತ್ತಲಾಗಿದೆ.
ಹೀಗೆ ಕೇವಲ ಒಂದು ವಾರದಲ್ಲಿ ವರದಿಯಾಗಿರುವ ಮಲದ ಗುಂಡಿಗಳಲ್ಲಿ ಸಾವಿಗೀಡಾದವರ ಸಂಖ್ಯೆ 10.

ಈ ಜೀವಗಳಿಗೆ ಯಾವ ಬೆಲೆಯನ್ನೂ ನೀಡದ ದೇಶದಲ್ಲಿರುವುದು ಸ್ವಚ್ಛಭಾರತವೋ ಸತ್ತ ಭಾರತವೋ ಎಂದು ಕೇಳಬೇಕಾಗಿದೆ.
ಟ್ರೂಥ್ ಇಂಡಿಯಾ
ಕೆಳಗಿನ ಸುದ್ದಿಗಳನ್ನೂ ಓದಿ
More Articles
By the same author
ನಿಜವಾಗಲೂ ಮನ ಕರಗುವ ಸಂಗತಿ