ಆಡಳಿತರೂಢ ಪಕ್ಷ ಮತ್ತು ಪ್ರಧಾನಿಯ ಸಾಧನೆಗಳನ್ನು ಬಿಂಬಿಸುವ ಒಂದು ಪ್ರತ್ಯೇಕ ಟಿವಿ ವಾಹಿನಿ, ಚುನಾವಣೆ ಘೋಷಣೆಯ ಬಳಿಕ ಚಾಲನೆ ಪಡೆಯುತ್ತದೆ! ಕೇಂದ್ರ ಸರ್ಕಾರದ ಒಡೆತನದ ಟಿವಿ ಸುದ್ದಿವಾಹಿನಿಯೊಂದು ಆಡಳಿತಪಕ್ಷದ ನಾಯಕರಾದ ಪ್ರಧಾನಿಯ ರಾಜಕೀಯ ಭಾಷಣವನ್ನು ನೀತಿ ಸಂಹಿತೆಯ ನಡುವೆಯೇ ಒಂದು ತಾಸು ಪ್ರಸಾರಮಾಡುತ್ತದೆ! ಚುನಾವಣಾ ಕಣದಲ್ಲಿರುವ ಪ್ರಧಾನಿಯ ಜೀವನಕಥೆ ಆಧಾರಿಸಿದ ಸಿನಿಮಾವೊಂದು ನೀತಿ ಸಂಹಿತೆ ಜಾರಿಯಾದ ಬಳಿಕ ದೇಶಾದ್ಯಂತ ಬಿಡುಗಡೆಯಾಗುತ್ತದೆ! ದೇಶದ ಬಾಹ್ಯಾಕಾಶ ಸಾಧನೆಯನ್ನು ಪ್ರಧಾನಿ ಸ್ವತಃ ಘೋಷಿಸುವ ಮೂಲಕ ಆ ಕಾರ್ಯದ ರಾಜಕೀಯ ಲಾಭ ಪಡೆಯುತ್ತಾರೆ! ದೇಶದ ಸೇನೆಯನ್ನು ಪ್ರಧಾನಿ ಅಭ್ಯರ್ಥಿಯ ಸೇನೆ ಎಂದು ಮುಖ್ಯಮಂತ್ರಿಯೊಬ್ಬರು ಕರೆಯುತ್ತಾರೆ! ಇದೆಲ್ಲಕ್ಕಿಂತ ಮುಖ್ಯವಾಗಿ, ಸಂವಿಧಾನಕ್ಕೆ ವಿರುದ್ಧವಾಗಿ ವ್ಯಕ್ತಿಯೊಬ್ಬರನ್ನು ಆಡಳಿತ ಪಕ್ಷ ಪ್ರಧಾನಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸುತ್ತದೆ!
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವ ದೇಶದ ಈಗಿನ ಲೋಕಸಭಾ ಚುನಾವಣೆಯ ಈ ಬೆಳವಣಿಗೆಗಳು, ನಿಜವಾಗಿಯೂ ದೇಶದಲ್ಲಿ ಭಾರತೀಯ ಚುನಾವಣಾ ಆಯೋಗದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಆಶಯ ವಾಸ್ತವದಲ್ಲಿ ಜಾರಿಯಲ್ಲಿದೆಯೇ ಎಂಬ ಅನುಮಾನಗಳನ್ನು ಹುಟ್ಟಿಸದೇ ಇರದು. ಹೌದು, ಕಳೆದ ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ ದೇಶದ ಸುಪ್ರೀಂಕೋರ್ಟಿನಿಂದ ತಾಲೂಕು ಕಚೇರಿವರೆಗೆ ಎಲ್ಲವನ್ನೂ ಒಂದು ಪಕ್ಷದ, ಒಂದು ಸಿದ್ಧಾಂತದ ಮತ್ತು ಅದಕ್ಕಿಂತ ಮುಖ್ಯವಾಗಿ ಒಬ್ಬ ವ್ಯಕ್ತಿಯ ಆಣತಿಗೆ ಬಗ್ಗಿಸುವ ಪ್ರಯತ್ನಗಳು ಬಿಡುಬೀಸಾಗಿ ನಡೆಯುತ್ತಲೇ ಇವೆ. ಅಂತಹ ಪ್ರಯತ್ನಗಳಿಗೆ ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳಲ್ಲಿ ಒಂದಾದ ಚುನಾವಣಾ ಆಯೋಗವೂ ಮಣಿದುಬಿಟ್ಟಿದೆಯೇ ಎಂಬ ಪ್ರಶ್ನೆಯನ್ನು ಮೇಲೆ ಹೇಳಿರುವ ಬೆಳವಣಿಗೆಗಳು ಹುಟ್ಟುಹಾಕಿವೆ.
ಆಯೋಗ ನಿಜವಾಗಿಯೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಾತ್ರಿಪಡಿಸುತ್ತಿದೆಯೇ? ಅಥವಾ ಒಂದು ಪಕ್ಷ ಅಥವಾ ಒಬ್ಬ ವ್ಯಕ್ತಿಯ ಪರ ಒಲವು ತೋರುತ್ತಿದೆಯೇ ಎಂಬ ಪ್ರಶ್ನೆ ಈಗ ಕೇವಲ ಪ್ರತಿಪಕ್ಷ ನಾಯಕರು, ರಾಜಕೀಯ ವಿಶ್ಲೇಷಕರ ಮಟ್ಟಿಗೆ ಮಾತ್ರ ಸೀಮಿತವಾಗಿಲ್ಲ. ತಮ್ಮದೇ ನಿತ್ಯದ ಜಂಜಡಗಳಲ್ಲಿ ಮುಳುಗಿರುವ ತೀರಾ ಜನಸಾಮಾನ್ಯರ ನಡುವೆಯೂ ಚರ್ಚೆಯ ವಿಷಯವಾಗಿದೆ ಎಂಬುದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ.
90ರ ದಶಕದಲ್ಲಿ ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಮೂಲಕ ಚುನಾವಣಾ ಆಯೋಗ ಎಂಬುದೊಂದು ದೇಶದಲ್ಲಿ ಇದೆ ಎಂದು ಜನಸಾಮಾನ್ಯರಿಗೆ ತೋರಿಸಿಕೊಟ್ಟ ಅಂದಿನ ಮುಖ್ಯ ಚುನಾವಣಾ ಆಯುಕ್ತ ಟಿ ಎನ್ ಶೇಷನ್ ಅವರನ್ನು ಜನ ಮತ್ತೊಮ್ಮೆ ನೆನಪಿಸಿಕೊಳ್ಳತೊಡಗಿದ್ದಾರೆ. ಭಾರತೀಯ ಚುನಾವಣಾ ಆಯೋಗದ ನಿಷ್ಪಕ್ಷಪಾತದ ಮತ್ತು ದಿಟ್ಟ ಕಾರ್ಯನಿರ್ವಹಣೆಯನ್ನು ಇಡೀ ಜಗತ್ತು ಅಚ್ಚರಿಯಿಂದ ಗಮನಿಸುವಂತೆ ಮಾಡಿದವರು ಟಿ ಎನ್ ಶೇಷನ್. ಅಂತಹ ಎದೆಗಾರಿಕೆಯ ಆಡಳಿತ ಕಂಡ ಆಯೋಗದ ಕುರಿತು ಈಗ ಕೇಳಿಬರುತ್ತಿರುವ ಟೀಕೆ ಮತ್ತು ಶಂಕೆಯ ಮಾತುಗಳು ನಿಜವಾಗಿಯೂ ಆಯೋಗದ ಘನತೆಯನ್ನಷ್ಟೇ ಅಲ್ಲದೆ, ಇಡೀ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೇ ಅಪಾಯ ತಂದಿವೆ.
ಅದರಲ್ಲೂ ಈ ಬಾರಿಯ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ, ನೀತಿ ಸಂಹಿತೆಯನ್ನೇ ಗಾಳಿಗೆ ತೂರಿ ಆಡಳಿತರೂಢ ಬಿಜೆಪಿ ಮತ್ತು ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಿರುವ ಪ್ರಚಾರ ವೈಖರಿ ನೈಜ ಪ್ರಜಾಪ್ರಭುತ್ವಕ್ಕೇ ಧಕ್ಕೆ ತಂದಿವೆ. ಮುಖ್ಯವಾಗಿ ಎಲ್ಲರಿಗೂ ಸಮಾನ ಅವಕಾಶ ಮತ್ತು ಆದ್ಯತೆ ಎಂಬ ಭಾರತೀಯ ಚುನಾವಣಾ ವ್ಯವಸ್ಥೆಯ ಮೂಲ ಆಶಯವನ್ನೇ ನಗೆಪಾಟಲಿಗೆ ಈಡುವಂತಹ ಬೆಳವಣಿಗೆಗಳು ನಡೆಯುತ್ತಿವೆ ಎಂಬುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಪರ ಕಾಳಜಿ ವಹಿಸುವ ಎಲ್ಲರ ಆತಂಕವಾಗಿದೆ.
ಬಾಲಾಕೋಟ್ ದಾಳಿಯಿಂದಲೇ ಆರಂಭವಾದ ಈ ಬೆಳವಣಿಗೆಗಳು ಇದೀಗ ಪ್ರತಿದಿನದ ಚುನಾವಣಾ ಪ್ರಚಾರ ಭಾಷಣಗಳ ವರೆಗೂ ಯಾವ ಅಡ್ಡಿಆತಂಕಗಳಿಲ್ಲದೆ ಮುಂದುವರಿದಿವೆ.
ಪುಲ್ವಾಮಾ ದಾಳಿಯಲ್ಲಿ ನಮ್ಮ 40 ಯೋಧರು ಪ್ರಾಣಬಿಟ್ಟರು. ಪ್ರಮುಖವಾಗಿ ಆ ಭಯೋತ್ಪಾದಕ ದಾಳಿಗೆ ಕಾರಣ ಭದ್ರತಾ ವೈಫಲ್ಯ ಎಂಬುದನ್ನು ಸ್ವತಃ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಸರ್ಕಾರಗಳೇ ಹೇಳಿದವು. ಆದರೆ, ಆ ವೈಫಲ್ಯದ ಹೊಣೆಹೊರದ ಮೋದಿ ಅವರ ಸರ್ಕಾರ, ಆ ಬಳಿಕ 12ನೇ ದಿನ ನಡೆದ ಬಾಲಾಕೋಟ್ ಪ್ರತೀಕಾರ ದಾಳಿಯನ್ನು ಮಾತ್ರ ತನ್ನದೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಜೊತೆಗೆ, ಪಾಕಿಸ್ತಾನಿ ಯುದ್ಧವಿಮಾನ ಹೊಡೆದುರುಳಿಸಿದ ವಿಂಗ್ ಕಮಾಂಡರ್ ಅಭಿನಂದನ್ ಅವರ ಸಾಹಸವನ್ನೂ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಆದರೆ, ಇಂತಹ ಗಂಭೀರ ನೀತಿ ಸಂಹಿತೆ ಉಲ್ಲಂಘನೆಯ ವಿಷಯದಲ್ಲಿಯೂ ಚುನಾವಣಾ ಆಯೋಗದ ಕೇವಲ ಸೇನೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬಾರದು ಎಂದು ಸುತ್ತೋಲೆ ಹೊರಡಿಸಿ ಕೈತೊಳೆದುಕೊಂಡಿದೆ. ಹಾಗಾಗಿ, ಬಿಜೆಪಿ ನಾಯಕರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಇದೀಗ ‘ಭಾರತೀಯ ಸೇನೆ’ಯನ್ನೇ ‘ಮೋದಿ ಸೇನೆ’ ಎಂದು ಕರೆದಿದ್ದಾರೆ!
ಇನ್ನು ಸ್ವತಃ ಪ್ರಧಾನಿ ಮೋದಿಯವರು, ಚುನಾವಣಾ ಆಯೋಗವನ್ನೇ ಪರಿಗಣನೆಗೆ ತೆಗೆದುಕೊಳ್ಳದೆ, ಡಿಆರ್ ಡಿಒ ಮತ್ತು ಇಸ್ರೋದ ಸಾಧನೆಯಾದ ಮಿಷನ್ ಶಕ್ತಿ ಸಾಧನೆಯನ್ನು ತಮ್ಮದೇ ವೈಯಕ್ತಿಕ ಸಾಧನೆ ಎಂಬಂತೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಸಾಮಾನ್ಯವಾಗಿ ಇಂತಹ ಸಾಧನೆಗಳನ್ನು ಮಾಡಿದಾಗ ಆಯಾ ಸಂಸ್ಥೆಗಳ ಮುಖ್ಯಸ್ಥರು ಆ ಬಗ್ಗೆ ಮಾತನಾಡುವುದು ವಾಡಿಕೆ. ಆದರೆ, ಮೋದಿಯವರು ನೀತಿ ಸಂಹಿತೆ ಜಾರಿಯಲ್ಲಿರುವಾಗ ಸ್ವತಃ ಆ ಸಾಧನೆಯ ಹೆಗ್ಗಳಿಕೆಯನ್ನು ವೈಯಕ್ತಿಕವಾಗಿ ತಮಗೆ ಮತ್ತು ತಮ್ಮ ಪಕ್ಷಕ್ಕೆ ಪಡೆದುಕೊಳ್ಳುವ ಪ್ರಯತ್ನ ಮಾಡಿದರು. ಆ ಬಗ್ಗೆಯೂ ಪ್ರಮುಖ ಪ್ರತಿಪಕ್ಷಗಳು ದೂರು ನೀಡಿದರೂ, ಆಯೋಗ ದಿಟ್ಟ ಕ್ರಮಕೈಗೊಳ್ಳಲಿಲ್ಲ ಎಂಬುದು ಪ್ರತಿಪಕ್ಷಗಳ ಆರೋಪ.
ಇದೀಗ ಮೂರು ದಿನಗಳ ಹಿಂದೆ, ಮಾರ್ಚ್ 31ರಂದು ಪ್ರಧಾನಿ ಮೋದಿ ಸರ್ಕಾರಿ ವಾಹಿನಿ ದೂರದರ್ಶನದಲ್ಲಿ ‘ಮೈ ಭೀ ಚೌಕಿದಾರ್’ ಭಾಷಣ ಮಾಡಿದರು. ಬರೋಬ್ಬರಿ ಒಂದು ಗಂಟೆ ಕಾಲ ತಮ್ಮ ಸಾಧನೆಯನ್ನು ಹೇಳಿಕೊಂಡ ಮೋದಿಯವರ ಆ ಮಾತುಗಳು ಅಕ್ಷರಶಃ ಚುನಾವಣಾ ಭಾಷಣವಾಗಿದ್ದರೂ, ಅದಕ್ಕೆ ಆಯೋಗದ ಅನುಮತಿ ಪಡೆದಿರಲಿಲ್ಲ ಮತ್ತು ಪ್ರತಿಪಕ್ಷಗಳು ದೂರು ನೀಡಿದ ಬಳಿಕ ಕೂಡ ಆಯೋಗ ಆ ಕುರಿತು ವಾಹಿನಿಗೆ ಎಂದಿನಂತೆ ಒಂದು ನೊಟೀಸ್ ಜಾರಿ ಮಾಡಿ ಕೈತೊಳೆದುಕೊಂಡಿದೆ.
ಇದೆಲ್ಲಕ್ಕಿಂತ ಅಚ್ಚರಿಯ ಸಂಗತಿ ಎಂದರೆ; ಪ್ರಧಾನಿ ಮೋದಿಯವರ ಹೆಸರಿನಲ್ಲಿಯೇ ನಮೋ ಟಿವಿ ವಾಹಿನಿ ಆರಂಭವಾಗಿದೆ. ಅದೂ ನೀತಿ ಸಂಹಿತೆ ಜಾರಿಯಲ್ಲಿರುವಾಗ, ದೇಶಾದ್ಯಂತ ಲೋಕಸಭಾ ಚುನಾವಣೆ ಪ್ರಚಾರ ಕಾವೇರುತ್ತಿರುವ ಹೊತ್ತಿನಲ್ಲೇ ಮೋದಿ ಮತ್ತು ಬಿಜೆಪಿಯ ಚುನಾವಣಾ ಪ್ರಚಾರ ಸಭೆಗಳು ಮತ್ತು ಈವರೆಗಿನ ಬಿಜೆಪಿ ಸರ್ಕಾರದ ಸಾಧನೆಗಳನ್ನು ಬಿತ್ತರಿಸುವ ವಿಶೇಷ ವಾಹಿನಿಯಾಗಿ ಅದು ಕೆಲಸ ಮಾಡುತ್ತಿದೆ. ಆ ಬಗ್ಗೆ ಕೂಡ ಪ್ರತಿಪಕ್ಷಗಳ ದೂರು ಬಂದ ಬಳಿಕ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದ್ದು, ವಾಹಿನಿಗೆ ಅನುಮತಿ ನೀಡಿರುವ ಅದೇ ಬಿಜೆಪಿ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ನೋಟೀಸ್ ನೀಡಿದೆ ಮತ್ತು ಆ ನೋಟೀಸ್ಗೆ ಸಚಿವಾಲಯ, ಅದೊಂದು ಅಡ್ವೊಟೋರಿಯಲ್(ಜಾಹೀರಾತು ಮತ್ತು ಮಾಹಿತಿ) ವಾಹಿನಿ ಎಂದೂ ಸಮಜಾಯಿಷಿಯನ್ನೂ ನೀಡಿದೆ!
ಇನ್ನು ಚುನಾವಣಾ ಕಣದಲ್ಲಿರುವ ಪ್ರಧಾನಿ ಮೋದಿಯವರ ಜೀವನಕಥೆ ಆಧಾರಿತ ‘ಪಿಎಂ ನರೇಂದ್ರ ಮೋದಿ’ ಎಂಬ ಸಿನಿಮಾ ಕೂಡ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಬಿಡುಗಡೆಯಾಗುತ್ತದೆ ಮತ್ತು ಆ ಕುರಿತ ಪ್ರತಿಪಕ್ಷಗಳ ದೂರು ಬಂದ ಬಳಿಕವಷ್ಟೇ ಆಯೋಗ ಆ ಸಿನಿಮಾ ತಂಡಕ್ಕೆ ನೋಟೀಸ್ ನೀಡುತ್ತದೆ. ನೋಟೀಸ್ ಗೆ ತಂಡ ಪ್ರತಿಕ್ರಿಯೆ ನೀಡಿದ ಬಳಿಕ ಸಿನಿಮಾ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಆಯೋಗ ಇಡೀ ದೇಶದ ಚುನಾವಣಾ ಪ್ರಚಾರ ಯಾರ ಸಾಧನೆ ಮತ್ತು ವೈಫಲ್ಯಗಳ ಸುತ್ತ ಗಿರಕಿಹೊಡೆಯುತ್ತಿದೆಯೋ ಅದೇ ವ್ಯಕ್ತಿಯ ಗುಣಗಾನದ ಸಿನಿಮಾವನ್ನು ದೇಶಾದ್ಯಂತ ಪ್ರದರ್ಶನಕ್ಕೆ ಹಸಿರು ನಿಶಾನೆ ತೋರಿದೆ!
ಆದರೆ, ಈ ಹಿಂದೆ ಎಲ್ಲರಿಗೂ ಗೊತ್ತಿರುವಂತೆ, ಒಂದು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಕೂಡ ಯಾವುದೇ ವ್ಯಕ್ತಿ ಚುನಾವಣಾ ಕಣಕ್ಕಿಳಿಯವುದಷ್ಟೇ ಅಲ್ಲ; ಯಾವುದೇ ಪಕ್ಷದ ಅಧಿಕೃತ ಸದಸ್ಯನಾಗಿದ್ದರೂ, ನೀತಿ ಸಂಹಿತೆ ಜಾರಿಗೆ ಬರುತ್ತಿದ್ದಂತೆ ಯಾವುದೇ ಟಿವಿಗಳಲ್ಲಿ ಮತ್ತು ಸಿನಿಮಾ ಮಂದಿರಗಳಲ್ಲಿ ಅವರ ಸಿನಿಮಾಗಳ ಪ್ರದರ್ಶನಕ್ಕೆ ತಡೆ ಬೀಳುತ್ತಿತ್ತು. ಆದರೆ, ಇದೀಗ ಸ್ವತಃ ಕಣದಲ್ಲಿರುವ ಪ್ರಧಾನಿಯೊಬ್ಬರ ಜೀವನಗಾಥೆ ಆಧಾರಿತ ಸಿನಿಮಾಕ್ಕೆ ಮಾತ್ರ ನೀತಿ ಸಂಹಿತೆ ಅಡ್ಡಬಂದಿಲ್ಲ.
ಇವೆಲ್ಲವನ್ನೂ ಮೀರಿ, ರಾಜಸ್ಥಾನ ರಾಜ್ಯಪಾಲರಾಗಿರುವ ಕಲ್ಯಾಣ್ ಸಿಂಗ್ ಅವರು ದೇಶ ಮೋದಿಯವರನ್ನೇ ಪುನರಾಯ್ಕೆ ಮಾಡಬೇಕು. ದೇಶದ ಹಿತರಕ್ಷಣೆಗಾಗಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದಿರುವುದು ಎಲ್ಲರ ಹುಬ್ಬೇರಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ, ರಾಜಕೀಯೇತರ ಸಂವಿಧಾನಿಕ ಸ್ಥಾನದಲ್ಲಿರುವ ರಾಜ್ಯಪಾಲರೊಬ್ಬರು ಈ ರೀತಿಯ ಚುನಾವಣಾ ಭಾಷಣ ಮಾಡುವುದು ಘೋರ ಅಪರಾಧ. ಈ ವಿಷಯದಲ್ಲಿ ಕೂಡ ಚುನಾವಣಾ ಆಯೋಗ ಪ್ರತಿಪಕ್ಷಗಳ ಆಕ್ಷೇಪದ ನಂತರವೇ ಕ್ರಮಕ್ಕೆ ಮುಂದಾಗಿದ್ದು, ರಾಜ್ಯಪಾಲರ ಭಾಷಣ ಕುರಿತು ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ.
ಇದಲ್ಲದೆ, ರೈಲುಗಳಲ್ಲಿ ಮೋದಿ ಚಿತ್ರ ಮತ್ತು ಬಿಜೆಪಿ ಚಿಹ್ನೆ ಇರುವ ಲೋಟ ಮತ್ತು ಟಿಕೆಟುಗಳನ್ನು ವಿತರಿಸಿದ ವಿಷಯದಲ್ಲಿಯೂ ಪ್ರತಿಪಕ್ಷಗಳು ದೂರು ಸಲ್ಲಿಸಿದ ಬಳಿಕ ಆಯೋಗ ಕ್ರಮಕೈಗೊಂಡಿದೆ. ಇನ್ನು ಐಟಿ ದಾಳಿಗಳ ವಿಷಯದಲ್ಲಂತೂ, ಚುನಾವಣಾ ಕಣದಲ್ಲಿರುವ ಪ್ರತಿಪಕ್ಷ ನಾಯಕರು ಹಾಗೂ ಅವರ ಆಪ್ತರ ಮನೆಗಳ ಮೇಲಷ್ಟೇ ದಾಳಿ ಮಾಡಿ, ಆಡಳಿತ ಪಕ್ಷದ ನಾಯಕರು ಮತ್ತು ಅವರ ಆಪ್ತರ ವಿಷಯದಲ್ಲಿ ಜಾಣಕುರುಡು ಪ್ರದರ್ಶಿಸಲಾಗುತ್ತಿದೆ. ಈ ಬಗ್ಗೆಯೂ ಆಯೋಗ ಚಕಾರವೆತ್ತಿಲ್ಲ.
ಆದರೆ, ಬಿಜೆಪಿ ಸರ್ಕಾರದ ಅವಧಿಯ ಬಹುಕೋಟಿ ಹಗರಣವಾದ ರಾಫೇಲ್ ಯುದ್ಧ ವಿಮಾನ ಖರೀದಿ ಕುರಿತ ತಮಿಳು ಕೃತಿಯೊಂದರ ಬಿಡುಗಡೆ ವಿಷಯದಲ್ಲಿ ಮಾತ್ರ ಆಯೋಗ ಇನ್ನಿಲ್ಲದ ಕಾಳಜಿ ವಹಿಸುತ್ತದೆ! ಬಿಡುಗಡೆ ಕಾರ್ಯಕ್ರಮಕ್ಕೆ ಮುನ್ನವೇ ಪುಸ್ತಕವನ್ನು ಆಯೋಗದ ಅಧಿಕಾರಿಗಳು ವಶಕ್ಕೆ ಪಡೆಯುತ್ತಾರೆ ಮತ್ತು ನೀತಿ ಸಂಹಿತೆ ಉಲ್ಲಂಘನೆ ಎಂದು ಇಡೀ ಚೆನೈನಲ್ಲಿ ಪುಸ್ತಕದಂಗಡಿಗಳನ್ನು ಜಾಲಾಡಿ ಎಲ್ಲಾ ಪ್ರತಿಗಳನ್ನೂ ವಶಪಡಿಸಿಕೊಳ್ಳಲಾಗುತ್ತದೆ! ಕೇಂದ್ರ ಆಯೋಗ ಬಳಿಕ ಪುಸ್ತಕ ಬಿಡುಗಡೆಗೆ ಅವಕಾಶ ನೀಡಿತಾದರೂ, ನೀತಿ ಸಂಹಿತೆ ಪಾಲನೆ ವಿಷಯದಲ್ಲಿ ಅದು ತೋರಿದ ಅವಸರ ಮತ್ತು ಕಾಳಜಿ ಮಾತ್ರ ಶಂಕೆ ಗುರಿಯಾಗುತ್ತದೆ!
ಈ ಎಲ್ಲಾ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಆಯೋಗದ ಪಕ್ಷಪಾತಿ ಧೋರಣೆಯ ವಿರುದ್ಧ ಗಂಭೀರ ಟೀಕೆ ಮಾಡಿದ್ದಾರೆ. “ಆಯೋಗ ಬಿಜೆಪಿಯ ಚುನಾವಣಾ ಘಟಕದಂತೆ ನಡೆದುಕೊಳ್ಳುತ್ತಿದೆ” ಎಂಬಂತಹ ಟೀಕೆಗಳೂ ಕೇಳಿಬಂದಿವೆ.
ಒಟ್ಟಾರೆ, ಈ ಬಾರಿಯ ಚುನಾವಣೆ ಆಳುವ ಪಕ್ಷ ಮತ್ತು ಪ್ರಧಾನಿಯಿಂದಲೇ ಸಾಲುಸಾಲು ನೀತಿ ಸಂಹಿತೆ ಉಲ್ಲಂಘನೆಯ ಘಟನೆಗಳನ್ನು ಕಂಡಿದ್ದು, ಆಯೋಗದ ಕಾರ್ಯದಕ್ಷತೆ ಮತ್ತು ನಿಷ್ಪಕ್ಷಪಾತಿ ವರ್ತನೆಯ ಬಗ್ಗೆಯೂ ಮತದಾರರಲ್ಲಿ ಅನುಮಾನಗಳು ಎದ್ದಿವೆ. ಅಂತಹ ಅನುಮಾನಗಳು ಮತ್ತು ಆರೋಪಗಳು ನಿಜವಾದಲ್ಲಿ ದೇಶದ ಚುನಾವಣಾ ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆಯೇ ಮಣ್ಣುಪಾಲಾಗಲಿವೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳೇ ಅಪಹಾಸ್ಯಕ್ಕೀಡಲಾಗಲಿವೆ. ಹಾಗಾದಲ್ಲಿ, ದೇಶ ನೈಜ ಪ್ರಜಾಪ್ರಭುತ್ವವಾಗಿ ಉಳಿಯುವುದು ಕೂಡ ಸಾಧ್ಯವಿಲ್ಲ. ಅಂದರೆ; ಅಂತಿಮವಾಗಿ ಮೋದಿಯವರ ನೇತೃತ್ವದಲ್ಲಿ ದೇಶ ಸರ್ವಾಧಿಕಾರಿ ವ್ಯವಸ್ಥೆಗೆ ಜಾರುತ್ತಿದೆ ಎಂಬ ಪ್ರಾಜ್ಞರ ಅನುಮಾನಗಳನ್ನು ಈ ಚುನಾವಣೆ ನಿಜ ಮಾಡುತ್ತಿದೆ!