ಬಿಜೆಪಿ ಪಕ್ಷದ ಸಂಸ್ಥಾಪಕ ಮತ್ತು ಅದರ ಎರಡನೆಯ ರಾಷ್ಟ್ರಾಧ್ಯಕ್ಷರಾದ ಎಲ್ ಕೆ ಅಡ್ವಾಣಿಯವರನ್ನು ಬಿಜೆಪಿಯ ಹಾಲಿ ರಾಷ್ಟ್ರ ನಾಯಕರಾದ ಮೋದಿ-ಶಾ ಜೋಡಿ ಕೀಳ್ಗಣಿಸಿ ಪಕ್ಷದ ಮಾರ್ಗದರ್ಶಕ ಮಂಡಳಿಗೆ ( ವೃದ್ಧಾಶ್ರಮ) ಕಳಿಸಿತು. ಆದರೆ ಅನಿರೀಕ್ಷಿತವೇಂಬಂತೆ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇರುವಂತೆ ಈ ಹಿರಿಯ ಬಿಜೆಪಿ ಮುಖಂಡ ಅಡ್ವಾಣಿ ಬಂಡಾಯದ ಬಾವುಟ ಹಾರಿಸಿರುವಂತೆ ತೋರುತ್ತಿದೆ.
ಬಿಜೆಪಿಯ ದುರದೃಷ್ಟಕ್ಕೆ ಮತ್ತೊಬ್ಬ ಬಿಜೆಪಿ ಸ್ಥಾಪಕ ಸದಸ್ಯ, ಪಕ್ಷದ ಮೂರನೆಯ ರಾಷ್ಟ್ರೀಯ ಅಧ್ಯಕ್ಷ ಮುರಳಿ ಮನೋಹರ ಜೋಶಿಯವರಿಗೂ ಟಿಕೆಟ್ ನಿರಾಕರಿಸಿದ್ದರಿಂದ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನು ಸಂಧಿಸಿ ಮಾತುಕತೆ ನಡೆಸುತ್ತಿದ್ದಾರೆ. ಉನ್ನತ ಮಟ್ಟದ ಮೂಲಗಳಿಂದಲೇ ನಾನು ಪಡೆದ ಮಾಹಿತಿಯ ಪ್ರಕಾರ ಮುರಳಿ ಮನೋಹರ ಜೋಶಿಯವರನ್ನು ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ನರೇಂದ್ರ ಮೋದಿಯ ವಿರುದ್ಧವೇ ವಾರಣಾಸಿಯಿಂದ ಸ್ಪರ್ಧಿಸಲು ಆಹ್ವಾನ ನೀಡಲಾಗಿದೆ.
ಮುರಳಿ ಮನೋಹರ ಜೋಶಿಯವರು ವಾರಣಾಸಿ ಕ್ಷೇತ್ರವನ್ನು 2014ರಲ್ಲಿ ಮೋದಿಗೆ ಬಿಟ್ಟುಕೊಟ್ಟಿದ್ದರು. ಈಗ ಅವರು ಅಲ್ಲಿಂದ ಮೋದಿ ವಿರುದ್ಧ ಸ್ಪರ್ಧಿಸಿಸಲು ಕೊಂಚ ಹಿಂದೇಟು ಹಾಕುತ್ತಿದ್ದಾರೆನ್ನಲಾಗಿದೆ. ಬೇರೊಂದು ಕಡೆಯಿಂದ ಜೋಶಿಯವರಿಗೆ ಟಿಕೆಟ್ ನೀಡುವ ವಿಷಯದಲ್ಲಿಯೂ ಮಾತುಕತೆ ಇನ್ನೂ ನಡೆಯುತ್ತಿದೆ. ಸಧ್ಯದಲ್ಲೇ ಮೋದಿ-ಶಾ ಜೋಡಿ ವಿರುದ್ಧ ಜೋಶಿ ಬಹಿರಂಗವಾಗಿಯೇ ಟೀಕಿಸಲು ಸನ್ನದ್ಧರಾಗಿದ್ದಾರೆನ್ನಲಾಗಿದೆ. ಮೋದಿ ಸರ್ಕಾರದ ಕುರಿತು ಸಾಮಾನ್ಯವಾಗಿ ಅದು ಕ್ರೋನಿ ಕ್ಯಾಪಿಟಲಿಸಂ ಅಥವಾ ವಿಕೃತ ಬಂಡವಾಳವಾದದ ಸ್ನೇಹಿ ಎಂದು ಆರೋಪ ಕೇಳಿಬರುತ್ತದೆ. ಇದನ್ನೇ ಉಲ್ಲೇಖಿಸಿ ಟೀಕಿಸಲು ಜೋಶಿ ಬಯಸಿದ್ದಾರಲ್ಲದೇ ರಾಜನ್ ಬಹಿರಂಗಪಡಿಸಿದ್ದ ಬ್ಯಾಂಕ್ ಸುಸ್ತಿದಾರರ ಪಟ್ಟಿಯನ್ನು ಸಹ ಉಲ್ಲೇಖಿಸಿ ಮೋದಿ-ಶಾ ರನ್ನು ಟೀಕಿಸಲು ಜೋಶಿ ತೀರ್ಮಾನಿಸಿದ್ದಾರೆ.
ಎಲ್ ಕೆ ಅಡ್ವಾಣಿ, (91) ಮೋದಿಯ ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿ ಗುರುವಾರ ಒಂದು ಬ್ಲಾಗ್ ಲೇಖನ ಬರೆದಿದ್ದಾರೆ. ಅದರಲ್ಲಿ ಅವರು, “ನಮ್ಮ ಪರಿಕಲ್ಪನೆಯ ಭಾರತೀಯ ರಾಷ್ಟ್ರವಾದದಲ್ಲಿ ನಾವು ನಮ್ಮನ್ನು ರಾಜಕೀಯವಾಗಿ ಒಪ್ಪದ ಜನರನ್ನೆಲ್ಲಾ “ದೇಶದ್ರೋಹಿಗಳು” ಎಂದು ಯಾವತ್ತೂ ತಿಳಿದುಕೊಂಡಿಲ್ಲ” ಎಂದು ಬರೆದಿದ್ದಾರೆ. ಇದು ನೇರವಾಗಿ ಮೋದಿ-ಶಾರಿಗೇ ತಿವಿದ ತಿವಿತ. ಯಾಕೆಂದರೆ ಮೋದಿ-ಶಾ ಈ ಸಲ ಚುನಾವಣೆಗೆ ಹೊರಟಿರುವುದೇ ವಿರೋಧ ಪಕ್ಷಗಳ ದೇಶಪ್ರೇಮವನ್ನು ಪ್ರಶ್ನಿಸುತ್ತಾ ಕೇವಲ ರಾಷ್ಟ್ರೀಯ ಭದ್ರತೆಯನ್ನೇ ಮಂದೆ ಮಾಡಿಕೊಂಡು. ಹೀಗಿರುವಾಗ ಅಡ್ವಾಣಿಯವರ ಮೇಲಿನ ಮಾತು ಬಹಳ ಮಹತ್ವ ಪಡೆಯುತ್ತದೆ. ಮೋದಿ ಈಗ ಹೋದಲ್ಲೆಲ್ಲಾ ಹೇಳುತ್ತಿರುವ “ತುಕಡೆ ತುಕಡೆ ಗ್ಯಾಂಗ್’ ಪರಿಭಾಷೆಗೆ ಅಡ್ವಾಣಿ ಸರಿಯಾಗಿಯೇ ಮಂಗಳಾರತಿ ಮಾಡಿದ್ದಾರೆ.
ಈ ಮಧ್ಯೆ ಅಡ್ವಾಣಿ ಸಹ ಹಿರಿಯ ಇಬ್ಬರು ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಮೋದಿ-ಶಾ ಬಗೆಗಿನ ಅಸಮಧಾನ ಹಂಚಿಕೊಂಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮೂಲಪುರುಷರು, ಮತ್ತು ಹಿರಿಯರಾದ ಅಡ್ವಾಣಿ, ಜೋಶಿ ಇಬ್ಬರೂ ಮೋದಿ-ಶಾ ಜೋಡಿಯಿಂದ ಅಪಮಾನಿತರಾದವರೇ. ಇತ್ತೀಚೆಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಜೋಶಿ ಬಳಿ ಬಂದು ನೀವಿನ್ನು ಕಾನ್ಪುರದಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಅಮಿತ್ ಶಾ ಹೇಳಿದ್ದನ್ನು ಬಂದು ಹೇಳಿದ್ದರು. ಮಾತ್ರವಲ್ಲ ತಾವು ಕಾನ್ಪುರದಿಂದ ಸ್ಪರ್ಧಿಸುವುದಿಲ್ಲ ಎಂದು ಜೋಶಿ ಬಹಿರಂಗವಾಗಿ ಘೋಷಿಸುವುದನ್ನು ಶಾ ಬಯಸುತ್ತಾರೆ ಎಂದೂ ರಾಮ್ ಲಾಲ್ ಜೋಶಿಯವರಿಗೆ ತಿಳಿಸಿದ್ದರು.
ಇದರಿಂದ ಪಿತ್ತ ನೆತ್ತಿಗೇರಿದ್ದ ಜೋಶಿ ರಾಮ್ ಲಾಲ್ ಕುರಿತು, “ನೀವೇನು ಸಂದೇಶವಾಹಕರಾ? ಆ ಮೋದಿ, ಅಮಿತ್ ಶಾ ಗೆ ನನ್ನೆದುರು ಬಂದು ನಿಂತು ಮಾತಾಡಲು ಏನಾಗಿದೆ? ಎಂದು ಗದರಿಸಿ ಕೇಳಿದರೆನ್ನಲಾಗಿದೆ. ಮರುದಿನವೇ ಮುರಳಿ ಮನೋಹರ ಜೋಶಿ ಒಂದು ಕಾಗದದ ಮೇಲೆ “ಬಿಜೆಪಿಗೆ ಕಾನ್ಪುರದಿಂದ ನಾನು ಸ್ಪರ್ಧಿಸುವುದು ಬೇಡವಾಗಿದೆ” ಎಂದು ಎರಡು ಸಾಲಿನಲ್ಲಿ ಗೀಚಿ, ಮಾಧ್ಯಮಗಳ ಮೂಲಕ ಕಾನ್ಪರ ಮತದಾರರಿಗೆ ತಿಳಿಸಿದ್ದರು.
ಇಷ್ಟು ಮಾಡಿದೊಡನೆ ತಡ ಮಾಡದೇ ಜೋಶಿಯವರು ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದರು. ಜೊತೆಗೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತಿತರ ನಾಯಕರೂ ಜೋಶಿಯವರೊಂದಿಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.ಈ ಎಲ್ಲಾ ಮಾತುಕತೆಗಳ ನಂತರವೇ ಅವರನ್ನು ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಪ್ರಸ್ತಾಪ ಬಂದಿದೆ.
ಇಂದು ಅಡ್ವಾಣಿ ಬ್ಲಾಗ್ ಬರೆಹ ಪ್ರಕಟಿಸುತ್ತಿದ್ದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಕ್ಷಣ ಅದನ್ನು ಸ್ವಾಗತಿಸಿದರು. ಜೋಶಿಯವರಿಗೆ ಟಿಕೆಟ್ ನಿರಾಕರಿಸಿದರೆ ಅವರು ಅದನ್ನು ಸ್ವೀಕರಿಸಲಾರರು ಎಂಬುದನ್ನು ಆರೆಸ್ಸೆಸ್ ಸೂಚ್ಯವಾಗಿ ತಿಳಿಸಿದ್ದರೂ ಅಮಿತ್ ಶಾ ಹಠ ಬಿಡದೇ ಹಿರಿಯ ನಾಯಕ ಮುರಳಿ ಮನೋಹರ ಜೋಶಿಯನ್ನು ಅಪಮಾನಿಸಿದ್ದರು.
ಅದೇ ರೀತಿ, ಅಡ್ವಾಣಿಯವರು ಮತ್ತೊಂದು ಚುನಾವಣೆಗೆ ಸ್ಪರ್ಧಿಸಲು ಬಯಸಿಲ್ಲವಾದರೂ ಹಾಗೆ ಸ್ಪರ್ಧಿಸದೇ ಹೋಗುವುದು ತಮ್ಮದೇ ತೀರ್ಮಾನವಾಗಬೇಕೆಂದು ಬಯಸಿದ್ದರು. ಕನಿಷ್ಟ ಅಷ್ಟಕ್ಕೂ ಅವಕಾಶ ನೀಡಲಿಲ್ಲ ಅಮಿತ್ ಶಾ. ಯಾವ ಸೌಜನ್ಯವನ್ನೂ ತೋರದೇ ಅಡ್ವಾಣಿಯವರೊಂದಿಗೆ ಶಾ ಒರಟೊರಟಾಗಿ ವರ್ತಿಸಿದರು.
ಈಗ ಅಡ್ವಾಣಿ-ಜೋಶಿ ಇಬ್ಬರು ಹಿರಿಯ ಬಿಜೆಪಿ ನಾಯಕರು ಬಂಡಾಯ ಹೂಡಲು ಸಜ್ಜಾಗುತ್ತಿದ್ದಂತೆ ಅಮಿತ್ ಶಾ ದೆಹಲಿ ಕಡೆಗೆ ದೌಡಾಯಿಸಿ ಮೋದಿ ಮತ್ತಿತರ ಹಿರಿಯ ಆರೆಸ್ಸೆಸ್ ನಾಯಕರನ್ನು ಭೇಟಿ ಮಾಡಿ ಅನಾಹುತ ತಪ್ಪಿಸಲು ಹೊರಟಿದ್ದಾರೆ.
ಪ್ರಾಯಶಃ ಈ ಇಬ್ಬರು ಬಿಜೆಪಿ ಹಿರಿಯ ನಾಯಕರ ಬಂಡಾಯದಿಂದ ಬಿಜೆಪಿಯ ಮತಗಳಿಕೆಯ ಮೇಲೆ ಅಂತಹ ಪರಿಣಾಮವನ್ನೇನೂ ಬೀರದು, ಆದರೆ ಈಗ ಇಬ್ಭಾಗವಾಗಿರುವ ಹಿಂದೂ ಕುಟುಂಬಕ್ಕೆ ದೊಡ್ಡ ಮಟ್ಟದಲ್ಲಿ ಮುಜುಗರ ಉಂಟು ಮಾಡುವುದಂತೂ ದಿಟ. ಮೋದಿ-ಶಾಗಳು ಬಿಜೆಪಿ ಮೂಲಸ್ಥಾಪಕರಿಗೆ ಅಗೌರವ ತೋರಿಸಿದವರು ಎಂದು ದೇಶದ ಜನರೆದುದು ಬಿಂಬಿಸಬಹುದಲ್ಲಾ ಎಂದು ಪ್ರತಿಪಕ್ಷಗಳು ಖುಷಿಗೊಂಡಿವೆ.
ಈಗೇನಾದರೂ ಅಡ್ವಾಣಿ ಸಾರ್ವಜನಿಕವಾಗಿ ಬಹಿರಂಗವಾಗಿ ಮಾತಾಡತೊಡಗಿದರೆ, ಜೋಶಿ ತಮ್ಮ ಕೋಪ ತಾಪ ವ್ಯಕ್ತಪಡಿಸತೊಡಗಿದರೆ ಇದನ್ನು ಶಮನಗೊಳಿಸಲು ಆರೆಸ್ಸೆಸ್ ಗೆ ಕಷ್ಟಸಾಧ್ಯ. ಅಡ್ವಾಣಿ, ಜೋಶಿ ಇಬ್ಬರೂ ಬಿಜೆಪಿ ರಥದ ಸುದೀರ್ಘ ಕಾಲದ ಸೇವಾಯಾತ್ರಿಗಳು. ಅವರಿಬ್ಬರೂ ತಾವಾಗಿ ಕಟ್ಟಿದ ಪಕ್ಷದಲ್ಲಿ ಅವರ ಕೊನೆಯ ನಿಲ್ದಾಣ ಇದಾಗಬಹುದು.
ಸ್ವಾತಿ ಚತುರ್ವೇದಿ
(ಲೇಖಕರು ಹಾಗೂ ದ ಇಂಡಿಯನ್ ಎಕ್ಸ್ ಪ್ರೆಸ್, ದ ಸ್ಟೇಟ್ಸ್ ಮನ್ ಮತ್ತು ದ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಪತ್ರಕರ್ತೆಯಾಗಿದ್ದಾರೆ)
Disclaimer: The opinions expressed within this article are the personal opinions of the author. The facts and opinions appearing in the article do not reflect the views of TruthIndia and TruthIndia does not assume any responsibility or liability for the same.