ಸಂವಿಧಾನ ಸಮಾನ ಹಕ್ಕುಗಳನ್ನು ಎಲ್ಲ ಪ್ರಜೆಗಳಿಗೂ ನೀಡಿದೆ. ಆದರೆ ಮಹಿಳೆಯರಿಗೆ ರಾಜಕೀಯ ಅವಕಾಶ ತುಂಬ ಕಡಿಮೆಯಿದೆ. ಮಾನವ ಅಭಿವೃದ್ಧಿ ಸೂಚ್ಯಂಕಗಳು ಉತ್ತಮವಾಗಿರುವ ದಕ್ಷಿಣದ ಕೇರಳ, ಕರ್ನಾಟಕ ರಾಜ್ಯಗಳಲ್ಲಿ ಮಹಿಳೆಯರು ಉಳಿದೆಲ್ಲ ವಿಷಯಗಳಲ್ಲಿ ಮಂದಿದ್ದಾರೆ. ರಾಜಕೀಯ ಪ್ರಾತಿನಿಧ್ಯ ಮಾತ್ರ ನಗಣ್ಯವೆನ್ನುವಷ್ಟು ಕಡಿಮೆಯಿದೆ. ಕೇರಳದ ಪ್ರಾತಿನಿಧ್ಯ 5% ಇದ್ದರೆ ಕರ್ನಾಟಕದಲ್ಲಿ 2.6% ಇದ್ದು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಹಾಗೆ ನೋಡಿದರೆ ಭಾರತದಲ್ಲಿ ಅತಿಹೆಚ್ಚು ಮಹಿಳಾ ಶಾಸಕಿಯರನ್ನು ಹೊಂದಿರುವ ರಾಜ್ಯ ಬಿಹಾರ! ಹಿಂದುಳಿದ ರಾಜ್ಯ ಎನಿಸಿಕೊಂಡರೂ ಅಲ್ಲಿ 13.99% ಶಾಸಕಿಯರಿದ್ದಾರೆ! ಅದೇ ಮಿಜೋರಾಂ, ನಾಗಾಲ್ಯಾಂಡ್, ಪಾಂಡಿಚೆರಿಗಳಲ್ಲಿ ಒಬ್ಬ ಮಹಿಳೆಯೂ ಶಾಸನಸಭೆಯಲ್ಲಿಲ್ಲ.
ನಮಗೆ ಮಹಿಳಾ ಕಾನ್ಸ್ಟೇಬಲ್ ಬೇಕು, ಮಹಿಳಾ ಕಮಿಷನರ್ ಬೇಡ. ಮಹಿಳಾ ವರದಿಗಾರ್ತಿಯರು ಬೇಕು, ಮಹಿಳಾ ಎಡಿಟರ್ ಬೇಡ. ಚಂದದ ಗೊಂಬೆಯಂಥ ವಾಚಕಿಯರು ಬೇಕು, ಮಾಧ್ಯಮ ಒಡೆತನ ಮಹಿಳೆಗೆ ಕೊಡಲು ಸಾಧ್ಯವಿಲ್ಲ. ಸಂಘಟನೆಗೆ ಕಾರ್ಯಕರ್ತೆಯರು ಬೇಕು, ಮಹಿಳಾ ಅಧ್ಯಕ್ಷರು ಬೇಡ. ಸ್ವಾಗತ, ವಂದನಾರ್ಪಣೆಗೆ ಮಹಿಳೆಯರು ಸಾಕು, ಬೌದ್ಧಿಕ ವಿಚಾರ ಮಂಡನೆಗೆ ಬೇಡ. ಒಟ್ಟಾರೆ ಅಧಿಕಾರ ಕೇಂದ್ರಗಳತ್ತ ಬರದೆ ವ್ಯವಸ್ಥೆಯ ರಕ್ಷಕಳಾಗಿ, ಬೇಲಿಚೌಕಟ್ಟುಗಳ ಭದ್ರಗೊಳಿಸುವ ಶಿಸ್ತುಗಾರಳಾಗಿ ಇರುವ ಮಹಿಳೆಗೆ ಅವಕಾಶ, ಮನ್ನಣೆ, ಸ್ವಾಗತವಿದೆ. ಜನರನ್ನು ಆಕರ್ಷಿಸುವ ಬಿಂದುಗಳಾಗಿ, ನಿಶಾನೆ ಹಿಡಿದವರಾಗಿ ಅಧಿಕಾರದ ಬಯಲಿಗೆ ಸ್ವಾಗತಿಸಲ್ಪಡುವ ಮಹಿಳೆಯರು ಒಂದುವೇಳೆ ಅಧಿಕಾರದಲ್ಲಿ ಪಾಲು ಕೇಳಿದರೆ ಅವರ ಭವಿಷ್ಯ ಮಸುಕಾಗತೊಡಗುತ್ತದೆ.
ರಾಜಕೀಯ ಪಕ್ಷಗಳು ವಿನ್ನಬಿಲಿಟಿಯ ನೆಪದಲ್ಲಿ ಪ್ರಭಾವಿ ಸರ್ನೇಮ್ಗಳಿರುವ ಮಹಿಳೆಗೆ ಮಣೆ ಹಾಕುತ್ತವೆ. ಜನಪ್ರಿಯ ನಟಿಮಣಿಯರನ್ನು ಬರಮಾಡಿಕೊಳ್ಳುತ್ತವೆ. ಸುಂದರ, ವಾಚಾಳಿ ನಾಯಕಿಯರನ್ನು ಬೆಳೆಸುತ್ತವೆ. ಆದರೆ ಪಕ್ಷದ ಶಿಸ್ತು, ಚೌಕಟ್ಟಿನ ಹೊರಗೆ ಸ್ವಂತವಿಚಾರ ಹರಿಯಬಿಡದಂತೆ ನಿರ್ಬಂಧ ವಿಧಿಸುತ್ತವೆ. ಎಲ್ಲ ಪಕ್ಷಗಳಲ್ಲಿರುವ ಮಹಿಳೆಯರ ಮಹಿಳಾಪರತೆ ನೋಡಿದರೆ ಇದು ಗೊತ್ತಾಗುತ್ತದೆ.
ಕರ್ನಾಟಕ ಕಾಂಗ್ರೆಸ್ಸಿನ ಅನುಭವಿ ನಾಯಕಿ ಮೋಟಮ್ಮ ಯಾವುದೇ ಪಕ್ಷದ ಮಹಿಳೆಯರಿಗೆ ಶಾಸಕಿಯಾಗುವುದು ಎಷ್ಟು ಕಷ್ಟ ಎಂದು ಮನ ಮುಟ್ಟುವಂತೆ ಸಭೆಯೊಂದರಲ್ಲಿ ಹೇಳಿದ್ದಾರೆ. ಟಿಕೆಟ್ಗಾಗಿ ಲಾಬಿ ನಡೆಸಬೇಕು. ನಿರಂತರ ಮುಖ್ಯಸ್ಥರ ಮನೆಗಳಿಗೆ, ಕಚೇರಿಗಳಿಗೆ ಎಡತಾಕಿ ಟಿಕೆಟ್ ಕೊಡುವ ಒತ್ತಡ ಸೃಷ್ಟಿಸಬೇಕು. ಹಗಲು ರಾತ್ರಿಯೆನ್ನದೆ ನಾಯಕರನ್ನು ಭೇಟಿ ಮಾಡಬೇಕು, ಅವರಲ್ಲಿ ಒಳ್ಳೆಯ ಅಭಿಪ್ರಾಯ ಮೂಡುವಂತೆ ನಡೆದುಕೊಳ್ಳಬೇಕು. ಇದು ಒಂದು ತರಹದ ಕಷ್ಟ. ನಂತರ ನೀರಿನಂತೆ ಕ್ಷೇತ್ರದಲ್ಲಿ ಹಣ ಚೆಲ್ಲಬೇಕು. ಮುಖ್ಯ ವ್ಯಕ್ತಿ-ಗುಂಪುಗಳನ್ನು ಆಯ್ದು ಬೆಂಬಲಿಗರನ್ನಾಗಿಸಿಕೊಳ್ಳಬೇಕು. ಚುನಾವಣೆಯ ದಿನದ ತನಕವೂ ಇದು ಮುಂದುವರೆಯುತ್ತದೆ. ಗೆದ್ದ ಮೇಲೆಯೂ ಸುಲಭವಿಲ್ಲ. ಪಕ್ಷದ ಕಾರ್ಯಕರ್ತರನ್ನು ತೃಪ್ತಿಪಡಿಸುವುದು, ಭಿನ್ನಮತವನ್ನು ಹತ್ತಿಕ್ಕುವುದು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ದೊಡ್ಡ ಸವಾಲುಗಳೇ ಹೌದು.

ನಿಜ. ಚುನಾವಣಾ ರಂಗ ಸಂಪೂರ್ಣ ಪುರುಷಮಯವಾಗಿರುವ ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ ತೊಡಗುವುದು ಕಷ್ಟವೂ, ಅಸುರಕ್ಷಿತವೂ ಆಗಿದೆ. ಚುನಾವಣಾ ಗೆಲುವು ಒಂದು ಸವಾಲೇ ಆಗಿದೆ. ಹಾಗಾಗಿ ಪ್ರಜ್ಞಾವಂತ ಮಹಿಳೆಯರು ರಾಜಕಾರಣದಿಂದ ವಿಮುಖರಾಗಿದ್ದಾರೆ. ಆದರೆ ಚುನಾವಣೆಯಲ್ಲಿ ಗೆಲುವು ಸಾಧ್ಯವಿಲ್ಲ ಎಂದಾದರೆ ರಾಜಕೀಯ ಪಕ್ಷಗಳು ಸದಸ್ಯರ ನಾಮಕರಣ ಮಾಡುವಾಗ ಮಹಿಳೆಯರಿಗೆ ಅವಕಾಶ ಕೊಡಬಹುದಲ್ಲವೆ? ಆದರೆ ಆಗಲೂ ಹೆಣ್ಮಕ್ಕಳು ನೆನಪಾಗುವುದಿಲ್ಲ. ಮಹಿಳಾ ಮೀಸಲಾತಿಯ ಪರವಿರುವ ಪಕ್ಷಗಳಾಗಲೀ, ವಿರುದ್ಧ ಇರುವ ಪಕ್ಷಗಳಾಗಲೀ ಮಹಿಳಾ ನಾಯಕತ್ವ ಬೆಳೆಸುವ ಯಾವ ರಚನಾತ್ಮಕ ಕಾರ್ಯಕ್ರಮವನ್ನೂ ಹಾಕಿಕೊಂಡಿಲ್ಲ. ಗ್ರಾಮ, ತಾಲೂಕು, ಜಿಲ್ಲಾ ಮಟ್ಟದ ಮಹಿಳಾ ಪ್ರತಿನಿಧಿಗಳು ಉತ್ತಮ ಸಾಮರ್ಥ್ಯ ತೋರಿದರೂ ರಾಜ್ಯ, ರಾಷ್ಟ್ರಮಟ್ಟದ ತನಕ ಬೆಳೆಯುವ ಸಹಜ ವಿಕಾಸ ಕಾಣಿಸುತ್ತಿಲ್ಲ. ಹೀಗೆ ಮಹಿಳೆಯರನ್ನು ಆಕರ್ಷಿಸಲು ರಾಜಕಾರಣ ವಿಫಲವಾಗಿದ್ದರೆ, ಪ್ರಾತಿನಿಧ್ಯ ಕೊಡಲು ಪಕ್ಷಗಳು ನಿರಾಸಕ್ತವಾಗಿವೆ. ಎಂದೇ ಯಾವ ರಾಷ್ಟ್ರೀಯ ಪಕ್ಷದಲ್ಲೂ 33% ಸ್ಥಾನಕ್ಕೆ ಸ್ಪರ್ಧಿಸಬಲ್ಲ ಮಹಿಳಾ ಅಭ್ಯರ್ಥಿಗಳೇ ಇಲ್ಲವಾಗಿದ್ದಾರೆ!
ಮಹಿಳಾ ಮೀಸಲಾತಿ
ದೇಶಕಾಲಗಳ ವ್ಯತ್ಯಾಸವಿಲ್ಲದೆ ಹೆಣ್ಣಿನ ಧಾರ್ಮಿಕ-ಸಾಂಸ್ಕøತಿಕ-ರಾಜಕೀಯ ಅಧಿಕಾರ ಕಡಿತಗೊಳಿಸಲು ಸಮಾಜಗಳು ಸತತವಾಗಿ ಪ್ರಯತ್ನಪಟ್ಟಿವೆ. ನಮ್ಮ ದೇಶದಲ್ಲಿ ಮಹಿಳೆಗೆ ರಾಜಕೀಯ ಮೀಸಲಾತಿ ಅಗತ್ಯ ಎಂದು ಪ್ರತಿಪಾದಿಸಬೇಕಾದ ಅನಿವಾರ್ಯತೆ ಏಕೆ ಸೃಷ್ಟಿಯಾಯಿತು ಎಂದು ಹುಡುಕುತ್ತ ಹೊರಟರೆ ಚಾರಿತ್ರಿಕ ಹಾಗೂ ವರ್ತಮಾನದ ವೈರುಧ್ಯಗಳು ಕಣ್ಣಿಗೆ ರಾಚುತ್ತವೆ. ಮಹಿಳೆಯ ರಾಜಕೀಯ ಚರಿತ್ರೆ ಎಂದರೆ ಮಹಿಳೆಯ ಅಧಿಕಾರ ದಮನಿಸುವ ಚರಿತ್ರೆ. ಆಳುವ ವರ್ಗವಾಗಿ, ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯುತ ನಾಯಕಿಯಾಗಿ ಮಹಿಳೆ ಕಾಣಿಸಿಕೊಂಡಿದ್ದು ಅಪರೂಪ. ಸಾವಿರಾರು ವರ್ಷಗಳಿಂದ ಸಾವಿರಾರು ರಾಜಮಹಾರಾಜರು ಈ ನೆಲವನ್ನಾಳಿದರು. ಆದರೆ ಎಷ್ಟು ರಾಣಿಯರು ಆಳಿದರು? ಧಾರ್ಮಿಕ, ಸಾಂಸ್ಕøತಿಕ, ಜೈವಿಕ ನೆಪಗಳನ್ನೊಡ್ಡಿ ಹೆಣ್ಣಿಗೆ ಅಧಿಕಾರ ನಿರಾಕರಿಸುತ್ತ ಬರಲಾಗಿದೆ. ಮಹಿಳೆ ಆಳಿದ್ದೆಲ್ಲ ಹೃದಯ ಸಾಮ್ರಾಜ್ಯವನ್ನು. ಹಾಗಾಗಿಯೇ ಮಹಿಳೆಯ ನಿಜ ಸ್ಥಿತಿಗತಿಯೂ, ಅವಳಿಗೆ ಸಮಾಜ ನೀಡಿರುವ ಕಾಲ್ಪನಿಕ ಸ್ಥಾನದ ನಡುವೆಯೂ ಬಹಳ ವ್ಯತ್ಯಾಸವಿದೆ.

ಹೆಣ್ಣು ಜೈವಿಕವಾಗಿ ದುರ್ಬಲಳು, ಸುಮದಂತೆ ಕೋಮಲ ಎಂದು ಹೊಗಳಿ ಬಾಯ್ಮುಚ್ಚಿಸಲಾಗಿದೆ. ಬೆಳೆಯುವ ಹೆಣ್ಣುಮಗುವಿನ ಯೋಚನಾಕ್ರಮದಲ್ಲೇ ಇಂತಹ ಚಿಂತನೆಗಳು ಬೆರೆತು ಹೋಗುವುದರಿಂದ ಹೆಣ್ಣು ಅಧಿಕಾರ ನಿಭಾಯಿಸಬಲ್ಲಳು ಎಂದು ಯಾರೂ, ಸ್ವತಃ ಅವಳೂ ನಂಬುವುದಿಲ್ಲ. ಯಾವ ಹಿನ್ನೆಲೆಯೂ ಇಲ್ಲದ ನಿರಕ್ಷರಿ ಗಂಡು, ಕಾವಿ ತೊಟ್ಟ ಸ್ವಾಮಿಯಾದರೂ ಸೈ, ಅಧಿಕಾರ ನಿಭಾಯಿಸಬಲ್ಲ ಎಂದು ನಂಬುವ ಸಮಾಜ ಅಷ್ಟೇ ಅನನುಭವಿ ಮಹಿಳೆ ಅದನ್ನು ನಿಭಾಯಿಸಬಲ್ಲಳು ಎಂದು ವಿಶ್ವಾಸವಿಡುವುದಿಲ್ಲ. ಅಧಿಕಾರ ಗ್ರಹಣವೇ ತಮ್ಮ ಆತ್ಯಂತಿಕ ಗುರಿಯೆಂದುಕೊಂಡ ಯಾವ ರಾಜಕೀಯ ಪಕ್ಷವೂ, ಸಂಘಟನೆಯೂ ಈ ದೇಶದ ಅರ್ಧದಷ್ಟಿರುವ ಮಹಿಳಾ ಶಕ್ತಿಯನ್ನು ಓಟ್ ಬ್ಯಾಂಕಿನಾಚೆ ಪರಿಗಣಿಸುವುದಿಲ್ಲ. ಎಂದೇ 2018ನೇ ಇಸವಿಯಲ್ಲೂ ಲಿಂಗಸಮಾನತೆಯತ್ತ ಒಂದು ಹೆಜ್ಜೆಯಾಗಿ ಮಹಿಳಾ ಮೀಸಲಾತಿಯನ್ನು ಪ್ರತಿಪಾದಿಸಬೇಕಾಗುತ್ತದೆ.
ಆದರೆ 33% ಅಧಿಕಾರ ಹೆಣ್ಣಿಗೆ ಬಿಟ್ಟುಕೊಡುವುದು, ಅಕಟಕಟಾ, ಅದೇನು ಅಷ್ಟು ಸುಲಭವೇ?
ಮಹಿಳೆಯ ಬದುಕನ್ನು ಸಹನೀಯಗೊಳಿಸುವ ಕ್ರಮಗಳು ಸಂಘರ್ಷವಿಲ್ಲದೆ ಸಮಾಜದ ಒಪ್ಪಿಗೆ ಪಡೆಯುತ್ತವೆ. ಎಲ್ಲಿ ಆಕೆಯನ್ನು ಬರೀ ಜೈವಿಕ ಮಹಿಳೆಯನ್ನಾಗಿ ನೋಡಲಾಗಿದೆಯೋ, ಎಲ್ಲಿ ಆಕೆ ಫಲಾನುಭವಿ ಮಾತ್ರವೋ (ಉದಾ: ಜನನಿ ಸುರಕ್ಷಾ, ತಾಯಿ ಕಾರ್ಡ್, ಭಾಗ್ಯಲಕ್ಷ್ಮಿ, ಹೆಣ್ಣುಮಕ್ಕಳಿಗೆ ಸೈಕಲ್ ಯೋಜನೆಗಳು) ಅಂಥ ಕ್ರಮಗಳು ಸ್ವಾಗತಿಸಲ್ಪಡುತ್ತವೆ. ಅವಳನ್ನು ನಾಗರಿಕ ವ್ಯಕ್ತಿಯಾಗಿ ಪರಿಗಣಿಸಿ ಅಧಿಕಾರ ಮರು ಹಂಚಿಕೆಯಾಗಬೇಕಾದಾಗ ಮಾತ್ರ ವಿವಾದ, ವಿಳಂಬ ಶುರುವಾಗುತ್ತದೆ. ಅಂಬೇಡ್ಕರ್ ತರಲುದ್ದೇಶಿಸಿದ್ದ ಹಿಂದೂ ಕೋಡ್ ಬಿಲ್ ಮಹಿಳೆಗೂ ಸಮಾನ ಆಸ್ತಿ ಹಕ್ಕು ಇದೆಯೆಂದು ಹೇಳಿದಾಗ ಸಾಂಪ್ರದಾಯಿಕ ಹಿಂದೂಸಮಾಜದಲ್ಲಿ ಅಲ್ಲೋಲಕಲ್ಲೋಲವಾಗಿತ್ತು. ಮಹಿಳಾ ಮೀಸಲಾತಿ ಮಸೂದೆಗೆ ಕಳೆದ 20 ವರ್ಷಗಳಿಂದ ಇದೇ ಆಗುತ್ತಿದೆ. ಅಧಿಕಾರವನ್ನು ಹೆಣ್ಣಿಗೆ ಹಸ್ತಾಂತರಿಸಲು ಇರುವ ಅಸಮ್ಮತಿಯೇ ಮಹಿಳಾ ಮೀಸಲಾತಿ ಮಸೂದೆ ಬಿದ್ದುಹೋಗಲು ಮುಖ್ಯ ಕಾರಣವಾಗಿದೆ.
ಇದೇಕೆ ಹೀಗೆಂದು ಹೇಳಲು ಕಾಲಜ್ಞಾನದ ಅವಶ್ಯಕತೆಯಿಲ್ಲ. ಅಧಿಕಾರ ಎಂದಿಗೂ ಕೊರತೆಯ ಸಂಪನ್ಮೂಲ. ಅದರ ಸುತ್ತ ಠಳಾಯಿಸುತ್ತಲೇ ಇರುವುದು ಪುರುಷ ಪರಮಾಧಿಕಾರ. ಅಧಿಕಾರ ಬಿಟ್ಟುಕೊಡುವುದೂ, ಪ್ರಾಣ ಬಿಡುವುದೂ ಹೆಚ್ಚುಕಮ್ಮಿ ಒಂದೇ ಎಂದು ಭಾವಿಸಲಾಗಿದೆ. ಹಾಗಾಗಿ ಮೀಸಲಾತಿ ಕೊಡಲೇಬೇಕಾಗಿ ಬಂದಾಗಲೂ ಮಹಿಳೆಯರು ಸ್ವಾಯತ್ತವಾಗಿ ಕೆಲಸ ಮಾಡಲು ಹೋರಾಟ ನಡೆಸಬೇಕಿದೆ. ಸದ್ಯದ ಆಳುವ ವ್ಯವಸ್ಥೆ, ಸಾಮಾಜಿಕ-ಸಾಂಸ್ಕøತಿಕ ವಾತಾವರಣ ಆಳದಲ್ಲಿ ಪುರುಷಪರವೂ, ಪುರುಷಾಧಿಪತ್ಯವನ್ನು ಪೋಷಿಸುವಂಥದೂ ಆಗಿರುವುದರಿಂದ ಮಹಿಳೆಗೆ ಸಿಗುವ ಅಧಿಕಾರ, ಬಲ ಕೇವಲ ಸಾಂಕೇತಿಕವಾಗಿ ಉಳಿದಿದೆ.
ಸಂಸತ್ತಿನಲ್ಲಿ, ವಿಧಾನಸಭೆಗಳಲ್ಲಿ 9-10%ನಷ್ಟಿರುವ ಮಹಿಳಾ ಪ್ರತಿನಿಧಿಗಳೂ ಸಹ ಮಹಿಳಾ ಸಮಸ್ಯೆಗಳನ್ನಾಗಲೀ, ಅದರ ಆದ್ಯತೆಗಳನ್ನಾಗಲೀ ಎತ್ತಿ ಹೋರಾಡಲು ಸಾಧ್ಯವಾಗದೇ ಇರುವುದು ಇದೇ ಕಾರಣಕ್ಕೆ. ಮಹಿಳಾ ಪ್ರತಿನಿಧಿಗಳು ತಂತಮ್ಮ ಪಕ್ಷದ ಹಿತಾಸಕ್ತಿಯ ಹೊರಗೆ ಬರಲಾರದವರಾಗಿದ್ದಾರೆ. ಇವೆಲ್ಲವೂ ಹೇಳುವುದಿಷ್ಟೇ: ರಾಜಕೀಯವಾಗಿ ಮಹಿಳೆಗೆ ಸಿಕ್ಕಿರುವ ಅವಕಾಶ ಪ್ರಾತಿನಿಧಿಕವೇ ಹೊರತು ಸಮಾನ ಗೌರವ, ಸಹಭಾಗಿತ್ವದ ನೆಲೆಯದಲ್ಲ.
ಎಂದೇ ಇನ್ನಾದರೂ ಮಹಿಳೆ ತನ್ನ ರಾಜಕೀಯ ಹಕ್ಕು ಪ್ರತಿಪಾದಿಸಿ ರಕ್ಷಿಸಿಕೊಳ್ಳುವುದು ಕಲಿಯಬೇಕು. ಮಹಿಳೆಯರ ನೆಪದಲ್ಲಿ ಸಿಗಬಹುದಾದ 33% ಅಧಿಕಾರ ಪುರುಷ ರಾಜಕಾರಣದ ದಾಳವಾಗದಂತೆ ನೋಡಿಕೊಳ್ಳಬೇಕು. ಭಿನ್ನ ಜಾತಿ-ಧರ್ಮ-ವರ್ಗಗಳಿಗೆ ಸೇರಿದ ಮಹಿಳೆಯರೆಲ್ಲ ಇರುವಂತೆ ಗುಣಮಟ್ಟದ ಹಾಗೂ ಜವಾಬ್ದಾರಿಯುತ ಮಹಿಳಾ ನಾಯಕತ್ವ ಬೆಳೆಸಲು ರಾಜಕೀಯ ಪಕ್ಷಗಳು, ಜನಪರ ಸಂಘಟನೆಗಳು ಕೈ ಜೋಡಿಸಬೇಕು. ಜೊತೆಗೆ ಮೀಸಲಾತಿಯ ನೆಪದಿಂದ ಕೇಳುತ್ತಿರುವ ಅಧಿಕಾರ ನಿಸ್ಪøಹವಾಗಿ ಹಂಚಿಕೊಳ್ಳಬೇಕಾದ ಸಂಪನ್ಮೂಲ ಎನ್ನುವುದನ್ನು ಮಹಿಳೆ ಎಂದಿಗೂ ಮರೆಯಬಾರದು. ಆಗಮಾತ್ರ ದಿನದಿಂದ ದಿನಕ್ಕೆ ಅರ್ಥ ಕಳೆದುಕೊಳ್ಳುತ್ತಿರುವ ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಹೊಸ ಉಸಿರು ದೊರೆತು ರಾಜಕಾರಣ ಜನಪರವಾಗಲು ಸಾಧ್ಯವಾದೀತು.

ಡಾ. ಎಚ್. ಎಸ್. ಅನುಪಮಾ
More Articles
By the same author