ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಭದ್ರಕೋಟೆ ಎಂದೇ ಹೆಸರಾಗಿರುವ ಹಾಸನ ಲೋಕಸಭಾ ಕ್ಷೇತ್ರ ಈ ಬಾರಿ ಆ ಅಧಿನಾಯಕ ಕಣದಲ್ಲಿಲ್ಲದೆಯೂ ಈ ಬಾರಿ ಇಡೀ ರಾಜ್ಯದ ಗಮನ ಸೆಳೆದಿದೆ. ಅದಕ್ಕೆ ಕಾರಣ, ಗೌಡರ ಕುಟುಂಬದ ಮೂರನೇ ತಲೆಮಾರು ಈ ಬಾರಿ ಚುನಾವಣೆಯ ಮೂಲಕ ಹಾಸನದಲ್ಲಿ ಚುನಾವಣಾ ರಾಜಕಾರಣದ ರಂಗಪ್ರವೇಶಕ್ಕೆ ಸಜ್ಜಾಗಿರುವುದು.
ದೇವೇಗೌಡರ ಹಿರಿಮಗ ಹಾಗೂ ರಾಜ್ಯ ಪ್ರಭಾವಿ ಸಚಿವ ಎಚ್ ಡಿ ರೇವಣ್ಣನವರ ಪುತ್ರ ಪ್ರಜ್ವಲ್ ರೇವಣ್ಣ ನೇರವಾಗಿ ಲೋಕಸಭಾ ಚುನಾವಣಾ ಕಣಕ್ಕಿಳಿಯುವ ಮೂಲಕ ಅಜ್ಜ ದೇವೇಗೌಡರ ವಾರಸುದಾರಿಕೆ ಹೆಗಲೇರಿಸಿಕೊಂಡಿದ್ದಾರೆ. ಈ ಮೊದಲು ಯಾವುದೇ ಚುನಾವಣೆಗೆ ನಿಂತ ಅನುಭವವಿಲ್ಲದಿದ್ದರೂ, 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ದೇವೇಗೌಡರ ಪರ ಪ್ರಚಾರದ ಉಸ್ತುವಾರಿ ಹೊತ್ತಿದ್ದರು. ಅದೇ ಅರ್ಹತೆಯ ಮೇಲೆ ಇದೀಗ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಆ ಪೈಕಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿದ್ದರೆ, ಉಳಿದಂತೆ ಹೊಳೆನರಸೀಪುರ, ಅರಕಲಗೋಡು, ಬೇಲೂರು, ಶ್ರವಣಬೆಳಗೊಳ, ಸಕಲೇಶಪುರ ಹಾಗೂ ಅರಸೀಕೆರೆ ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ. ಹಾಗಾಗಿ ಕ್ಷೇತ್ರವಾರು ಪ್ರಾಬಲ್ಯದಲ್ಲಿ ಜೆಡಿಎಸ್ ಬಲ ಹೆಚ್ಚಿದೆ. ಆದರೆ, ಕಳೆದ ಬಾರಿಯ ಶೇಕಡಾವಾರು ಮತಗಳಿಕೆ ಲೆಕ್ಕಾಚಾರದಲ್ಲಿ ದೇವೇಗೌಡರು ಶೇ.44.43ರಷ್ಟು ಮತ ಪಡೆದು, ಸುಮಾರು 1 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ಸಿನ ಎ ಮಂಜು ವಿರುದ್ಧ ಜಯಗಳಿಸಿದ್ದರು. ಆಗ ಎ ಮಂಜು ಶೇ.35.67ರಷ್ಟು ಮತ ಪಡೆದಿದ್ದರೆ, ಬಿಜೆಪಿಯಿಂದ ಕಣಕ್ಕಿಳಿದಿದ್ದ ಸಿ ಎಚ್ ವಿಜಯಶಂಕರ್ ಶೇ.14.44ರಷ್ಟು ಮತ ಪಡೆದಿದ್ದರು.
ಈ ಬಾರಿ ಕಣದ ಚಿತ್ರಣ ಸಂಪೂರ್ಣ ಬದಲಾಗಿದೆ. ದೇವೇಗೌಡರ ಬದಲಿಗೆ ಅವರ ಮೊಮ್ಮಗ ಪ್ರಜ್ವಲ್ ಕಣಕ್ಕಿಳಿದಿದ್ದರೆ, ಎ ಮಂಜು ಅವರು ಪ್ರಜ್ವಲ್ ಗೆ ಮೈತ್ರಿಪಕ್ಷದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹಾಗಾಗಿ ಕಳೆದ ಬಾರಿಯ ಫಲಿತಾಂಶದ ಲೆಕ್ಕಾಚಾರಗಳು ಉಪಯೋಗಕ್ಕೆ ಬರದ ಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಪ್ರಮುಖವಾಗಿ ದೇವೇಗೌಡರ ವರ್ಚಸ್ಸು ಹಾಗೂ ತಂದೆ ರೇವಣ್ಣ ಅವರ ಅಭಿವೃದ್ಧಿ ಯೋಜನೆಗಳ ಬಲದ ಮೇಲೆ ಪ್ರಜ್ವಲ್ ನಿರೀಕ್ಷೆ ಇಟ್ಟುಕೊಂಡಿದ್ದರೆ, ಎ ಮಂಜು ಪ್ರಧಾನಿ ಮೋದಿಯವರ ನಾಮಬಲ ಹಾಗೂ ತಮ್ಮ ವೈಯಕ್ತಿಕ ಪ್ರಭಾವವನ್ನು ನೆಚ್ಚಿಕೊಂಡಿದ್ದಾರೆ.
ಆದರೆ, ಬಿಜೆಪಿ ಕೇಡರ್ ಬಲದ ವಿಷಯದಲ್ಲಿ ದುರ್ಬಲವಾಗಿರುವ ಕ್ಷೇತ್ರದ ಇತಿಹಾಸದಲ್ಲೇ ಬಿಜೆಪಿ; ಗೆಲ್ಲುವುದಿರಲಿ, ಕನಿಷ್ಟ ಪ್ರತಿಸ್ಫರ್ಧಿಯಾಗುವ ಮಟ್ಟಿನ ಬಲ ಪ್ರದರ್ಶಿಸಿದ ಉದಾಹರಣೆ ಕೂಡ ಇಲ್ಲ. ಆದರೆ, ಈ ಬಾರಿ ಮೈತ್ರಿ ಪಕ್ಷದ ಪೈಕಿ ಕಾಂಗ್ರೆಸ್ ಈ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಜೊತೆಗೆ ಜಿಲ್ಲೆಯಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಎ ಮಂಜು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹಾಗಾಗಿ ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಪ್ರಜ್ವಲ್ ಪಾಲಿಗೆ ಪಕ್ಷದ ದೊಡ್ಡ ಕಾರ್ಯಕರ್ತರ ಪಡೆ ಬೆಂಬಲಕ್ಕಿದೆ. ಆದರೆ, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಎಷ್ಟರಮಟ್ಟಿಗೆ ಕೈಹಿಡಿಯುತ್ತಾರೆ ಎಂಬುದು ನಿರ್ಣಾಯಕ. ಮಂಜು ಅವರೊಂದಿಗೆ ಎಷ್ಟು ಮಂದಿ ಕಾಂಗ್ರೆಸ್ಸಿಗರು ಬಿಜೆಪಿಗೆ ಹೋಗಿದ್ದಾರೆ? ಜೆಡಿಎಸ್ ಗೆ ಸ್ಥಾನ ಬಿಟ್ಟುಕೊಟ್ಟ ಪಕ್ಷದ ನಿರ್ಧಾರದ ಬಗ್ಗೆ ಎಷ್ಟು ಮಂದಿ ಕಾಂಗ್ರೆಸ್ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ನಿರ್ಲಿಪ್ತರಾಗುತ್ತಾರೆ? ಹಾಗೂ ಸ್ವತಃ ಜೆಡಿಎಸ್ ಒಳಗೇ ದೇವೇಗೌಡರ ಬದಲಿಗೆ ಅವರ ಮೊಮ್ಮಗ ಕಣಕ್ಕಿಳಿದಿರುವುದರಿಂದಾಗಿ ಕುಟುಂಬ ರಾಜಕಾರಣದ ಬಗ್ಗೆ ಎದ್ದಿರುವ ಅಸಮಾಧಾನವನ್ನು ಹೇಗೆ ನಿಭಾಯಿಸುತ್ತಾರೆ ? ಎಂಬ ಅಂಶಗಳು ಚುನಾವಣೆಯ ಗತಿ ನಿರ್ಧರಿಸಲಿವೆ.
90ರ ದಶಕದ ಆರಂಭದಿಂದ ಈವರೆಗೆ 99ರಲ್ಲಿ ಒಂದು ಬಾರಿ ಹೊರತುಪಡಿಸಿ ನಿರಂತರ ದಿಗ್ವಿಜಯ ಮೆರೆಯುತ್ತಲೇ ಬಂದಿದ್ದ ದೇವೇಗೌಡರು, ಈ ಬಾರಿ ತಾವೇ ಕಣದಲ್ಲಿರುವುದಾಗಿ ತಿಳಿದು ತಮ್ಮ ಮಗನನ್ನು ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ಪಡೆಯಲು ರಾಜ್ಯಮಟ್ಟದ ಕಾಂಗ್ರೆಸ್ ನಾಯಕರ ಮೂಲಕ ನಿರಂತರ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಬಿಜೆಪಿಯ ಎ ಮಂಜು ಕೂಡ, ಪ್ರಭಾವಿ ಒಕ್ಕಲಿಗ ನಾಯಕರಾದ ಎಸ್ ಎಂ ಕೃಷ್ಣ ಸೇರಿದಂತೆ ಹಲವರನ್ನು ಕರೆಸಿ ಪ್ರಚಾರ ನಡೆಸುವ ಮೂಲಕ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
ಆದರೆ, ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ನಡುವಿನ ಹೊಂದಾಣಿಕೆಯೇ ಸದ್ಯಕ್ಕೆ ಮೈತ್ರಿಪಕ್ಷದ ಅಭ್ಯರ್ಥಿ ಪ್ರಜ್ವಲ್ ಗೆ ದೊಡ್ಡ ತಲೆನೋವಾಗಿದ್ದು, ಸಮನ್ವಯ ಸಭೆ ನಡೆಸಿ ಹೊಂದಾಣಿಕೆ ತರುವ ಪ್ರಯತ್ನಗಳು ಈವರೆಗೆ ನಡೆದೇ ಇಲ್ಲ. ಅದರಲ್ಲೂ ರೇವಣ್ಣ ಸ್ವಕ್ಷೇತ್ರ ಹೊಳೇನರಸೀಪುರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಕಂದಕ ಮುಂದುವರಿದಿದ್ದು, ತಳಮಟ್ಟದಲ್ಲಿ ಹೊಂದಾಣಿಕೆ ತರುವುದು ಭಾರೀ ಸವಾಲಿನದ್ದು ಎಂಬುದು ಸ್ಥಳೀಯ ರಾಜಕೀಯ ಅನುಭವಿಗಳ ವಾದ.
ಅದೇ ಹೊತ್ತಿಗೆ ಕಾಂಗ್ರೆಸ್ ನಾಯಕ ಬಿ ಶಿವರಾಂ ಅವರು ತಮ್ಮ ಬೆಂಬಲಿಗರೊಂದಿಗೆ ಪ್ರಜ್ವಲ್ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೂ, ಶಿವರಾಂ ಮತ್ತು ಎ ಮಂಜು ಬಣಗಳನ್ನು ಹೊರತುಪಡಿಸಿ ಈ ಹಿಂದಿನಿಂದಲೂ ತಟಸ್ಥವಾಗಿದ್ದ ಮತ್ತೊಂದು ಗುಂಪು ಯಾರ ಪರ ನಿಲ್ಲಲಿದೆ ಎಂಬುದು ಕೂಡ ಗೆಲುವಿನ ದಾರಿ ಗುರುತಿಸಲಿದೆ. ಅದೇ ಹೊತ್ತಿಗೆ, ಸಚಿವರಾಗಿದ್ದಾಗ ಎ ಮಂಜು ಅವರು ಜಿಲ್ಲೆಯಲ್ಲಿ ಯಾವುದೇ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ; ಬದಲಾಗಿ ಪಕ್ಷ ಮತ್ತು ಬಣಗಳ ದ್ವೇಷ ರಾಜಕಾರಣವನ್ನೇ ಪೋಷಿಸಿಕೊಂಡು ಬಂದರು ಎಂಬ ಅಸಮಾಧಾನ ಕಾಂಗ್ರೆಸ್ಸಿಗರಲ್ಲಿದೆ. ಹಾಗೇ, ರೇವಣ್ಣ ವಿಷಯದಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ, ಪ್ರತಿಯೊಂದರಲ್ಲೂ ಸೇಡಿನ ಲೆಕ್ಕಾಚಾರಗಳನ್ನೇ ಮಾಡಿಕೊಂಡುಬಂದಿದ್ದಾರೆ ಎಂಬ ಮಾತುಗಳೂ ಇವೆ.
ಹಾಗಾಗಿ, ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ಮತ್ತೊಂದು ಕುಡಿ, ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಕಣದಲ್ಲಿರುವ ಮಂಡ್ಯ ಲೋಕಸಭಾ ಕ್ಷೇತ್ರ, ತಾರಾ ವರ್ಚಸ್ಸಿನ ಕದನದ ಕಾರಣಕ್ಕೆ ಸದ್ಯ ಇಡೀ ರಾಜ್ಯದ ಗಮನ ಸೆಳೆದಿದ್ದರೆ, ಗೌಡರ ಕುಟುಂಬದ ಪ್ರತಿಷ್ಠೆಯ ಕಾರಣಕ್ಕೆ ಹಾಸನ ಗಮನ ಸೆಳೆದಿದೆ. ಜೆಡಿಎಸ್ ನ್ನು ಪಕ್ಷದ ಖಾನ್ ದಾನ್ ನೆಲೆಯಲ್ಲೇ ಬಗ್ಗುಬಡಿಯಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ನಾಯಕರು ಕೂಡ ಮೈತ್ರಿಪಕ್ಷದ ಸರ್ಕಾರದ ಮೇಲೆ ನೇರ ಪರಿಣಾಮ ಬೀರಬಹುದಾದ ಕ್ಷೇತ್ರದ ಚುನಾವಣೆಯನ್ನು ಮಿತ್ರಪಕ್ಷದ ಪರ ವಾಲಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಕಾಂಗ್ರೆಸ್ ನಾಯಕರ ಆ ಪ್ರಯತ್ನ ಎಷ್ಟರಮಟ್ಟಿಗೆ ಪ್ರಾಮಾಣಿಕ ಮತ್ತು ತಳಮಟ್ಟದ ಕಾರ್ಯಕರ್ತರ ಮನಃಪರಿವರ್ತನೆಯಲ್ಲಿ ಆ ಪ್ರಯತ್ನಗಳು ಎಷ್ಟು ಯಶ ಕಾಣುತ್ತವೆ ಎಂಬುದರ ಮೇಲೆ ಕ್ಷೇತ್ರದ ಫಲಿತಾಂಶ ನಿಂತಿದೆ.
ಸದ್ಯಕ್ಕೆ ಗೌಡರು ಮತ್ತು ಗೌಡರ ವಿರುದ್ಧದ ಬಂಡಾಯಗಾರ ಎ ಮಂಜು ನಡುವಿನ ಕದನಕಣ ದಿನದಿಂದ ದಿನಕ್ಕೆ ಕಾವೇರತೊಡಗಿದೆ.ದೊಡ್ಡ ಗೌಡರ ಪಾಲಿಗೆ ತಲೆಮಾರಿನ ತಲ್ಲಣ ತಂದೊಡ್ಡಿದೆ.