ಬಿಜೆಪಿಯ ಹಿರಿತಲೆಗಳು ಒಂದೊಂದಾಗಿ ಮೋದಿ ಅಮಿತ್ ಶಾ ನಾಯಕತ್ವದೊಂದಿದೆ ಅಂತರ ಕಾಯ್ದುಕೊಳ್ಳುತ್ತಿವೆ ಮಾತ್ರವಲ್ಲ ತಮ್ಮಅಸಮಧಾನವನ್ನು ಬಹಿರಂಗವಾಗಿಯೂ ತಿಳಿಸುತ್ತಿದ್ದಾರೆ.
ಇತ್ತೀಚೆಗೆ ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ತಾವು ಕಾನ್ಪುರ ಕ್ಷೇತ್ರದಿಂದ ಸ್ಪರ್ಧೆ ನಡೆಸುತ್ತಿಲ್ಲ, ಬಿಜೆಪಿಗೆ ನನ್ನ ಸ್ಪರ್ಧೆ ಬೇಕಾಗಿಲ್ಲ ಎಂದು ಕ್ಷೇತ್ರದ ಮತದಾರರಿಗೆ ಪತ್ರಬರೆದಿರುವ ಬೆನ್ನಲ್ಲೇ ಶುಕ್ರವಾರ ಸುಮಿತ್ರಾ ಮಹಾಜನ್ ಸಹ ಒಂದು ಹೇಳಿಕೆ ಹೊರಡಿಸಿ ತಮ್ಮ ಅಸಮಧಾನ ಹೊರಹಾಕಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿಲ್ಲ ಎಂದು ಲೋಕಸಭೆಯ ಸಭಾಧ್ಯಕ್ಷರೂ ಆಗಿರುವ ಸುಮಿತ್ರಾ ಮಹಾಜನ್ ಸ್ಪಷ್ಟನೆ ನೀಡಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಬಿಜೆಪಿಗೆ ಅತ್ಯಂತ ಸುರಕ್ಷಿತವಾದ ಕ್ಷೇತ್ರವಾಗಿದ್ದು, ಇಲ್ಲಿ ಅಭ್ಯರ್ಥಿಯನ್ನು ಘೋಷಿಸಲು ಬಿಜೆಪಿ ಹಿಂಜರಿಯುತ್ತಿದೆ ಎಂದು ಸುಮಿತ್ರಾ ಹೇಳಿಕೆ ನೀಡಿದ್ದಾರೆ.
ಇಂದೋರ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯಿಂದ ಎಂಟು ಬಾರಿ ಪ್ರತಿನಿಧಿಸಿ ಸತತವಾಗಿ ಗೆಲುವು ಸಾಧಿಸಿದ್ದ ಸುಮಿತ್ರಾ ಅವರು ಸುದೀರ್ಘ ಕಾಲ ಸಂಸತ್ ನಲ್ಲಿ ಸಂಸದೆಯಾಗಿರುವ ಮಹಿಳೆ ಎಂಬ ಖ್ಯಾತಿಯೂ ಅವರಿಗಿದೆ.
ಇಂದೋರ್ ನ ಅಭ್ಯರ್ಥಿಯನ್ನು ಬಿಜೆಪಿ ಇದುವರೆಗೂ ಘೋಷಿಸಿಲ್ಲ. ಇಂತಹ ಅನಿಶ್ಚಿತತೆ ಏಕೆ?, ಬಿಜೆಪಿಗೆ ಇಲ್ಲಿ ಅಭ್ಯರ್ಥಿ ಹಾಕಲು ಸಾಧ್ಯವಿದೆ, ಅದರೆ ಅಭ್ಯರ್ಥಿಯನ್ನು ಘೋಷಿಸಲು ಹಿಂಜರಿಯುತ್ತಿದೆಯಷ್ಟೇ.
“ಬಹಳ ಹಿಂದೆಯೇ ನಾನು ನನ್ನ ನಿರ್ಧಾರದ ಬಗ್ಗೆ ಪಕ್ಷದ ಹಿರಿಯರೊಂದಿಗೆ ಚರ್ಚಿಸಿದ್ದೇನೆ, ಇನ್ನು ನಿರ್ಧಾರ ಪಕ್ಷಕ್ಕೆ ಬಿಟ್ಟದ್ದು. ಬಹುಶಃ ಬಿಜೆಪಿಗೆ ಅಭ್ಯರ್ಥಿ ಬಗ್ಗೆ ಇನ್ನೂ ಡೋಲಾಯಮಾನ ಮನಸ್ಥಿತಿ ಇದೆ ಎಂದೆನಿಸುತ್ತಿದೆ. ಆದ್ದರಿಂದಲೇ ಇದೀಗ ಅಧಿಕೃತವಾಗಿ ತಿಳಿಸುತ್ತಿದ್ದೇನೆ, ನಾನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಮತ್ತು ಅಭ್ಯರ್ಥಿಯ ನಿರ್ಧಾರದ ಬಗ್ಗೆ ಪಕ್ಷಕ್ಕೆ ಸ್ವಾತಂತ್ರ ನೀಡುತ್ತೇನೆ” ಎಂದು ಹಿರಿಯ ನಾಯಕಿ ವಿವರವಾಗಿ ತಿಳಿಸಿದ್ದಾರೆ.
ಸುಮಿತ್ರಾ ಮಹಾಜನ್ ಪ್ರಕಟಿಸಿದ ಹೇಳಿಕೆ
ಇಂದೋರ್ ನಲ್ಲಿ ಅಂತಿಮ ಹಂತದ ಚುನಾವಣೆ ಮೇ 19ರಂದು ಇರುವ ಕಾರಣ ಬಿಜೆಪಿ ತಡವಾಗಿ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ.
ಬಿಜೆಪಿಯ ಹಿರಿಯ ನಾಯಕರಲ್ಲಿ ಸುಮಿತ್ರಾ ಮಹಾಜನ್ ಅವರು ಸಹ 75 ವರ್ಷ ದಾಟಿದ ಧುರೀಣೆಯಾಗಿದ್ದು, ಸದ್ದಿಲ್ಲದೇ ಸುಮಿತ್ರಾ ಅವರನ್ನೂ ರಾಜಕೀಯದಿಂದ ತೆರೆಮರೆಗೆ ಸರಿಸುವ ನಿರ್ಧಾರ ಹಾಲಿ ರಾಷ್ಟ್ರ ನಾಯಕರದ್ದಾಗಿರಬಹುದು ಎಂಬ ಶಂಕೆ ಹುಟ್ಟಿಕೊಂಡಿದೆ.
ಈ ಪಟ್ಟಿಗೆ ಈಗಾಗಲೇ ಉಪ ಪ್ರಧಾನಮಂತ್ರಿ ಎಲ್. ಕೆ ಅಡ್ವಾಣಿ, ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ್ ಜೋಷಿ ಸೇರಿದಂತೆ ಶಾಂತಕುಮಾರ್ ಹಾಗೂ ಹಿರಿಯ ನಾಯಕ ಕರಿಯಾ ಮುಂಡಾ ಹಲವರು ಸೇರಿದ್ದು, ಈ ಬಾರಿಯ ಲೋಕಸಭಾ ಚುನಾವಣೆಗೆ ಇವರು ಸ್ಪರ್ಧಿಸುತ್ತಿಲ್ಲ.