ಸ್ಥಾನ ಹೊಂದಾಣಿಕೆ ವಿಷಯದಲ್ಲಿ ರಾಜ್ಯದ ದೋಸ್ತಿ ಪಕ್ಷಗಳ ನಡುವಿನ ಭಾರೀ ಪೈಪೋಟಿ, ತಂತ್ರಗಾರಿಕೆ ಹಾಗೂ ಹಗ್ಗಜಗ್ಗಾಟಕಕ್ಕೆ ಕಾರಣವಾಗಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಇಡೀ ರಾಜ್ಯದ ಗಮನಸೆಳೆದಿದೆ.
ದೋಸ್ತಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟುಬಿಡದೇ ಉಳಿಸಿಕೊಂಡ ಕ್ಷೇತ್ರದಲ್ಲಿ ತಾವೇ ಟಿಕೆಟ್ ಕೊಡಿಸಿ ಗೆಲ್ಲಿಸುವ ಭರವಸೆಯೊಂದಿಗೆ ಬಿಜೆಪಿಯಿಂದ ಕರೆತಂದಿರುವ ಮಾಜಿ ಸಂಸದ, ಸಚಿವ ಸಿ ಎಚ್ ವಿಜಯಶಂಕರ್ ಅವರ ಸೋಲು ಗೆಲುವಿನ ಜೊತೆ ಸ್ವತಃ ಅವರ ರಾಜಕೀಯದ ಏಳುಬೀಳಿನ ಪ್ರಶ್ನೆಯೂ ಅಡಗಿದೆ. ಆ ಕಾರಣದಿಂದಲೂ ಕ್ಷೇತ್ರದ ಕಣ ರಾಜ್ಯದ ಉದ್ದಗಲಕ್ಕೆ ಕುತೂಹಲ ಮೂಡಿಸಿದೆ. ಹಾಗೇ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನಲ್ಲಿ ತಮ್ಮನ್ನೂ ಸೇರಿ ತಮ್ಮ ಆಪ್ತ ಕಾಂಗ್ರೆಸ್ ನಾಯಕರನ್ನು ಸೋಲಿಸಿದ ಜಿಲ್ಲೆಯ ಜೆಡಿಎಸ್ ನಾಯಕರು ಮತ್ತು ಸಿದ್ದರಾಮಯ್ಯ ನಡುವಿನ ನಂಟು ಈ ಚುನಾವಣೆಯ ಮೇಲೆ ಏನು ಪರಿಣಾಮಬೀರುತ್ತದೆ? ದೋಸ್ತಿ ರಾಜಕಾರಣ ರಾಜ್ಯಮಟ್ಟದಲ್ಲಿ ಮಾತ್ರ ಉಳಿಯುವುದೇ? ಅಥವಾ ಸಿದ್ದರಾಮಯ್ಯ ಮತ್ತು ಜಿ ಟಿ ದೇವೇಗೌಡರ ತವರಿನಲ್ಲೂ ಮುಂದುವರಿಯುವುದೆ? ಎಂಬ ಕುತೂಹಲ ಕೂಡ ಇದೆ.
ಒಂಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ, ಸದ್ಯ ಮೈಸೂರಿನ ಎರಡು(ಕೃಷ್ಣರಾಜ ಮತ್ತು ಚಾಮರಾಜ) ಹಾಗೂ ಕೊಡಗಿನ ಎರಡು(ವಿರಾಜಪೇಟೆ ಮತ್ತು ಮಡಿಕೇರಿ) ಕ್ಷೇತ್ರ ಸೇರಿ ಒಟ್ಟು ನಾಲ್ಕು ಕಡೆ ಬಿಜೆಪಿ ಶಾಸಕರಿದ್ದಾರೆ. ಮೈಸೂರಿನ ಮೂರು ಕಡೆ (ಪಿರಿಯಾಪಟ್ಟಣ, ಹುಣಸೂರು ಮತ್ತು ಚಾಮುಂಡೇಶ್ವರಿ) ಜೆಡಿಎಸ್ ಶಾಸಕರಿದ್ದಾರೆ. ನರಸಿಂಹರಾಜ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಹಾಗಾಗಿ, ದೋಸ್ತಿಗಳು ನಿಜಕ್ಕೂ ಒಂದಾದರೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲದ ನೆಲೆ ಹೊಂದಿವೆ.
ಬಿಜೆಪಿ ಹಾಲಿ ಸಂಸದ ಫೈರ್ ಬ್ರಾಂಡ್ ನಾಯಕ ಪ್ರತಾಪ ಸಿಂಹ ಮತ್ತೊಮ್ಮೆ ಆಯ್ಕೆ ಬಯಸಿದ್ದು, ತಮ್ಮ ಸಾಧನೆಗಳಿಗಿಂತ ಹೆಚ್ಚಾಗಿ ‘ಮತ್ತೊಮ್ಮೆ ಮೋದಿ’ ಘೋಷಣೆಯೇ ತಮಗೆ ಮತತಂದುಕೊಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಎರಡು ಬಾರಿ ಸಂಸದರಾಗಿ, ಒಂದು ಬಾರಿ ರಾಜ್ಯ ಸರ್ಕಾರದಲ್ಲಿ ಸಚಿವರೂ ಆಗಿದ್ದ ಬಿಜೆಪಿ ಮೂಲದ ಸಭ್ಯ ಮತ್ತು ಸಚ್ಛಾರಿತ್ರ್ಯದ ನಾಯಕ ಸಿ ಎಚ್ ವಿಜಯಶಂಕರ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಪ್ರಮುಖವಾಗಿ ಸಂಸದರಾಗಿ ಈ ಹಿಂದೆ ತಾವು ಮಾಡಿದ ಕೆಲಸ, ತಮ್ಮ ವೈಯಕ್ತಿಕ ಸಭ್ಯತೆ ಮತ್ತು ಜನಸಂಪರ್ಕದೊಂದಿಗೆ ಸಿದ್ದರಾಮಯ್ಯ ಅವರ ಪ್ರಭಾವವನ್ನು ಅವರು ನೆಚ್ಚಿಕೊಂಡಿದ್ದಾರೆ. ಅಲ್ಲದೆ, ಪ್ರತಾಪ ಸಿಂಹ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೆ, ವಿಜಯಶಂಕರ್ ಕುರುಬ ಸಮುದಾಯಕ್ಕೆ ಸೇರಿದವರು. ಜಾತಿವಾರು ಲೆಕ್ಕಾಚಾರದಲ್ಲಿ ಒಕ್ಕಲಿಗರು ನಿರ್ಣಾಯಕ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದ ಎಚ್ ವಿಶ್ವನಾಥ್ ಅವರು ಸಿದ್ದರಾಮಯ್ಯ ಆಪ್ತರಾಗಿದ್ದರು. ಆ ಹಿನ್ನೆಲೆಯಲ್ಲಿ ಜೆಡಿಎಸ್ ತಂತ್ರಗಾರಿಕೆಯ ಭಾಗವಾಗಿ ಒಕ್ಕಲಿಗ ಮತಗಳು ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರತಾಪಸಿಂಹ ಕಡೆಗೆ ವಾಲಿದ್ದವು. ಆದರೂ ಸಿಂಹ ಗೆದ್ದದ್ದು ಕೇವಲ 31,608 ಮತಗಳ ಅಂತರದಲ್ಲಿ ಮಾತ್ರ! ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ. ಜೆಡಿಎಸ್ ರಾಜ್ಯ ನಾಯಕರು ಮಂಡ್ಯ, ಹಾಸನ ಮತ್ತು ತುಮಕೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲ ನಿರ್ಣಾಯಕ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಜೊತೆ ಆಪ್ತತೆ ಸಾಧಿಸಿದ್ದಾರೆ. ಆ ಹಿನ್ನೆಲೆಯಲ್ಲೇ ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಸಿದ್ದರಾಮಯ್ಯ ಸೋಲು ತಮಗೆ ನೋವು ತಂದಿದೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿಕೆ ನೀಡಿದ್ದಾರೆ. ಅದೇ ಹೊತ್ತಿಗೆ ಮತ್ತೊಂದು ಕಡೆ ಸ್ಥಳೀಯವಾಗಿ ಜಿ ಟಿ ದೇವೇಗೌಡ ಮತ್ತು ಸಿದ್ದರಾಮಯ್ಯ ವೈಷಮ್ಯ ಮರೆತು ಪರಸ್ಪರ ಕೈಜೋಡಿಸಿದ್ದಾರೆ. ಹಾಗಾಗಿ ಈ ಬಾರಿ ಒಕ್ಕಲಿಗ ಮತಗಳು ಪಥಬದಲಿಸಲಿವೆ ಎನ್ನಲಾಗಿದೆ.
ಅಲ್ಲದೆ, ವಿಜಯಶಂಕರ್ ಅವರಿಗೆ ಪ್ರತಿಕೂಲವಾಗುವಂತೆ ಯಾವುದೇ ಅಂಶ ಸದ್ಯಕ್ಕೆ ಕಾಣಿಸುತ್ತಿಲ್ಲ. ಸಂಸದರಾಗಿ ಅವರ ಸಾಧನೆ, ವೈಯಕ್ತಿಕವಾಗಿ ಇಂದಿಗೂ ಬಿಜೆಪಿ ಸಾಮಾನ್ಯ ಕಾರ್ಯಕರ್ತರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ಸರಳ ಮತ್ತು ಸಜ್ಜನಿಕೆಯ, ಹಾಗೂ ಪ್ರಾಮಾಣಿಕತೆಯ ಅವರ ವೈಯಕ್ತಿಕ ವರ್ಚಸ್ಸು, ಜೊತೆಗೆ ಸಿದ್ದರಾಮಯ್ಯ ಅವರ ಪ್ರಭಾವ, ಅಲ್ಲದೆ, ಮುಖ್ಯವಾಗಿ ಜೆಡಿಎಸ್ ಸ್ಥಳೀಯ ನಾಯಕರು ಹಳೆಯ ವೈಷಮ್ಯ ಮರೆತು ಸಿದ್ದರಾಮಯ್ಯ ಜೊತೆ ಕೈಜೋಡಿಸಿರುವುದು ಅವರಿಗೆ ಪೂರಕವಾಗಿವೆ.
ಆದರೆ, ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ವಿಷಯದಲ್ಲಿ ಇದೇ ವಾತಾವರಣ ಕಾಣುತ್ತಿಲ್ಲ. ಟಿಕೆಟ್ ನೀಡುವ ವಿಷಯದಲ್ಲಿಯೇ ಅವರ ವಿರುದ್ಧ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ, ಆರಂಭದಿಂದಲೂ ಬಿಜೆಪಿಯ ಸ್ಥಳೀಯ ಪ್ರಮುಖರ ಒಂದು ಬಣ ಸಂಸದರ ವಿರುದ್ಧವೇ ಇದೆ. ಜೊತೆಗೆ ಜನಸಾಮಾನ್ಯರಿಗೆ ಸಂಸದರು ಸಂಪರ್ಕಕ್ಕೆ ಸಿಗುವುದಿಲ್ಲ ಎಂಬ ಅಸಮಾಧಾನ ಕಾರ್ಯಕರ್ತರು ಮತ್ತು ಮತದಾರರ ನಡುವೆ ಬಲವಾಗಿದೆ. ಇನ್ನು ಅಭಿವೃದ್ಧಿ ಯೋಜನೆಗಳ ವಿಷಯದಲ್ಲಿಯೂ ವಿಶೇಷವಾಗಿ ಏನನ್ನೂ ಮಾಡಿಲ್ಲ ಎಂಬ ಅಸಮಾಧಾನವು ಇದೆ. ಹಾಗಾಗಿಯೇ ಅವರು ಪ್ರಚಾರದ ವೇಳೆ ತಮ್ಮ ಸಾಧನೆ, ತಮ್ಮ ವರ್ಚಸ್ಸಿನ ಬದಲಾಗಿ ಮೋದಿಯವರೇ ಅಭ್ಯರ್ಥಿ ಎಂದು ಮತ ನೀಡಿ ಎಂದು ಹೇಳುತ್ತಿದ್ದಾರೆ! ಸದ್ಯಕ್ಕೆ ಅವರ ಪಾಲಿಗೆ ಮೋದಿ ಮತ್ತೊಮ್ಮೆ ಎಂಬ ಘೋಷಣೆಯ ಹೊರತು, ಉಳಿದಂತೆ ವ್ಯತಿರಿಕ್ತ ಅಂಶಗಳೇ ಕಣದಲ್ಲಿ ಎದುರಾಗುತ್ತಿವೆ!
ಸಿದ್ದರಾಮಯ್ಯ ಈ ಬಾರಿಯ ಚುನಾವಣೆಯನ್ನು ತಮ್ಮ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದು, ವಿಜಯಶಂಕರ್ ಗೆಲುವಿಗೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿಯೇ ಸ್ವತಃ ತಮ್ಮ ಸೋಲಿಸುವ ಪಣತೊಟ್ಟು ಗೆದ್ದ ಜಿ ಟಿ ದೇವೇಗೌಡರೊಂದಿಗೂ ಎಲ್ಲ ಮರೆತು ಪರಸ್ಪರ ಕೈಜೋಡಿಸಿದ್ದಾರೆ. ಆದರೆ, ಅಂತಿಮವಾಗಿ ಸಿದ್ದರಾಮಯ್ಯ ಮತ್ತು ಜಿಟಿಡಿ ನಡುವಿನ ಈ ದೋಸ್ತಿ, ಎಷ್ಟರಮಟ್ಟಿಗೆ ಒಕ್ಕಲಿಗ ಸಮುದಾಯದ ತಳಮಟ್ಟದ ಮತದಾರರವರೆಗೆ ತಲುಪಿ ಅವರ ಮನವೊಲಿಸಲಿದೆ ಎಂಬುದರ ಮೇಲೆ ಎಲ್ಲವೂ ನಿಂತಿದೆ. ಹಾಗೇ ಸಿದ್ದರಾಮಯ್ಯ ಅವರ ಒಂದು ಕಾಲದ ಆಪ್ತ ಹಾಗೂ ಸದ್ಯದ ರಾಜಕೀಯ ವೈರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು ಎಷ್ಟರಮಟ್ಟಿಗೆ ಕಾಂಗ್ರೆಸ್ ಪರ ಕೆಲಸ ಮಾಡುತ್ತಾರೆ ಎಂಬುದು ಕೂಡ ಗಣನೀಯ.
ಅದರಲ್ಲೂ ಮುಖ್ಯವಾಗಿ ಈ ಬಾರಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಅಲ್ಪಸಂಖ್ಯಾತರ ಮತದಾರರು ಎಷ್ಟು ಆಸಕ್ತಿಯಿಂದ ಮತ್ತು ಯಾವ ಇಚ್ಛೆಯಿಂದ ಮತ ಚಲಾಯಿಸುತ್ತಾರೆ? ಮತಪೆಟ್ಟಿಗೆಯ ಮುಂದೆ ನಿಂತು ಅವರ ತೋರುಬೆರಳು ಸರಿದಾಡುವ ಹೊತ್ತಿಗೆ ಯಾವ ಅಂಶ ಅವರ ಮನದಲ್ಲಿ ಸುಳಿದಾಡುತ್ತದೆ ಎಂಬುದರ ಮೇಲೆ ಮಾಜಿ ಮತ್ತು ಹಾಲಿ ಸಂಸದರಲ್ಲಿ ಯಾರು ಮತ್ತೆ ಸಂಸತ್ ಭವನದ ಹೊಸ್ತಿಲು ತುಳಿಯುತ್ತಾರೆ ಎಂಬುದು ನಿರ್ಧಾರವಾಗಲಿದೆ. ಸದ್ಯಕ್ಕಂತೂ ಇಬ್ಬರ ನಡುವೆ ನೇರ ಹಣಾಹಣಿ ಎದ್ದುಕಾಣುತ್ತಿದೆ.
ಫಲಿತಾಂಶ ಏನೇ ಇರಲಿ, ಈ ಕ್ಷೇತ್ರದ ಸದ್ಯದ ರಾಜಕೀಯದ ಬೆಳವಣಿಗೆಗಳು ಚುನಾವಣೆಗಳ ಬಳಿಕ ರಾಜ್ಯದ ದೋಸ್ತಿ ಸರ್ಕಾರವೂ ಸೇರಿದಂತೆ ಇಡೀ ರಾಜಕೀಯದ ಮುಂದಿನ ಗತಿಯನ್ನು ನಿರ್ಧರಿಸಲಿವೆ ಎಂಬುದನ್ನು ಯಾರೂ ತಳ್ಳಿಹಾಕಲಾಗದು! ಆ ಕಾರಣಕ್ಕಾಗಿಯೂ ಮೈಸೂರು-ಕೊಡಗು ಕ್ಷೇತ್ರದತ್ತ ಎಲ್ಲರ ಕಣ್ಣು ನೆಟ್ಟಿವೆ.