ನವದೆಹಲಿ: “ಬಿಜೆಪಿಯ ವಾದವನ್ನು ಅಥವಾ ನಿರ್ಧಾರಗಳನ್ನು ಒಪ್ಪದಿದ್ದವರನ್ನು ದೇಶದ್ರೋಹಿಗಳು ಎಂದು ನಾವು ತಿಳಿದಿಲ್ಲ. ಅವರು ನಮ್ಮ ರಾಜಕೀಯ ಎದುರಾಳಿಗಳು ಎಂದೇ ಭಾವಿಸಿದ್ದೇವೆ” ಹೀಗೆಂದವರು ಬೇರೆ ಯಾರೂ ಅಲ್ಲ, ಬಿಜೆಪಿಯ ಸಂಸ್ಥಾಪಕ ಮತ್ತು ಎರಡನೇ ರಾಷ್ಟ್ರಾಧ್ಯಕ್ಷ್ಯ ಲಾಲ್ ಕೃಷ್ಣ ಅಡ್ವಾಣಿ.
ಗುರುವಾರ ತಮ್ಮ ಬ್ಲಾಗ್ ಬರೆಹವೊಂದರ ಮೂಲಕ ಎಲ್ ಕೆ ಅಡ್ವಾಣಿ ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ಕನ್ನಡಿ ಹಿಡಿದಿದ್ದಾರೆ.
ಬಿಜಿಪಿಯನ್ನು, ಮೋದಿಯನ್ನು ಒಪ್ಪದವರನ್ನೆಲ್ಲಾ ದೇಶದ್ರೋಹಿಗಳು, ಅವರೆಲ್ಲಾ ‘ತುಕಡೆ ತುಕಡೆ ಗ್ಯಾಂಗ್’ನವರು ಎಂಬ ವ್ಯಾಖ್ಯಾನವನ್ನು ದೇಶದೆಲ್ಲೆಡೆ ಬಿತ್ತುವ ಕೆಲಸಲ್ಲಿ ತಲ್ಲೀನರಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ್ಯ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಈಗ ಅಡ್ವಾಣಿಯವರ ಬ್ಲಾಗ್ ಬರೆಹದಿಂದ ತೀವ್ರ ಮುಜುಗರ ಎದುರಿಸುವ ಸನ್ನಿವೇಶ ಉಂಟಾಗಿದೆ.
ಜನರ ಜ್ವಲಂತ ಸಮಸ್ಯೆಗಳನ್ನು ಮೂಲೆಗೆ ತಳ್ಳಿ ಕೇವಲ ದೇಶದ ಭದ್ರತೆ ವಿಷಯ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಕೊಂಡು ಅದನ್ನೇ ಮುಂದೆ ಮಾಡಿ, ತಮ್ಮನ್ನು ವಿರೋಧಿಸುವವರೆನ್ನೆಲ್ಲಾ ದೇಶದ್ರೋಹಿಗಳ ಸಾಲಿಗೆ ನಿಲ್ಲಿಸಿ ಲೋಕಸಭಾ ಚುನಾವಣೆ ಗೆಲ್ಲಲು ಹೊರಟಿದ್ದವರಿಗೆ ಬಿಜೆಪಿ ಹಿರಿಯ ಮುಖಂಡ ಅಡ್ವಾಣಿ ಹೇಳಿಕೆ ಕಪಾಳಮೋಕ್ಷ ಮಾಡಿದೆ.
ಮಾತ್ರವಲ್ಲ, ‘ವ್ಯಕ್ತಿ ನಿಷ್ಟೆ’ಯನ್ನೇ ಮುಂದಿಟ್ಟುಕೊಂಡು “ಮೋದಿ ಮತ್ತೊಮ್ಮೆ” ಘೋಷಣೆಯೊಂದಿಗೆ ಚುನಾವಣೆಗೆ ಹೊರಟಿದ್ದವರಿಗೂ ಅಡ್ವಾಣಿ ತಪರಾಕಿ ನೀಡಿದ್ದಾರೆ. “ನನ್ನ ಜೀವನದ ಮಾರ್ಗದರ್ಶಿ ತತ್ವ ಎಲ್ಲಾ ಸಂದರ್ಭಗಳಲ್ಲೂ “ದೇಶ ಮೊದಲು, ಪಕ್ಷ ನಂತರ, ಸ್ವಂತಿಕೆ ಅಂತಿಮ” ಎಂದು ಹೇಳಿರುವ ಅಡ್ವಾಣಿ ಮಾತುಗಳು ಈಗ ಬಿಜೆಪಿ ಹೊರಟಿರುವ ರೀತಿ ಸರಿ ಇಲ್ಲ ಎಂಬುದನ್ನು ತೋರಿಸಿವೆ.
ಎಲ್ ಕೆ ಅಡ್ವಾಣಿಯವರು ಬರೆದಿರುವ ಬ್ಲಾಗ್ ನ ಅಂಶಗಳು ಇಂತಿವೆ
-
ಏಪ್ರಿಲ್ 6 ಬಿಜೆಪಿ ಪಕ್ಷದ ಸಂಸ್ಥಾಪನಾ ದಿನ. ಈ ದಿನ ಬಿಜೆಪಿ ಪಕ್ಷದ ನಮ್ಮೆಲ್ಲರಿಗೂ ಪಕ್ಷದ ಹಿನ್ನೋಟವನ್ನು ನೋಡಲು, ಮುಂದಿನ ಗುರಿಯ ಬಗ್ಗೆ ಚಿಂತಿಸಲು ಹಾಗೂ ನಮ್ಮೊಳಗೇ ಆತ್ಮವಿಮರ್ಶೆ ಮಾಡಿಕೊಳ್ಳಲು ಸುಸಂದರ್ಭ.
-
ನನ್ನ ಮೇಲೆ ಗೌರವ ಹಾಗೂ ಪ್ರೀತಿ ತೋರಿಸುವವವರಿಗೆ ನಾನು ಕೃತಜ್ಞ. ಪಕ್ಷದ ಒಬ್ಬ ಸಂಸ್ಥಾಪಕನಾಗಿ, ಭಾರತದ ಜನತೆಯ ಜತೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ನನ್ನ ಕರ್ತವ್ಯ ಮತ್ತು ಅದರಲ್ಲೂ ನನ್ನ ಪಕ್ಷದ ಕೋಟ್ಯಂತರ ಕಾರ್ಯಕರ್ತರಿಗೆ ಇದನ್ನು ತಿಳಿಸುವುದು ಬಹಳ ಮುಖ್ಯ.
-
ನನ್ನ ಚಿಂತನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೂ ಮುನ್ನ, 1991ರಿಂದ ಸತತವಾಗಿ ಆರು ಬಾರಿ ಲೋಕಸಭಾ ಚುನಾವಣೆಯಲ್ಲಿ ನನಗೆ ಗೆಲುವು ತಂದುಕೊಟ್ಟ ಗಾಂಧೀನಗರದ ಜನತೆಗೆ ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ. ಅವರ ಪ್ರೀತಿ ಹಾಗೂ ಸಹಕಾರಕ್ಕೆ ನನ್ನ ಹೃದಯ ತುಂಬಿ ಬಂದಿದೆ.

-
ಮೊದಲು ಭಾರತೀಯ ಜನತಾ ಸಂಘ ಹಾಗೂ ನಂತರ ಭಾರತೀಯ ಜನತಾ ಪಕ್ಷ ಎರಡಕ್ಕೂ ನಾನು ಸಂಸ್ಥಾಪಕ ಸದಸ್ಯನಾಗಿದ್ದೆ.
-
ಸ್ವಹಿತಾಸಕ್ತಿ ಇಲ್ಲದೇ ಪಕ್ಷದಲ್ಲಿ ದುಡಿದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ ಅಲ್ಲದೇ ಹಲವಾರು ಪ್ರಬಲ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದುವ ಹಾಗೂ ಅವರೊಂದಿಗೆ ಕೆಲಸ ಮಾಡುವ ಅವಕಾಶ ಲಭಿಸಿತು.
-
ನನ್ನ ಜೀವನದ ಮಾರ್ಗದರ್ಶಿ ತತ್ವ ಎಲ್ಲಾ ಸಂದರ್ಭಗಳಲ್ಲೂ “ದೇಶ ಮೊದಲು, ಪಕ್ಷ ನಂತರ, ಸ್ವಂತಿಕೆ ಅಂತಿಮ”, ಈ ಒಂದು ತತ್ವಕ್ಕೆ ನಾನು ಬದ್ಧನಾಗಲು ಬಯಸುತ್ತೇನೆ ಹಾಗೂ ಇದನ್ನೇ ಕೊನೆಯವರೆಗೂ ಪಾಲಿಸುತ್ತೇನೆ.
-
ಭಾರತೀಯ ಪ್ರಜಾಪ್ರಭುತ್ವದ ಸಾರವೇ ವೈವಿಧ್ಯತೆಯನ್ನು ಮತ್ತು ಅಭಿವ್ಯಕ್ತಿ ಸ್ವಾತಂತ್ಯವನ್ನು ಗೌರವಿಸುವುದು. ಬಿಜೆಪಿ ಪಕ್ಷ ಸ್ಥಾಪನೆಯಾದಾಗಿನಿಂದಲೂ ಅದು ತನ್ನನ್ನು ರಾಜಕೀಯವಾಗಿ “ರಾಜಕೀಯ ಎದುರಾಳಿಗಳು” ಎಂದು ಪರಿಗಣಿಸಿದೆ. ನಮ್ಮ ಪರಿಕಲ್ಪನೆಯ ಭಾರತೀಯ ರಾಷ್ಟ್ರವಾದದಲ್ಲಿ ಸಹ ನಾವು ನಮ್ಮನ್ನು ರಾಜಕೀಯವಾಗಿ ಒಪ್ಪದ ಜನರೆಲ್ಲಾ “ದೇಶದ್ರೋಹಿಗಳು” ಎಂದು ಯಾವತ್ತೂ ತಿಳಿದುಕೊಂಡಿಲ್ಲ. ದೇಶದ ಪ್ರತಿಯೊಬ್ಬ ಪ್ರಜೆಯೂ ವೈಯಕ್ತಿಕ ಮತ್ತು ರಾಜಕೀಯ ಮಟ್ಟದಲ್ಲಿ ತನ್ನದೇ ತನ್ನದೇ ಆಯ್ಕೆಯ ಸ್ವಾತಂತ್ರ್ಯ ಹೊಂದಿರಬೇಕೆಂಬ ತತ್ವಕ್ಕೆ ಪಕ್ಷ ಬದ್ಧವಾಗಿದೆ.
-
ಬಿಜೆಪಿ ಎಂದಿಗೂ ಮಾಧ್ಯಮ ಸೇರಿದಂತೆ ಪ್ರಜಾಪ್ರಭುತ್ವ ಸಂಸ್ಥೆಗಳ ಸ್ವಾತಂತ್ರ, ಸಮಗ್ರತೆ, ಪ್ರಾಮಾಣಿಕತೆ ಹಾಗೂ ದೃಢತೆಯನ್ನು ರಕ್ಷಣೆ ಕೋರುವಲ್ಲಿ ಮೊದಲೇ ಸ್ಥಾನದಲ್ಲಿ ನಿಲ್ಲುತ್ತದೆ.
-
ಮತದಾನ, ಚುನಾವಣೆಯಲ್ಲಿ ಸುಧಾರಣೆಗಳನ್ನು ತರುವಲ್ಲಿ, ಅದರಲ್ಲೂ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ನಿಧಿಯಲ್ಲಿ ಪಾರದರ್ಶಕತೆಯನ್ನು ತರುವಲ್ಲಿ, ಅಲ್ಲದೇ ಪ್ರಸ್ತುತ ಕಾಲಮಾನಕ್ಕೆ ಅತ್ಯವಶ್ಯಕವಾದ ಭ್ರಷ್ಟಾಚಾರ ರಹಿತ ರಾಜಕೀಯ ಸೃಷ್ಟಿಸುವುದು ಬಿಜೆಪಿಯ ಎಂದಿನ ಆದ್ಯತೆ.
-
ಭಾರತದ ಪ್ರಜಾಪ್ರಭುತ್ವ ಎಂಬ ಭವ್ಯವಾದ ಮಹಲನ್ನು ಇನ್ನಷ್ಟು ಸುಭ್ರದಗೊಳಿಸಿ ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕು ಎನ್ನುವುದು ಎಂಬುದು ನನ್ನ ವಿನಮ್ರ ಆಕಾಂಕ್ಷೆ. ಸತ್ಯಯುತವಾದ ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ, ಜತೆಗೇ ಭಾರತದ ಪ್ರಜೆಗಳು, ಮಾಧ್ಯಮಗಳು, ಚುನಾವಣೆ ನಡೆಸುವ ಅಧಿಕಾರಿಗಳು ಎಲ್ಲ ಮತದಾರರು ರಾಜಕೀಯ ಪಕ್ಷಗಳ ಪ್ರಾಮಾಣಿಕ ವಿಮರ್ಶೆಯನ್ನು ನಡೆಸುವ ಸುಸಂದರ್ಭ ಇದಾಗಿದೆ.
-
ಎಲ್ಲರಿಗೂ ನನ್ನ ಶುಭ ಹಾರೈಕೆಗಳು.
More Articles
By the same author
Related Articles
From the same category