ದೇಶದ 25 ಕೋಟಿ ಜನರ ಖಾತೆಗಳಿಗೆ ವರ್ಷಕ್ಕೆ ತಲಾ 72,000ನಂತೆ 5 ವರ್ಷಕ್ಕೆ ಒಟ್ಟು 3,60,000 ರೂ ಜಮಾ ಮಾಡುವ ಕಾಂಗ್ರೆಸ್ ಪಕ್ಷದ ‘ನ್ಯಾಯ್’ ಅಥವಾ ಕನಿಷ್ಟ ಆದಾಯ ಖಾತ್ರಿ ಭರವಸೆ ಪ್ರಸ್ತಾಪದ ವಿರುದ್ಧ ಟ್ವೀಟ್ ಮಾಡಿದ್ದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಅಯೋಗ ಅಭಿಪ್ರಾಯಪಟ್ಟಿದೆ.
ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದ ಕುರಿತು NITI ಆಯೋಗದ ಉಪಾಧ್ಯಕ್ಷ ರಾಜೀವ ಕುಮಾರ್ ಅವರಿಗೆ ಚುನಾವಣಾ ಆಯೋಗವು ಮಾರ್ಚ್ 27ರಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ಅದನ್ನು ಉತ್ತರಿಸಲು ಏಪ್ರಿಲ್ 2ರ ವರೆಗೆ ಕಾಲಾವಕಾಶ ನೀಡಿತ್ತು. ಕುಮಾರ್ ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದರಿಂದ ನೋಟಿಸ್ ಗೆ ಜವಾಬು ನೀಡಲು ಏಪ್ರಿಲ್ 5ರ ತನಕ ಕಾಲಾವಕಾಶ ವಿಸ್ತರಿಸಲು ಕೋರಿದ್ದರು. ನಂತರ ಅವರು ನೀಡಿದ ವಿವರಣೆಯು ಸಮಾಧಾನಕರವಾಗಿ ಕಂಡು ಬಂದಿಲ್ಲ ಎಂದಿರುವ ಚುನಾವಣಾ ಆಯೋಗ “ರಾಜೀವ್ ಕುಮಾರ್ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ” ಎಂದು ಶುಕ್ರವಾರ ಸ್ಪಷ್ಟಪಡಿಸಿದೆ.
ಚುನಾವಣಾ ಆಯೋಗದ ಚಾಟಿ ಪತ್ರದಲ್ಲೇನಿದೆ?
ಕುಮಾರ್ ಅವರ ಜವಾಬನ್ನು ಪರಿಶೀಲಿಸಿದ ನಂತರ ಚುನಾವಣಾ ಆಯೋಗ NITI ಆಯೋಗದ ಉಪಾಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಹೀಗೆ ಹೇಳಿದೆ:
“ಆಯೋಗವು ತಾವು ನೀಡಿರುವ ಉತ್ತರವನ್ನು ಪರಿಶೀಲಿಸಿದೆ. ಹಾಗು ತಮ್ಮ ಉತ್ತರವು ಸಮಾಧಾನಕರವಾಗಿಲ್ಲ ಎಂದು ಆಯೋಗಕ್ಕೆ ಕಂಡುಬಂದಿರುತ್ತದೆ. ಸರ್ಕಾರಿ ನೌಕರರು ನಿಷ್ಪಕ್ಷಪಾತಿಗಳಾಗಿ ವರ್ತಿಸಬೇಕಲ್ಲದೆ ಅವರ ಸಾರ್ವಜನಿಕ ಹೇಳಿಕೆಗಳೂ ಸಹ ಪಕ್ಷಪಾತವಿಲ್ಲದೆ ಇರಬೇಕು. ಈ ಪ್ರಕರಣದಲ್ಲಿ ತಮ್ಮ ಸಾರ್ವಜನಿಕ ಹೇಳಿಕೆಯಲ್ಲಿ ಒಪ್ಪುಬಹುದಾದಂತಹ ನಡವಳಿಕೆ ಕಾಣುತ್ತಿಲ್ಲ.”
“ತಮ್ಮ ಹೇಳಿಕೆಗಳ ಬಗ್ಗೆ ಚುನಾವಣಾ ಆಯೋಗವು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಬೇಕೆಂದು ತೀರ್ಮಾನಿಸಿದೆ ಮತ್ತು ಮುಂದಿನ ದಿನಗಳಲ್ಲಿ ತಾವು ಎಚ್ಚರಿಕೆ ವಹಿಸಲಿದ್ದೀರಿ ಎಂಬುದಾಗಿ ಆಯೋಗ ನಿರೀಕ್ಷಿಸುತ್ತದೆ” ಎಂದೂ ಸಹ ಚುನಾವಣಾ ಆಯೋಗವು ರಾಜೀವ್ ಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ತನ್ನ ಅತೃಪ್ತಿಯನ್ನು ವ್ಯಕ್ತಪಡಿಸಿದೆ.
ಚುನಾವಣಾ ಆಯೋಗದ ಕೆಂಗಣ್ಣಿಗೆ NITI ಆಯೋಗದ ಉಪಾಧ್ಯಕ್ಷ
ಕಳೆದ ತಿಂಗಳು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ NYAY ಯೋಜನೆಯನ್ನು ಜಾರಿಗೊಳಿಸಿ ಅತ್ಯಂತ ಬಡತನದಲ್ಲಿರುವ ಶೇ.20ರಷ್ಟು ಕುಟುಂಬಗಳಿಗೆ ವಾರ್ಷಿಕ 72,000 ರೂ.ಗಳನ್ನು ಕನಿಷ್ಟ ಆದಾಯವಾಗಿ ನೀಡುವ ಭರವಸೆ ನೀಡಿದ್ದರು. ಈ ಯೋಜನೆಯಿಂದ 25 ಕೋಟಿ ಭಾರತೀಯರು ಪ್ರಯೋಜನ ಪಡೆಯುವರೆಂದು ಮತ್ತು ಈ ಪ್ರಸ್ತಾವನೆಯನ್ನು “ಬಡತನದ ಮೇಲಿನ ಅಂತಿಮ ದಾಳಿ” ಎಂದೂ ಸಹ ಅವರು ಘೋಷಿಸಿದ್ದರು.
ಭಾರತ ಸರ್ಕಾರದ ಯೋಜನಾ ಆಯೋಗವನ್ನು ಕಿತ್ತೊಗೆದು 2015ರ ಜನವರಿ 1ರಂದು ಪ್ರಧಾನಿ ಮೋದಿಯವರು NITI ಆಯೋಗವನ್ನು ರಚಿಸಿದ್ದರು. ಇದರ ಹಾಲಿ ಉಪಾಧ್ಯಕ್ಷರಾಗಿರುವ ರಾಜೀವ್ ಕುಮಾರ್ ಅವರು ಚುನಾವಣೆ ಗೆಲ್ಲುವ ಸಲುವಾಗಿ ಜನರಿಗೆ ಇಂದ್ರ ಚಂದ್ರರನ್ನೆಲ್ಲಾ ಕೊಡಿಸುವ ಭರವಸೆ ನೀಡಿರುವುದಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದರು. “ಪ್ರಸ್ತಾಪಿತ ಆದಾಯ ಖಾತ್ರಿ ಯೋಜನೆಯು ಆರ್ಥಿಕ, ಹಣಕಾಸು ಶಿಸ್ತು ಮತ್ತು ಅನುಷ್ಠಾನದ ಪರೀಕ್ಷೆಗಳನ್ನು ದಾಟಿ ಮುಂದೆ ಹೋಗಲಾರದು” ಎಂದು ಅವರು ಟ್ವೀಟ್ ಮಾಡಿದ್ದರು. ಇನ್ನೊಂದು ಟ್ವೀಟ್ ನಲ್ಲಿ ಕುಮಾರ್ ಅವರು, “ಕಾಂಗ್ರೆಸ್ ಅಧ್ಯಕ್ಷರು ಘೋಷಿಸಿರುವ ಯೋಜನೆಯು ಹಣಕಾಸು ಶಿಸ್ತನ್ನು ಅಸ್ತವ್ಯಸ್ತಗೊಳಿಸುತ್ತದೆ, ಕೆಲಸಕ್ಕೆ ಪ್ರೇರಣೆ ನೀಡದೇ ಹಣದ ಉತ್ತೇಜಕಗಳನ್ನು ಸೃಷ್ಟಿಸುತ್ತದೆ ಮತ್ತು ಇದು ಯಾವತ್ತೂ ಜಾರಿಯಾಗುವುದಿಲ್ಲ. ಕಾಂಗ್ರೆಸ್ ಯಾವಾಗಲೂ ಮಾಡುವಂತೆ, ಇದು ಚುನಾವಣೆಗಳಲ್ಲಿ ಚಂದ್ರನನ್ನು ತಂದಿಳಿಸುವ ಭರವಸೆ ಇದು” ಎಂದು ರಾಜಕೀಯವಾಗಿ ಅಣಕಿಸಿದ್ದರು.
ಜವಾಬು ನೀಡಿದ ರಾಜೀವ್ ಕುಮಾರ್ – ಒಪ್ಪದ ಆಯೋಗ
ರಾಜೀವ್ ಕುಮಾರ್ ಅವರು ಚುನಾವಣಾ ಆಯೋಗದ ಕಾರಣ-ಕೇಳಿ ನೋಟಿಸ್ ಗೆ ಸಲ್ಲಿಸಿರುವ ಉತ್ತರದಲ್ಲಿ, ತಾವು ಕಾಂಗ್ರೆಸ್ ನ NYAY ಯೋಜನೆಯ ಬಗ್ಗೆ ಒಬ್ಬ ಅರ್ಥಶಾಸ್ತ್ರಜ್ಞನಾಗಿ ಮಾತ್ರ ಹೇಳಿಕೆ ನೀಡಿರುವುದಾಗಿ ಹಾಗು ತಮ್ಮ ಹೇಳಿಕೆಗಳನ್ನು NITI ಆಯೋಗದ ನಿಲುವೆಂದು ವ್ಯಾಖ್ಯಾನಿಸಬಾರದಾಗಿ ತಿಳಿಸಿದ್ದಾರೆಂದು ಹೇಳಲಾಗಿದೆ. ಅಲ್ಲದೆ ನೀತಿ ಮತ್ತು ಆರ್ಥಿಕತೆಗಳಿಗೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಕುರಿತು ಒಬ್ಬ ಅರ್ಥಶಾಸ್ತ್ರಜ್ಞನಾಗಿ ತನ್ನ ಅಭಿಪ್ರಾಯಗಳನ್ನು ತಾನು ಹೇಳಬಹುದೆಂದು ಚುನಾವಣಾ ಆಯೋಗಕ್ಕೆ ರಾಜೀವ್ ಪ್ರತಿಕ್ರಿಯಿಸಿರುವುದಾಗಿ ತಿಳಿದುಬಂದಿದೆ.
ರಾಜೀವ್ ಕುಮಾರ್ ಅವರ ಈ ಉತ್ತರ ಚುನಾವಣಾ ಆಯೋಗಕ್ಕೆ ಅಸಮಧಾನವುಂಟು ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಜವಾಬ್ದಾರಿ ಇರುವ ಯಾವ ಅಧಿಕಾರಿಯೂ ಇಂತಹ ಹೊಣೆಗೇಡಿ ಮಾತನ್ನಾಡುವುದಿಲ್ಲ. ನೀತಿ ಆಯೋಗದಂತಹ ಒಂದು ಉನ್ನತ ಸಂಸ್ಥೆಯಲ್ಲಿ ಮುಖ್ಯ ಹುದ್ದೆಯಲ್ಲಿದ್ದಾಗ ಅವರು ಎಲ್ಲೇ ಏನೇ ಮಾತಾಡಲೀ ಅದು ನೀತಿ ಆಯೋಗದ ಮುಖ್ಯಸ್ಥನ ಮಾತುಗಳಾಗಿಯೇ ಸ್ವೀಕಾರವಾಗುತ್ತವೆಯೇ ಹೊರತು ವೈಯಕ್ತಿಕ ಅಭಿಪ್ರಾಯವಾಗಿ ಅಲ್ಲ. ಈ ಕಾರಣದಿಂದಲೇ ಚುನಾವಣಾ ಆಯೋಗವು ತನ್ನ ನಿಲುವನ್ನು ಸ್ಪಷ್ಟಪಡಿಸಿ, ರಾಜೀವ್ ಕುಮಾರ್ ನೀತಿ ಸಂಹಿತಿ ಉಲ್ಲಂಘಿಸಿದ್ದಾರೆ ಎಂದು ಹೇಳಿದೆ
ಇದಕ್ಕೆ ಸಂಬಂಧಿಸಿದ್ದು
ಕ್ಲಿಕ್ ಮಾಡಿ:ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿದ ನೀತಿ ಆಯೋಗದ ಉಪಾಧ್ಯಕ್ಷರಿಗೆ ಚುನಾವಣಾ ಅಯೋಗ ನೋಟಿಸ್