ನಮಾಮಿ ಗಂಗೆಯ ಪಾಡು
ವಾರಣಾಸಿಯಲ್ಲಿ ಒಟ್ಟು 84 ಘಾಟ್ ಗಳಿದ್ದು ರೂ. 76 ಕೋಟಿ ಯನ್ನು ಘಾಟ್ ಮತ್ತು ಅದರ ಮುಂದುವರಿದ ನದಿತೀರದ ಭಾಗವನ್ನು ಸ್ವಚ್ಛಗೊಳಿಸಲು ಖರ್ಚು ಮಾಡಲಾಗಿದೆ. ಮೋದಿ ಪ್ರಧಾನಿಯಾದಾಗ ಸ್ವಚ್ಛ ಭಾರತ ಯೋಜನೆಯ ಪ್ರಚಾರಕ್ಕಾಗಿ ಇಲ್ಲಿನ ಮುಖ್ಯ ಘಾಟ್ ಗಳಲ್ಲಿ ಒಂದಾದ ಅಸ್ಸಿ ಘಾಟಿಯಲ್ಲಿ ಪೊರಕೆ ಹಿಡಿದು ಪೋಜು ನೀಡಿ ಕಸ ಗುಡಿಸಿದ್ದರು. ಈ ಅಸ್ಸಿ ಘಾಟನ್ನು ನೋಡುವುದಾದರೆ, ಇಲ್ಲಿನ ಗಂಗೆ ಹರಿವಿನಲ್ಲಿ ಈಗಲೂ ರಾಶಿ ಗಟ್ಟಲೆ ಕಸ ಸುರಿಯಲಾಗುತ್ತಿದೆ. ಕಸದ ಪ್ರಮಾಣ ಮೊದಲಿದ್ದಷ್ಟಿಲ್ಲದಿದ್ದರೂ ಗಂಗಾ ನದಿಯ ನೀರಿನ ಗುಣಮಟ್ಟ ಇಳಿಕೆಯಾಗುತ್ತಲೇ ಇದೆ. ಚರಂಡಿಯ ನೀರು ನದಿಯನ್ನು ನೇರವಾಗಿ ಸೇರುತ್ತಿದೆ; ಇದೇ ನೋಡಿ ನಮಾಮಿ ಗಂಗೆ ಎನ್ನುತ್ತಾರೆ ಅಲ್ಲಿನ ಯುವಕರು. ಕಾರ್ಖಾನೆಯ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದ್ದು ಸರ್ಕಾರವು ಒಂದು ಘಾಟಿಗೆ 1 ಕೋಟಿ ಖರ್ಚು ಮಾಡಿದ್ದು ಲೆಕ್ಕದಲ್ಲಿ ಮಾತ್ರವಿದೆಯೇ ಹೊರತು ‘ವಿಕಾಸ್’ ಅಂತೂ ಆಗಿಲ್ಲ. ರೋಡು ನಿರ್ಮಾಣವಾಗಿ ಬೀದಿ ದೀಪಗಳು ಬಂದವು. ಆದರೆ ವಾಸ್ತವದಲ್ಲಿ ಬೀದಿ ದೀಪಗಳನ್ನು ಅಲಂಕಾರಕ್ಕೆ ಹಾಕಲಾಗಿದೆಯೇ ಹೊರತು ಅದರ ಬೆಳಕು ರಸ್ತೆಗೆ ಬೀಳುವುದಿಲ್ಲ. “ಮೋದಿಯನ್ನು ಟೀಕಿಸಿದರೆ ದೇಶದ್ರೋಹಿ, ಹಿಂದೂ ವಿರೋಧಿ ಎನ್ನುತ್ತಾರೆ, ಆದರೆ ನಾನು ಅಪ್ಪಟ ಹಿಂದೂ, ನನ್ನ ಹೆಸರಿನಲ್ಲೇ ಮಾರುತಿ –ಹನುಮಾನ್ ಇದ್ದಾನೆ”ಎನ್ನುತ್ತಾನೆ ಸ್ಥಳೀಯ ಯುವಕನೊಬ್ಬ. “ವಿಕಾಸ ಎಂದರೆ ಕೆಲಸಗಳನ್ನು ಕಿತ್ತುಕೊಳ್ಳುವುದು ಎಂಬಂತಾಗಿದೆ ನಾವು ಸಾಮಾನ್ಯ ಜನ ಹೊಟ್ಟೆಗೇನು ತಿನ್ನಬೇಕು?” ಎಂದು ಮಹಿಳೆಯೊಬ್ಬರು ಕೇಳುತ್ತಾರೆ.
ಅಸ್ಸಿ ಘಾಟ್ ಗಿಂದ ಹಿಂದಿನದು ರವಿದಾಸ್ ಘಾಟ್. ಚರಂಡಿ ನೀರು ನೇರವಾಗಿ ಇಲ್ಲಿ ಗಂಗೆಯನ್ನು ಸೇರುತ್ತದೆ. ನದಿ ದಡದ ಮೇಲೆ ಶೌಚ ಕೂಡ ಮಾಡುತ್ತಾರೆ. ಅದರ ಕೆಳ ಭಾಗದ ಅಸ್ಸಿ ಘಾಟ್ ನಲ್ಲಿ ಜನ ಪೂಜೆ ಮಾಡುತ್ತಾರೆ, ಅಲ್ಲೆ ಸ್ನಾನ ಮಾಡುತ್ತಾರೆ ಜೊತೆಗೆ ಆಚಮನ ಮಾಡುತ್ತಾರೆ. ಕೆಲವು ಜನರು ಇದನ್ನು ಕುಡಿಯಲು ಉಪಯೋಗಿಸುತ್ತಾರೆ. ಮೋದಿ ಬಂದ ಮೇಲಿನ ನಮಾಮಿ ಗಂಗೆಯ ಪಾಡು ಇದು.
‘ಸ್ವಚ್ಛ ಗಂಗಾ ರಿಸರ್ಚ್ ಲ್ಯಾಬೋರೇಟರಿ’ ಮತ್ತು ಸಂಕಟ್ ಮೋಚನ್ ಫೌಂಡೇಷನ್ ನಲ್ಲಿ ಕಾರ್ಯ ನಿರ್ವಹಿಸುವ ಐಐಟಿ ಪ್ರೊಫೆಸರ್ ಹೇಳುವ ಪ್ರಕಾರ, ಗಂಗಾ ನದಿ ನೀರನ್ನು ಲ್ಯಾಬೋರೇಟರಿಯಲ್ಲಿ ಪರೀಕ್ಷಿಸಲಾಗುತ್ತದೆ. ವಾರಣಾಸಿಯ ಗಂಗೆ ತಟದಲ್ಲಿ ವಿದ್ಯುತ್ ದೀಪಗಳನ್ನು ಹಾಕಿದ್ದು ಘಾಟ್ ಗಳನ್ನು ಸ್ವಲ್ಪ ಮಟ್ಟಿಗೆ ಸ್ವಚ್ಛ ಮಾಡಿದ್ದು ಎಲ್ಲ ಉತ್ತಮ. ಆದರೆ ಗಂಗಾ ನದಿ ನೀರು ದಿನದಿಂದ ದಿನಕ್ಕೆ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಸಾಮಾನ್ಯವಾಗಿ ರಾಜ್ ಘಾಟ್ ನಿಂದ ಅಸ್ಸಿ ಘಾಟ್ ವರೆಗೆ 33 ಸ್ಥಳಗಳಲ್ಲಿ ಚರಂಡಿ ನೀರನ್ನು ಗಂಗಾ ನದಿಗೆ ಬಿಡಲಾಗುತ್ತಿದೆ. ಈ ನೀರನ್ನು ಅನೇಕ ಜನರು ಕುಡಿಯಲು ಬಳಸುತ್ತಾರೆ. ಕುಡಿಯಲು ಬಳಸುವ ನೀರಿನ ಗುಣಮಟ್ಟ 0 ಪೀಕಲ್ (ಫೀಕಲ್ ಕ್ವಾಲಿಫಾರ್ಮ್ ಕಂಟೆಂಟ್) ಇರಬೇಕು. ಆದರೆ ಇದು 100 ಎಂ. ಎಲ್ ಗೆ 90,000 ರಷ್ಟಿದೆ. ಆರ್ ಪಿ ಘಾಟ್ ನಲ್ಲಿ 35,000 ದಿಂದ 40,000 ಇದೆ. ವರುಣಾ ಸಂಗಮದಲ್ಲಿ ಇದರ ಪ್ರಮಾಣ ನೋಡಿದರೆ 62 ಮಿಲಿಯನ್ ಇದೆ! ಗಂಗಾ ನದಿಯ ನೀರಿನ ಗುಣಮಟ್ಟ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನವಾಗಿದ್ದು, ಸರ್ಕಾರ ನೀಡುವ ಗಂಗೆಯ ನೀರಿನ ಗುಣಮಟ್ಟ ಡೇಟಾ ದಲ್ಲಿ ಯಾವ ಸ್ಥಳದ ನೀರನ್ನು ಪರೀಕ್ಷೆಗೆ ಬಳಸುತ್ತೇವೆ ಎಂದು ಹೇಳುವುದಿಲ್ಲ. ಸರ್ಕಾರ ಎಲ್ಲಿ ಯಾವ ಪ್ರದೇಶದ ನೀರನ್ನು ಪರೀಕ್ಷೆಗೆ ಬಳಸಲಾಗಿದೆ ಎಂಬುದು ನಾವು ತಿಳಿಯುವುದು ಅಗತ್ಯ. ಕುಡಿಯುವ ನೀರಿನ ಎಫ್.ಸಿ.ಸಿ 500 ರಿಂದ 100 ಕ್ಕಿಂತ ಕಡಿಮೆ ಇರಬೇಕು. ಆದರೆ ಇದು ಹಲವು ಜಾಗದಲ್ಲಿ 62 ಮಿಲಿಯನ್ ದಾಟಿದೆ ಎಂದರೆ ಯಾವ ಪ್ರಮಾಣದ ಮಲಿನತೆ ಇರಬಹುದು ಯೋಚಿಸಬಹುದು.
__________________
600 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ತುಲಸಿ ಘಾಟ್ ಕಾಶಿ ವಿಶ್ವನಾಥ್ ಕಾರಿಡಾರ್
ಕಾಶಿ ವಿಶ್ವನಾಥ್ ಕಾರಿಡಾರ್ ನಿರ್ಮಾಣಕ್ಕೆ ಸರ್ಕಾರ 600 ಕೋಟಿ ವೆಚ್ಚ ಮಾಡುತ್ತಿದ್ದು ಇದು ದೊಡ್ಡ ಮಟ್ಟದ ಯೋಜನೆಯಾಗಿದೆ. ಈ ಯೋಜನೆಗಾಗಿ ಇಲ್ಲಿನ ಅನೇಕ ಪುರಾತನ ದೇವಾಲಯಗಳು, ಐತಿಹಾಸಿಕ ಸ್ಥಳ, ಸಂಸ್ಕೃತ ಶಾಲೆಗಳನ್ನು ಕೆಡವಲಾಗಿದೆ. ನೀಲಕಂಠೇಶ್ವರ ದೇವಾಲಯ ಮತ್ತು ಚಂದ್ರಶೇಖರ್ ಆಜಾದ್ ಬಾಲ್ಯದಲ್ಲಿ ವಾಸಿಸುತ್ತಿದ್ದ ಮನೆ ಇದರಲ್ಲಿ ಮುಖ್ಯವಾದವು. “ಕಾರಿಡಾರ್ ನಿರ್ಮಾಣ ಮಾಡುವವರು ಗೂಂಡಾಗಳನ್ನು ಕಳಿಸಿ ಮನೆಯನ್ನು ಅಂಗಡಿಗಳನ್ನು ಕಳೆದುಕೊಂಡವರಿಂದ ಒತ್ತಾಯಪೂರ್ವಕವಾಗಿ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ. ಪರಿಹಾರವು ಪತ್ರಗಳಲ್ಲಿ ಇದೆಯೇ ಹೊರತು ನಮ್ಮನ್ನು ತಲುಪಿಲ್ಲ. ವಿಕಾಸದ ಹೆಸರಲ್ಲಿ ವಿನಾಶ ಮಾಡಲಾಗುತ್ತಿದೆ. ವಿಕಾಸ ಒಳ್ಳೆಯದು ಆದರೆ ವಿಕಾಸದ ಪರಿಭಾಷೆಯನ್ನು ಇಲ್ಲಿ ಬದಲಿಸಲಾಗಿದೆ. ಸಂವಿಧಾನದ ಪಾಲನೆ ಆಗುತ್ತಿಲ್ಲ. ಜಾಗ ಕಳೆದುಕೊಂಎವರಿಗೆ ಸರ್ಕಾರ ಜಾಗ ನೀಡಿಲ್ಲ. ಎಲ್ಲರೂ ಈ ವೀಡಿಯೋ ನೋಡುತ್ತಿರುವುದರಿಂದ ಇದನ್ನೆಲ್ಲಾ ಯಾರು ಮಾಡುತ್ತಿದ್ದಾರೆ ಎಂದು ನನಗೆ ಹೇಳಲಾಗುವುದಿಲ್ಲ” ಎಂದು ಸ್ಥಳೀಯರಾದ ಭಾನು ಮಿಶ್ರಾ ಹೇಳುತ್ತಾರೆ.
____________________
ಮೋದಿ ದತ್ತು ಪಡೆದ ಆದರ್ಶಗ್ರಾಮ
ಇಲ್ಲಿ ಯಾವ ಯೋಜನೆಯೂ ಸಂಪೂರ್ಣವಾಗಿಲ್ಲ. ವಿಕಾಸ ಅರ್ಧ ಪ್ರಮಾಣದಲ್ಲಿ ನಿಂತು ಹೋಗಿದೆ. ರಸ್ತೆಗಳು ನಿರ್ಮಾಣವಾಗಿಲ್ಲ. ನಿರ್ಮಾಣವಾಗಿದ್ದ ರಸ್ತೆಗಳು ಕೂಡ ಸ್ವಲ್ಪ ದಿನಕ್ಕೆ ಗುಂಡಿ ಬಿದ್ದಿವೆ, ಕಿತ್ತು ಹೋಗಿವೆ. ಇಲ್ಲಿನ ದಲಿತರೊಬ್ಬರು ಹೇಳುವಂತೆ, ದಲಿತರ ಓಣಿ ಆರಂಭವಾಗುವಲ್ಲಿಯ ತನಕ ರಸ್ತೆಯಿದ್ದು, ದಲಿತರ ಕೇರಿಯಲ್ಲಿ ರಸ್ತೆ ನಿರ್ಮಾಣ ಮಾಡಲಾಗಿಲ್ಲ. ಚರಂಡಿಗಳ ಸೌಲಭ್ಯವಿಲ್ಲದೆ ಚರಂಡಿ ನೀರು ಎಲ್ಲಾ ಕಡೆ ಹರಿಯುತ್ತದೆ.
ಬ್ಯಾಂಕುಗಳನ್ನು ನಿರ್ಮಾಣ ಮಾಡಲಾಗಿದೆಯಾದರೂ ಶಾಲೆಗಳು ಇಲ್ಲ. ಹೊಸ ಶಾಲಾ ಕಟ್ಟಡ ನಿರ್ಮಾಣ ಮಾಡಿ ಅರ್ಧಕ್ಕೆ ಕೈ ಬಿಡಲಾಗಿದೆ. ಮಕ್ಕಳು 5 ರಿಂದ 6 ಕಿ.ಮೀ ನಡೆದು ಶಾಲೆಗೆ ಹೋಗಬೇಕು. ಎಂದು ಯುವಕರು ಹೇಳಿದ್ದಾರೆ. ಈಗ ಶಾಲೆಯ ಸ್ಥಳದಲ್ಲಿ ಕಾರ್ಖಾನೆಯನ್ನು ನಡೆಸಲಾಗುತ್ತಿದೆ.
“ಮೋದೀಜಿ ಈ ಗ್ರಾಮವನ್ನು ದತ್ತು ಪಡೆದಾಗ ಖುಶಿಯಾಗಿತ್ತು. ಆ ಖುಶಿ ಈಗ ಉಳಿದಿಲ್ಲ. ಏಕೆಂದರೆ ಚರಂಡಿ ನಿರ್ಮಾಣ ಆಗಿಲ್ಲ. ಹೊಸ ಶೌಚಾಲಯ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಹಳೆಯದನ್ನು ಒಡೆಲಾಗಿದೆ. ಹೊಸ ಶೌಚಾಲಯ ನಿರ್ಮಾಣವಾಗಲೇ ಇಲ್ಲ” ಎಂಬುದು ಮಹಿಳೆಯರು ಬೇಸರದಿಂದ ಹೇಳುವ ಮಾತು.
“ಇಲ್ಲಿ ಬೀದಿ ದೀಪಗಳನ್ನು ಹಾಕಲಾಗಿದೆ ಆದರೆ ಯಾವೂ ಬೆಳಗುವುದಿಲ್ಲ. ಸೋಲಾರ್ ಪ್ಯಾನಲ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಮದಲ್ಲಿ ಇರುವ ಅಂಬೇಡ್ಕರ್ ಪ್ರತಿಮೆಯ ಬಳಿ ಒಂದು ಸೋಲಾರ್ ಪ್ಯಾನಲ್ ಹಾಕಿದ್ದು ಈಗ ಅದನ್ನು ಹಾಕಿದವರು ಬ್ಯಾಟರಿಯನ್ನು ತೆಗೆದುಕೊಂಡು ಹೋಗಿ 6 ತಿಂಗಳಾದರೂ ವಾಪಸ್ಸು ತಂದು ಹಾಕಿಲ್ಲ” ಎಂದು ಇನ್ನೊಬ್ಬ ಗ್ರಾಮಸ್ಥರು ವಾಸ್ತವ ಬಿಚ್ಚಿಟ್ಟಿದ್ದಾರೆ.
ಒಟ್ಟಾರೆ ವಾರಣಾಸಿ ಸ್ವಚ್ಛತೆ ನೋಡಿದಾಗ ಘಾಟ್ ಅರೆಬರೆ ಸ್ವಚ್ಛವಾಗಿದೆ. ಆದರೆ ಗಂಗೆಯ ನೀರಿನ ಗುಣಮಟ್ಟ ಇಳಿಕೆಯಾಗುತ್ತಲೇ ಇದೆ. ಚರಂಡಿ ನೀರು ಗಂಗೆಯನ್ನು ಸೇರುತ್ತಲೆ ಇದೆ. ಅಲಂಕಾರಿಕ ಬೀದಿ ದೀಪ ಹಾಕಲಾಗಿದೆ ಆದರೆ ಹಳ್ಳಿ ಬೀದಿದೀಪ ಬೆಳಗುತ್ತಿಲ್ಲ. ಇದೆಲ್ಲಾ ನೋಡಿದಾಗ ಇದು ಅಸಲಿ ವಿಕಾಸವೆ ಅಥವಾ ಕೇವಲ ಕಣ್ಕಟ್ಟಿನ ವಿಕಾಸವೇ ಎಂಬ ಪ್ರಶ್ನೆ ಮೂಡುತ್ತದೆ. ನಮಾಮಿ ಗಂಗೆ, ಸ್ವಚ್ಛ ಭಾರತ, ಬೇಟಿ ಪಡಾವೋ ಭೇಟಿ ಬಚಾವೋ ಈ ಎಲ್ಲಾ ಯೋಜನೆಗಳಲ್ಲಿ ಮಾದರಿಯಾಗಬೇಕಿದ್ದ ಪ್ರಧಾನಿ ಮೋದಿಯ ಲೋಕಸಭಾ ಕ್ಷೇತ್ರ ವಾರಣಾಸಿಯ ಅಸಲಿ ಚಿತ್ರಣ ಇದು.