ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ ಚಕ್ರವರ್ತಿ ಸೂಲಿಬೆಲೆ, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಈ ವೇಳೆ ಸ್ಥಳಕ್ಕೆ ಆಗಮಿಸಿದ ಚುನಾವಣಾ ವೀಕ್ಷಕರು ದೇವಸ್ಥಾನದ ಪ್ರಾಂಗಣದಲ್ಲಿ ಮತಯಾಚನೆ ಮಾಡಲು ಅವಕಾಶವಿಲ್ಲ. ಕೇವಲ ಕೈ ಮುಗಿದು ನಡೆಯಬಹುದು ಎಂದು ಕಾರ್ಯಕ್ರಮ ಆಯೋಜಕರಿಗೆ ಮನವರಿಗೆ ಮಾಡಿದರು. ಕೊನೆಗೆ ಭಾಷಣ ಮಾಡಲೆಂದೇ ಬಂದಿದ್ದ ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡದೇ ಹಿಂತಿರುಗಬೇಕಾಯಿತು.
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಮತಯಾಚನೆ ಮಾಡಲು ಇಲ್ಲಿನ ಕತ್ರಿಗುಪ್ಪೆಯ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಆಗಮಿಸಿದ್ದ ಮೋದಿ ಪರ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ನೀತಿಸಂಹಿತೆ ಉಲ್ಲಂಘಿಸಿ ದೇವಸ್ಥಾನದ ಪ್ರಾಂಗಣದಲ್ಲಿ ಚುನಾವಣಾ ಭಾಷಣ ನಡಸಲು ಮುಂದಾಗಿದ್ದನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ ಘಟನೆ ಶನಿವಾರ ನಡೆಯಿತು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಚುನಾವಣಾ ವೀಕ್ಷಕರು ದೇವಸ್ಥಾನದ ಪ್ರಾಂಗಣದಲ್ಲಿ ಮತಯಾಚನೆ ಮಾಡಲು ಅವಕಾಶವಿಲ್ಲ. ಕೇವಲ ಕೈ ಮುಗಿದು ನಡೆಯಬಹುದು ಎಂದು ಕಾರ್ಯಕ್ರಮ ಆಯೋಜಕರಿಗೆ ಮನವರಿಕೆ ಮಾಡಿದರು. ಕೊನೆಗೆ ಭಾಷಣ ಮಾಡಲೆಂದೇ ಬಂದಿದ್ದ ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡದೇ ಹಿಂತಿರುಗಬೇಕಾಯಿತು.
ಇದಕ್ಕೂ ಮುನ್ನ ದೇವಸ್ಥಾನದ ಪ್ರಾಂಗಣದಲ್ಲಿ ಸೂಲಿಬೆಲೆ ರಾಜಕೀಯ ಭಾಷಣ ಮಾಡುವ ಕಾರ್ಯಕ್ರಮದ ಮಾಹಿತಿ ಪಡೆದ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ರಾಹುಲ್ ಗಾಂಧಿ ಪರ ಘೋಷಣೆಗಳನ್ನು ಕೂಗಿ ಸೂಲಿಬೆಲೆ ಭಾಷಣಕ್ಕೆ ಅಡ್ಡಿಪಡಿಸಿದರು. ನಂತರ “ಬೇಕೇ ಬೇಕು ನ್ಯಾಯ ಬೇಕು” ಎಂದು ಘೋಷಣೆ ಕೂಗಿದರು. ಈ ವೇಳೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿ ಪೊಲೀಸಲು ಮಧ್ಯಪ್ರವೇಶ ಮಾಡಿ ಉಭಯ ಪಕ್ಷಗಳ ಕಾರ್ಯಕರ್ತರನ್ನು ಸಮಾಧಾನಪಡಿಸಬೇಕಾಯಿತು.
ಮಾಜಿ ಕೇಂದ್ರ ಸಚಿವ ದಿ.ಅನಂತಕುಮಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಬಸವನಗುಡಿ ಬಿಜೆಪಿ ಶಾಸಕ ರವಿಸುಬ್ರಮಣ್ಯರ ಅಣ್ಣನ ಮಗ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲಾಗಿದ್ದರೆ ಕಾಂಗ್ರೆಸ್ ಪಕ್ಷದಿಂದ ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಬಿ ಕೆ ಹರಿಪ್ರಸಾದ್ ಅಭ್ಯರ್ಥಿಯಾಗಿದ್ದಾರೆ.