ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ರಾಜಕೀಯ ವಿದ್ಯಮಾನಗಳಿಗೆ ಪ್ರತಿಕ್ರಿಯೆ ತೋರತೊಡಗಿದ್ದ ಬಹುಭಾಷಾ ನಟ, ಫಿಲಾಂತ್ರಪರ್ ಪ್ರಕಾಶ್ ರಾಜ್ ಕೆಲವು ತಿಂಗಳಿನಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪಿ ಸಿ ಮೋಹನ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಇಬ್ಬರನ್ನೂ ಪ್ರಕಾಶ್ ರಾಜ್ ಎದುರಿಸಬೇಕಾಗಿದೆ. ಪ್ರಕಾಶ್ ರಾಜ್ ರೊಂದಿಗೆ ಟ್ರೂಥ್ ಇಂಡಿಯಾ ನಡೆಸಿರುವ ಸಂದರ್ಶನದ ಎರಡನೇ ಭಾಗ ಇದು
ಪ್ರಶ್ನೆ: ಚುನಾವಣೆ ಸ್ಪರ್ಧಿಸಲು ಬೆಂಗಳೂರು ಸೆಂಟ್ರಲ್ ಕ್ಷೇತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ?
ಪ್ರಕಾಶ್ ರಾಜ್: ಬೆಂಗಳೂರು ಸೆಂಟ್ರಲ್ ನನ್ನ ಹುಟ್ಟೂರು. ನಾನು ಹುಟ್ಟಿದ್ದ ಮಾರ್ಥಾಸ್ ಆಸ್ಪತ್ರೆಯಲ್ಲಿ, ನನ್ನ ಬಾಲ್ಯ ಶಾಂತಿನಗರ ಮತ್ತು ಚಾಮರಾಜಪೇಟೆಯಲ್ಲಿ, ನನ್ನ ಪ್ರಾಥಮಿಕ ಶಾಲೆ ಸೇಂಟ್ ಮೈಕೆಲ್ ಶಾಂತಿನಗರದಲ್ಲಿ, ನನ್ನ ಶಾಲೆ ಸೇಂಟ್ ಜೋಸೆಫ್ ಹೈ ಸ್ಕೂಲ್ ಇದೇ ಕ್ಷೇತ್ರದಲ್ಲಿ, ನನ್ನ ಕಾಲೇಜು ಸೇಂಟ್ ಜೋಸೆಫ್ ಆಫ್ ಕಾಮರ್ಸ್ ಇಲ್ಲೆ, ನನ್ನ ದಶಕದ ರಂಗಭೂಮಿ ರವೀಂದ್ರ ಕಲಾಕ್ಷೇತ್ರ ಇಲ್ಲೇ ಮತ್ತು ಚಲನಚಿತ್ರರಂಗದ ಒಂದು ವರ್ಷದ ಪ್ರಯಾಣ ಗಾಂಧಿನಗರ ಇದೇ ಕ್ಷೇತ್ರದಲ್ಲೇ.
ಆದ್ದರಿಂದ ಇದು ನನ್ನ ಕ್ಷೇತ್ರ, ನನ್ನ ಸುತ್ತಮುತ್ತಲಿನವರು ಇದ್ದಾರೆ, ನನಗೆ ಗೊತ್ತಿರುವವರು ಇದ್ದಾರೆ, ನನ್ನ ಗೆಳೆಯರು ಇದ್ದಾರೆ, ನನ್ನ ರಂಭೂಮಿ ಇದೆ. ನನ್ನ ಇಡೀ ಬೇರು ಬೆಂಗಳೂರಿನಲ್ಲಿದೆ. ನನ್ನ ತಂದೆಯವರು ಮಂಗಳೂರಿನವರಾದರು ಹಬ್ಬಕ್ಕೆ ಹೋಗುತಿದ್ದೆವು, ನನ್ನ ತಾಯಿ ಗದಗದ ಬೆಟಗೇರಿ. ಅವರಿಬ್ಬರೂ ಬೆಂಗಳೂರಿಗೆ ವಲಸೆ ಬಂದವರು. ನನ್ನ ಊರು ಇದೇ ತಾನೆ, ಎಲ್ಲೋ ಒಂದು ಕಡೆ ಗೊತ್ತಿರುವಂಥ ಹಾಗೂ ಇಡೀ ಭಾರತದ ದೇಶದಲ್ಲಿರುವಂಥ ಮಿನಿ ಭಾರತವಾಗಿದೆ ಇದು.
ಎಲ್ಲಾ ಭಾಷೆಯ ಜನ ಇದ್ದಾರೆ, ಬೇರೆ ಬೇರೆ ಭಾಷೆಗಳಲ್ಲಿ ನಾನು ತೊಡಗಿಸಿಕೊಂಡಿದ್ದೇನೆ, ಆ ನಿಟ್ಟಿನಲ್ಲಿ ಇದು ನನಗೆ ಬಹಳ ಸೂಕ್ತವಾದ ಹಾಗೂ ನನಗೆ ಸರಿಯಾದ ಸ್ಥಳ ಅನ್ನಿಸ್ತು. ಎರಡನೇದು ನಾವು ಎಷ್ಟೇ ದುರ ಪ್ರಯಾಣ ಮಾಡಿದರೂ ಮನೆಗೇ ವಾಪಾಸು ಬರುವುದು ಇದೆಯಲ್ಲ, ಕನ್ನಡಕ್ಕೆ, ಭೂಮಿಗೆ, ನನ್ನ ಸ್ಥಳಕ್ಕೆ ಹಾಗೆ.
ಪ್ರಶ್ನೆ: ನೀವೇಕೆ ಯಾವುದೇ ರಾಜಕೀಯ ಪಕ್ಷದಿಂದ ಬೇರೆ ರಾಜಕೀಯ ಪಕ್ಷಗಳಿಂದ ನಿಮಗೆ ಟಿಕೆಟ್ ಸಿಗುತ್ತಿತ್ತು. ಆದರೂ ಏಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು?
ಯಾಕಂದ್ರೆ ನಂಬಿಕೆ ಇಲ್ಲ. ಅಂದರೆ ಜನರಿಗೆ ಪರ್ಯಾಯ ಇರೋದು ಇವರೆಡೇನಾ, ಇಬ್ರೂನು ಜಾತಿ ರಾಜಕೀಯವನ್ನೇ ಮಾಡುತ್ತಿರುವುದು. ಜನ ಇದನ್ನು ವಿವೇಚನೆಯಿಂದ ಯೋಚನೆ ಮಾಡಬೇಕಿದೆ. ನಮ್ಮ ನಾಯಕರು ಯಾರು, ನಮ್ಮನ್ನು ಪ್ರತಿನಿಧಿಸುವವರು ಯಾರು?, ರಿಪೋರ್ಟ್ ಕಾರ್ಡ್ ಕೊಡ್ತಾರಾ, 5 ವರ್ಷಕ್ಕೆ ಒಂದು ಸಲಾನೇ ಏಕೆ ಬರುತ್ತಾರೆ. ಆರು ತಿಂಗಳಿಗೆ ಒಂದು ಬಾರಿ ಯಾಕೆ ರಿಪೋರ್ಟ್ ಕಾರ್ಡ್ ಕೊಡ್ತಿಲ್ಲ.
ಪ್ರಶ್ನೆ: ನೀವು ಇತರ ಸ್ಪರ್ಧಿಗಳಿಗಿಂತ ಹೇಗೆ ಭಿನ್ನವಾಗಿರುತ್ತೀರಿ?
ಪ್ರಕಾಶ್ ರಾಜ್: ನಾನು ಜನರಿಗೆ ಹೇಳುತ್ತೇನೆ, ಈ ಕ್ಷೇತ್ರದ ಸಂಸದನಾಗಿ ಆರು ತಿಂಗಳಿಗೆ ಒಂದು ಸಲ, ಏನೇನು ಕೆಲಸ ಮಾಡುತ್ತೇನೆ ಎಂದು ನಾನು ರಿಪೋರ್ಟ್ ಕಾರ್ಡ್ ಕೊಡ್ತೀನಿ ನಿಮಗೆ. ಸಂಸದರ ನಿಧಿ ಅಂತ ಒಬ್ಬ ಸಂಸದರಿಗೆ 25 ಕೋಟಿ ಬರತ್ತೆ. ತಮಗೆ ಇಷ್ಟ ಬಂದಂತೆ ಖರ್ಚು ಮಾಡುತ್ತಾರೆ. ಅದನ್ನು ಹಾಗೆ ಮಾಡಬಾರದು. ಜನರ ಜತೆ ಇದ್ದು ಸಿವಿಕ್ ಸೊಸೈಟಿಯನ್ನು ವಿಶ್ವಾಸಕ್ಕೆ ತಗೆದುಕೊಂಡು, ಯಾವುದಕ್ಕೆ, ಎಷ್ಟು ಖರ್ಚು ಮಾಡ್ತಾ ಇದ್ದೇವೆ, ಯಾವುದಕ್ಕೆ ಮಾಡಬೇಕು ಎಂದು ಚರ್ಚೆ ನಡೆಸಬೇಕು.
ಇನ್ನು ರಾಜ್ಯಕ್ಕೆ ಸಂಬಂಧಪಟ್ಟ, ಕಾವೇರಿ ವಿಷಯದಂತಹ, ದೇಶಕ್ಕೆ ಸಂಬಂಧಿಸಿದ ಇನ್ನೆಷ್ಟೋ ವಿಷಗಳಿವೆ. ಅವುಗಳನ್ನು ಸಂಸದನಾದವನು ಎಷ್ಟರಮಟ್ಟಿಗೆ ಪಾರ್ಲಿಮೆಂಟ್ ಗೆ ತೆಗೆದುಕೊಂಡು ಹೋಗ್ತಾ ಇದ್ದೇನೆ, ಎಲ್ಲಿ ತನಕ ತೆಗೆದುಕೊಂಡು ಹೋದೆ ಎಲ್ಲವೂ ಮುಖ್ಯವಾಗುತ್ತವೆ. ಹಲವಾರು ಅನುದಾನಗಳು ಬರುತ್ತವೆ. ಕೌಶಲ ಅಭಿವೃದ್ಧಿ ನಿಧಿ ಬರರುತ್ತದೆ, ಅಲ್ಪಸಂಖ್ಯಾರಿಗಾಗಿ ಅನುದಾನ ಬರುತ್ತದೆ , ಅದನ್ನೆಲ್ಲಾ ಜನರಿಗೆ ಹೇಗೆ ಉಪಯೋಗಿಸುತ್ತಾ ಇದ್ದೀವಿ, ಶಾಲೆಗಳಿಗಾಗಿ ನಾವು ಏನು ಮಾಡುತ್ತಾ ಇದ್ದೇವೆ, ಕೇಂದ್ರ ಸರ್ಕಾರದಿಂದ ಬಂದ ಮೊತ್ತ ಏನು ಆಗುತ್ತಿದೆ ಇದನ್ನೆಲ್ಲಾ ಆರು ತಿಂಗಳಿಗೆ ಒಮ್ಮೆ ರಿಪೋರ್ಟ್ ಕಾರ್ಡ್ ಕೋಡೋಕೆ ಏನು ಇವರಿಗೆ? ನಾನು ಸಂಸದನಾದರೆ ಇಂತಹ ವರದಿ ನೀಡುತ್ತೇನೆ.
ಪ್ರಶ್ನೆ: ಪುಲ್ವಾಮಾದಂತಹ ಘಟನೆಗಳನ್ನು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಕೊಂಡೊಯ್ಯುತ್ತಿದೆ. ಇದು ಮತದಾರರ ಮೇಲೆ ಪರಿಣಾಮ ಬೀರುತ್ತಿದೆಯಲ್ಲವೇ?
ಪ್ರಕಾಶ್ ರಾಜ್: ಐದು ವರ್ಷ ಸುಮ್ಮನಿದ್ದು, ನಂತರ ಬಂದು ಪುಲ್ವಾಮ ದಾಳಿಗೆ ಪ್ರತಿದಾಳಿ ನಡೆಸಿದ್ದೇವೆ ಮತ್ತೆ ನಮ್ಮನ್ನು ಆರಿಸಿ ಎಂದರೆ, ಇಲ್ಲಿ ತನಕ ಕೊಟ್ಟಿರೊ ಆಶ್ವಾಸನೆಗಳು ಏನಾಗಬೇಕು. ಜನ ಇದನ್ನೆಲ್ಲಾ ಯೋಚನೆ ಮಾಡಬೇಕು.
ಈ ಚುನಾವಣೆ, ಅವರು ಸರಿ ಇಲ್ಲ, ವರು ಸರಿ ಇಲ್ಲ ಎನ್ನುವುದಕ್ಕಿಂತ ನಾವು ಸರಿ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮೂಲಭೂತವಾಗಿ ತಪ್ಪು ಮಾಡ್ತಾ ಇರೋದು ನಾವು, ಮತದಾನ ಎಂದರೆ ರಜಾ ದಿನವೇ, ಒಂದು ಮತ ಎಂದರೆ ಅದು ನಿಮ್ಮ ಭಾಷೆ, ನಿಮ್ಮ ನಿಲುವು, ಬದ್ಧತೆ, ನಿಮ್ಮ ತೀರ್ಪು ಅದು. ನೀವು ಅದನ್ನು ಮಾಡದೇ, ಬೆಂಗಳೂನಿನಂಥ ಸ್ಲಂ ಗಳಲ್ಲಿ ಬಡವರನ್ನು ಬಡವರಾಗಿಯೇ ಇಟ್ಟು, ಒಂದು ಸಾವಿರ ಕೊಟ್ಟು ಮತ ಹಾಕುತ್ತಿದ್ದಾರೆ ಎಂದರೆ 5 ವರ್ಷಕ್ಕೆ ಎಷ್ಟು ಅದು. ವರ್ಷಕ್ಕೆ ಇನ್ನೂರು ರೂಪಾಯಿ, ತಿಂಗಳಿಗೆ ಏನಾಯಿತು.
ಇನ್ನೊಂದು ವಿಷಯ ಎಂದರೆ, ನಾವು ಬಹಳ ಸುಲಭವಾಗಿ ಬಡವರಿಗೆ ದುಡ್ಡು ಕೊಟ್ಟು ಮತ ಹಾಕಿಸುತ್ತಿದ್ದಾರೆ ಎಂದು ಹೇಳುತ್ತಿದ್ದೇವೆ. ದುಡ್ಡು ತಗೋಳ್ತಾ ಇದ್ದರೆ ಶಾಂತಿನಗರದಂಥ ನಗರ, ಬೇರೆ ಏರಿಯಾಗಳಲ್ಲಿ ನೀವು ಅಲ್ಲಿ ಮತಹಾಕುತ್ತಿದ್ದರೆ ಕರೆಂಟ್ ಕಟ್ ಆಗತ್ತೆ, ನೀರು ನಿಲ್ಲತ್ತೆ. ಏನು ಮಾಡ್ತಾರೆ ಜನ? ಎದುರಿಸಿ ಎಂ ಎಲ್ಎಗಳ ಜತೆ ಮಾತಾಡಿದ್ರೆ ಕೇಸ್ ಗಳನ್ನ ಹಾಕ್ತಾರೆ, ಇವತ್ತು ಮಾದಕ ದ್ರವ್ಯಗಳು ಶಾತಿನಗರ ರಸ್ತೆಗಳಲ್ಲಿ ಓಡಾಡುತ್ತಿದೆ, ಇದನ್ನ ಪ್ರಶ್ನೆ ಮಾಡೋರು ಯಾರು?
ಅದಕ್ಕೆ ಬಡಜನರನ್ನ ದುಡ್ಡು ತೆಗೆದುಕೊಂಡು ಮತ ಹಾಕುತ್ತಾರೆ, ಹೆಂಡ ತೆಗೆದುಕೊಂಡು ಮತ ಹಾಕುತ್ತಾರೆ ಎಂದು ದೂರುವ ಬದಲು, ಓದಿದವರು, ವಿದ್ಯಾವಂತರು ಶೇಕಡಾ 60 ರಷ್ಟು ಇದ್ದೀವಲ್ಲ, ನಾವು ಏನು ಮಾಡುತ್ತಿದ್ದೇವೆ. ಅದೆಲ್ಲದಕ್ಕೂ ಕಾರಣ ನಾವೇ ಪರೋಕ್ಷವಾಗಿ ಅನ್ನೋದು ನಮಗೆ ಅರ್ಥ ಆಗೋದು ಬೇಡವೇ. ಒಬ್ಬ ಪ್ರಕಾಶ್ ರಾಜ್, ಒಬ್ಬ ನಾಯಕನಿಂದ ಆಗುವಂಥದಲ್ಲ ಅದು, ಇಡೀ ಪ್ರಜೆಗಳು ಸೇರಿ ಕೆಲಸ ಮಾಡಬೇಕಿದೆ ಅದು. ಇದು ಪ್ರಜಾಪ್ರಭುತ್ವ. ಪ್ರಜೆಗಳ ನಿರ್ಧಾರ. ಪ್ರಜೆಗಳು ಸೇರಿ ಬದಲಾವಣೆ ತರಬೇಕಿದೆಯೇ ಹೊರತು, ಯಾರೋ ಒಬ್ಬರು ಬದಲಾವಣೆ ಮಾಡಿ ನಾವು ನೋಡುತ್ತಾ ಕೂರುತ್ತೇವೆ ಎಂದರೆ. ನೀವು ಪ್ರಶ್ನೆ ಮಾಡ್ತಾ ಇರಿ ನಾವು ನೋಡ್ತಾ ಇರ್ತೇವೆ ಎಂದರೆ. ನೀವು ಅದನ್ನು ಪ್ರಶ್ನೆ ಮಾಡಿ, ಇದನ್ನು ಪ್ರಶ್ನೆ ಮಾಡಿ ಎಂದರೆ. ನೀವು ಒಂದಷ್ಟು ಪ್ರಶ್ನೆ ಮಾಡಬೇಕು ಅಲ್ಲವೇ. ಜವಾಬ್ದಾರಿಯನ್ನು ಎಲ್ಲಿಯವರೆಗೆ ಭಾರತದ ದೇಶದ ಪ್ರಜೆ ತನ್ನ ಮೇಲೆ ತೆಗೆದುಕೊಳ್ಳುವುದಿಲ್ಲವೋ, ಒಂದಿದಂಥ ವಿದ್ಯಾವಂತರು, ಸುಸಂಸ್ಕೃತರು ತೆಗೆದುಕೊಳ್ಳುವುದಿಲ್ಲವೋ ಹೀಗೆ ಆಗತ್ತಾ ಹೋಗತ್ತೆ ದೇಶ.
ಪ್ರಶ್ನೆ: ನಿಮ್ಮ ಸ್ಪರ್ಧೆಯಿಂದ ಬಿಜೆಪಿ ಪಕ್ಷಕ್ಕೆ ಲಾಭವಾಗುವುದಿಲ್ಲವೇ?
ಕಾಂಗ್ರೆಸ್ ಪಕ್ಷ ಕಳೆದ ಒಂದು ದಶಕದಿಂದ ಈ ಕ್ಷೇತ್ರ ಗೆದ್ದಿಲ್ಲವಲ್ಲ, ನೀವು ಗೆಲ್ಲುವ ಅಭ್ಯರ್ಥಿ ಎದುರು ನಾವು ಹೋಗುತ್ತಾ ಇಲ್ಲ. ನೋಡಿ ನಾನು ಓಪನ್ ಆಗಿ ಇರ್ತೀನಿ, ಎಲ್ಲರಿಗೂ ಓಪನ್ ಆಗಿ ಇದ್ದೀನಿ ನಾನು. ಸಹಾಯ ಮಾಡೋದಾದರೆ, ಸಪೋರ್ಟ್ ಮಾಡೋದಾದರೆ ಬನ್ನಿ, ಇದು ಹೋರಾಟ. ಮತ್ತು ಭಾರತ ದೇಶದಲ್ಲಿ ಒಬ್ಬ ಪ್ರಜೆ ಒಬ್ಬ ಪ್ರಜೆಯ ಪ್ರತಿನಿಧಿಯಾಗಿ ನಿಲ್ಲಲು ಸಾಧ್ಯ ಅನ್ನೋ ಒಂದು ಪರಿಸ್ಥಿತಿಯನ್ನು ಅನುವುಮಾಡಿಕೊಡಿ ಅಂತ ಕೇಳ್ಕೋತೀನಿ.