ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ನರೇಂದ್ರ ಮೋದಿ ಸರ್ಕಾರ, ತನ್ನ ‘ಸಾಧನೆಗಳಿಗೆ’ ಜಾಹೀರಾತು ನೀಡುವ ಸಲುವಾಗಿ ಖರ್ಚುಮಾಡಿರುವ ತೆರಿಗೆದಾರರ ಹಣ 4,800 ಕೋಟಿ ರೂಪಾಯಿಗಳು!
ಜಾಗತಿಕ ಮಾರುಕಟ್ಟೆಯಲ್ಲಿ ಮೂರು ವರ್ಷಗಳ ಕಾಲ ಸತತವಾಗಿ ತೈಲ ಬೆಲೆ ಕುಸಿದಿದ್ದರಿಂದ, ಐತಿಹಾಸಿಕ ಜನಾದೇಶ ಮತ್ತು ಆಶೀರ್ವಾದದ ಪಡೆದು ಅಧಿಕಾರಕ್ಕೆ ಬಂದಿದ್ದ ಮೋದಿಯವರಿಗೆ ವ್ಯಾಪಕ ಸುಧಾರಣೆಗಳನ್ನು ಜಾರಿಗೊಳಿಸಲು ಅವಕಾಶವಿತ್ತು. ಆದರೆ ಜನರ ಬದುಕಿನ ಸುಧಾರಣೆಯೊಂದನ್ನು ಬಿಟ್ಟು ಬೇರೆಲ್ಲಾ ಮಾಡಿತು ಮೋದಿ ಸರ್ಕಾರ.
ಮೋದಿ ಸರ್ಕಾರದ ‘ಯಶಸ್ಸು’ ಚರ್ಚಾಸ್ಪದವಾದ ವಿಚಾರವೇ ಆಗಿದ್ದರೂ, ಮೋದಿ ಸರ್ಕಾರ ಏನೆಂದು ಸ್ಪಷ್ಟವಾಗಿ ವ್ಯಾಖ್ಯಾನಿಸಲು ಸರ್ಕಾರ ಇಟ್ಟ ಹತ್ತು ಪ್ರಮುಖ ತಪ್ಪುಹೆಜ್ಜೆಗಳನ್ನು ಅಥವಾ ವೈಫಲ್ಯಗಳನ್ನು ಗಮನಿಸೋಣ.
ನೋಟ್ ಅಮಾನ್ಯೀಕರಣ
ದೇಶದ ಆರ್ಥಿಕತೆಯ ಮೇಲೆ ವ್ಯಾಪಕ ದುಷ್ಪರಿಣಾಮ ಬೀರಿರುವ ಮತ್ತು ಯಶಸ್ಸು ಕಾಣದ ಕಾರ್ಯಕ್ರಮಗಳ ಪಟ್ಟಿಯಲ್ಲಿ ನೋಟ್ ಅಮಾನ್ಯೀಕರಣ ಮೊದಲು ನಿಲ್ಲುತ್ತದೆ. ವಿದೇಶಗಳ ಬಿಸಿನೆಸ್ ಸ್ಕೂಲ್ಗಳಲ್ಲಿ ನೋಟ್ ಅಮಾನ್ಯೀಕರಣವನ್ನು ಈಗ ಎಚ್ಚರಿಕೆಯ ಪಾಠವನ್ನಾಗಿ ಹೇಳಿಕೊಡಲಾಗುತ್ತಿದೆ. ಉದ್ಯೋಗಗಳನ್ನು ನಾಶಗೊಳಿಸಿದ ನೋಟ್ ಅಮಾನ್ಯೀಕರಣ ತನ್ನ ಉದ್ದೇಶಿತ ಗುರಿಗಳಲ್ಲಿ (ಉಗ್ರರಿಗೆ ಹಣ ಪೂರೈಕೆಯ ನಿಗ್ರಹ, ನಕಲಿ ನೋಟ್ ಮತ್ತು ಕಪ್ಪುಹಣದ ನಿಯಂತ್ರಣ) ಯಾವುದೊಂದನ್ನೂ ಸಾಧಿಸಲಿಲ್ಲ ಎಂಬ ವಿಶೇಷ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾವಿನ್ನೂ ಇದರ ದುಷ್ಪರಿಣಾಮಗಳಿಂದ ಹೊರಬಂದಿಲ್ಲ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ಅರುಣ್ ಕುಮಾರ್ ಬಿಡಿಸಿ ಹೇಳುತ್ತಲೇ ಇದ್ದಾರೆ.
ರೈತರಿಗೆ ಎಸಗಿದ ದ್ರೋಹ
ಮೋದಿ ಸರ್ಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಿರುವುದು ಕಂಡುಬಂದಿದೆ. ರೈತರು ಬೆಳೆದ ಬೆಳೆಗಳ ಉತ್ಪಾದನಾ ವೆಚ್ಚಕ್ಕೆ ಶೇ. 50ರಷ್ಟಾದರೂ ಸೇರಿಸಿ ಕನಿಷ್ಟ ಬೆಂಬಲ ಬೆಲೆ ಒದಗಿಸುವ ವಿಚಾರದಲ್ಲಿ ಬಿಜೆಪಿ ತನ್ನ ಅಂತಿಮ ಬಜೆಟ್ನಲ್ಲಿ ಕೊಟ್ಟ ವಿವರಣೆ ಯಾರಿಗೂ ಸಮಾಧಾನ ನೀಡಲಿಲ್ಲ. ಇನ್ನೊಂದು ಕಡೆ, ಮೋದಿ ಸರ್ಕಾರ ಯಾವುದೇ ಮುಂದಾಲೋಚನೆಯಿಲ್ಲದೆ ಗೋಧಿ ಮತ್ತು ಬೇಳೆಯನ್ನು ಆಮದು ಮಾಡಿಕೊಂಡಿದ್ದು ದೇಶೀಯ ಉತ್ಪನ್ನಗಳ ಬೆಲೆ ಕುಸಿತಕ್ಕೆ ಕಾರಣವಾಯಿತು. ಇದರ ಜೊತೆಗೆ, ರೈತರ ಭೂಮಿಯನ್ನು ಒತ್ತಾಯಪೂರ್ವಕವಾಗಿ ಸ್ವಾಧೀನಪಡಿಸಿಕೊಳ್ಳಲು 2013ರ ಭೂ ಸ್ವಾಧೀನ ಕಾಯಿದೆಗೆ ತಿದ್ದುಪಡಿ ತರುವ ದುಸ್ಸಾಹಸಕ್ಕೆ ಕೈಹಾಕಿತು.
ಬಿಜೆಪಿ ಸರ್ಕಾರದ ಗಮನ ಸೆಳೆಯಲು ರೈತರು ಎಲ್ಲಾ ಬಗೆಗಳ ಹೋರಾಟಗಳನ್ನೂ ನಡೆಸಿದ್ದಾರೆ. ಈ ವರ್ಷ ಅವರು ಮೂರು ಬಾರಿ ಕಾಲ್ನಡಿಗೆಯ ಬೃಹತ್ ಹೋರಾಟಗಳನ್ನು ಸಂಘಟಿಸಿದ್ದಾರೆ. ಸರ್ಕಾರ ಕೆಲಸ ಮಾಡುವಂತೆ ಆಗ್ರಹಿಸಲು ಅನ್ನದಾತರು ಆತ್ಮಹತ್ಯೆಗೆ ಶರಣಾದ ತಮ್ಮ ಅಣ್ಣತಮ್ಮಂದಿರ ಮಾರಣಾಂತಿಕ ಅವಶೇಷಗಳನ್ನು ತಂದು ಪ್ರದರ್ಶಿಸಿದ್ದಾರೆ. ಜೀವ ಕಳೆದುಕೊಂಡ ರೈತರ ಮಕ್ಕಳು ಸಂಸತ್ತಿನಿಂದ ಕೇವಲ ಒಂದೇ ಕಿಲೋಮೀಟರ್ ದೂರದಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದ್ದಾರೆ. ದೇಶದ ನಾನಾ ಕಡೆಗಳಿಂದ ಬಂದ ಸುಮಾರು 40,000 ರೈತರು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕಗಳನ್ನು ತಿಳಿಸಿದ್ದಾರೆ. ಇಷ್ಟಾದರೂ ಬಿಜೆಪಿ ಸರ್ಕಾರದ ಒಬ್ಬನೇ ಒಬ್ಬ ಪ್ರತಿನಿಧಿಯೂ ಅವರನ್ನು ಮಾತನಾಡಿಸಲಿಲ್ಲ ಇಲ್ಲವೇ ಕನಿಷ್ಟ ಪಕ್ಷ ಅವರು ಬಂದಿರುವುದನ್ನೂ ಗಮನಿಸಲಿಲ್ಲ. (ಚುನಾವಣೆ ಘೋಷಣೆಯಾದ ಮೇಲೆ ದಿನಕ್ಕೆ 17 ರೂಪಾಯಿ ಕೊಡುವ ಯೋಜನೆಯಂತೂ ರೈತರನ್ನು ಅಪಮಾನಿಸಿತು. ಈ ಯೋಜನೆಯಲ್ಲಿ ಕರ್ನಾಟಕದ ಕೇವ 6 ರೈತರಿಗೆ ಎರಡೆರಡು ಸಾವಿರ ಹಣ ಸಿಕ್ಕಿದೆ ಎಂದು ಇತ್ತೀಚೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ).

ಪ್ರಶ್ನಾರ್ಹವಾದ ರಫೇಲ್ ವ್ಯವಹಾರದ ಮರುರಚನೆ
ಖರೀದಿಗೆ ಸಂಬಂಧಿಸಿದ ವ್ಯವಹಾರವೊಂದರಲ್ಲಿ ನಿಯಮಾವಳಿಗಳನ್ನು ಅನುಸರಿಸದೆ ಮೂರು ಪಟ್ಟು ಬೆಲೆ ತೆತ್ತು ಕೆಲವೇ ವಿಮಾನಗಳನ್ನು ಪಡೆಯಲು ಪ್ರಧಾನಮಂತ್ರಿ ಮತ್ತವರ ಬಳಗ ವ್ಯವಹಾರದ ಷರತ್ತುಗಳನ್ನು ಬದಲಿಸಿದೆ. ಈ ಬಗ್ಗೆ ಪ್ರಶ್ನೆ ಕೇಳಿದ ಕೂಡಲೇ ಸರ್ಕಾರವು ವಿಪಕ್ಷಗಳ ಮೇಲೆ ದಾಳಿಗೈಯಲು ಆರಂಭಿಸಿತಲ್ಲದೆ ಗೌಪ್ಯತೆಯ ನಿಯಮಗಳನ್ನು ಉಚ್ಚರಿಸಿತು. ಫ್ರಾನ್ಸ್ ದೇಶದ ಅಧ್ಯಕ್ಷರು ಭಾರತದ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸರ್ಕಾರದ ಹೇಳಿಕೆಗಳನ್ನು ನಿರಾಕರಿಸಿರುಸಿದರು. ಖಾಸಗಿ ವ್ಯಕ್ತಿಯನ್ನು ತನ್ನ ಆಫ್ಸೆಟ್ ಪಾಲುದಾರನನ್ನಾಗಿ ಆಯ್ಕೆ ಮಾಡಿಕೊಂಡಿರುವ ರಫೇಲ್ ವಿವಾದವು ಮತ್ತೊಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಪಾಲುದಾರ ವ್ಯಕ್ತಿ (ಅನಿಲ್ ಅಂಬಾನಿ) ಪ್ರಧಾನಮಂತ್ರಿಯವರ ಆಪ್ತ ಎಂಬುದರ ಹೊರತಾಗಿ ಆತ ಈ ವಿಚಾರದಲ್ಲಿ ಇನ್ನಾವುದೇ ಅರ್ಹತೆ ಹೊಂದಿರುವುದಿಲ್ಲ.
ಮಾಧ್ಯಮಗಳ ಸೆರೆ
ಈಗೀಗ ಕೆಲವು ಮಾಧ್ಯಮಗಳು ದಾಸ್ಯಕ್ಕೊಳಗಾಗಿರುವುದನ್ನು ನೋಡಬಹುದು. ಪ್ರಧಾನಿ ಮತ್ತು ಬಿಜೆಪಿ ಅಧ್ಯಕ್ಷರ ಬಗ್ಗೆ ಎಷ್ಟೇ ಮೃದುವಾದ, ಎಂಥದ್ದೇ ಟೀಕೆಗಳಿರಲಿ, ಅವುಗಳನ್ನು ಹೊಸಕಿಬಿಡುತ್ತವೆ. ಆದರೆ ಯಾವುದಾದರೂ ವಾಹಿನಿ ಇವರಿಗೆ ಮಣಿಯದೆ ಬಂಡೆದ್ದರೆ, ಅದನ್ನು 24ಗಂಟೆಗಳ ಕಾಲ ನಿಷ್ಕ್ರಿಯಗೊಳಿಸಲಾಗುತ್ತದೆ. ಅದರ ಆವರಣಗಳ ಮೇಲೆ ದಾಳಿ ಮಾಡಿಸಲಾಗುತ್ತದೆ. ಇಲ್ಲವೇ ಅಂತಹ ಪತ್ರಕರ್ತರು ಯಾರಿಗೂ ತಿಳಿಯದಂತೆ ರಜೆ ಪಡೆದು ಮನೆಗೆ ಹೋಗಬೇಕಾಗುತ್ತದೆ ಇಲ್ಲವೇ ಅವರನ್ನು ನೌಕರಿಯಿಂದ ವಜಾಗೊಳಿಸಲಾಗುತ್ತದೆ.
ಪ್ರಜಾತಾಂತ್ರಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿರುವುದು
ಆದೇಶ ಮತ್ತು ಸುಗ್ರೀವಾಜ್ಞೆಗಳಿಂದಲೇ ಆಳ್ವಿಕೆ ನಡೆಸಲು ಇಚ್ಛಿಸುವ ಈ ಸರ್ಕಾರಕ್ಕೆ ಸಂಸತ್ತು ಎಂಬ ಸಂಸ್ಥೆ ಮುಜುಗರ ಉಂಟುಮಾಡುವಂಥದ್ದೇ. ಪ್ರಧಾನಮಂತ್ರಿಯವರು ಅಪರೂಪವಾಗಿ ಸಂಸತ್ತಿನಲ್ಲಿ ಭಾಗವಹಿಸುತ್ತಾರೆ. ಅವರು ಭಾಗವಹಿಸಿದಾಗಲೂ ಸಹ ಶಾಸನಾತ್ಮಕ ಕಾರ್ಯಸೂಚಿಯನ್ನು ರೂಪಿಸುವ ಅಥವಾ ಸದನದಲ್ಲಿ ಎತ್ತಲಾದ ಪ್ರಶ್ನೆಗಳನ್ನು ಉತ್ತರಿಸುವುದರ ಬದಲಿಗೆ ಚುನಾವಣಾ ಭಾಷಣಗಳನ್ನೇ ಹೆಚ್ಚಾಗಿ ಮಾಡುತ್ತಾರೆ. ಲೋಕಪಾಲದ ಆಶ್ವಾಸನೆಯನ್ನು ಅದೆಷ್ಟು ಕಲಾತ್ಮಕವಾಗಿ ಮರೆತುಬಿಟ್ಟರೆಂದರೆ ಸಿಟ್ಟಿಗೆದ್ದ ಸರ್ವೋಚ್ಛ ನ್ಯಾಯಾಲಯವು ಸರ್ಕಾರಕ್ಕೆ ಕೆಲಸ ಮಾಡುವಂತೆ ನಿರ್ದೇಶನ ನೀಡಬೇಕಾಯಿತು. ಅಧಿಕಾರ ವಹಿಸಿಕೊಂಡ ತಕ್ಷಣವೇ ಮುಖ್ಯಮಂತ್ರಿಯೊಬ್ಬ ತನ್ನ ವಿರುದ್ಧದ ಎಲ್ಲಾ ಅಪರಾಧ ಪ್ರಕರಣಗಳನ್ನೂ ಹಿಂಪಡೆಯುತ್ತಾನೆಂದರೆ ಅವನ ಧಾರ್ಷ್ಟ್ಯ ಎಷ್ಟಿರಬೇಕು! ಇದರ ಬಗ್ಗೆ ಯಾರೊಬ್ಬರೂ ತುಟಿ ಬಿಚ್ಚುವುದಿಲ್ಲ. ಚುನಾವಣಾ ಪಾರದರ್ಶಕತೆಯನ್ನು ಜಾರಿಗೊಳಿಸುವ ಭರವಸೆ ನೀಡಿದ್ದ ಸರ್ಕಾರ ಈಗ ಪಾರದರ್ಶಕವಲ್ಲದ ಎಲೆಕ್ಟೊರಲ್ ಬಾಂಡ್ಗಳನ್ನು ಪರಿಚಯಿಸುವುದರ ಮೂಲಕ ಲೆಕ್ಕಕ್ಕೆ ಸಿಗದ ಹಣಕಾಸಿಗೆ ದಾರಿ ಮಾಡಿಕೊಟ್ಟಿದೆ. ಕಳೆದುಕೊಳ್ಳುತ್ತಿರುವ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಸಿಬಿಐ ಹೆಣಗಾಡುತ್ತಿದೆ. ಈ ಪಟ್ಟಿ ಹೀಗೆ ಬೆಳೆಯುತ್ತಾ ಹೋಗುತ್ತದೆ.
ಬಹುಶಃ ಅತಿದೊಡ್ಡ ವೈಫಲ್ಯವೆಂದರೆ ದ್ವೇಷವನ್ನು ಬೆಳೆಸುತ್ತಿರುವುದು
ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯದ ಜನರನ್ನು ಗುರಿಯಾಗಿಸಿ ಎಸಗುವ ದಾಳಿಗಳು ಸಿಕ್ಕಾಪಟ್ಟೆ ಹೆಚ್ಚಿವೆ. ಈ ದಾಳಿಗಳು ಗಮನಾರ್ಹ ಏಕೆಂದರೆ ಹಲ್ಲೆಕೋರರಿಗೆ ಹೂಮಾಲೆ ತೊಡಿಸಿ ಇಲ್ಲವೇ ಗೌರವಪೂರ್ವಕವಾಗಿ ಅವರ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸಿ ಸರ್ಕಾರ ಅನುಮೋದನೆ ನೀಡುತ್ತಿದೆ. ಈ ಬೆಂಬಲವನ್ನು ಇಂತಹ ಎಲ್ಲಾ ಹಲ್ಲೆಕೋರರಿಗೂ ಕಲ್ಪಿಸಲಾಗಿದೆ. ಈ ಸರ್ಕಾರದ ಅವಧಿಯಲ್ಲಿ ನಿರಂತರವಾಗಿ ಜರುಗುತ್ತಿರುವ ಒಂದೇ ವಿದ್ಯಮಾನವೆಂದರೆ ಒಂದು ನಿರ್ದಿಷ್ಟ ವಿಭಾಗದ ಜನರನ್ನು ಈ ದೇಶಕ್ಕೆ ಸೇರಿದವರಲ್ಲ ಎಂಬಂತೆ ಬಿಂಬಿಸುತ್ತಿರುವುದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಮಂತ್ರಿಯವರು ಅನುಸರಿಸುವ ಜನರಲ್ಲಿ ಸಾಮಾನ್ಯವಾಗಿ ಒಂದು ಅಂಶವನ್ನು ಕಾಣಬಹುದು. ಅಧಿಕೃತವಾಗಿ ಸಮ್ಮತಿ ಹೊಂದಿರುವಂತೆ ಅವರು ಕಟ್ಟರ್ ಕೋಮುವಾದಿಗಳಾಗಿದ್ದು ಹೊಲಸು ಭಾಷೆ ಬಳಸುತ್ತಾರೆ.
ಕಾಶ್ಮೀರದ ವಿಷಯದ ಅಸಮರ್ಥ ನಿರ್ವಹಣೆ
ಸಂಧಾನ ಮಾತುಕತೆಗಳನ್ನು ಏರ್ಪಡಿಸದೆ ಭಾರತದ ಉಳಿದ ಭಾಗಗಳಿಂದ ಕಾಶ್ಮೀರಿ ಜನರನ್ನು ದೂರಮಾಡಿರುವ (ಕು)ಖ್ಯಾತಿ ಈ ಸರ್ಕಾರಕ್ಕೆ ಸಲ್ಲುತ್ತದೆ. 1996ರಿಂದೀಚೆಗೆ ಇದೇ ಮೊದಲ ಬಾರಿಗೆ ಅನಂತನಾಗ್ ಜಿಲ್ಲೆಯಲ್ಲಿ ಉಪ-ಚುನಾವಣೆಯನ್ನು ನಡೆಸಲು ಸಾಧ್ಯವಾಗದೆ ಅಲ್ಲಿನ ಪ್ರಕ್ಷುಬ್ಧ ವಾತಾವರಣದಿಂದಾಗಿ ಮತದಾನವನ್ನು ಮುಂದೂಡಬೇಕಾಯಿತು. ಎಂಟು ತಿಂಗಳ ಕರ್ಫ್ಯೂ ಹೇರಿಕೆ ಸ್ಥಳೀಯ ಆರ್ಥಿಕತೆಯನ್ನು ನಾಶಗೊಳಿಸಿತು. ಬಿಜೆಪಿಯ ಮೊದಲ ಮೂರೇ ವರ್ಷಗಳಲ್ಲಿ, ಹುತಾತ್ಮರಾದ ಸೈನಿಕರ ಸಂಖ್ಯೆಯಲ್ಲಿ ಶೇ. 79ರಷ್ಟು ಹೆಚ್ಚಳವಾಗಿರುವುದು ಇನ್ನೂ ಶೋಚನೀಯ. ಕಾಶ್ಮೀರದ ವಿಷಯವನ್ನು ಅತ್ಯಂತ ಅಸಮರ್ಥವಾಗಿ ನಿರ್ವಹಿಸಿರುವುದರ ಬಗ್ಗೆ ಒಂದು ವಿಶೇಷ ಅಧ್ಯಯನವಾಗಬೇಕಿದೆ.
ನಾಗರಿಕರಿಗೆ ಖಾಸಗಿತನದ ಮೂಲಭೂತ ಹಕ್ಕನ್ನು ನಿರಾಕರಿಸಲು ನಡೆಸಿದ ವಿಫಲ ಯತ್ನ
ನಾಗರಿಕರು ಖಾಸಗಿತನದ ಮೂಲಭೂತ ಹಕ್ಕನ್ನು ಹೊಂದುವುದರ ವಿರುದ್ಧ ಈ ಸರ್ಕಾರವು ತಿಂಗಳುಗಟ್ಟಲೆ ಸರ್ವೋಚ್ಛ ನ್ಯಾಯಾಲಯದಲ್ಲಿ ವಾದಿಸಿತು. ಅದು ಕಣ್ಗಾವಲಿನ ಪರವಾಗಿ ವಾದ ಮಂಡಿಸಿ ಖಾಸಗಿತನವನ್ನು ಕೇವಲ ‘ಎಲೀಟ್ ವರ್ಗದ ಜನರಿಗೆ ಸಂಬಂಧಿಸಿದ ವಿಷಯ’ ಎಂದು ಗುರುತಿಸಿತು. ಅದೇ ಸಂದರ್ಭದಲ್ಲಿ ರೈಲು ಟಿಕೇಟಿನಿಂದ ಹಿಡಿದು ಶಾಲಾ ಪ್ರವೇಶಾತಿಯ ವರೆಗೆ ಎಲ್ಲಾ ಸೇವೆಗಳಿಗೂ ತಾನೇಕೆ ಆಧಾರ್ ಲಿಂಕಿಂಗ್ ಕಡ್ಡಾಯವನ್ನು ಆದೇಶಿಸಿದ್ದು ಎಂಬುದರ ಬಗ್ಗೆ ವಿವರಣೆ ನೀಡಲು ಹೆಣಗಿತು. ಅಂತಿಮವಾಗಿ ಸರ್ವೋಚ್ಛ ನ್ಯಾಯಾಲಯ ಮಧ್ಯಸ್ತಿಕೆ ವಹಿಸಿ ಈ ಯೋಜನೆಯಲ್ಲಿದ್ದ ದಮನಕಾರಿ ಅಂಶಗಳಿಗೆ ಗಂಭೀರವಾಗಿ ತಡೆ ಒಡ್ಡಬೇಕಾಯಿತು.
ಏಷ್ಯಾದಲ್ಲಿ ಭಾರತದ ಕುಗ್ಗುತ್ತಿರುವ ಪ್ರಭಾವ
ಮಾಲ್ಡೀವ್ಸ್ನಂತಹ ಒಂದು ಸಣ್ಣ ದ್ವೀಪ ರಾಷ್ಟ್ರವೂ ಭಾರತವನ್ನು ತೆಗಳುವ ಧೈರ್ಯ ಮಾಡುತ್ತದೆ, ಚೀನಾ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ನೇಪಾಳವಾಗಲೀ ಶ್ರೀಲಂಕಾ ಆಗಲೀ ಹಿಂಜರಿಯದು. ಕಳೆದ ಐದು ವರ್ಷಗಳ ವರೆಗೂ ಈ ಪ್ರದೇಶದಲ್ಲಿ ಭಾರತ ಮಹತ್ವದ ಸ್ಥಾನವನ್ನು ಗಳಿಸಿತ್ತು. ಈ ದೇಶಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಭಾರತದ ಅಭಿಪ್ರಾಯವನ್ನು ಪಡೆಯಲಾಗುತ್ತಿತ್ತು. ಆದರೆ ಇಂದಿನ ವಿದೇಶಾಂಗ ನೀತಿಯಲ್ಲಿ ಪ್ರಧಾನಮಂತ್ರಿಯವರ ವ್ಯಕ್ತಿ ಆರಾಧಾನೆಯ ಪ್ರೋತ್ಸಾಹವನ್ನು ಬಿಟ್ಟರೆ ಬೇರೆ ಯಾವುದೇ ಸ್ಥಿರವಾದ ತಾರ್ಕಿಕ ಉದ್ದೇಶವೂ ಕಾಣುವುದಿಲ್ಲ. ಇದರಿಂದಾಗಿ ಮೊದಲಿದ್ದ ಭಾರತದ ಪ್ರಭಾವವು ಈಗ ಕ್ಷೀಣಿಸಿದೆ.
ಉದ್ಯೋಗ
ಹೆಚ್ಚಿನ ಜಿಡಿಪಿ ಅಂಕಿಸಂಖ್ಯೆಗಳನ್ನು ಕೃತಕವಾಗಿ ಗೋಚರಿಸುವಂತೆ ಮಾಡಲು ಸರ್ಕಾರ ಜಿಡಿಪಿ ಲೆಕ್ಕ ಮಾಡುವ ವಿಧಾನವನ್ನೇ ಪರಿಷ್ಕರಿಸಿದಾಗ; ಹಿಂದೆಂದೂ ಕಂಡಿಲ್ಲದ ಪ್ರಮಾಣದಲ್ಲಿ ಬಂಡವಾಳವು ವೇಗವಾಗಿ ಚಲಿಸಿದಾಗ; ಕಂಪನಿಗಳು ಹಣಕಾಸಿಗಾಗಿ ಹೊರಗಿನ ಸಾಲಗಾರರತ್ತ ತಿರುಗಿ ನೋಡುವಾಗ, ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬುದು ಅರ್ಥವಾಗುತ್ತದೆ.

ಇದೇನು ಸಮಗ್ರ ವರದಿಯಲ್ಲವಾದರೂ ಯಾವುದೇ ಮಾಪಕದಲ್ಲಿ ಅಳೆದುನೋಡಿದರೂ ಇದು ಮೋದಿ ಸರ್ಕಾರವನ್ನು ಕುರಿತ ಅತ್ಯಂತ ನಿರಾಶಾದಾಯಕ ಪ್ರಗತಿಪತ್ರ ಎಂದೇ ಹೇಳಬಹುದು. ಸಾರ್ವಜನಿಕ ಕ್ಷೇತ್ರದ ಹಣವನ್ನು ಹೊತ್ತುಕೊಂಡು ದರ್ಪದಿಂದ ದೇಶವನ್ನು ಬಿಟ್ಟು ಓಡಿಹೋದ ಬಹುಕೋಟಿ ಬಾಕಿದಾರರ ಸಂಖ್ಯೆ ಹೆಚ್ಚಿರುವುದು, ತೈಲ ಮತ್ತು ಅನಿಲ ಬೆಲೆಗಳಲ್ಲಿ ಮಿತಿಮೀರಿದ ಹೆಚ್ಚಳ, ರಾಜಕೀಯ ಚರ್ಚೆಗಳ ಗುಣಮಟ್ಟ ಕುಸಿಯುತ್ತಿರುವುದು, ಇತ್ಯಾದಿಗಳು; ಇವು ಸರ್ಕಾರ ಇಟ್ಟ ಹತ್ತಾರು ಕೆಟ್ಟ ಹೆಜ್ಜೆಗಳ ಪೈಕಿ ಕೆಲವು ಮಾತ್ರ. ಇವುಗಳಿಗಾದರೂ ಸರ್ಕಾರ ಉತ್ತರಿಸಬೇಕು.
ವ್ಯಂಗ್ಯವೆಂದರೆ, 2013ರಲ್ಲಿ ಪ್ರಧಾನಮಂತ್ರಿಯವರು ಪ್ರಚಾರ ಮಾಡುತ್ತಿದ್ದಾಗ, ಈ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದರೂ ಸಹ ಅದರ ಬದಲಿಗೆ ಈಗ ಸಮಸ್ಯೆಗಳನ್ನು ಯಾವ ಮಟ್ಟಕ್ಕೆ ಹೆಚ್ಚಿಸಿದ್ದಾರೆಂದರೆ ಆ ಹಾನಿಯನ್ನು ಸರಿಪಡಿಸಲು ಹಲವು ವರ್ಷಗಳೇ ಬೇಕಾಗುತ್ತವೆ.
ಪ್ರಧಾನಿಯವರು ನಡೆದು ಬಂದ ಪರಂಪರೆಯ ವಿಷಯಗಳ ಬಗ್ಗೆ ಆಗಾಗ್ಗೆ ಮಾತನಾಡಲು ಬಯಸುತ್ತಾರೆ. ಆದರೆ ನಿಜ ಏನೆಂದರೆ ಈಗ ಅವರ ಪರಂಪರೆಯೇ ಅವರಿಗೆ ದೊಡ್ಡ ಸಮಸ್ಯೆ ಆಗಲಿದೆ ಎಂಬುದು!
ಮೂಲ: ದ ವೈರ್ ಪ್ರಕಟಿಸಿದ್ದ ಲೇಖನ. ಮಾಜಿ ಕಾನೂನು ಮಂತ್ರಿ ಹಾಗೂ ಪ್ರಖರ ನ್ಯಾಯವಾದಿ ಸಲ್ಮಾನ್ ಖುರ್ಶಿದ್ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮೀಡಿಯಾ ಸಂವಾದಕ ಮೊಹಮ್ಮದ್ ಖಾನ್ ಬರೆದ ಈ ಲೇಖನ ಖಲೆದ ನವೆಂಬರ್ ನಲ್ಲಿ ಬರೆದಿದ್ದರೂ ಈ ಕ್ಷಣಕ್ಕೂ ಪ್ರಸ್ತುತ.
More Articles
By the same author
Related Articles
From the same category