90% ಮತಗಳು ಬಿಜೆಪಿಗೆ ಬೀಳದಿದ್ದರೆ ಗಂಡಿರಲಿ, ಹೆಣ್ಣಿರಲಿ ಅವರ ತಲೆ ತೆಗೆಯುತ್ತೇವೆ: ಗ್ರಾಮಸ್ಥರಿಗೆ ಮಣಿಪುರದ ಉಗ್ರರ ಬೆದರಿಕೆ
“ಮತದಾನದ ದಿನ ನಾವು ಮುಕ್ತವಾಗಿ ಓಡಾಡಿಕೊಂಡಿರಬೇಕು, ಅಗತ್ಯ ವಿದ್ದರೆ ಗುಂಡು ಹಾರಿಸುತ್ತೇವೆ. ಮೊರೆಆ ಪ್ರದೇಶದಲ್ಲಿ 21 ಮತಗಟ್ಟೆಗಳಿದ್ದು ನಾವು ಮತದಾನದ ಪ್ರಮಾಣವನ್ನು ಪರೀಕ್ಷಿಸುತ್ತೇವೆ. ಕನಿಷ್ಟ 90% ಮತದಾನ ಕಡ್ಡಾಯವಾಗಿ ಆಗಲೇಬೇಕು’ ಎಂದು ಕುಕಿ ಉಗ್ರ ಗ್ರಾಮಸ್ಥರಿಗೆ ಹೇಳಿದ್ದಾನೆ.
ಹಗರಣವನ್ನು ಸಿಬಿಐಗೆ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಿ ದೆಹಲಿಯಲ್ಲಿ ವಿದ್ಯಾರ್ಥಿ-ಯುವಜನರು ಮಾರ್ಚ್ 2018ರಲ್ಲಿ ನಡೆಸಿದ್ದ ಪ್ರತಿಭಟನೆ
ಒಂದು ಕಡೆ ಬಿಜೆಪಿ ‘ಉಗ್ರವಾದವನ್ನು ಸಹಿಸುವುದಿಲ್ಲ’ ಎಂದು ತನ್ನ ಸಂಕಲ್ಪ ಪತ್ರದಲ್ಲಿ ಘೋಷಿಸಿಕೊಂಡಿದ್ದರೆ ಮತ್ತೊಂದು ಕಡೆ ‘ಬಿಜೆಪಿ ಅಭ್ಯರ್ಥಿಗೆ ಶೇಕಡಾ 90ರಷ್ಟು ಮತಗಳು ಬೀಳದಿದ್ದರೆ ಯಾರನ್ನೂ ಬಿಡದೇ ಒಬ್ಬೊಬ್ಬರ ತಲೆ ತೆಗೆಯುವುದಾಗಿ ಕುಕಿ ನ್ಯಾಶನಲ್ ಆರ್ಮಿ (KNA) ಕಮಾಂಡರ್ ಥಾಂಗ್ಬೋಯಿ ಜವಾಕಿಪ್ ಎಂಬ ಉಗ್ರ ಧಮಕಿ ಹಾಕಿದ್ದಾನೆ.
ಔಟರ್ ಮಣಿಪುರ ಲೋಕಸಭಾ ಕ್ಷೇತ್ರದ ಮುವೋನ್ನಪಾಯ್ ಗ್ರಾಮದಲ್ಲಿ ಈ ಘಟನೆ ಎರಡು ದಿನಗಳ ಹಿಂದೆ ನಡೆದಿದೆ.
ಕುಕಿ ನ್ಯಾಶನಲ್ ಆರ್ಮಿಯು ಮಣಿಪುರ ಗಡಿಭಾಗದ ಕುಕಿ ಜನಾಂಗೀಯ ಉಗ್ರ ಸಂಘಟನೆಗಳ ಪೈಕಿ ಒಂದಾಗಿದ್ದು ಬಿಜೆಪಿಯು ಈ ಉಗ್ರ ಸಂಘಟನೆಯೊಂದಿಗೆ ಸಂಬಂಧ ಏರ್ಪಡಿಸಿಕೊಂಡು ಮತದಾರರನ್ನು ಕೊಲ್ಲುವ ಬೆದರಿಕೆ ಹಾಕಿ ಚುನಾವಣೆ ಗೆಲ್ಲಲು ಹೊರಟಿರುವುದು ಇದರಿಂದ ಬಯಲಾಗಿದೆ.
ಮಣಿಪುರದ ಹೊರವಲಯದ ಮುವೋನ್ನಪಾಯ್ ಗ್ರಾಮದಲ್ಲಿ ಗ್ರಾಮದ ಮುಖ್ಯಸ್ಥರ ಸಭೆಯಲ್ಲಿ KNA ಮುಖ್ಯಸ್ಥ ಜೀವ ಬೆದರಿಕೆ ಹಾಕಿ, ಬಿಜೆಪಿ ಅಭ್ಯರ್ಥಿ ಬೆಂಜಮಿನ್ ಮಾಟೆಗೆ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ತಾಕೀತು ಮಾಡಿದ್ದಾನೆ.
“ಏಪ್ರಿಲ್ 11 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕದಿರುವ ವ್ಯಕ್ತಿ ಗಂಡಿರಲಿ, ಹೆಣ್ಣಿರಲಿ ಅವರನ್ನು ನಾವು ಬಿಡುವುದಿಲ್ಲ” ಎಂದು ಉಗ್ರ ಥಾಂಗ್ಬೋಯಿ ಜವಾಕಿಪ್ ಹೇಳಿದ್ದಾನೆ. ಕುಕಿ ಕಮಾಂಡರ್ ಹೀಗೆ ಹೇಳಿರುವ ವಿಡಿಯೋ ನ್ಯೂಸ್ 18 ಸುದ್ದಿತಾಣದಲ್ಲಿ ಪ್ರಕಟವಾಗಿದೆ.
“ಮತದಾನದ ದಿನ ನಾವು ಮುಕ್ತವಾಗಿ ಓಡಾಡಿಕೊಂಡಿರಬೇಕು, ಅಗತ್ಯ ವಿದ್ದರೆ ಗುಂಡು ಹಾರಿಸುತ್ತೇವೆ. ಮೊರೆಆ ಪ್ರದೇಶದಲ್ಲಿ 21 ಮತಗಟ್ಟೆಗಳಿದ್ದು ನಾವು ಮತದಾನದ ಪ್ರಮಾಣವನ್ನು ಪರೀಕ್ಷಿಸುತ್ತೇವೆ. ಕನಿಷ್ಟ 90% ಮತದಾನ ಕಡ್ಡಾಯವಾಗಿ ಆಗಲೇಬೇಕು’ ಎಂದು ಕುಕಿ ಉಗ್ರ ಗ್ರಾಮಸ್ಥರಿಗೆ ಹೇಳಿದ್ದಾನೆ.
ಅಮಿತ್ ಶಾಗೆ ಉಗ್ರರ ಮನವಿ
ಕೆಲ ದಿನಗಳ ಹಿಂದೆ ಎರಡು ಕುಕಿ ಉಗ್ರ ಸಂಘಟನೆಗಳು ಔಟರ್ ಮಣಿಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಬೆಂಜಮಿನ್ ಮಾಟೆಯನ್ನು ಆಯ್ಕೆ ಮಾಡಬೇಕು ಎಂದು ಬರೆದಿದ್ದ ಮನವಿಯನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸಿದ್ದವು. ಝೋಮಿ ರಿಯುನಿಫಿಕೇಶನ್ ಆರ್ಗನೈಸೇಶನ್ ಮತ್ತು ಕುಕಿ ನ್ಯಾಶನನಲ್ ಆರ್ಗನೈಸೇಶನ್ ಸಂಘಟನೆಗಳು ಪ್ರತ್ಯೇಕ ಮನವಿಯನ್ನು ಅಮಿತ್ ಶಾ ಅವರಿಗೆ ನೀಡಿದ್ದು ಅವುಗಳ ಪ್ರತಿಗಳನ್ನು ಔಟರ್ ಮಣಿಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಹಾಗೂ ಬಿಜೆಪಿ ವಕ್ತಾರೆಯಾಗಿದ್ದ ಕಿಮ್ ಗಾಂಗ್ಟೆ ಮಾಧ್ಯಮಗಳಿಗೆ ವಾರದ ಹಿಂದಷ್ಟೇ ಬಿಡುಗಡೆಗೊಳಿಸಿದ್ದರು.
‘ಕುಕಿ ಮಿಲಿಟೆಂಟ್ ಸಂಘಟನೆಗಳ ಒತ್ತಡಕ್ಕೆ ಮಣಿದಿರುವ ಬಿಜೆಪಿ ಬೆಂಜಮಿನ್ ಮಾಟೆಗೆ ಟಿಕೆಟ್ ನೀಡಿದೆ” ಎಂದು ಆರೋಪಿಸಿದ್ದ ಬಿಜೆಪಿ ಎಂಪಿ (ಮಾಜಿ) ಕಿಮ್ ಗಾಂಗ್ಟೆ ಕೆಲ ದಿನಗಳ ಹಿಂದೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ರಾಜ್ಯ ಮತ್ತು ದೇಶದ ಏಳಿಗೆಗಾಗಿ ನಿಜವಾಗಿ ಶ್ರಮಿಸುವ ಬೇರೆ ಪಕ್ಷ ಸೇರುವುದಾಗಿ ಘೋಷಿಸಿದ್ದರು ಮಾತ್ರವಲ್ಲ ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ಅವರ ಎನ್ ಪಿ ಪಿ ಪಕ್ಷವನ್ನು ಮಾರ್ಚ್ 29ರಂದು ಸೇರ್ಪಡೆಗೊಂಡಿದ್ದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಕುಕಿ ಉಗ್ರ ಸಂಘಟನೆಗಳು ಸಲ್ಲಿಸಿದ್ದ ಈ ಮನವಿ ಪತ್ರಗಳ ಕುರಿತು ಪ್ರತಿಕ್ರಿಯಿಸಿದ್ದ ಮಣಿಪುರ ಬಿಜೆಪಿ ಮುಖಂಡ ಚೋಂಗ್ತಾಮ್ ಬಿಜೋಯ್, “ಮಿಲಿಟೆಂಟ್ ಸಂಘಟನೆಗಳು ಆ ಮನವಿ ಸಲ್ಲಿಸಿರುವುದು ನಿಜ. ಆದರೆ ಅದಕ್ಕೂ ಟಿಕೆಟ್ ಹಂಚಿಕೆಗೂ ಸಂಬಂಧವಿಲ್ಲ. ಸ್ವತಃ ಬೆಂಜಮಿನ್ ಮಾಟೆ ಅವರಿಗೇ ಇದರಿಂದ ಅಚ್ಚರಿಯಾಗಿದೆ” ಎಂಬ ಸಮಜಾಯಿಷಿ ನೀಡಿದ್ದರು.
ಕುಕಿ ನ್ಯಾಶನಲ್ ಆರ್ಮಿ ಉಗ್ರ ಸಂಘಟನೆಯು 600 ಸಶಸ್ತ್ರ ಸದಸ್ಯರಿರುವ ಸಂಘಟನೆಯಾಗಿದ್ದು ಸಧ್ಯ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದೊಂದಿಗೆ ಶಾಂತಿ ಮಾತುಕತೆಯಲ್ಲಿ ತೊಡಗಿದೆ. 2005ರಲ್ಲಿ 8 ಉಗ್ರ ಸಂಘಟನೆಗಳು ಯುದ್ಧವಿರಾಮ ಘೋಷಿಸಿದ್ದವು. ಅವುಗಳಲ್ಲಿ ಕೆ ಎನ್ ಎ ಕೂಡಾ ಒಂದು. ಈ ಉಗ್ರ ಸಂಘಟನೆಗಳು ಈಗಲೂ ತಮ್ಮ ಸಶಸ್ತ್ರ ಪಡೆಗಳನ್ನು ಹೊಂದಿವೆ.
ಒಟ್ಟಿನಲ್ಲಿ ಈ ಪ್ರಕರಣವು ಬಿಜೆಪಿ ದೇಶದ ಸಂವಿಧಾನ ಮತ್ತು ಕಾನೂನಿಗೆ ಎಷ್ಟು ಮಾನ್ಯತೆ ನೀಡುತ್ತದೆ ಮತ್ತು ತನ್ನ ಹಿತಕ್ಕಾಗಿ ಉಗ್ರ ಸಂಘಟನೆಗಳೊಂದಿಗೆ ಸುಲಭವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಎಂಬುದು ಬಯಲಾಗಿದೆ. ಇದೇ ಬಗೆಯ ತಂತ್ರಗಾರಿಕೆಯನ್ನು ಬಿಜೆಪಿ ಕಳೆದ ವರ್ಷ ನಡೆದ ತ್ರಿಪುರಾ ಅಸೆಂಬ್ಲಿ ಚುನಾವಣೆಯಲ್ಲಿ ಸಹ ಮಾಡಿದ್ದನ್ನು ಸ್ಮರಿಸಬಹುದಾಗಿದೆ.