“ನರೇಂದ್ರ ಮೋದಿ ತಮ್ಮ ಆಡಳಿತದ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ನಾನಾ ಬಗೆಯ ತಂತ್ರಗಾರಿಕೆ ಮಾಡುತ್ತಿದ್ದಾರೆ” ಎಂದು ಬಿಜೆಪಿ ಸರ್ಕಾರದ ಐದು ವರ್ಷಗಳ ಆಡಳಿತದ ಕಾರ್ಯವೈಖರಿಯನ್ನು ಟೀಕಿಸಿದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ “ಮೋದಿ ಮತದಾರರ ದಿಕ್ಕು ತಪ್ಪಿಸಲೆಂದೇ ಆಗಾಗ ಗಾಂಧಿ ಕುಟುಂಬವನ್ನು ಗುರಿಪಡಿಸಿ ಮಾತಾಡುತ್ತಾರೆ. ಬೇರೆ ಸಮಯದಲ್ಲಿ ಸರಿಯಾಗಿದ್ದರೂ ಚುನಾವಣೆ ಬಂತೆಂದರೆ ಉನ್ಮಾದದಿಂದ ವರ್ತಿಸುತ್ತಾರೆ. ” ಎಂದು ಟೀಕಿಸಿದರು.
ರಾಜೀವ್ ಗಾಂಧಿ ಪ್ರಧಾನಿ ಅವಧಿಯಲ್ಲಿ ನಡೆದ ಟೆಲಿಕಾಂ ಕ್ರಾಂತಿಯನ್ನು ಉಲ್ಲೇಖಿಸಿ ಮಾತನಾಡಿದ ಪವಾರ್, “ರಾಜೀವ್ ಗಾಂಧಿಯವರಿಂದ ಮೊಬೈಲ್ ಉಪಯೋಗಿಸುತ್ತಿದ್ದೇವೆ, ಮೋದಿ ಮಾಡಿದ್ದೇನಿದೆ? ರಾಜೀವ್ ಗಾಂಧಿಯವರು ಮಾಡಿದ ಕೆಲಸದಿಂದಾಗಿ ಇಂದು ದೇಶದ ಕೋಟ್ಯಂತರ ಜನರ ಕೈಯಲ್ಲಿ ಮೊಬೈಲ್ ಫೋನುಗಳಿವೆ. ಮೋದಿ ಹೊಸ ತಂತ್ರಜ್ಞಾನ ಕ್ರಾಂತಿ ಆರಂಭಿಸುವುದಿರಲಿ, ಅವರ ಕೈಯಿಂದ ಕನಿಷ್ಟಪಕ್ಷ ದೇಶವನ್ನು ಸರಿಯಾಗಿ ರಕ್ಷಿಸಲೂ ಆಗಲಿಲ್ಲ” ಎಂದರು.
ಪುಣೆಯಲ್ಲಿ ಕಾಂಗ್ರೆಸ್ ಮತ್ತು ಎನ್ ಸಿ ಪಿ ಕಾರ್ಯಕರ್ತರನ್ನು ಉದ್ದೇಶಿಸಿ ಶರದ್ ಪವಾರ್ ಮಾತಾಡುತ್ತಿದ್ದರು. ಮಹಾರಾಷ್ಟ್ರದಲ್ಲಿ ಎನ್ ಡಿ ಎ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ಮತ್ತು ಎನ್ ಸಿ ಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.
“ಎರಡೂ ಪಕ್ಷಗಳ ಕಾರ್ಯಕರ್ತರು ಜನರ ಮನೆಬಾಗಿಲಿಗೆ ಹೋಗಿ ಭೇಟಿ ಮಾಡುವ ಸಂಕಲ್ಪ ಕೈಗೊಂಡರೆ ಈ ಮೈತ್ರಿಯು ಎನ್ ಡಿ ಎ ಮೈತ್ರಿಯನ್ನು ಸೋಲಿಸುವುದು ಶತಸ್ಸಿದ್ಧ” ಎಂದು ಪವಾರ್ ಹೇಳಿದರು.
ಮಾಜಿ ಕೃಷಿ ಸಚಿವರೂ ಆಗಿರುವ ಶರದ್ ಪವಾರ್, “ ಮಹಾರಾಷ್ಟ್ರ ರಾಜ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ರೈತರ ಆತ್ಮಹತ್ಯೆಗಳಾಗಲು ಕಾರಣ ಮೋದಿಯ ರೈತವಿರೋಧಿ ನೀತಿಗಳೇ” ಎಂದು ದೂರಿದರು. “ಕಳೆದ ನಾಲ್ಕು ವರ್ಷಗಳಲ್ಲಿ 18,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕಾರ್ಪೊರೇಟ್ ಗಳನ್ನು ಮೆಚ್ಚಿಸುವ, ರೈತರನ್ನು ನಾಶ ಮಾಡುವ ಮೋದಿ ನೀತಿಗಳಿಂದಲೇ ಹೀಗಾಗಿದೆ” ಎಂದು ಪವಾರ್ ದೂರಿದರು.
ದೇಶದ ರಕ್ಷಣೆಯ ವಿಷಯದಲ್ಲಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಶರದ್ ಪವಾರ್, “ತಾನು ಅಧಿಕಾರಕ್ಕೆ ಬರುವಾಗ ಭಾರತದ ಒಬ್ಬ ಸೈನಿಕನಿಗೆ ಪ್ರತಿಯಾಗಿ 10 ಪಾಕ್ ಸೈನಿಕರ ತಲೆ ಪಡೆಯುತ್ತೇನೆ ಎಂದು ಹೇಳಿದ್ದರು ಮೋದಿ. ಆದರೆ ಗಡಿಯಲ್ಲಿ 693 ಭಾರತೀಯ ಸೈನಿಕರು ಪಾಕಿಸ್ತಾನದಿಂದ ಹತರಾಗಿದ್ದಾರೆ, ಮೋದಿ ಮಾಡಿದ್ದೇನು? ಎಂದರು. ನೋಟ್ ಬ್ಯಾನ್ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಸಂಭವಿಸಿದ 100 ಎಟಿಎಂ ಸಾವುಗಳಿಗೆ ಮೋದಿಯೇ ಕಾರಣ ಎಂದ ಅವರು “ಈ ನೋಟ್ ಬ್ಯಾನ್ ಕಾರಣಿದಿಂದಾಗಿಯೇ 15 ಲಕ್ಷ ಯುವಜನರು ಕೆಲಸ ಕಳೆದುಕೊಂಡಿದ್ದಾರೆ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಮೋದಿ ಭರವಸೆ ಮಕಾಡೆಯಾಗಿದೆ” ಎಂದು ಟೀಕಿಸಿದದು.
“ಬಿಜೆಪಿಯನ್ನು ಸೋಲಿಸುವುದು ಪ್ರತಿಪಕ್ಷಗಳ ರಾಷ್ಟ್ರೀಯ ಹೊಣೆಗಾರಿಕೆಯಾಗಿದೆ” ಎಂದೂ ಎನ್ ಸಿ ಪಿ ಧುರೀಣ ಹೇಳಿದರು.