ನವದೆಹಲಿ: ರಾಮ ಮಂದಿನ ನಿರ್ಮಾಣ, ವಲಸಿಗರ ತಡೆ, ಸೇನೆಯನ್ನು ಬಲಗೊಳಿಸುವುದು, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ, ರೈತರಿಗೆ ಪಿಂಚಣಿ, ಸಮಾನ ನಾಗರಿಕೆ ಸಂಹಿತೆ, ಇವೇ ಇಂದು ಬಿಜೆಪಿ ಬಿಡುಗಡೆಗೊಳಿಸಿದ ಪ್ರಣಾಳಿಕೆ ಅಥವಾ ಸಂಕಲ್ಪ ಪತ್ರದ ಮುಖ್ಯ ಭರವಸೆಗಳಾಗಿವೆ.
ದೆಹಲಿಯಲ್ಲಿಂದು ಬಿಜೆಪಿಯ ಸಂಕಲ್ಪ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅರುಣ್ ಜೈಟ್ಲಿ, ಅಮಿತ್ ಶಾ, ಸುಷ್ಮಾ ಸ್ವರಾಜ್ ಮೊದಲಾದ ಪಕ್ಷದ ಮುಖಂಡರು ಸೇರಿ ಬಿಡುಗಡೆಗೊಳಿಸಿದರು.
“ಈ ಸಂಕಲ್ಪ ಪತ್ರವನ್ನು ದೇಶದ 6 ಕೋಟಿ ಜನರೊಂದಿಗೆ ಸಮಾಲೋಚನೆ ನಡೆಸಿ ಸಿದ್ಧಪಡಿಸಲಾಗಿದೆ, ಇದೊಂದು ಮುನ್ನೋಟ ದಾಖಲೆಯಾಗಿದೆ” ಎಂದು ಅಮಿತ್ ಶಾ ತಿಳಿಸಿದರು. ನಂತರ ರಾಜನಾಥ್ ಸಿಂಗ್ ಅವರು ಬಿಜೆಪಿ ಪ್ರಣಾಳಿಕೆಯ ಅಂಶಗಳನ್ನು ಮಂಡಿಸಿದರು.
ಮುಖ್ಯಾಂಶಗಳು
-
ದೇಶದ ರಕ್ಷಣೆಗೆ ಮೊದಲ ಆದ್ಯತೆ, ಆಧುನಿಕ ಶಸ್ತ್ರಾಸ್ತ್ರಗಳ ಮೂಲಕ ಸೇನೆಯನ್ನು ಬಲಗೊಳಿಸುವುದು
-
2022ರಲ್ಲಿ ರೈತರ ಆದಾಯ ದುಪ್ಪಟ್ಟುಗೊಳಿಸಲಾಗುವುದು. ಕೃಷಿ ಮತ್ತು ಗ್ರಾಮೀಣ ಕ್ಷೇತ್ರಕ್ಕೆ ಮುಂದಿನ 5 ವರ್ಷಗಳಲ್ಲಿ 25 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸಲಾಗುವುದು
-
ಇತ್ತೀಚೆಗೆ ಜಾರಿಗೊಳಿಸಿರುವ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ 2 ಹೆಕ್ಟೇರ್ ಗಳಿಗಿಂತ ಕಡಿಮೆ ಭೂಮಿ ಇರುವ ರೈತರಿಗೆ ಸೀಮಿತಗೊಳಿಸಲಾಗಿತ್ತು. ಮುಂದಿನ ದಿನಗಳಗಳಲ್ಲಿ ಇದನ್ನು ಎಲ್ಲಾ ರೈತರಿಗೂ ವಿಸ್ತರಿಸಲಾಗುವುದು.
-
ರೈತರಿಗೆ 1 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ನೀಡಲಾಗುವುದು
-
ರೈತರಿಗೆ ಪಿಂಚಣಿ ಯೋಜನೆ ಜಾರಿಗೊಳಿಸಲಾಗುವುದು
-
2030ರ ಹೊತ್ತಿಗೆ ಭಾರತವನ್ನು ಟಾಪ್ 5 ಆರ್ಥಿಕತೆಗಳಲ್ಲಿ ಒಂದನ್ನಾಗಿ ಮಾಡಲಾಗುವುದು. ಜಗತ್ತಿನ 3 ನೇ ದೊಡ್ಡ ಆರ್ಥಿಕತೆಯನ್ನಾಗಿ ಮಾಡುವುದು. ಇದಕ್ಕಾಗಿ 2025ರ ಹೊತ್ತಿಗೆ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯನ್ನಾಗಿ ಮಾರ್ಪಡಿಸುವುದು.
-
ಮೂಲಸೌಕರ್ಯ ಕ್ಷೇತ್ರಕ್ಕೆ 100 ಲಕ್ಷ ಕೋಟಿ ರೂ. ವಿನಿಯೋಗಿಸಲಾಗುವುದು.
-
ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೇ ವಿಧಿ ಹಾಗೂ 35ಎ ವಿಧಿಗಳನ್ನು ರದ್ದು ಪಡಿಸಲಾಗುವುದು.
-
ರಾಮ ಮಂದಿರ ನಿರ್ಮಾಣ ಮಾಡಲಾಗುವುದು.
-
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲಾಗುವುದು.
-
ಎಡಪಂಥೀಯ ತೀವ್ರವಾದಿ ಚಟುವಟಿಕೆಗಳ ನಿರ್ಮೂಲನೆಗೊಳಿಸಲಾಗುವುದು
-
ಶಬರಿಮಲೆ ವಿಷಯದಲ್ಲಿ ಜನರ ನಂಬಿಕೆ, ಆಚರಣೆಗಳನ್ನು ರಕ್ಷಿಸಲು ಆದ್ಯತೆ ನೀಡಲಾಗುವುದು,
-
ಮಹಿಳೆಯರಿಗೆ ಲೋಕಸಭೆ, ವಿಧಾನ ಸಭೆಗಳಲ್ಲಿ ಶೇಕಡಾ 33 ಮೀಸಲಾತಿ ನೀಡಲು ತಿದ್ದುಪಡಿ ತರುವುದು
-
ಪ್ರತಿಯೊಂದು ಜಿಲ್ಲೆಗೂ ಒಂದೊಂದು ಮೆಡಿಕಲ್ ಕಾಲೇಜು ಸ್ಥಾಪಿಸಲಾಗವುದು.
-
ಮತ್ಸ್ಯ ಸಂಪದ ಯೋಜನೆಯಡಿ 10,000 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುವುದು, ಶೈತ್ಯ ಸಂಗ್ರಹ ವ್ಯವಸ್ಥೆ, ಐಸ್ ಬಾಕ್ಸ್ ನಿರ್ಮಾಣಗಳಿಗೆ ಒತ್ತು ಕೊಡುವುದು.
-
ಕಾಶ್ಮೀರಿ ಪಂಡಿತರಿಗೆ ನ್ಯಾಯ ಒದಗಿಸಲಾಗುವುದು
ಇವು ಬಿಜೆಪಿ ಬಿಡುಗಡೆ ಮಾಡಿರುವ ಸಂಕಲ್ಪ ಪತ್ರದ ಮುಖ್ಯಾಂಶಗಳಾಗಿವೆ.

ಸಂಕಲ್ಪ ಪತ್ರದಲ್ಲಿ ಬಿಜೆಪಿ ಘೋಷಿಸಿರುವ ಬಹುತೇಕ ಭರವಸೆಗಳು ಈ ಹಿಂದೆ ಅನೇಕ ವರ್ಷಗಳಿಂದ ಘೋಷಿಸುತ್ತಲೇ ಬಂದಿರುವ ಘೋಷಣೆಗಳಾಗಿವೆ. ಆದರೆ 2014ರಲ್ಲಿ ನೀಡಿದ್ದ ಪ್ರಮುಖ ಭರವಸೆಗಳನ್ನು ಸಂಕಲ್ಪ ಪತ್ರದಲ್ಲಿ ಎಲ್ಲೂ ಉಲ್ಲೇಖಿಸಲಾಗಿಲ್ಲ. ಸ್ವಿಸ್ ಬ್ಯಾಂಕ್ ಹಣ ತಂದು ದೇಶದ ಪ್ರತಿಯೊಬ್ಬರ ಖಾತೆಗೆ 14 ಲಕ್ಷ ರೂಪಾಯಿ ಹಾಕುವ ಭರವಸೆಯಾಗಲೀ, ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯಾಗಲೀ ಸಂಕಲ್ಪ ಪತ್ರದಲ್ಲಿ ಉಲ್ಲೇಖವಾಗಿಲ್ಲ.
ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರವಾದ ನಮಗೆ ಸ್ಪೂರ್ತಿ,, ದುರ್ಬಲ ವರ್ಗಗಳ ಅಭ್ಯುದಯ ನಮ್ಮ ದಿಕ್ಕು, ಉತ್ತಮ ಆಡಳಿತ ನಮ್ಮ ಮಂತ್ರ” ಎಂದರು. “ಒನ್ ಮಿಶನ್ ಒನ್ ಡೈರೆಕ್ಷನ” (ಒಂದು ಗುರಿ, ಒಂದು ದಿಕ್ಕು) ಕಡೆಗೆ ಇದು ದೇಶವನ್ನು ಕೊಂಡೊಯ್ಯಲಿದೆ ಎಂದು ಅವರು ಹೇಳಿದರು.
ಬಿಜೆಪಿಯ ಸಂಕಲ್ಪ ಪತ್ರವು ಪ್ರಬಲ ರಾಷ್ಟ್ರವಾದಿ ಚಿಂತನೆಯ ಆಧಾರದಲ್ಲಿ ಸಿದ್ಧವಾಗಿದೆ ಎಂದು ಅರುಣ್ ಜೈಟ್ಲಿ ಹೇಳಿದರು.
More Articles
By the same author
Related Articles
From the same category
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ 4 ಹೆಕ್ಟೇರ್ ವರೆಗೆ ಹೆಚ್ಚಸಿ ಸಾರ್