ಪ್ರಧಾನಿ ನರೇಂದ್ರ ಮೋದಿಗೆ ತಾವು 2014ರ ಚುನಾವಣೆಯಲ್ಲಿ ಘೋಷಿಸಿದ ಪ್ರಣಾಳಿಕೆಯಲ್ಲಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿಲ್ಲ ಎಂಬ ಪ್ರಾಮಾಣಿಕ ನಂಬಿಕೆ ಇರುವಂತಿದೆ. ಆ ಕಾರಣಕ್ಕಾಗಿಯೇ ಸಂಕಲ್ಪ ಪತ್ರ ಎಂದು ಕರೆದುಕೊಂಡಿರುವ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಈಡೇರಿಸದಿದ್ದರೂ ಜನರು ಯಾಕೆ ಈಡೇರಿಸಿಲ್ಲ ಎಂದು ಮತ್ತೆ ಕೇಳಲೇಬಾರದಂತಹ ಭರವಸೆಗಳನ್ನೇ ಹೆಚ್ಚಾಗಿ ಘೋಷಿಸಿದ್ದಾರೆ. ಉದ್ಯೋಗ ಸೃಷ್ಟಿಯ ಬಗ್ಗೆ ಹೆಚ್ಚಿನ ಒತ್ತು ನೀಡಿಲ್ಲ. ದೇಶದ ಜಿಡಿಪಿಯನ್ನು ಎರಡಂಕಿಗೆ ಕೊಂಡೊಯ್ಯುತ್ತೇವೆ ಎಂದೂ ಹೇಳಿಲ್ಲ. ಆದರೂ, ಇಡೀ ಚುನಾವಣಾ ಪ್ರಣಾಳಿಕೆಯಲ್ಲಿ ಆರ್ಥಿಕ ಅಭಿವೃದ್ಧಿ ಕುರಿತಂತೆ ನೀಡಿರುವ ಅಂಕಿಅಂಶಗಳಲ್ಲಿ ಸಾಕಷ್ಟು ತಪ್ಪುಗಳಿವೆ. ಆ ತಪ್ಪುಗಳನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ. ಜಿಡಿಪಿ ಬೆಳವಣಿಗೆ ತಮ್ಮ ಅಧಿಕಾರದ ಅವಧಿಯಲ್ಲೇ ಗರಿಷ್ಟಮಟ್ಟದಲ್ಲಿದೆ ಎಂದು ಘೋಷಿಸಿಕೊಂಡಿದೆ. ವಾಸ್ತವವಾಗಿ ಯುಪಿಎ-2 ಅವಧಿಯಲ್ಲಿ ಜಿಡಿಪಿ ಮೋದಿ ಅವಧಿಗಿಂತಲೂ ಹೆಚ್ಚಿನ ದರದಲ್ಲಿ ಅಭಿವೃದ್ಧಿ ದಾಖಲಾಗಿದೆ.
ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯಗಳ ವಲಯಕ್ಕೆ 100 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ. ಕೃಷಿ ಉತ್ಪನ್ನ ಮತ್ತು ಉತ್ಪಾದಕತೆ ಹೆಚ್ಚಳಕ್ಕಾಗಿ 25 ಲಕ್ಷ ಕೋಟಿ, ಎಲ್ಲಾ ರೈತರಿಗೂ ಕೃಷಿ ಸಮ್ಮಾನ ಯೋಜನೆ ವಿಸ್ತರಣೆ, 1 ಕೋಟಿ ಹೆಕ್ಟೇರ್ ನಲ್ಲಿ ಕಿರು ನಿರಾವರಿ ಸೇರಿದಂತೆ ಕೃಷಿ ವಲಯಕ್ಕೆ ಮೋದಿ ಘೋಷಿಸಿರುವ ಯೋಜನೆಗಳ ವೆಚ್ಚವೇ 50 ಲಕ್ಷ ಕೋಟಿ ದಾಟಲಿದೆ. ಮೂಲಭೂತ ಸೌಲಭ್ಯ ಮತ್ತು ಕೃಷಿ ವಲಯಕ್ಕೆ ಘೋಷಿತ ಯೋಜನೆಗಳ ಅನುಷ್ಠಾನಕ್ಕೆ 150 ಲಕ್ಷ ಕೋಟಿ ರುಪಾಯಿ ಬೇಕಾಗುತ್ತದೆ.
ಕೃಷಿಕರಿಗಿಂತಲೂ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ವರ್ತಕ ಸಮುದಾಯದ ಮೇಲೆ ಮೋದಿ ಕಣ್ಣಿಟ್ಟಿದ್ದಾರೆ. ರಾಷ್ಟ್ರೀಯ ವರ್ತಕರ ಕ್ಷೇಮಾಭಿವೃದ್ಧಿ ಮಂಡಳಿ ರಚನೆ ಮಾಡುವುದಲ್ಲದೇ, ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಕೊಡುತ್ತಿರುವಂತೆ ವರ್ತಕರಿಗೆ ಮರ್ಚಂಟ್ ಕ್ರೆಡಿಟ್ ಕಾರ್ಡ್ ಕೊಡುತ್ತಾರಂತೆ. ಜತೆಗೆ ಜಿಎಸ್ಟಿಯಡಿ ನೊಂದಾಯಿಸಿದ ವರ್ತಕರಿಗೆ 10 ಲಕ್ಷ ಜೀವವಿಮಾ ಸೌಲಭ್ಯ ನೀಡಲಿದ್ದಾರೆ.
ಉದ್ಯಮ ಶೀಲರಿಗೆ 50 ಲಕ್ಷದವರೆಗೆ ಗ್ಯಾರಂಟಿ ರಹಿತ ಸಾಲ, 50,000 ಸ್ಟಾರ್ಟ್ ಅಪ್, ಸೇವಾವಲಯ ವಿಸ್ತರಣೆಗಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ, ಕೃಷಿ ಉತ್ಪನ್ನಗಳ ಆಮದು ತಗ್ಗಿಸಿ, ರಫ್ತು ಹೆಚ್ಚಳಕ್ಕೆ ಒತ್ತು, 50 ನಗರಗಳಲ್ಲಿ ಮೆಟ್ರೋ ಸಾರಿಗೆ, ನಗರಾಭಿವೃದ್ಧಿ, ರೈಲ್ವೆ, ಜಲಸಾರಿಗೆ, ಸ್ವಚ್ಛಭಾರತ ಮಿಷನ್, ಜಲ್ ಜೀವನ್ ಮಿಷನ್, ಮುಂದಿನ 5 ವರ್ಷಗಳಲ್ಲಿ 60000 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೈಲುಮಾರ್ಗ, ವಾಯುಮಾರ್ಗ ಮತ್ತು ಜಲಮಾರ್ಗಗಳ ವಿಸ್ತರಣೆ,
ಆರೋಗ್ಯ ವಲಯದ ಮೂಲಭೂತ ಸೌಲಭ್ಯ…. ಮೋದಿ ಸರ್ಕಾರ ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆ ಮತ್ತು ಆಂತರಿಕ ಬಜೆಟ್ ಎರಡನ್ನೂ ಸಮ್ಮಿಶ್ರಗೊಳಿಸಿ ಘೋಷಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಒಟ್ಟಾರೆ 250 ಲಕ್ಷ ಕೋಟಿ ರುಪಾಯಿಗಳಾಗುತ್ತದೆ. ಇದು 2019-20ನೇ ಸಾಲಿನ ಬಜೆಟ್ ಗಾತ್ರ 27,48,200ಕ್ಕೆ ಹೋಲಿಸಿದರೆ, ಸುಮಾರು ಎಂಟು ವರ್ಷಗಳ ಬಜೆಟ್ ಗಾತ್ರದಷ್ಟಾಗುತ್ತದೆ. ಇವೆಲ್ಲದರ ಜತೆಗೆ ರಾಷ್ಟ್ರದ ಸುರಕ್ಷತೆಗಾಗಿ ಇಡೀ ರಕ್ಷಣಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಮುಂದಾಗಿದೆ.
ಈ ಎಲ್ಲದಕ್ಕೂ ವೆಚ್ಚ ಮಾಡಲು ಹಣಕಾಸು ಸಂಪನ್ಮೂಲ ಕ್ರೋಢೀಕರಣ ಮಾರ್ಗಗಳನ್ನು ಸೂಚಿಸಿಲ್ಲ. ಹೀಗಾಗಿ ಇದು ರಾಜಕೀಯ ಪಕ್ಷವೊಂದು ಅಧಿಕಾರಕ್ಕೆ ಬಂದರೆ ಜಾರಿಮಾಡಬಹುದಾದ ಯೋಜನೆಗಳ ಮುನ್ನೋಟವಾಗದೇ ಕೇವಲ ಹುಸಿ ಭರವಸೆಗಳ ಪಟ್ಟಿಯಾಗಿ ಉಳಿದುಕೊಂಡಿದೆ.
ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ನಂತರ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ ಎಂದೂ, ತಮ್ಮ ಅವಧಿಯಲ್ಲಿ ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಪ್ರಮಾಣ ತಗ್ಗಿದೆ ಎಂದೂ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಆದರೆ, ಕಳೆದ ವಿತ್ತೀಯ ವರ್ಷದ ವಿತ್ತೀಯ ಕೊರತೆ ಗುರಿ ಸಾಧಿಸಲಾಗಿಲ್ಲ. ಅದನ್ನು ಜಿಡಿಪಿಯ ಶೇ.3.3ರಿಂದ ಶೇ.3.5ಕ್ಕೆ ಪರಿಷ್ಕರಿಸಲಾಗಿದೆ. ವಿತ್ತೀಯ ಕೊರತೆ ಗುರಿ ಸಾಧಿಸಲಾಗದಿರುವುದು ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟ ಮುಟ್ಟಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ಫೆಬ್ರವರಿ ತಿಂಗಳಲ್ಲಿ ಹೊರ ಬಿದ್ದ ಅಂಕಿ ಅಂಶಗಳು ನಿರುದ್ಯೋಗ ಪ್ರಮಾಣವು 45 ವರ್ಷಗಳಲ್ಲೇ ಗರಿಷ್ಠಮಟ್ಟಕ್ಕೆ ಏರಿದೆ ಎಂಬ ವಾಸ್ತವಿಕ ಸತ್ಯದ ಬಗ್ಗೆ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗಿದೆ. ಆದರೆ, ಪ್ರಣಾಳಿಕೆಯನ್ನು ಉದ್ಯೋಗ ಸೃಷ್ಟಿಯ ಬಗ್ಗೆ ನೇರವಾಗಿ ಪ್ರಸ್ತಾಪ ಮಾಡಿಲ್ಲ. ಅಲ್ಲಲ್ಲಿ ಬಿಡಿ ಬಿಡಿಯಾಗಿ ಪ್ರಸ್ತಾಪಿಸಲಾಗಿದೆ. ಆಶ್ವಾಸನೆ ಕೊಟ್ಟಂತೆಯೂ ಆಗಬೇಕು, ಈಡೇರಿಸಲಾಗದಿದ್ದರೆ ಟೀಕೆಗೆ ಒಳಗಾಗದಂತೆಯೂ ಕಾಪಾಡಿಕೊಳ್ಳುವ ತಂತ್ರ ಇದು.
ಸಲೀಸು ವಹಿವಾಟು ಮಾಡುವ ರಾಷ್ಟ್ರಗಳ ಪಟ್ಟಿಯ ಶ್ರೇಯಾಂಕದಲ್ಲಿ ಸುಧಾರಣೆಯಾಗಿರುವ ಬಗ್ಗೆ ಮತ್ತಷ್ಟು ಉತ್ತಮ ಪಡಿಸಿಕೊಳ್ಳುವ ಬಗ್ಗೆಯೂ ಪ್ರಸ್ತಾಪಿಸಿದೆ. ಇಂಟರ್ ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸ್ ಸೆಂಟರ್ ಅಥಾರಿಟಿ ಪ್ರಾರಂಭಿಸುವುದಾಗಿ, ಭಾರತವನ್ನು ಫೈನಾನ್ಷಿಯಲ್ ಹಬ್ ಮಾಡುವುದಾಗಿ ಹೇಳಿಕೊಂಡಿದೆ.
ಉತ್ಪಾದಕ ವಲಯದಿಂದ ಜಿಡಿಪಿಗೆ ಹೆಚ್ಚಿನ ಪಾಲು ನೀಡಲು ಕ್ರಮ ಕೈಗೊಳ್ಳುವುದಾಗಿ, ವ್ಯಾಪಾರ, ವಾಣಿಜ್ಯ ವ್ಯಾಜ್ಯಗಳನ್ನು ಏಕಗವಾಕ್ಷಿ ಮೂಲಕ ಇತ್ಯರ್ಥಪಡಿಸುವ ಬಗ್ಗೆಯೂ ಪ್ರಸ್ತಾಪಿಸಿದೆ.
ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರ ಜಾರಿಗೆ ತಂದ ಆರ್ಥಿಕ ನೀತಿಗಳಿಂದಾಗಿ ಉಂಟಾದ ಉದ್ಯೋಗ ನಷ್ಟ, ಉತ್ಪಾದನೆ ನಷ್ಟ ಗರಿಷ್ಠ ಪ್ರಮಾಣದದ್ದು, ದೇಶದ ಆರ್ಥಿಕತೆ ಅಗಾಧವಾಗಿ ಕುಸಿದಿದೆ. ಅಪನಗದೀಕರಣ ಸೇರಿದಂತೆ ಮೋದಿ ಸರ್ಕಾರದ ಜಾರಿಗೆ ತಂದ ನೀತಿಗಳ ಬಗ್ಗೆ ಎಲ್ಲಿಯೂ ಬಿಜೆಪಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿಲ್ಲ. ಮತ್ತು ಆಗಿರುವ ಲೋಪಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ತಪ್ಪು ತಿದ್ದಿಕೊಳ್ಳುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿಲ್ಲ.
ಇದು ಬಿಜೆಪಿ ಪ್ರಣಾಳಿಕೆ ಅಲ್ಲ, ಮೋದಿ ಪ್ರಣಾಳಿಕೆ….
ಅಂತಿಮವಾಗಿ ಇದು ಯಾರ ಪ್ರಣಾಳಿಕೆ ಎಂಬ ಅನುಮಾನವೂ ಬರುತ್ತದೆ. ದೇಶ ಮೋದಲು, ಪಕ್ಷ ನಂತರ, ವ್ಯಕ್ತಿ ಕೊನೆಗೆ ಎಂಬ ಸಿದ್ಧಾಂತಕ್ಕೆ ಬಿಜೆಪಿ ಚುನಾವಣಾ ಪ್ರಣಾಳಿಕೆ ತಿಲಾಂಜಲಿ ಇಟ್ಟಂತಿದೆ. ನಲ್ವತ್ತೈದು ಪುಟಗಳ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಧಾನ ಸೇವಕ ನರೇಂದ್ರಮೋದಿಯ ಅರ್ಧ ಡಜನ್ ಫೋಟೋಗಳು ಮತ್ತು ಅರ್ಧ ಡಜನ್ ಸ್ಟೇಟ್ ಮೆಂಟ್ ರಾರಾಜಿಸುತ್ತಿವೆ. ಪುಟಪುಟಗಳಲ್ಲೂ ಮೋದಿಯದ್ದೇ ಹೆಸರು. ಮೋದಿ ಕಳೆದ ಐದು ವರ್ಷಗಳಲ್ಲಿ ಸಾಧಿಸಿದ್ದರ ಬಗ್ಗೆ ವರ್ಣನೆಗಳ ಮಹಾಪೂರವೇ ಇದೆ. 45 ಪುಟಗಳ ಪ್ರಣಾಳಿಕೆ ಓದಿದ ಮೇಲೆ ಇದು ಬಿಜೆಪಿ ಪ್ರಮಾಣಳಿಕೆ ಅನಿಸುವುದಿಲ್ಲ. ಪಕ್ಕಾ ಮೋದಿಯಿಂದ ಮೋದಿಗಾಗಿ, ಮೋದಿಗೋಸ್ಕರ ಸಿದ್ಧಪಡಿಸಲಾದ ನರೇಂದ್ರಮೋದಿ ಪ್ರಣಾಳಿಕೆ ಎನಿಸುತ್ತದೆ!