ಹದಿನೇಳನೆಯ ಲೋಕಸಭಾ ಚುನಾವಣೆಗೆ ದೇಶದ ರಾಜಕೀಯ ರಣಭೂಮಿ ಸಜ್ಜಾಗಿದೆ. ಪ್ರತಿ ಚುನಾವಣೆಯ ಸಂದರ್ಭದಲ್ಲಿ ಬಹಿರಂಗವಾಗುವ ಅಂಕಿ ಅಂಶಗಳಲ್ಲಿ ಮೂಲೆಗೊತ್ತಲ್ಪಟ್ಟಿರುವ ಮಹಿಳಾ ಪಾಲುದಾರಿಕೆ, 33% (ಕನಿಷ್ಟ) ಮೀಸಲಾತಿಯ ಅಗತ್ಯವನ್ನು ಸಮರ್ಥಿಸುತ್ತಾ ಹೋಗುತ್ತದೆ. ಈ ಬಾರಿಯ ಚುನಾವಣೆಯಲ್ಲಾಗಿರುವ ಆಸಕ್ತಿದಾಯಕ ಬದಲಾವಣೆ ಅಂದರೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ತೃಣಮೂಲ ಪಕ್ಷದಲ್ಲಿ ಮಹಿಳೆಯರಿಗೆ 41% ಮೀಸಲಾತಿ ನೀಡಿದ್ದಾರೆ. ಒಡಿಶಾದಲ್ಲಿ ಬಿಜೆಡಿ ಮಖ್ಯಸ್ಥ ನವೀನ್ ಪಾಟ್ನಾಯಕ್ 33% ಮೀಸಲಾತಿ ನೀಡಿದ್ದಾರೆ. ಮೊನ್ನೆಯಷ್ಟೇ ಬಿಡುಗಡೆಗೊಂಡ ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆಯಲ್ಲಿ ರಾಹುಲ್ ಗಾಂಧಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 33% ಮೀಸಲಾತಿ ಮಸೂದೆಯನ್ನು ಜಾರಿಗೆ ತರುವುದಾಗಿಯೂ, ಸರಕಾರೀ ಉದ್ಯೋಗಗಳಲ್ಲಿ 33% ಮೀಸಲಾತಿಯನ್ನು ಮಹಿಳೆಯರಿಗೆ ನೀಡುವುದಾಗಿಯೂ ಘೋಷಿಸಿದ್ದಾರೆ. ಅಂತೂ ಮಹಿಳೆಯರಿಗೆ ಕನಸುಗಳನ್ನು ಮಾರುವ ಪ್ರಯತ್ನವನ್ನಂತೂ ಎಲ್ಲರೂ ನಡೆಸಿದ್ದಾರೆ.
ಅಧಿಕಾರದ ಮೊಗಸಾಲೆಯಲ್ಲಿ ಮಹಿಳೆಯರೆಷ್ಟು?
ಮತಗಟ್ಟೆಗಳಲ್ಲಿ ಉದ್ದುದ್ದ ಸಾಲುಗಳಲ್ಲಿ ನಿಂತು ನೇತಾರರನ್ನು ಆಯ್ಕೆ ಮಾಡುವ ಮತದಾನದಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಂತೂ ಅನೇಕ ರಾಜ್ಯಗಳಲ್ಲಿ ಮತದಾನ ಪ್ರಮಾಣ ಪುರುಷರಿಗಿಂತ ಮಹಿಳೆಯರದು ಹೆಚ್ಚಿರುವುದನ್ನೂ, ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನೂ ಅಂಕಿ ಅಂಶಗಳು ಹೇಳುತ್ತಿವೆ. ಮಹಿಳೆಯರು ಹೆಚ್ಚಿರುವ ಕಡೆ ಪಿಂಕ್ ಮತಗಟ್ಟೆಗಳನ್ನು ರೂಪಿಸುವ ಪರಿಕಲ್ಪನೆ 2013ರ ವಿಧಾನಸಭಾ ಚುನಾವಣೆಯಲ್ಲಿ ಮೂಡಿಬಂದಿದೆ. ಮತಗಟ್ಟೆಗಳಲ್ಲಿ ಮಹಿಳಾ ಮತಗಟ್ಟೆ ಅಧಿಕಾರಿಗಳು, ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಚುನಾವಣಾ ಪ್ರಕ್ರಿಯೆಗಳಲ್ಲಿ ಮಹಿಳೆಯರು ಹಲವು ಹಂತಗಳಲ್ಲಿ ದುಡಿಯುತ್ತಲೇ ಬಂದಿದ್ದಾರೆÉ. ಆದರೆ ಎಲ್ಲರ ಬದುಕಿನ ಮೇಲೆ ಪರಿಣಾಮ ಬೀರುವಂತಹ ನೀತಿಗಳನ್ನು ರೂಪಿಸುವ, ನಿರ್ಧಾರಗಳನ್ನು ಕೈಗೊಳ್ಳುವ ನಮ್ಮ ಶಾಸನಸÀಭೆಗಳಲ್ಲಿ ಮಾತ್ರ ಬೆರಳೆಣಿಕೆಯ ಶಾಸಕಿಯರಿದ್ದಾರೆ. 1957 ರಲ್ಲಿ 22 (4.45%) ಸಂಸದೆಯರಿದ್ದು ಅದು 2014 ರಲ್ಲಿ 66(12.15%) ಕ್ಕೆ ಬಂದು ನಿಂತಿದೆ. ಪ್ರಾತಿನಿಧ್ಯ ಎರಡಂಕಿ ತಲಪಲು(10.87%) 2009 ನೇ ಇಸವಿ ಬರಬೇಕಾಯಿತು. (ಸ್ವಾತಂತ್ರ್ಯ ಬಂದು 62 ವರ್ಷಗಳ ನಂತರ!) ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ರಾಜಕೀಯ ಹಕ್ಕು ಅಧಿಕಾರ ಮತ್ತು ನಿಯಂತ್ರಣ ಪುರುಷನಷ್ಟೇ ಮಹಿಳೆಯರದ್ದೂ ಆಗಿರುತ್ತದೆ. ಹೀಗಿರುವಾಗ, ಮುಕ್ತ ಹಾಗೂ ನ್ಯಾಯಯುತ ಚುನಾವಣೆಯಲ್ಲಿ ಮಹಿಳೆಯರಿಗೆ ಇಷ್ಟು ಪಾಲು ದಕ್ಕಿದರೆ ಸಾಕಾ? ಇಷ್ಟಕ್ಕೂ ಅಧಿಕಾರದ ಸಿಂಹ ಪಾಲನ್ನು ತಮ್ಮದಾಗಿಸಿಕೊಂಡ ಪುರುಷಲೋಕದ ರಾಜಕಾರಣ ಹೇಗಿದೆ?
ಪುರುಷ ರಾಜಕಾರಣದ ಕತ್ತಲ ಭಾಗ
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮೊದಲಹಂತದಲ್ಲಿ ಸ್ಪರ್ಧಿಸಿರುವ 1279 ಅಭ್ಯರ್ಥಿಗ¼ಲ್ಲಿ 1266 ಅಭ್ಯರ್ಥಿಗಳ ಪ್ರಮಾಣ ಪತ್ರದ ವಿಶ್ಲೇಷಣೆಯ ಆಧಾರದಲ್ಲಿ ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ವಿಶ್ಲೇಷಣೆಯೊಂದನ್ನು ಪ್ರಕಟಿಸಿದೆ. ಅದು ಕುತೂಹಲಕಾರಿಯಾಗಿರುವಂತೆ ಆತಂಕಕಾರಿಯೂ ಆಗಿದೆ. ಭಾರತದ ಪ್ರಜಾತಂತ್ರ ಅಹಿತಕರ ವಿರೋಧಾಭಾಸವೊಂದರ ಮೇಲೆ ನಿಂತಿದೆ, ಗೆಲ್ಲುವ ಅಭ್ಯರ್ಥಿಗಳಲ್ಲಿ ಹಲವರು ಅಪರಾಧಿಗಳು ಮಾತ್ರವಲ್ಲ ಅಪಾಯಕಾರಿಗಳೂ ಆಗಿರುತ್ತಾರೆ ಎಂಬ ಆಘಾತಕಾರಿ ಸತ್ಯವನ್ನು ಇದು ಹೊರಗೆಡಹುತ್ತದೆ.
ಅತಿ ಶ್ರೀಮಂತರ ಲೋಕಸಭೆ
ಪ್ರತಿ ಚುನಾವಣೆಯಲ್ಲೂ ಹಣ ಹೆಂಡದ ಹೊಳೆ ಹರಿಯುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. 2014ರ ಚುನಾವಣೆ ಅತ್ಯಂತ ದುಬಾರಿ ಚುನಾವಣೆಯೆಂದು ‘ಪ್ರಸಿದ್ಧಿ’ ಪಡೆದಿದ್ದು ಸರಕಾರದಿಂದ 3,428 ಕೋಟಿ ವೆಚ್ಚವಲ್ಲದೆ ಪಕ್ಷ ಮತ್ತು ಅಭ್ಯರ್ಥಿಗಳು ರೂ.30,000 ಕೋಟಿಯಿಂದ ರೂ 35,000 ಕೋಟಿಯವರೆಗೆ ವೆಚ್ಚ ಮಾಡಿದ್ದಾರೆ ಎಂಬ ಅಂದಾಜಿದೆ. ಈ ದುಬಾರಿ ವೆಚ್ಚ ಬಹುಪಾಲು ಗೌಪ್ಯವಾಗಿದ್ದು ಇದರ ಹಿಂದೆ ಕಪ್ಪು ಹಣ ಮತ್ತು ಕ್ರಿಮಿನಲ್ಗಳ ಪಾತ್ರ ಹೆಚ್ಚಾಗಿರುವುದರಲ್ಲಿ ಅನುಮಾನವಿಲ್ಲ. ಹೀಗೆ, ಹಣದ ಪಾತ್ರ ಮಿತಿ ಮೀರಿರುವುದರಿಂದ 16 ನೇ ಲೋಕಸಭೆಯಲ್ಲಿ 82% ಸದಸ್ಯರು ಕೋಟ್ಯಧೀಶರಾಗಿದ್ದಾರೆ. (2009 ರಲ್ಲಿ 58% ಮತ್ತು 2004 ರಲ್ಲಿ 30% ಇತ್ತು). ಪ್ರಸಕ್ತ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿರುವ 177 ಅಭ್ಯರ್ಥಿಗಳು ಐದು ಕೋಟಿಗೂ ಅಧಿಕ (14%) ಸಂಪತ್ತು ಹೊಂದಿದ್ದಾರೆ, 99 ಅಭ್ಯರ್ಥಿಗಳು 2-5 ಕೋಟಿಯ ಸಂಪತ್ತು ಹೊಂದಿದ್ದಾರೆ ಎಂದು ಎಡಿಆರ್ ಹೇಳುತ್ತದೆ.
ಪ್ರಜಾಸತ್ತೆಯ ದೇಗುಲದೊಳಗೆ ಕ್ರಿಮಿನಲ್ಗಳು, ಮಹಿಳಾ ಪೀಡಕರು
ರಾಜಕೀಯ ಮತ್ತು ಚುನಾವಣೆಗಳಲ್ಲಿ ಕಪ್ಪು ಹಣದ ಪಾತ್ರ ಹೆಚ್ಚಾದಂತೆ ಅವುಗಳ ಅಪರಾಧೀಕರಣವೂ ಹೆಚ್ಚಾಗುತ್ತಿದೆ. ಅಪರಾಧ ಕೃತ್ಯಗಳಲ್ಲಿ ತೊಡಗಿರುವವರು ಕಾನೂನಿನ ಶಿಕ್ಷೆಯಿಂದ ಬಚಾವಾಗಲು ಮೊದ ಮೊದಲು ರಾಜಕಾರಣಿಗಳಿಗೆ ಹಣ ಒದಗಿಸಿ ಸುಮ್ಮನಿರುತ್ತಿದ್ದರು. ಬರಬರುತ್ತ ಅವರೇ ನೇರವಾಗಿ ರಾಜಕಾರಣದಲ್ಲಿ ಭಾಗವಹಿಸಲು ತೊಡಗಿದರು. ಹಣಬಲ ತೋಳ್ಬಲಗಳಿಂದ ತಾವೂ ಗೆಲ್ಲುವುದಲ್ಲದೆ ತಮ್ಮ ಪಕ್ಷದ ಇತರ ಅಭ್ಯರ್ಥಿಗಳನ್ನು ಗೆಲ್ಲಿಸಲು ಹಣ ಚೆಲ್ಲುವ ಇಂತಹ ಮಂದಿಗಳನ್ನು ರಾಜಕೀಯ ಪಕ್ಷಗಳು ಹೆಚ್ಚು ಅವಲಂಬಿಸುತ್ತಿವೆ, ಅಂತಹವರಿಗೇ ಹೆಚ್ಚು ಹೆಚ್ಚು ಟಿಕೆಟ್ ನೀಡುತ್ತಿವೆ, ಸಂಸತ್ತು ಮತ್ತು ವಿಧಾನಸಭೆಗೆ ಅಂತಹವರೇ ಹೆಚ್ಚು ಆಯ್ಕೆಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಡಿಆರ್ ಅಂಕಿ ಅಂಶದ ಒಂದು ಝಲಕ್ ಹೀಗಿದೆ-
1,266 ಉಮೇದುದಾರರ ಪೈಕಿ 213 (17%) ಮಂದಿ ತಮ್ಮ ಮೇಲೆ ಕ್ರಿಮಿನಲ್ ಪ್ರಕರಣಗಳು ಇರುವುದಾಗಿಯೂ, 146 ಮಂದಿ (12%) ಗಂಭೀರ ಕ್ರಿಮಿನಲ್ ಪ್ರಕರಣಗಳು ಇರುವುದಾಗಿಯೂ, 12 ಮಂದಿ ತಾವು ಅಪರಾಧಿಗಳೆಂದು ಸಾಬೀತಾದ ಪ್ರಕರಣಗಳನ್ನು ಹೊಂದಿರುವುದಾಗಿಯೂ, 25 ಅಭ್ಯರ್ಥಿಗಳು ತಮ್ಮ ಮೇಲೆ ಕೊಲೆಯತ್ನ ಸಂಬಂಧಿತ ಪ್ರಕರಣಗಳಿವೆಯೆಂದೂ, 4 ಮಂದಿ ಅಪಹರಣ ಸಂಬಂಧಿತ ಪ್ರಕರಣಗಳು ಇದೆಯೆಂದೂ, 16 ಮಂದಿ ತಮ್ಮ ಮೇಲೆ ಮಹಿಳೆಯರ ವಿರುದ್ಧದ ಅಪರಾಧ (ಅತ್ಯಾಚಾರ, ಹಲ್ಲೆ, ಮಾನಭಂಗ ಇತ್ಯಾದಿ) ಪ್ರಕರಣಗಳಿವೆಯೆಂದೂ, 12 ಮಂದಿ ದ್ವೇಷ ಭಾಷಣದ ಕೇಸುಗಳಿವೆಯೆಂದೂ ಘೋಷಿಸಿದ್ದಾರೆ.
ಇಂತಹವರಿಂದ ಮಹಿಳೆಯರ ಹಿತರಕ್ಷಣೆ ಸಾಧ್ಯವೇ?
ಪುರುಷ ಪ್ರತಿನಿಧಿಗಳಿಂದ ತುಂಬಿದ ಸರಕಾರ ಪುರುಷರ ಹಿತವನ್ನು ಕಾಯ್ದುಕೊಳ್ಳುವುದು ಸಹಜವಾದುದು. ಮಹಿಳೆಯರ ಅನುಪಸ್ಥಿತಿಯಲ್ಲಿ ನಿರ್ಧಾರಗಳನ್ನು ಕೈಗೊಂಡಾಗ ಮಹಿಳೆಯರ ಹಿತರಕ್ಷಣೆಯಾಗುತ್ತದೆಯೆಂದು ಹೇಗೆ ಹೇಳುವುದು? ಮೇಲೆ ಹೇಳಿದಂತಹ ಜನನಾಯಕರಲ್ಲಿ ಮಹಿಳಾ ಸಂವೇದನೆಯನ್ನು, ಮಹಿಳಾಪರ ಕಾಳಜಿಯನ್ನು ನಿರೀಕ್ಷಿಸುವುದಾದರೂ ಹೇಗೆ? ಹಾಗಾಗಿ ಮಹಿಳೆಯರನ್ನು ಮೃದುವಾಗಿ ಕಾಣುವ, ಮಹಿಳೆಯರ ಸ್ವಾವಲಂಬಿತನಕ್ಕೆ ಒತ್ತು ನೀಡುವ, ಮಹಿಳೆಯರ ಮೇಲೆ ನಡೆಯುವ ಶೋಷಣೆಯ ವಿರುದ್ಧ ಮಾತಾಡುವವರನ್ನು, ಪಕ್ಷಗಳನ್ನು ಮಾತ್ರ ಬೆಂಬಲಿಸುತ್ತೇವೆ ಎಂದು ಮಹಿಳೆಯರೇ ಒಟ್ಟಾಗಿ ತೀರ್ಮಾನಿಸಬೇಕಾದ ಕಾಲವಿದು. ಈ ಚುನಾವಣೆಯ ಸಂದರ್ಭದಲ್ಲಿ ಅದು ನಡೆಯಬೇಕಾಗಿದೆ.
ಒಟ್ಟಿನಲ್ಲಿ, ಪುರುಷಮಯವಾಗಿರುವ ರಾಜಕೀಯಕ್ಕೆ ವಿಭಿನ್ನ ಅನುಭವಗಳನ್ನು, ಮೌಲ್ಯಗಳನ್ನು ಮಹಿಳೆಯರು ತರಬೇಕಾದ ಅವಶ್ಯಕತೆಯಿದೆ. ಮಹಿಳಾ ಜನಸಂಖ್ಯೆಗೆ ಬೆಲೆ ಕೊಟ್ಟಾದರೂ ರಾಜಕೀಯ ಪ್ರಾತಿನಿಧ್ಯದ ಪ್ರಮಾಣವನ್ನು ಹೆಚ್ಚಿಸಿದಲ್ಲಿ ಮಾತ್ರ ಅಲ್ಲಿ ನಡೆಯುವ ಚರ್ಚೆಗಳ ಸ್ವರೂಪ ಬದಲಾಗಬಹುದು. ಪ್ರಜಾಸತ್ತೆಯ ಗುಡಿಯೊಳಗಿನ ಕೊಳೆ ತೊಳೆದು ಅರ್ಥಪೂರ್ಣ ಪ್ರಜಾಪ್ರಭುತ್ವ ರೂಪುಗೊಳ್ಳಬಹುದು. ಅಂತಹ ದಿನಗಳಿಗಾಗಿ ಮಹಿಳೆಯರು ಎದುರು ನೋಡುತ್ತಿದ್ದಾರೆ.

ಗುಲಾಬಿ ಬಿಳಿಮಲೆ
(ಲೇಖಕರು ಸಾಮಾಜಿಕ ಚಿಂತಕರು, ಸರ್ಕಾರೇತರ ಸಂಸ್ಥೆಯೊಂದರಲ್ಲಿ ಜೆಂಡರ್ ವಿಷಯಗಳ ಕುರಿತ ತರಬೇತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ)
2 Comments
ನಿಜವಾಗಲೂ ಬಹಳ ಅಧ್ಬುತ ವಿಶ್ಲೇಷಣೆ… ತೀರ್ಮಾನ ಕೈಗೊಳ್ಳಲು ಎಲ್ಲಾ ಮಹಿಳೆಯರು ಒಂದು ನಿರ್ಧಾರಕ್ಕೆ ಬರಲು ಸೂಕ್ತ ಸಮಯ……
Very true. Women equality is still only theory. Hope to see changes in this election.