ಇಂಫಾಲ: ಮಣಿಪುರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಸಾಮಾಜಿಕ ಮಾಧ್ಯಮದ ಮೂಲಕ ಟೀಕಿಸಿದ ಕಾರಣಕ್ಕೆ ಕಳೆದ ನವೆಂಬರ್ 27ರಂದು ಜೈಲಿಗೆ ತಳ್ಳಲ್ಪಟ್ಟಿದ್ದ ಯುವ ಪತ್ರಕರ್ತ ಕಿಶೋರ್ ಚಂದ್ರ ವಾಂಗ್ ಖೇಮ್ (39) ಅವರನ್ನು ಬಿಡುಗಡೆ ಮಾಡುವಂತೆ ಮಣಿಪುರ ಹೈ ಕೋರ್ಟ್ ಆದೇಶ ನೀಡಿದೆ.
ಇಂಫಾಲದ ಸ್ಥಳೀಯ ಸುದ್ದಿವಾಹಿನಿಯೊಂದರಲ್ಲಿ ನಿರೂಪಕನಾಗಿ ಕೆಲಸ ಮಾಡುತ್ತಿದ್ದ ಕಿಶೋರ್ ಚಂದ್ರ ಫೇಸ್ಬುಕ್ ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಕುರಿತು ಮಾಡಿದ್ದ ಟೀಕೆ ವೈರಲ್ ಆಗಿತ್ತು. “ಮುಖ್ಯಮಂತ್ರಿ ಬಿರೇನ್ ಸಿಂಗ್ ನರೇಂದ್ರ ನರೇಂದ್ರ ಮೋದಿಯ ಕೈಬೊಂಬೆಯಾಗಿದ್ದಾರೆ. ಝಾನ್ಸಿ ರಾಣಿ ಸ್ಮರಣೆಯನ್ನು ಆಚರಿಸುವ ಇವರು ಬ್ರಿಟಿಷರ ವಿರುದ್ಧ ಹೋರಾಡಿದ ಮಣಿಪುರದ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆತೇಬಿಟ್ಟಿದ್ದಾರೆ. ಈ ಮೂಲಕ ಅವರಿಗೆ ಅವಮಾನ ಮಾಡಿದ್ದಾರೆ” ಎಂದು ಹೇಳಿದ್ದ ಕಮೆಂಟ್ ಫೇಸ್ಬುಕ್, ಯೂಟ್ಯೂಬ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಇದನ್ನು ಅನುಸರಿಸಿ ಕಿಶೋರ್ ಚಂದ್ರ ಅವರ ಮನೆಗೆ ರಾತ್ರಿ ವೇಳೆಗೆ ನುಗ್ಗಿದ್ದ ಪೊಲೀಸರ ತಂಡವೊಂದು ಏಕಾಏಕಿಯಾಗಿಯಾಗಿ ಅವರನ್ನು ಎತ್ತಿಹಾಕಿಕೊಂಡು ಹೋಗಿದ್ದರು. ಕಿಶೋರ್ ಚಂದ್ರ ಅವರ ಪತ್ನಿ ರೇಖಾ ಅವರಿಗೆ ಕನಿಷ್ಟ ಪಕ್ಷ ವಕೀಲರಿಗೆ ಮಾತನಾಡಲೂ ಅವಕಾಶ ನೀಡಿರಲಿಲ್ಲ. ಯಾವ ವಿವರಣೆಯನ್ನೂ ನೀಡಿರಲಿಲ್ಲ. ತನ್ನ ಗಂಡನನ್ನು ಬಂಧಿಸಲಾಗದೆ ಎಂದು ಅವರಿಗೆ ತಿಳಿದುಬಂದಿದ್ದು ಮರುದಿನ ಸುದ್ದಿ ನೋಡಿದಾಗಲೇ.
ಕಿಶೋರ್ ಚಂದ್ರ ಅವರ ಮೇಲೆ ಐಪಿಸಿ ಕಾಯ್ದೆಯ ಸೆಕ್ಷನ್ 124 ಎ ಅಡಿ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸ್ಥಳೀಯ ನ್ಯಾಯಾಲವು, ಸರ್ಕಾರವನ್ನು ಟೀಕಿಸುವುದು ರಾಜದ್ರೋಹ ಹೇಗಾಗುತ್ತದೆ ಎಂದು ಪ್ರಶ್ನಿಸಿ ಈ ಕೇಸನ್ನು ರದ್ದುಗೊಳಿಸಿ ಕಿಶೋರ್ ಚಂದ್ರ ಅವರನ್ನು ಬಿಡುಗಡೆಗೊಳಿಸಲು ಆದೇಶಿಸಿತ್ತು. ಆದರೆ ಇಷ್ಟಕ್ಕೆ ಸುಮ್ಮನಾಗದ ಪೊಲೀಸರು (ರಾಜ್ಯ ಸರ್ಕಾರ) 24 ಗಂಟೆ ಒಳಗಾಗಿ ಕಿಶೋರ್ ಚಂದ್ರ ಅವರ ಮೇಲೆ ಎನ್ ಎಸ್ ಎ (ರಾಷ್ಟ್ರೀಯ ಭದ್ರತಾ ಕಾಯ್ದೆ) ಅಡಿ ಕೇಸು ದಾಖಲಿಸಿತ್ತು.
ರಾಷ್ಟ್ರೀಯ ಭದ್ರತಾ ಕಾಯ್ದೆಯ ಪ್ರಕಾರ ಡಿಸೆಂಬರ್ 13ರಂದು ಸಲಹಾ ಮಂಡಳಿಯನ್ನು ರಚಿಸಲಾಗಿ ಅದು ಕಿಶೋರ್ ಚಂದ್ರ ಅವರ ಬಂಧನಕ್ಕೆ ಸಮ್ಮತಿ ಸೂಚಿಸಿ ಒಂದು ವರ್ಷ ಕಾಲ ಅವರನ್ನು ಕಾರಾಗೃಹ ವಾಸದಲ್ಲಿ ಇರಿಸುವಂತೆ ಹೇಳಿತ್ತು. ಇದನ್ನು ಪ್ರಶ್ನಿಸಿ ಕಿಶೋರ್ ಚಂದ್ರ ಹೈ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಇಂಫಾಲ ಹೈಕೋರ್ಟ್ ಸೋಮವಾರ ತೀರ್ಪು ನೀಡಿ ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಬಂಧಿಸುವ ಯಾವ ತಪ್ಪನ್ನೂ ಪತ್ರಕರ್ತ ಕಿಶೋರ್ ಚಂದ್ರ ಮಾಡಿಲ್ಲ, ಯಾವುದೇ ಸರ್ಕಾರ ಅಥವಾ ಮುಖ್ಯಮಂತ್ರಿಯನ್ನ ಟೀಕಿಸುವುದಕ್ಕೂ ರಾಷ್ಟ್ರೀಯ ಭದ್ರತೆಗೂ ಸಂಬಂಧವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈ ಕೋರ್ಟ್ ಕಿಶೋರ್ ಚಂದ್ರ ಅವರ ಬಿಡುಗಡೆಗೆ ಆದೇಶ ನೀಡಿದೆ.
“ಈಗ ನ್ಯಾಯಾಲಯದಿಂದ ಕಿಶೋರ್ ಅವರ ಬಿಡುಗಡೆಯ ಮೌಖಿಕ ಆದೇಶ ಪಡೆದಿದ್ದೇವೆ. ಇನ್ನೂಲಿಖಿತ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡು ಅವರ ಬಿಡುಗಡೆಗೆ ಎರಡು ಮೂರು ದಿನ ಬೇಕಾಗಬಹುದು. ಹೈಕೋರ್ಟ್ ಆದೇಶದಿಂದ ನೆಮ್ಮದಿಯಾಗಿದೆ” ಎಂದಿದ್ದಾರೆ ಕಿಶೋರ್ ಪತ್ನಿ ರಂಜಿತಾ ಎಳಂಗ್ಬಂ
ಕೇವಲ ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಮುಖ್ಯಮಂತ್ರಿಯನ್ನು ಟೀಕಿಸಿದ್ದ ಕಾರಣಕ್ಕೆ ಎನ್ ಎಸ್ ಎ ಕಾಯ್ದೆಯಡಿ ಪತ್ರಕರ್ತ ಕಿಶೋರ್ ಚಂದ್ರ ಅವರನ್ನು ಜೈಲಿಗೆ ಕಳಿಸಿದ್ದ ಮಣಿಪುರ ಬಿಜೆಪಿ ಸರ್ಕಾರದ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

More Articles
By the same author