ಸಿಮಿ ಸಂಘಟನೆಯ ಹಾದಿಯಲ್ಲಿದೆ ಬಿಜೆಪಿ ಐಟಿ ಸೆಲ್ ಎಂದ ಅದರ ಸ್ಥಾಪಕ ಬೋರಾ!
ಅಂದಿನ ಉದ್ದೇಶಕ್ಕೂ ಈಗಿನ ಬೆಳವಣಿಗೆಗಳಿಗೂ ಹೋಲಿಸಿದರೆ ಸಾಮಾಜಿಕ ಜಾಲತಾಣದ ಈ ಹೊತ್ತಿನಲ್ಲಿ ಬಿಜೆಪಿ ಐಟಿ ಸೆಲ್ ಭಸ್ಮಾಸುರನ ರೀತಿ ಬೆಳೆದುನಿಂತಿದೆ. ಸಾಮಾಜಿಕ ಜಾಲತಾಣದ ಮೂಲಕ ದೇಶದ ಪ್ರಜಾಪ್ರಭುತ್ವ ಮತ್ತು ಜನಸಾಮಾನ್ಯರ ದನಿ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಆರಂಭದಲ್ಲಿ ನಾವೆಲ್ಲಾ ಅಂದುಕೊಂಡಿದ್ದೆವು. ಆದರೆ, ಆ ನಿರೀಕ್ಷೆಗೆ ವ್ಯತಿರಿಕ್ತವಾಗಿ ಇಂದು ಬಿಜೆಪಿ ಐಟಿ ಸೆಲ್ ಬೆಳೆದಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೇ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಬಿಜೆಪಿ ಐಟಿ ಸೆಲ್ ಸ್ಥಾಪಕ ಮುಖ್ಯಸ್ಥ ಪ್ರದ್ಯುತ್ ಬೋರಾ ಆತಂಕ ವ್ಯಕ್ತಪಡಿಸಿದ್ದಾರೆ.
“ಒಬ್ಬ ವ್ಯಕ್ತಿ ತನ್ನ ಮೂಗಿನ ನೇರಕ್ಕೆ ಇಡೀ ದೇಶದ ವ್ಯವಸ್ಥೆಯನ್ನು ಬಗ್ಗಿಸುವ ಮೂಲಕ ದೇಶವನ್ನು ಆಳುತ್ತಿದ್ದರೆ, ಮತ್ತೊಬ್ಬ ವ್ಯಕ್ತಿ ಆಳುವ ಪಕ್ಷವನ್ನು ನಡೆಸುತ್ತಿದ್ದಾರೆ. ಗುಜರಾತಿನಲ್ಲಿ ಈ ಹಿಂದೆ ಆ ಇಬ್ಬರು, ತಮ್ಮದೇ ಆದ ಬೆರಳೆಣಿಕೆಯ ಅಧಿಕಾರಿಗಳ ಗುಂಪು ಕಟ್ಟಿಕೊಂಡು, ಅಲ್ಲಿನ ಮಾಧ್ಯಮ, ಸಮಾಜ ಮತ್ತು ಎಲ್ಲ ಬಗೆಯ ಭಿನ್ನ ಧ್ವನಿಗಳನ್ನು ಹತ್ತಿಕ್ಕುವ ಮೂಲಕ ಇಡೀ ರಾಜ್ಯವನ್ನು ಒಂದು ಜಹಗೀರು ಎಂಬಂತೆ ಆಡಳಿತ ನಡೆಸಿದ್ದರು. ಜಿಎಸ್ ಟಿ, ನೋಟು ಅಮಾನ್ಯೀಕರಣ ಸೇರಿದಂತೆ ಈಗಿನ ಅವರ ಪ್ರಮುಖ ನೀತಿಗಳು ಕೂಡ ಅದೇ ರೀತಿಯಲ್ಲಿ ಏಕವ್ಯಕ್ತಿಯ ನಿರ್ಧಾರಗಳ ಫಲವೇ”.
ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ‘ಗುಜರಾತ್ ಮಾಡೆಲ್’ ಆಡಳಿತದ ಕುರಿತ ಈ ಮಾತುಗಳನ್ನು ಹೇಳಿರುವುದು ಕಾಂಗ್ರೆಸ್ ಅಥವಾ ಯಾವುದೇ ಪ್ರತಿಪಕ್ಷದ ನಾಯಕರಲ್ಲ; ಬದಲಾಗಿ ಮೋದಿಯವರ ಬಿಜೆಪಿಯ ಮಾಹಿತಿ ತಂತ್ರಜ್ಞಾನ ಕೋಶ(ಐಟಿ ಸೆಲ್) ಹುಟ್ಟುಹಾಕಿದ ಪ್ರದ್ಯುತ್ ಬೋರಾ!
‘ಹಫಿಂಗ್ಟನ್ ಪೋಸ್ಟ್’ ಸುದ್ದಿಜಾಲತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಬೋರಾ ಅವರು ಈ ಮಾತುಗಳನ್ನು ಹೇಳಿದ್ದು, ಇಂದು ಟ್ರೋಲ್ ಆರ್ಮಿ ಎಂದೇ ಹೆಸರಾಗಿರುವ ಜಗತ್ತಿನ ‘ಶಕ್ತಿಶಾಲಿ’ ಐಟಿ ಸೆಲ್ ಗಳಲ್ಲಿ ಒಂದಾಗಿರುವ ಬಿಜೆಪಿಯ ಐಟಿ ಸೆಲ್ ಆರಂಭಿಸಿದ ಉದ್ದೇಶ ಮತ್ತು ಅದು ಆಗ ಹೊಂದಿದ್ದ ಗುರಿಗಳನ್ನು ವಿವರಿಸಿದ್ದಾರೆ. ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಸುಳ್ಳು, ವದಂತಿ ಮತ್ತು ದ್ವೇಷ ಕಾರುವ ಮೂಲಕವೇ ಸುದ್ದಿಯಲ್ಲಿರುವ ಬಿಜೆಪಿ ಐಟಿ ಸೆಲ್ ಕುರಿತ, ಅದರ ಸಂಸ್ಥಾಪಕನ ಈ ತಪ್ಪೊಪ್ಪಿಗೆಯ ಮಾತುಗಳು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ.
ಹಾಗೇ, ಅಂದಿನ ಆ ಗುರಿ-ಉದ್ದೇಶಗಳಿಗೆ ಹೋಲಿಸಿದರೆ, ಈಗ ಮೋದಿ ಮತ್ತು ಬಿಜೆಪಿ ಟೀಕಾಕಾರರು, ಪ್ರತಿಪಕ್ಷಗಳು, ರಾಜಕೀಯ ವಿರೋಧಿಗಳ ವಿರುದ್ಧದ ದಾಳಿ, ಹೇಯ ವರ್ತನೆ, ಕುತಂತ್ರ ಮತ್ತು ಷಢ್ಯಂತ್ರಗಳ ಮೂಲಕ ಟ್ರೋಲ್ ಆರ್ಮಿ ಆಗಿರುವ ಐಟಿ ಸೆಲ್, ಸರಿಪಡಿಸಲಾಗದ ಮಟ್ಟಿಗೆ ಹದಗೆಟ್ಟುಹೋಗಿದೆ. ಸದ್ಯ ಇದೇ ಸ್ಥಿತಿಯಲ್ಲಿ ಅದು ಮುಂದುವರಿದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೇ ದೊಡ್ಡ ಕಂಟಕವಾಗಿ ಪರಿಣಮಿಸಲಿದೆ ಎಂದೂ ಬೋರಾ ಅವರು ಹೇಳಿದ್ದಾರೆ.
ಮೂಲತಃ ಮ್ಯಾನೇಜ್ಮೆಂಟ್ ಕನ್ಸಲ್ಟಂಟ್ ಆಗಿದ್ದ ತಾವು, ಅಟಲ್ ಬಿಹಾರಿ ವಾಜಪೇಯಿ ಅವರ ಮೇಲಿನ ಅಭಿಮಾನದಿಂದ 2004ರಲ್ಲಿ ಬಿಜೆಪಿ ಸೋತ ಬಳಿಕ ಮತ್ತೆ ವಾಜಪೇಯಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂಬ ಕನಸಿನೊಂದಿಗೆ ಬಿಜೆಪಿ ಸೇರಿದ್ದಾಗಿಯೂ, ಬಳಿಕ 2007ರಲ್ಲಿ ಅಂದಿನ ಪಕ್ಷಾಧ್ಯಕ್ಷ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚಿಸಿ ಪಕ್ಷವನ್ನು ಹೊಸ ತಲೆಮಾರಿನ ಯುವ ಜನಾಂಗದೊಂದಿಗೆ ಬೆಸೆಯುವ ಡಿಜಿಟಲ್ ವೇದಿಕೆಯಾಗಿ ಐಟಿ ಸೆಲ್ ಹುಟ್ಟುಹಾಕಿದೆ. ಮೊದಲು ಪಕ್ಷದ ಆಂತರಿಕ ಆಟೋಮೇಷನ್, ಬಳಿಕ ಮತದಾರರನ್ನು ಆನ್ಲೈನ್ ಮೂಲಕ ಪಕ್ಷದೊಂದಿಗೆ ಬೆಸೆಯುವುದು ಮತ್ತು ಅಂತಿಮವಾಗಿ ಐಟಿ ನೀತಿಗಳ ವಿಷಯದಲ್ಲಿ ಪಕ್ಷಕ್ಕೆ ಸಲಹೆಸೂಚನೆ ನೀಡುವುದು ಐಟಿ ಸೆಲ್ ಧ್ಯೇಯಗಳಾಗಿದ್ದವು ಎಂದು ಬೋರಾ, ಬಿಜೆಪಿ ಐಟಿ ಸೆಲ್ ಉದ್ದೇಶಗಳ ಬಗ್ಗೆ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಐಟಿ ವಲಯದಿಂದ ಸಾಕಷ್ಟು ಸಂಖ್ಯೆಯ ಯುವಕರು ಐಟಿ ಸೆಲ್ ಮೂಲಕ ಬಿಜೆಪಿಗೆ ಸೇರಿದರು. ಹಾಗೇ ಹಲವರು ಬಿಜೆಪಿ ಬೆಂಬಲಿಗರಾಗಿ ಬದಲಾದರು. ಆದರೆ, ಅಂದಿನ ಉದ್ದೇಶಕ್ಕೂ ಈಗಿನ ಬೆಳವಣಿಗೆಗಳಿಗೂ ಹೋಲಿಸಿದರೆ ಸಾಮಾಜಿಕ ಜಾಲತಾಣದ ಈ ಹೊತ್ತಿನಲ್ಲಿ ಬಿಜೆಪಿ ಐಟಿ ಸೆಲ್ ಭಸ್ಮಾಸುರನ ರೀತಿ ಬೆಳೆದುನಿಂತಿದೆ. ಸಾಮಾಜಿಕ ಜಾಲತಾಣದ ಮೂಲಕ ದೇಶದ ಪ್ರಜಾಪ್ರಭುತ್ವ ಮತ್ತು ಜನಸಾಮಾನ್ಯರ ದನಿ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಆರಂಭದಲ್ಲಿ ನಾವೆಲ್ಲಾ ಅಂದುಕೊಂಡಿದ್ದೆವು. ಆದರೆ, ಆ ನಿರೀಕ್ಷೆಗೆ ವ್ಯತಿರಿಕ್ತವಾಗಿ ಇಂದು ಬಿಜೆಪಿ ಐಟಿ ಸೆಲ್ ಬೆಳೆದಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೇ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಬೋರಾ ಆತಂಕ ವ್ಯಕ್ತಪಡಿಸಿದ್ದಾರೆ.
2014ರಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಲೇ ಬಿಜೆಪಿ ಐಟಿ ಸೆಲ್ ಸಂಪೂರ್ಣವಾಗಿ ಗುಜರಾತಿನ ಗಾಂಧಿನಗರದ ಮೋದಿ ಅವರ ಟೀಂ ಹಿಡಿತಕ್ಕೆ ಹೋಯಿತು. ಆ ಬಳಿಕ ಇಡೀ ಐಟಿ ಸೆಲ್ ಚಹರೆಯೇ ಬದಲಾಯಿತು. ಐಟಿ ಸೆಲ್ ಮುಖ್ಯಸ್ಥರು ನಾಮಕಾವಸ್ಥೆಗೆ ಇದ್ದರು. ಆದರೆ, ವಾಸ್ತವವಾಗಿ ಎಲ್ಲವನ್ನೂ ಮೋದಿ ಟೀಂ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಆ ಬಳಿ ಭಾರಿ ಹಣ ಅದರೆಡೆಗೆ ಹರಿದುಬರಲಾರಂಭಿಸಿತು. ಹಣವಿದ್ದರೆ ಏನು ಬೇಕಾದರೂ ಮಾಡಬಹುದು. ಹಾಗಾಗಿ ಇವತ್ತು ಐಟಿ ಸೆಲ್ ಏನಾಗಿದೆಯೋ ಅದಕ್ಕೆ ಮೋದಿ ಮತ್ತು ಶಾ ಅವರೇ ಕಾರಣ. ಅವರ ಆಣತಿಯಂತೆಯೇ ಅಲ್ಲಿ ಎಲ್ಲವೂ ನಡೆಯುವುದು ಎಂಬುದು ಬೋರಾ ಅವರ ವಾದ.
ನೀವ್ಯಾಕೆ ಐಟಿ ಸೆಲ್ ನಿಂದ ಹೊರಬಂದಿರಿ? ಎಂಬ ಪ್ರಶ್ನೆಗೆ, ಅವರು, “ಮೋದಿಯವರು ಪ್ರಧಾನಿ ಅಭ್ಯರ್ಥಿ ಎಂಬುದು ಘೋಷಣೆಯಾಗುತ್ತಲೇ ನಾನು ಅಲ್ಲಿಂದ ಹೊರಹೋಗುವ ನಿರ್ಧಾರ ಮಾಡಿದ್ದೆ. ಆದರೆ, ಪಕ್ಷದೊಳಗಿನ ನನ್ನ ಆಪ್ತರು “ಮೋದಿಯವರು ಗುಜರಾತಿನಂತೆ ದೆಹಲಿಯಲ್ಲಿ ಮಾಡಲಾಗದು. ಇಲ್ಲಿ ಹಲವು ಆಡಳಿತಾತ್ಮಕ ಮತ್ತು ಕಾನೂನಾತ್ಮಕ ತಡೆಗಳಿವೆ. ನ್ಯಾಯಾಂಗ, ಮಾಧ್ಯಮ ಮತ್ತು ಸಂಸತ್ತಿನ ಬಿಗಿ ಹಿಡಿತ ಇವೆ. ಹಾಗಾಗಿ ಅವರು ದೆಹಲಿಗೆ ಬಂದ ಬಳಿಕ ಬದಲಾಗಲೇಬೇಕು. ಹಾಗಾಗಿ ಅವರಿಗೆ ಒಂದು ಅವಕಾಶ ಕೊಟ್ಟು ನೋಡೋಣ” ಎಂದು ಕಿವಿಮಾತು ಹೇಳಿದರು. ಅವರ ಮಾತಿನಂತೆ ಸುಮಾರು 10 ತಿಂಗಳ ಕಾಲ ಅವರ ಬದಲಾವಣೆಯ ನಿರೀಕ್ಷೆಯಲ್ಲಿದೆ. ಆದರೆ, ಅಂತಹ ಯಾವ ಬದಲಾವಣೆಯೂ ಆಗಲಿಲ್ಲ. ಹಾಗಾಗಿ 2015ರ ಫೆಬ್ರವರಿಯಲ್ಲಿ ನಾನು ರಾಜೀನಾಮೆ ನೀಡಿ ಹೊರಬಂದೆ” ಎನ್ನುವ ಮೂಲಕ ಗುಜರಾತಿನ ಸರ್ವಾಧಿಕಾರಿ ಧೋರಣೆಯ ಮೋದಿ ಬದಲಾಗಲೇ ಇಲ್ಲ ಎಂದು ಬೋರಾ ಹೇಳಿದ್ದಾರೆ.
ಬಿಜೆಪಿ ಐಟಿ ಸೆಲ್ ಕೂಡ ಒಂದು ರೀತಿಯಲ್ಲಿ ನಿಷೇಧಿತ ಸಿಮಿ ಸಂಘಟನೆಯ ದಾರಿಯಲ್ಲೇ ಸಾಗುತ್ತಿದೆ. ಸಿಮಿ ಸಂಘಟನೆಯನ್ನು ಹುಟ್ಟುಹಾಕಿದ್ದು ಕೂಡ ದುರ್ಬಲ ವರ್ಗದ ಮುಸ್ಲಿಮ್ ಯುವಕರ ಶೈಕ್ಷಣಿಕ ಮತ್ತು ಉದ್ಯೋಗ ತರಬೇತಿ ಮತ್ತು ಸಹಾಯದ ಉದ್ದೇಶದಿಂದ. ಆದರೆ, ಅದು ಕ್ರಮೇಣ ಬದಲಾಯಿತು. ಬಳಿಕ ನಿಷೇಧಿತ ಸಂಘಟನೆಯಾಯಿತು. ಬಿಜೆಪಿ ಐಟಿ ಸೆಲ್ ಕೂಡ ಆರಂಭದಲ್ಲಿ ಘನ ಉದ್ದೇಶಗಳನ್ನೇ ಹೊಂದಿತ್ತು. ಅದು ಆಗ ವಿರೋಧಿಗಳನ್ನು ನಿಂದಿಸಲು, ಅಪಮಾನಿಸಲು ಅಥವಾ ಬೆದರಿಸಲು ಆರಂಭವಾಗಿರಲಿಲ್ಲ. ಆಗ ಪಕ್ಷ ಕೂಡ ಹೀಗಿರಲಿಲ್ಲ. ಅದು ಸುಸಂಸ್ಕೃತರ ಪಕ್ಷವೆಂದೇ ಹೆಸರಾಗಿತ್ತು. ಈಗ ಐಟಿ ಸೆಲ್ ಮಾತ್ರವಲ್ಲ; ಬಿಪಿಪಿ ಕೂಡ ಎಲ್ಲ ಎಲ್ಲೆಗಳನ್ನೂ ಮೀರಿಬಿಟ್ಟಿದೆ ಎಂದು ಬೋರಾ ಅಭಿಪ್ರಾಯಪಟ್ಟಿದ್ದಾರೆ.
ಹಾಗೇ, ಐಟಿ ಸೆಲ್ ಸರಿಪಡಿಸಲು ಏನಾದರೂ ಸಲಹೆ ಇದೆಯೇ ಎಂಬ ಪ್ರಶ್ನೆಗೆ, “ಪಕ್ಷದ ಅಧ್ಯಕ್ಷರನ್ನು ಸರಿಪಡಿಸದೆ, ನೀವು ಐಟಿ ಸೆಲ್ ಸರಿಪಡಿಸುವುದು ಸಾಧ್ಯವಿಲ್ಲ” ಎನ್ನುವ ಮೂಲಕ ರೋಗದ ಮೂಲ ಯಾವುದು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ!
ಹಾಗೆ ನೋಡಿದರೆ, ಬಿಜೆಪಿ ಐಟಿ ಸೆಲ್ ಮತ್ತು ಅದರ ಟ್ರೋಲ್ ಪಡೆಯ ಬಗ್ಗೆ ಇಂತಹ ಆತಂಕದ ಮಾತುಗಳನ್ನು, ಸ್ವತಃ ಅದರ ಒಳಗಿದ್ದು ಕೆಲಸ ಮಾಡಿ, ಅಪಾಯಗಳನ್ನು ಗ್ರಹಿಸಿ ಹೊರಬಂದು ಮಾತನಾಡುತ್ತಿರುವವರಲ್ಲಿ ಬೋರಾ ಮೊದಲಿಗರೇನಲ್ಲ. ಬಿಜೆಪಿ ಟ್ರೋಲ್ ಪಡೆಯ ಸದಸ್ಯೆಯಾಗಿ ಬಳಿಕ ಹೊರಬಂದ ಸ್ವಾತಿ ಚತುರ್ವೇದಿ ತಮ್ಮ ಅನುಭವ ಕುರಿತು ಬರೆದ ‘ಐ ಯಾಮ್ ಎ ಟ್ರೋಲ್’ ಕೃತಿ ಸಾಕಷ್ಟು ಸುದ್ದಿ ಮಾಡಿತ್ತು. ಬಳಿಕ ಧ್ರುವ್ ರಾಠಿ ಕೂಡ ಬಿಜೆಪಿ ಐಟಿ ಸೆಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದು ಎಷ್ಟು ಅಪಾಯಕಾರಿ ಎಂಬುದನ್ನು ತಮ್ಮ ಸರಣಿ ಯೂಟ್ಯೂಬ್ ವೀಡಿಯೋಗಳಲ್ಲಿ ವಿವರಿಸಿದ್ದರು. ಮಹಾವೀರ್ ಪ್ರಸಾದ್ ಎಂಬ ಬಿಜೆಪಿ ಐಟಿ ಸೆಲ್ ಮಾಜಿ ನೌಕರನ ಸಂದರ್ಶನವಂತೂ ಬಿಜೆಪಿ ಐಟಿ ಸೆಲ್ ನ ಕರಾಳ ಮುಖವನ್ನು ಬಿಚ್ಚಿಟ್ಟಿತ್ತು
ಇದೀಗ, ಪ್ರದ್ಯುತ್ ಬೋರಾ ಅವರ ಸಂದರ್ಶನ ಮತ್ತೊಮ್ಮೆ ಬಿಜೆಪಿ ತನ್ನ ಡಿಜಿಟಲ್ ಸೇನೆಯ ಮೂಲಕ ನಡೆಸುತ್ತಿರುವ ಕೃತ್ಯಗಳ ದೇಶಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ಎಚ್ಚರಿಕೆ ನೀಡಿದೆ.