ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗದ (SSC) ಅಧ್ಯಕ್ಷರನ್ನಾಗಿ ಗುಜರಾತಿ ಅಧಿಕಾರಿ ಆಶಿಮ್ ಖುರಾನಾ ಅವರನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಆಯ್ಕೆ ಮಾಡಿತ್ತು ಎಂಬ ಆಘಾತಕಾರಿ ಸಂಗತಿ ಇದೀಗ ಮಾಹಿತಿ ಹಕ್ಕು ಅರ್ಜಿಯೊಂದರ ಮೂಲಕ ಪಡೆದ ಮಾಹಿತಿಗಳ ಮೂಲಕ ಬಹಿರಂಗಗೊಂಡಿದೆ.
1983ರ ಬ್ಯಾಚಿನ ಗುಜರಾತ್ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಆಶಿಮ್ ಖುರಾನಾ ಅವರ ನೇಮಕಾತಿಯಷ್ಟೇ ನಿಯಮಬಾಹಿರವಾವಾಗಿಲ್ಲ, 2018ರಲ್ಲಿ ಅವರಿಗೆ ಒಂದು ವರ್ಷದ ಅವಧಿಗೆ ಸೇವಾ ವಿಸ್ತರಣೆ ನೀಡಿದ್ದು ಸಹ ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂಬುದೂ ಇದೀಗ ಬಯಲಾಗಿದೆ.
ಸ್ವರಾಜ್ ಇಂಡಿಯಾ ಪಕ್ಷದ ಉಪಾಧ್ಯಕ್ಷ ಅನುಪಮ್ ಅವರು ಈ ವಿಷಯವನ್ನು ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿಯ ಮೂಲಕ ಬಹಿರಂಗಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಹುದ್ದೆಗಳಿಗೆ ಆಯೋಗ ನಡೆಸುವ ಆನ್ ಲೈನ್ ಪರೀಕ್ಷಾ ಪ್ರಶ್ನೆ ಪತ್ರಿಕೆಗಳು ಸಾಮಾಜಿಕ ಜಾಲತಾಣದ ಮೂಲಕ ಪರೀಕ್ಷೆಗೆ ಮುನ್ನವೇ ಸೋರಿಕೆಯಾಗಿದ್ದ ಹಗರಣದ ಕುರಿತು ಈಗಾಗಲೇ ಸಬಿಐ ತನಿಖೆ ನಡೆಸುತ್ತಿದ್ದು ಈ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಲ್ಲಿ ಆಶಿಮ್ ಖುರಾನಾ ಅವರ ಮೇಲೂ ಆರೋಪ ಕೇಳಿ ಬಂದಿದೆ. ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ಒತ್ತಾಯಿಸಿ ದೆಹಲಿಯ ಬೀದಿಗಳಲ್ಲಿ ದೇಶದ ನಾನಾ ಭಾಗಗಳ ಸಹಸ್ರಾರು ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು ಜಮಾಯಿಸಿ ಹತ್ತು ದಿನಗಳಿಗೂ ಹೆಚ್ಚು ಕಾಲ ತೀವ್ರ ಪ್ರತಿಭಟನೆ ನಡೆಸಿದ್ದರು. ತದನಂತರವೇ ಸರ್ಕಾರ ಸಿಬಿಐ ತನಿಖೆಗೆ ವಹಿಸಿಕೊಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಇತ್ತಿಚೆಗೆ ಬಹಿರಂಗವಾಗಿರುವ DoPT ದಾಖಲೆಗಳಲ್ಲಿ ಬಯಲಾದ ಆಘಾತಕಾರಿ ಸಂಗತಿ ಏನೆಂದರೆ ಮೇ 15, 2015ರಂದು ಆಯೋಗದ ಮುಖ್ಯಸ್ಥರ ಹುದ್ದೆಗೆ ಜಾಹೀರಾತಿನ ಮೂಲಕ ಅಧಿಸೂಚನೆ ಹೊರಡಿಸಿದಾಗ ಆಶಿಮ್ ಖುರಾನಾ ಅವರು ಅರ್ಜಿಯನ್ನೇ ಹಾಕಿರಲಿಲ್ಲ!

“ಆಶಿಮ್ ಖುರಾನಾ ಅವರು ಎಸ್ ಎಸ್ ಸಿ ಚೇರ್ಮನ್ ಹುದ್ದೆಗೆ ಅಂತಿಮವಾಗಿ ಆಯ್ಕೆ ಮಾಡಿದ ಇಬ್ಬರು ಅಭ್ಯರ್ಥಿಗಳ ಪೈಕಿ ಒಬ್ಬರಾಗಿರಲಿಲ್ಲ, ಹೋಗಲಿ ನಾಲ್ಕು ಅಭ್ಯರ್ಥಿಗಳ ಪೈಕಿಯೂ ಒಬ್ಬರಾಗಿಲಿಲ್ಲ. ಕನಿಷ್ಟಪಕ್ಷ ಅಂತಿಮಗೊಳಿಸಲಾದ 35 ಅಭ್ಯರ್ಥಿಗಳ ಪೈಕಿಯೂ ಒಬ್ಬರಾಗಿರಲಿಲ್ಲ. ಇದರ ಅರ್ಥವೇನೆಂದರೆ ಆಯೋಗದ ಮುಖ್ಯಸ್ಥನನ್ನಾಗಿ ಆಯ್ಕೆಯಾದ ಆಶಿಮ್ ಖುರಾನಾ ಈ ಹುದ್ದೆಗೆ ಅರ್ಜಿಯನ್ನೇ ಹಾಕಿರಲಿಲ್ಲ” ಎಂದು ಆರ್ ಟಿ ಐ ದಾಖಲೆ ಮಾಹಿತಿ ಪ್ರದರ್ಶಿಸಿದ ಅನುಪಮ್ ಮಾಹಿತಿ ನೀಡಿದರು.
ಆಗಸ್ಟ್ 17, 2015ರಂದು ನಡೆದ ಸಿಬ್ಬಂದಿ ನೇಮಕಾತಿ ಆಯೋಗದ ಸಭೆಯ ನಡಾವಳಿಗಳ (ಮಿನಟ್ಸ್) ಪ್ರಕಾರ, ಆಯೋಗದ ಚೇರ್ಮನ್ ಹುದ್ದೆಗೆ ಆಗಸ್ಟ್ 31ರಂದು ಕರೆಯಲಾಗಿದ್ದ ಸಂದರ್ಶನಕ್ಕೆ ಆಯ್ಕೆಯಾಗಿದ್ದ ನಾಲ್ಕು ಅಭ್ಯರ್ಥಿಗಳಲ್ಲಿ ಖುರಾನಾ ಒಬ್ಬರಾಗಿರಲಿಲ್ಲ. ಸಂದರ್ಶನಕ್ಕೆ ಹಾಜರಾಗಿದ್ದ ನಾಲ್ಕು ಅಭ್ಯರ್ಥಿಗಳೆಂದರೆ ಅನಿಂದ ಮಜುಂದಾರ್, ಡಿಡಿ ಶರ್ಮಾ, ಅಮಿತಾಬ್ ಖರೆ ಮತ್ತು ಎ ಕೆ ಡ್ಯಾಶ್. ನಂತರ ಡಿಡಿ ಶರ್ಮ ಹಾಗೂ ಅಮಿತಾಬ್ ಖರೆ- ಈ ಇಬ್ಬರನ್ನು ಕೊನೆ ಹಂತದಲ್ಲಿ ಸೆಪ್ಟೆಂಬರ್ 30, 2015ರಲ್ಲಿ ಆಯ್ಕೆ ಮಾಡಲಾಗಿತ್ತು.
ಆದರೆ ಕ್ಯಾಬಿನೆಟ್ ಸಮಿತಿಗೆ ಹೆಸರು ಸೂಚಿಸುವಾಗ ಪರಿಷ್ಕತ ಮೂರು ಜನರ ಪಟ್ಟಿಯನ್ನು ಕಳಿಸಲಾಗಿತ್ತು. ಅದರಲ್ಲಿ ಆಶಿಮ್ ಖುರಾನಾ ಅವರ ಹೆಸರನ್ನು ಎಲ್ಲಕ್ಕಿಂತ ಮೊದಲು ಸೂಚಿಸಲಾಗಿತ್ತು.
“ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರುಗಳನ್ನು ಆಯ್ಕೆ ಸಮಿತಿಗೆ ಕಳಿಸುವ ಸ್ವಲ್ಪ ಸಮಯದ ಮೊದಲು ಆಯ್ಕೆಯ ನಿಯಮಗಳನ್ನೇ ಉಲ್ಲಂಘಿಸಿ ಬೇರೊಬ್ಬ ಅಭ್ಯರ್ಥಿಯನ್ನು ಸೇರಿಸಲಾಯಿತು. 1983ರ ಬ್ಯಾಚಿನ ಗುಜರಾತ್ ಕೇಡರ್ ಆಶಿಮ್ ಖುರಾನಾ ಅವರನ್ನು ಮೊದಲ ಆದ್ಯತೆಯಾಗಿ ಇದರಲ್ಲಿ ಸೇರಿಸಲಾಯಿತು. ಹೀಗೆ ಮೂರು ಹೆಸರುಗಳನ್ನು ಆಯ್ಕೆ ಸಮಿತಿಯು ಕ್ಯಾಬಿನೆಟ್ ಸಮಿತಿಗೆ ಶಿಫಾರಸು ಮಾಡಿತ್ತು” ಎಂದರು ಅನುಪಮ್.
ಇಲ್ಲಿ ನಡೆದಿರುವ ಮತ್ತೊಂದು ನಿಯಮ ಉಲ್ಲಂಘನೆಯೆಂದರೆ ಅವರನ್ನು ಆಯ್ಕೆ ಮಾಡುವಾಗ ಅವರಿಗೆ 59 ವರ್ಷ ವಯಸ್ಸಾಗಿತ್ತು. “ಚೇರ್ಮನ್ ಹುದ್ದೆಗೆ ಬೇಕಾದ ವಯಸ್ಸಿನ ಅರ್ಹತೆ ಕೂಡಾ ಆಶಿಮ್ ಖುರಾನಾ ಅವರಿಗೆ ಇರಲಿಲ್ಲ” ಎಂದು ಅನುಪಮ್ ಹೇಳಿದರು.
ಡಿಸೆಂಬರ್ 22, 2015ರಂದು ಪ್ರಕಟವಾದ ರಾಷ್ಟ್ರಪತಿಗಳ ಆದೇಶದಲ್ಲಿ ಸಿಬ್ಬಂದಿ ನೇಮಕಾತಿ ಆಯೋಗದ ಚೇರ್ಮನ್ ಆಗಿ ಆಶಿಮ್ ಖುರಾನಾ ಅವರನ್ನು ಡಿಸೆಂಬರ್ 9 ರಿಂದಲೇ ಅನ್ವಯವಾಗುವಂತೆ ಆಯ್ಕೆ ಮಾಡಲಾಗಿದೆ ಎಂಬ ಪ್ರಕಟಣೆ ಭಾರತ ಸರ್ಕಾರದ ಉಪ ಕಾರ್ಯದರ್ಶಿ ಸುಮಿತಾ ಸಿಂಗ್ ಸಹಿಯೊಂದಿಗೆ ಹೊರಬಿದ್ದಿತ್ತು!

SSC ಹಗರಣದೊಂದಿಗೆ ಖುರಾನಾ ನಂಟು?
ಕುತೂಹಲಕಾರಿ ವಿಷಯ ಏನೆಂದರೆ, ಆಶಿಮ್ ಖುರಾನಾ ತಾವು ಆಯೋಗದ ಚೇರ್ಮನ್ ಆಗಿ ಹುದ್ದೆಯಲ್ಲಿ ಕುಳಿತ ಕೂಡಲೇ ಹೊರಡಿಸಿದ್ದ ಮೊದಲ ಆದೇಶಗಳಲ್ಲಿ ಆಯೋಗ ನಡೆಸುವ ಆನ್ ಲೈನ್ ಪರೀಕ್ಷಗಳ ಗುತ್ತಿಗೆಯನ್ನು ಸೈಫಿ ಟೆಕ್ನಾಲಜೀಸ್ ಗೆ ನೀಡಿದ್ದು ಎಂದು ಅನುಮಪಮ್ ಹೇಳಿದರು.
“ಆಯೋಗದಲ್ಲಿ ನಡೆದ ಹಗರಣಗಳು ಆಯೋಗದ ಅಧಿಕಾರಿಗಳು ಮತ್ತು ಸೈಫಿ ಉದ್ಯೋಗಿಗಳು ಕೈಮಿಲಾಯಿಸುವ ಮೂಲಕವೇ ನಡೆದಿರುವುದು. ದಾಖಲಾಗಿರುವ ಪ್ರಾಥಮಿಕ ಮಾಹಿತಿ (ಎಫ್ ಐ ಆರ್) ವರದಿಯೂ ಇದನ್ನೇ ಸೂಚಿಸುತ್ತಿದೆ” ಎಂದು ಅವರು ಹೇಳಿದರು.
ಕಳೆದ ವರ್ಷದ ಮೇ 22ರಂದು ಸೈಫಿಯ 10 ಉದ್ಯೋಗಿಗಳು ಸೇರಿದಂತೆ 17 ಜನರ ವಿರುದ್ಧ ದಾಖಲಿಸಿರುವ ಎಫ್ ಐ ಆರ್ ದಾಖಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಆಯೋಗ ಮತ್ತು ಸೈಫಿ ಸಂಸ್ಥೆಯ ಉದ್ಯೋಗಿಗಳಿಬ್ಬರ ಪಾಲುದಾರಿಕೆ ಇತ್ತೆಂದು ಆರೋಪಿಸಲಾಗಿದೆ.
ಸಿಬಿಐ ಈ ಆರೋಪಿಗಳ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

“ಆಶಿಮ್ ಖುರಾನಾ ಅವರನ್ನು ಎಲ್ಲಾ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಆಯೋಗದ ಚೇರ್ಮನ್ ಆಗಿ ಆಯ್ಕೆ ಮಾಡಿಕೊಂಡಿರುವ ಎಲ್ಲಾ ಪ್ರಕ್ರಿಯೆಗಳಿಗೆ ಪ್ರಧಾನಿ ನರೇಂದ್ರ ಮೋದಿಯೇ ಉತ್ತರದಾಯಿ ಆಗಿದ್ದಾರೆ” ಎಂದು ಅನುಪಮ್ ಹೇಳಿದರು.