ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶದ ವಿಚಾರವಂಥ ಲೇಖಕರು, ನಿರ್ದೇಶಕರು, ರಂಗಭೂಮಿ ಕಲಾವಿದರು, ಸಂಶೋಧಕರು ಮತ್ತು ವಿಜ್ಞಾನಿಗಳು ಬಿಜೆಪಿಯನ್ನು ಮತ್ತು ಅದರ ದುರಾಡಳಿತವನ್ನು ವಿರೋಧಿಸಿ ಸಾಮೂಹಿಕವಾಗಿ ತಮ್ಮ ಅಭಿಪ್ರಾಯವನ್ನು ದೇಶದ ಜನತೆಯ ಮುಂದಿಟ್ಟಿದ್ದರು.
ಇದೀಗ ನೂರಕ್ಕೂ ಹೆಚ್ಚು ದೃಶ್ಯ ಕಲಾವಿದರು (ವಿಶುಅಲ್ ಆರ್ಟಿಸ್ಟ್- ದೃಶ್ಯ ಕಲಾವಿದರಲ್ಲಿ ಚಿತ್ರಕಲಾವಿದರು, ಶಿಲ್ಪ ಕಲಾವಿದರು, ವಾಸ್ತುಶಿಲ್ಪಿಗಳು, ಛಾಯಾಗ್ರಾಹಕರು, ಕುಶಲ ಕಲಾವಿದರು, ಡಿಸೈನರುಗಳು ಸೇರುತ್ತಾರೆ) ಬಿಜೆಪಿ ಸರ್ಕಾರವನ್ನು ವಿರೋಧಿಸಿ “ಮೇಕ್ ಆರ್ ಬ್ರೇಕ್” ಮತ್ತು ದೇಶದ ಪ್ರಜೆಗಳೇ ಬಿಜೆಪಿ ವಿರುದ್ಧ ಮತ ಹಾಕಿ ಎಂದು ದೇಶದ ಜನತೆಗೆ ಮನವಿ ಮಾಡಿದ್ದಾರೆ.
“ಕಳೆದ ಕೆಲವು ವರ್ಷಗಳಿಂದ ಸತತವಾಗಿ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ದಾಳಿ, ಸರ್ವಾಧಿಕಾರಿ ಧೋರಣೆಯನ್ನು ಹೇರುವುದು, ಸಾಮೂಹಿಕ ಗಲಭೆಗಳು, ಸಮಾಜದ ದುರ್ಬಲ ಸಮುದಾಯದವರ ಮೇಲೆ ರಾಜ್ಯ ಸರ್ಕಾರದ ಮೂಲಕ ದಬ್ಬಾಳಿಕೆ, ಭಯೋತ್ಪಾನೆ ನಡೆಸುವುದು ಅಲ್ಲದೇ, ಭಾರತದ ಆಸ್ತಿಯನ್ನು ಕಾರ್ಪೊರೇಟ್ ಸಂಸ್ಥೆಗಳ, ಉದ್ಯಮಿಗಳ ಪಾಲಾಗುವಂತೆ ಮಾಡುವುದು. ಬಿಜೆಪಿ ನೇತೃತ್ವದ ಸರ್ಕಾರ ದೇಶದಲ್ಲಿ ವ್ಯಾಪಕವಾಗಿ ಭಯ ಮತ್ತು ದ್ವೇಷದ ಭಾವನೆ ಬಿತ್ತುವಂಥ ಕೆಲಸ ಮಾಡುತ್ತಿದೆ. ಇದೆಲ್ಲವೂ ನಮ್ಮೊಳಗೇ ನುಸುಳಿಬಿಟ್ಟಿದೆ,’ಎಂದು ಕಲಾವಿದರು ಎಚ್ಚರಿಸಿದ್ದಾರೆ.
ಅಷ್ಟೇ ಅಲ್ಲದೆ ಅಂದಾಜು 600 ರಂಗಕರ್ಮಿಗಳು “ಬಿಜೆಪಿ ಮತ್ತು ಇದರ ಮೈತ್ರಿ ಪಕ್ಷಗಳ ವಿರುದ್ಧ ನಿಮ್ಮ ಮತ, ಪ್ರೀತಿಗಾಗಿ ಮತವಿರಲಿ,” ಎಂದು ಹೇಳಿಕೆಯನ್ನು ನೀಡಿದ್ದರು.
ಅರುಂಧತಿ ರಾಯ್, ಗಿರೀಶ್ ಕಾರ್ನಾಡ್ ಸೇರಿದಂತೆ 210 ಲೇಖಕರು “ದ್ವೇಷ ರಾಜಕಾರಣದ” ವಿರುದ್ಧ ಮತ ಹಾಕಿ ಎಂದು ಕೋರಿದ್ದರು.
ರಾಜ್ಯ ಸರ್ಕಾರದ ಅಧೀನದಲ್ಲಿರುವ ಹೆಚ್ಎಎಲ್, ಒಎನ್ ಜಿಸಿ ಮತ್ತು ಬಿಎಸ್ಎನ್ಎಲ್ ನಂಥ ಸಂಸ್ಥೆಗಳು ಕೇಂದ್ರ ಸರ್ಕಾರದ ನೀತಿಯಿಂದ, ದುರಾಳಿತದಿಂದ ಹಾಗೂ ಅನವಶ್ಯಕ ಮಧ್ಯಪ್ರವೇಶದಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು.
ಇಷ್ಟೇ ಅಲ್ಲದೇ, ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಗಳು ಹಾಗೂ ಆರ್ ಬಿಐ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ)ದ ಕಾರ್ಯನಿರ್ವಹಣೆಗಳ ಮೇಲೂ ಕೇಂದ್ರ ಸರ್ಕಾರ ಅನವಶ್ಯಕ ದಬ್ಬಾಳಿಕೆ ನಡೆಸುತ್ತಿದೆ.
ಬಿಜೆಪಿ ಸ್ತ್ರೀ ದ್ವೇಷ, ಮತಾಂಧತೆ, ಕೋಮುವಾದ ಬಿತ್ತುವಿಕೆ ಮತ್ತು ಇಸ್ಲಾಮೋಫೋಬಿಯಾವನ್ನು ಪದೇಪದೇ ಪ್ರದರ್ಶಿಸಿದೆ. ನಮಗಿರುವುದು ಇದೊಂದೇ ಅವಕಾಶ. ಉತ್ತಮವಾಗಿ ಇದನ್ನು ಬಳಸಿಕೊಳ್ಳಿ ಎಂದು ದೇಶದ ಪ್ರಜೆಗಳಿಗೆ ಮನವಿ ಮಾಡಿದ್ದಾರೆ.