ಒಂದು ಕಾಲದಲ್ಲಿ ‘ಸತ್ಯ’ ಎಂಬುದು ಭಾರತದ ಸಾರ್ವಜನಿಕ ವಲಯದ ಚಿಂತನೆಗೆ ಒಳಪಟ್ಟ ಪ್ರಮುಖ ವಿಷಯವಾಗಿತ್ತು. ಆರ್ಯಸಮಾಜದ ಸಂಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿಯವರ ಪುಸ್ತಕದ ಹೆಸರಾಗಿದ್ದ “ಸತ್ಯಾರ್ಥ ಪ್ರಕಾಶ”ದಿಂದ (ಸತ್ಯದ ಬೆಳಕು) ಹಿಡಿದು ಜ್ಯೋತಿರಾವ್ ಫುಲೆಯವರ “ಸತ್ಯಶೋಧಕ್ ಸಮಾಜ್” ಮತ್ತು ಮಹಾತ್ಮ ಗಾಂಧಿಯವರ “ದ ಸ್ಟೋರಿ ಆಫ್ ಮೈ ಎಕ್ಸ್ಪೆರಿಮೆಂಟ್ಸ್ ವಿತ್ ಟ್ರುಥ್” (ನನ್ನ ಸತ್ಯಾನ್ವೇಷಣೆ) ವರೆಗೂ ಸತ್ಯ ಎಂಬ ಪದವು ಸೈದ್ಧಾಂತಿಕ “ಬ್ರ್ಯಾಂಡ್”ಗಳಿಗೆ ಸೇರಿದ್ದಾಗಿತ್ತು. ಒಂದು ಶತಮಾನದ ನಂತರ ಅಸತ್ಯವು ಎಲ್ಲೆಡೆ ವ್ಯಾಪಿಸಿಕೊಂಡು ಸರ್ವೇಸಾಮಾನ್ಯ ಎನಿಸಿಬಿಟ್ಟಿದೆ. ಕಳೆದ ತಿಂಗಳು ಮೈಕ್ರೋಸಾಫ್ಟ್ ಬಿಡುಗಡೆಗೊಳಿಸಿರುವ ವರದಿಯು, ಜಗತ್ತಿನಲ್ಲಿ ಅತಿಹೆಚ್ಚು ಸುಳ್ಳುಸುದ್ದಿಗಳು ಹರಿದಾಡುತ್ತಿರುವುದು ಭಾರತದಲ್ಲಿ ಎಂದು ತಿಳಿಸಿದೆ. ಮಾದರಿಯಾಗಿ ನಡೆಯಬೇಕಾದ ಆಳುವ ಪಕ್ಷವೇ ತನ್ನ ಲೋಪದಿಂದಲೋ ಕ್ರಿಯೆಯಿಂದಾಗಿಯೋ ಇಂತಹ ಪರಿಸ್ಥಿತಿ ಏರ್ಪಟ್ಟಿದೆ.
ತನ್ನ ಲೋಪದಿಂದಾಗಿ, ಒಮ್ಮೊಮ್ಮೆ ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡುವುದೂ ಸಹ ಚಾರಿತ್ರಿಕ ಸಂಸ್ಕೃತಿಹೀನತೆಯನ್ನು ಸೂಚಿಸುತ್ತದೆ. ಉದಾಹರಣೆಗೆ, ಇತ್ತೀಚೆಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಹೇಳಿದ ಕೆಲವು ಸುಳ್ಳುಗಳನ್ನು ನೋಡಿ.
-
“ಭಾರತದ ಸೆರೆಯಲ್ಲಿದ್ದ ಉಗ್ರ ಮಸೂದ್ ಅಜರ್ ನ ಬಿಡುಗಡೆಗೊಳಿಸಲು ಯುಪಿಎ ಕಾರಣ.”
-
ಆದರೆ ನಿಜವೇನೆಂದರೆ ಅವನನ್ನು ಪಾಕಿಸ್ತಾನ ಸರ್ಕಾರಕ್ಕೆ ಒಪ್ಪಿಸಿದ್ದು ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರ.
-
-
“1965ರಲ್ಲಿ ಭಾರತದ ಮೇಲೆ ಪಾಕಿಸ್ತಾನ ದಾಳಿ ನಡೆಸಿದಾಗ ಜವಹರಲಾಲ ನೆಹರು ಅವರು ಪ್ರಧಾನಮಂತ್ರಿ ಆಗಿದ್ದರು.”
-
ಆದರೆ ಆ ಸಮಯದಲ್ಲಿ ಪ್ರಧಾನಿಯಾಗಿ ಸರ್ಕಾರ ನಡೆಸುತ್ತಿದ್ದುದು ಲಾಲ್ ಬಹಾದ್ದೂರ್ ಶಾಸ್ತ್ರಿ
-
-
ಸಚಿವ ಅರುಣ್ ಜೇಟ್ಲಿಯವರ ಪ್ರಕಾರ, ನೆಹರು ತಮ್ಮ ಸ್ಥಾನಕ್ಕೆ ಇಂದಿರಾ ಅವರನ್ನು ನೇಮಕಗೊಳಿಸಿ ರಾಜಕೀಯ ವಂಶಪರಂಪರೆಯನ್ನು ಪ್ರಾರಂಭಿಸಿದರು.
-
ಆದರೆ ತನ್ನ ನಂತರ ಅಧಿಕಾರ ಯಾರು ವಹಿಸಿಕೊಳ್ಳಬೇಕು ಎಂಬುದನ್ನು ಕಾಂಗ್ರೆಸ್ ಪಕ್ಷ ತೀರ್ಮಾನಿಸಲಿದೆ ಎಂದು ನೆಹರು ಅವರು ತೀರಿಕೊಳ್ಳುವ ಮೊದಲೇ ಸ್ಪಷ್ಟವಾಗಿ ಹೇಳಿದ್ದರು ಮತ್ತು ಕಾಂಗ್ರೆಸ್ ಪಕ್ಷವು ಶಾಸ್ತ್ರಿಯವರನ್ನು ಆರಿಸಿತ್ತೇ ಹೊದರು ಇಂದಿರಾ ಗಾಂಧಿ ಅವರನ್ನಲ್ಲ.
ತಪ್ಪು ಮಾಹಿತಿಗಳ ಪ್ರಸಾರಕ್ಕೆ ಚರಿತ್ರೆಯ ತಿಳಿವಳಿಕೆ ಇಲ್ಲದಿರುವುದು ಒಂದೇ ಕಾರಣವಲ್ಲ. ತಪ್ಪು ಮಾಹಿತಿಗಳನ್ನು ಹರಡುವುದು ಎದುರಾಳಿಗಳಿಗೆ ಕಳಂಕ ಉಂಟುಮಾಡುವ ಒಂದು ವಿಧಾನವೂ ಹೌದು. ಕಳೆದ ಐದು ವರ್ಷಗಳಲ್ಲಂತೂ ಸುಳ್ಳುಸುದ್ದಿಗಳನ್ನು ಆಧರಿಸಿಯೇ ವ್ಯಾಪಕವಾಗಿ ಟ್ರೋಲ್ ಮಾಡಲಾಗಿದೆ. ಇದಕ್ಕಾಗಿ ಫೋಟೊಶಾಪ್ ಚಿತ್ರಗಳನ್ನೂ ಬಳಸಿದ್ದಾರೆ. ಉದಾಹರಣೆಗೆ:
-
1988ರಲ್ಲಿ ಕಾಬೂಲ್ನಲ್ಲಿ ಅಬ್ದುಲ್ ಗಫರ್ ಖಾನ್ ಅವರ ಶವಸಂಸ್ಕಾರದಲ್ಲಿ ರಾಜೀವ್ ಮತ್ತು ರಾಹುಲ್ ಗಾಂಧಿ ಭಾಗವಹಿಸಿದ್ದರೆಂಬಂತೆ ಚಿತ್ರವನ್ನು ಹರಿದಾಡಿಸಲಾಗಿತ್ತು. ಅಲ್ಲದೆ ಇಂದಿರಾ ಗಾಂಧಿಯವರನ್ನು ಮುಸ್ಲಿಮರ ಸಂಪ್ರದಾಯಗಳಂತೆ ಅಂತ್ಯಕ್ರಿಯೆ ಮಾಡಲಾಯಿತೆಂದು ಅಪಪ್ರಚಾರ ಮಾಡಲಾಗಿತ್ತು.
-
ಅಶೋಕ್ ಗೆಹ್ಲೋಟ್ ಪಾಕಿಸ್ತಾನದ ಧ್ವಜವನ್ನು ಹಾರಿಸುತ್ತಿರುವಂತೆ ತೋರುವ ಚಿತ್ರ
-
“ರೋಹಿಂಗ್ಯಾ ಹಿಂದೂಗಳನ್ನು ತಿನ್ನುತ್ತಿರುವುದೆಂದು” ಹೇಳಲಾಗಿರುವ ಚಿತ್ರಗಳು
ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವುಗಳಲ್ಲಿರುವ, ಸತ್ಯವನ್ನ ಅಣಕಿಸುವ ಸುಳ್ಳುಗಳನ್ನು ಜಾಲತಾಣಗಳು ಈಗ ಬಯಲುಗೊಳಿಸುತ್ತಿವೆ. ಸಂವಹನವನ್ನು ನಿಯಂತ್ರಿಸಲು ಮಾಡಿದ ಯತ್ನಗಳಿಂದಾಗಿ 2018ರಲ್ಲಿ ದಾಖಲೆ ಪ್ರಮಾಣದಲ್ಲಿ ಅಂತರ್ಜಾಲ ಸ್ಥಗಿತಗೊಂಡಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಕಾರಣಗಳನ್ನು ನೀಡಿ ಅಂತರ್ಜಾಲವನ್ನು ಅತಿಹೆಚ್ಚು ಬಾರಿ ಸ್ಥಗಿತಗೊಳಿಸಿದರೆ, ಈ ವಿಷಯದಲ್ಲಿ ರಾಜಸ್ತಾನ ಎರಡನೆಯ ಸ್ಥಾನ ಪಡೆದಿದೆ.
ಮೂರನೆಯದಾಗಿ, ವಾಸ್ತಾವಂಶಗಳನ್ನು ತಿರುಚುವುದರಿಂದ ಇಲ್ಲವೇ ಮುಚ್ಚಿಡುವುದರಿಂದ ಕೆಲವೊಮ್ಮೆ ಸತ್ಯ ಗೆಲ್ಲುವುದು ಕಷ್ಟಸಾಧ್ಯವಾಗುತ್ತದೆ. ಮೋದಿ ಮತ್ತು ಮನಮೋಹನ್ ಸಿಂಗ್ ಅವರುಗಳ ಸರ್ಕಾರಗಳಲ್ಲಿ ಭಾರತದ ಬೆಳವಣಿಗೆ ದರದ ಹೋಲಿಕೆಯ ಬಗ್ಗೆ ಎದ್ದಿರುವ ವಿವಾದಗಳ ಜೊತೆಗೆ ನಿರುದ್ಯೋಗದ ಕುರಿತ ಮೌಲ್ಯಮಾಪನವನ್ನು ಪರಿಗಣಿಸುವುದು ಸೂಕ್ತ. ಎರಡು ತಿಂಗಳ ಹಿಂದೆ ಮಾಧ್ಯಮಗಳು ಎನ್ಎಸ್ಎಸ್ಒ ವರದಿಯನ್ನು ಬಹಿರಂಗಗೊಳಿಸಿದವು. ಅದರ ಪ್ರಕಾರ ನಿರುದ್ಯೋಗ ಪ್ರಮಾಣವು ಶೇ.6ಕ್ಕಿಂತ ಹೆಚ್ಚಾಗಿದ್ದು, 1972-73ರಿಂದ ಈ ವರೆಗಿನ ಅವಧಿಯಲ್ಲೇ ಅತ್ಯಧಿಕ ಎನಿಸಿದೆ. ನೀತಿ ಆಯೋಗದ ಉಪಾಧ್ಯಕ್ಷರು ಅಧಿಕೃತವಾಗಿ ಬಿಡುಗಡೆಯಾಗದ ಈ ಅಂಕಿಅಂಶಗಳನ್ನು ಒಪ್ಪಲಿಲ್ಲ. ಉದ್ಯೋಗದ ಕುರಿತ ಅಂಕಿಅಂಶಗಳನ್ನು ಪ್ರಕಟಿಸದೇ ತಡೆಹಿಡಿಯಲು ಸರ್ಕಾರ ತೀರ್ಮಾನಿಸಿದ್ದನ್ನು ಪ್ರತಿಭಟಿಸಿ ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಕಮಿಷನ್ನ ಪ್ರಭಾರಿ ಅಧ್ಯಕ್ಷರು ರಾಜೀನಾಮೆಯಿತ್ತರು.
ಅತಿ ವಿಶ್ವಾಸಾರ್ಹ ಮೂಲ ಎನಿಸಿರುವ ಎನ್ಎಸ್ಎಸ್ಒ ಉದ್ಯೋಗ-ನಿರುದ್ಯೋಗ ಸಮೀಕ್ಷೆ ಐದು ವರ್ಷಗಳಿಗೊಮ್ಮೆ ನಡೆಯಬೇಕಿದ್ದು, ಅದನ್ನು 2016ರಲ್ಲಿ ಮುಂದೂಡಲಾಗಿತ್ತು. ಅಲ್ಲದೆ ಎನ್ಎಸ್ಎಸ್ಒ ಸಮೀಕ್ಷೆಯಷ್ಟು ಸಮೃದ್ಧವಾಗಿರದ ಲೇಬರ್ ಬ್ಯೂರೊ ಸಮೀಕ್ಷೆಯ ವರದಿಯೂ ಸಹ ಇದರಿಂದಾಚೆ ಲಭ್ಯವಾಗಿರುವುದಿಲ್ಲ. ಉದಾಹರಣೆಗೆ, ಇತರ ಅಂಕಿಅಂಶಗಳ ಸಂಗ್ರಹಣೆಯಲ್ಲಿ ಜಾತಿ-ಮತಗಳ ಮಾಹಿತಿಯನ್ನು ಈಗ ವ್ಯವಸ್ಥಿತವಾಗಿ ತೆಗೆಯಲಾಗಿದೆ. ಭಾರತೀಯ ಪೊಲೀಸ್ ಪಡೆಯಲ್ಲಿರುವ ಮುಸ್ಲಿಮರ ಶೇಖಡಾವಾರು ಮಾಹಿತಿಯನ್ನು ಬಹಿರಂಗಗೊಳಸದಿರಲು 2015ರಲ್ಲಿ ಮೋದಿ ಸರ್ಕಾರ ನಿರ್ಧರಿಸಿತು. 1999ರಲ್ಲಿ ವಾಜಪೇಯಿ ಸರ್ಕಾರ ಪ್ರಾರಂಭಿಸಿದ್ದ ಈ ವ್ಯವಸ್ಥೆಯನ್ನು ರದ್ದುಪಡಿಸಲಾಯಿತು. ಅದೇ ರೀತಿ, 2014ರಿಂದೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗವು (ಎನ್ಸಿಆರ್ಬಿ) ಜೈಲಿನಲ್ಲಿರುವ ಖೈದಿಗಳ ಜಾತಿ-ಮತಗಳನ್ನು ಪರಿಗಣಿಸುತ್ತಿಲ್ಲ. ನಮಗೆ ಲಭ್ಯವಿರುವ ಇತ್ತೀಚಿನ ದತ್ತಾಂಶ 2013ರದ್ದು, ಭಾರತದ ಕಾರಾಗೃಹಗಳಲ್ಲಿ ಎಸ್ಸಿ/ಎಸ್ಟಿ ಮತ್ತು ಮುಸ್ಲಿಮರು ಅತಿಹೆಚ್ಚು ಸಂಖ್ಯೆಯಲ್ಲಿದ್ದಾರೆಂದು ಇದು ಸೂಚಿಸುತ್ತದೆ.
ಕೆಲವೊಮ್ಮೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ಅಂತಹ ಸ್ವತಂತ್ರ ಮೂಲಗಳು ನಿಜವನ್ನು ಹೇಳುತ್ತವೆ. ಭಾರತದಲ್ಲಿನ ನಿರುದ್ಯೋಗದ ಕುರಿತ ತನ್ನ ಇತ್ತೀಚಿನ ವರದಿಯಲ್ಲಿ ಸಿಎಂಐಇ ಹೀಗೆ ಹೇಳಿದೆ: “ಕೆಲಸ ಮಾಡಲು ಇಚ್ಛಿಸುವ ಆದರೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸದಿರುವ” ನಿರುದ್ಯೋಗಿಗಳ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರೆ ನಿರುದ್ಯೋಗ ದರ ಶೇ.7.87 ಆಗಿದೆ. ಹಾಗಿಲ್ಲದಿದ್ದರೆ ಈ ಪ್ರಮಾಣ ಶೇ. 5.67 ಆಗಿರುತ್ತದೆ. ಇದು ಎನ್ಎಸ್ಎಸ್ಒ ದತ್ತಾಂಶಗಳ ಜೊತೆ ತಾಳೆಹೊಂದುತ್ತದೆ. ಆದರೆ ಸಿಎಂಐಇ ವರದಿಯಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಿವೆ.
ಇನ್ನು, ಹೆಚ್ಚು ಶಿಕ್ಷಣ ಪಡೆದಂತೆಯೂ ಜನ ನಿರುದ್ಯೋಗದಿಂದ ಅತಿಹೆಚ್ಚು ಬಾಧಿತರಾಗಿದ್ದಾರೆ. ಶಿಕ್ಷಣವನ್ನು ಪರಿಗಣಿಸಿದ ನಿರುದ್ಯೋಗ ದರಗಳು ಹೀಗಿವೆ:
ವಯಸ್ಸನ್ನು ಆಧಾರವಾಗಿಟ್ಟುಕೊಂಡು ನಿರುದ್ಯೋಗ ಪ್ರಮಾಣವನ್ನು ಗಮನಿಸಿದಾಗ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ.
ಕೊನೆಯದಾಗಿ ಮತ್ತು ಮುಖ್ಯವಾಗಿ ಪ್ರಾದೇಶಿಕ ವ್ಯತ್ಯಾಸಗಳು ಕಣ್ಣಿಗೆ ರಾಚುವಂತಿದ್ದು, ಹಲವು ರಾಜ್ಯಗಳು ಸರಾಸರಿಗಿಂತ ತಳಮಟ್ಟದಲ್ಲಿವೆ. ಹರ್ಯಾಣದಲ್ಲಿ ನಗರ ಪ್ರದೇಶಗಳ ಯುವಜನತೆ ನಿರುದ್ಯೋಗದಿಂದ ತೀವ್ರವಾಗಿ ಬಾಧಿತರಾಗಿದ್ದಾರೆ. ಅಲ್ಲಿ 20-24 ವಯೋಮಾನದ ಶೇ.67ರಷ್ಟು ಯುವಜನತೆ ಉದ್ಯೋಗಕ್ಕಾಗಿ ಹುಡುಕಾಟದಲ್ಲಿದ್ದರೆ, ರಾಜ್ಯದ ನಗರಪ್ರದೇಶಗಳ ಜನತೆಯ ನಿರುದ್ಯೋಗ ಪ್ರಮಾಣ ಶೇ.17ಕ್ಕಿಂತಲೂ ಹೆಚ್ಚಿದೆ. ಗುಜರಾತ್ನಲ್ಲಿ ಸರಾಸರಿ ನಿರುದ್ಯೋಗ ದರ ಕಡಿಮೆಯಿದ್ದರೂ (ಶೇ.4.8) ಯುವಜನರು ಸಂಕಷ್ಟದಲ್ಲಿದ್ದಾರೆ; ಶೇ. 22ರಷ್ಟು ನೌಕರಿಗಾಗಿ ಅಲೆದಾಡುತ್ತಿದ್ದಾರೆ.
ಈ ಅಂಕಿಅಂಶಗಳು ಉದ್ಯೋಗ ಮಾರುಕಟ್ಟೆಯ ಕುಸಿತವನ್ನು ಸೂಚಿಸುತ್ತಿದ್ದು, ಇದರಿಂದಾಗಿ ಭಾರತದ ಯುವಜನತೆ ತಲ್ಲಣಗೊಂಡಿದೆ. ಬಂಡವಾಳ ಹೂಡಿಕೆಯ ಬಗ್ಗೆ ಸಿಎಂಐಇ ಸ್ವತಂತ್ರ ಸಮೀಕ್ಷೆಯಿಂದ ಒದಗಿಸಿರುವ ದತ್ತಾಂಶಗಳು ಇದನ್ನು ಭಾಗಶಃ ವಿವರಿಸುತ್ತವೆ. 2018ರ ಡಿಸೆಂಬರ್ ನಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಬಂಡವಾಳ ಹೂಡಿಕೆಯು ಕುಸಿತ ಕಂಡಿದ್ದು, ಹೂಡಿಕೆಯು 14 ವರ್ಷಗಳಲ್ಲೇ ಅತಿಕಡಿಮೆ ಎಂದು ಹೇಳಲಾಗಿದೆ. ಖಾಸಗಿ ಕ್ಷೇತ್ರದಲ್ಲಿನ ಬಂಡವಾಳ ಹೂಡಿಕೆ ದೊಡ್ಡ ಪ್ರಮಾಣದಲ್ಲಿ ಸ್ಥಗಿತಗೊಂಡಿದ್ದನ್ನು ಅದು ತಿಳಿಸುತ್ತದೆ. ಎಲ್ಲಿ ಏನು ತಪ್ಪಾಗಿದೆ? ಸರ್ಕಾರಗಳ ನೀತಿಗಳು ಮತ್ತು ಉತ್ತರದಾಯಿತ್ವದ ಕಾರ್ಯವಿಧಾನಗಳನ್ನು ವಿಮರ್ಶಿಸಲು ಚುನಾವಣಾ ಪ್ರಚಾರವು ಸೂಕ್ತ ಸಮಯವಾಗಿರುತ್ತದೆ. ಆದರೆ 2014ರ ಚುನಾವಣಾ ಪ್ರಚಾರದಂತೆ ಈಗ ಸಾರ್ವಜನಿಕ ಚರ್ಚೆಗಳು ನಡೆಯುತ್ತಿಲ್ಲ. ಇದಕ್ಕೆ ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾಗಳಂತಹ ನೀತಿಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುದೂ ಒಂದು ಕಾರಣವೇ.
ಐದು ವರ್ಷಗಳ ಹಿಂದೆ, “ದ ನೇಶನ್ ವಾಂಟ್ಸ್ ಟು ನೊ” (ಏನೆಂದು ದೇಶ ತಿಳಿಯಲು ಬಯಸುತ್ತದೆ) ಎಂಬುದೊಂದು ಜನಪ್ರಿಯ ವಾಕ್ಯವಾಗಿತ್ತು. ಇವತ್ತು ಹೇಗಾಗಿದೆ ಎಂದರೆ ದೇಶ ಎಲ್ಲವನ್ನು ತಿಳಿಯಲು ಬಯಸಿದರೂ ಸಹ ಅದು ಸಾಧ್ಯವಾಗುತ್ತಿಲ್ಲ. ಸಂಸದೀಯ ಪ್ರಜಾತಂತ್ರದಲ್ಲಿ, ಸ್ಥಾಯಿ ಸಮಿತಿಗಳು ಸಂವಹನದ ಪರ್ಯಾಯ ಮಾರ್ಗಗಳಾಗಿರುತ್ತವೆ, ಅದರಲ್ಲೂ ಪತ್ರಿಕಾ ಗೋಷ್ಠಿಗಳು ಅಸಾಧ್ಯ ಎನಿಸಿದಾಗ. ಸಂಸತ್ತಿಗೆ ಮಾತ್ರ ಉತ್ತರಿಸಬೇಕಾದ ಅಂದಾಜು ಸಮಿತಿ ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳು ಲೋಕಸಭಾ ಚುನಾವಣೆಗಳ ನಂತರದಲ್ಲಿ ತಂತ್ರಗಾರಿಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಸ್ವಲ್ಪವಾದರೂ ಅವಕಾಶ ಕಲ್ಪಿಸಿಕೊಳ್ಳಬಹುದು. ಈ ಸದ್ಯ ಕೆಲವು ವಿಷಯತಜ್ಞರು ಮತ್ತು ಮಾಧ್ಯಮಗಳು ಪ್ರಾಮಾಣಿಕ ಚರ್ಚೆಯಾಗುವಂತೆ ಯತ್ನಿಸುತ್ತಿದ್ದಾರೆ. ಇದರ ಜೊತೆಗೆ ವಿಪಕ್ಷಗಳು ನಡೆಸುವ ಚರ್ಚೆಗಳು ಅನಿವಾರ್ಯವಾಗಿ ನೀತಿ ಆಧಾರಿತವಾಗಿರುವುದಕ್ಕಿಂತ ರಾಜಕೀಯ ಕೇಂದ್ರಿತವಾಗಿರುತ್ತವೆ. ಆದರೆ ವ್ಯವಸ್ಥಿತವಾಗಿ ಸತ್ಯಸಂಗತಿಗಳ ಮೇಲೆ ದಾಳಿಗೈಯುತ್ತಿರುವ, ಸುಳ್ಳುಮಾಹಿತಿ ತುಂಬಿರುವ ವಾತಾವರಣದಲ್ಲಿ ಇಂತಹ ಚರ್ಚೆಗಳು ನಡೆಯಲು ಸಾಧ್ಯವೇ?
– ಕ್ರಿಸ್ತೋಫ್ ಜಾಫ್ರಿಲಾಟ್
(ಪ್ಯಾರಿಸ್ನ CERI ಸಂಸ್ಥೆಯಲ್ಲಿ ಹಿರಿಯ ಸಂಶೋಧಕರಾಗಿರುವ ಲೇಖಕ ಕ್ರಿಸ್ತೋಫ್ ಜಾಫ್ರಿಲಾಟ್ ಲಂಡನ್ ನ ಕಿಂಗ್ಸ್ ಇಂಡಿಯಾ ಇನ್ಸ್ಟಿಟ್ಯೂಟ್ ನಲ್ಲಿ ಭಾರತೀಯ ರಾಜಕೀಯ ಮತ್ತು ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಅವರ ಈ ಲೇಖನವು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಮೊದಲು ಪ್ರಕಟಗೊಂಡಿತ್ತು.)