ಇಡೀ ರಾಜ್ಯದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರ ಅಕ್ಷರಶಃ ಈಗ ರಣರಂಗವೇ ಆಗಿದೆ. ಸಿನಿಮಾ ರಂಗದ ಇಬ್ಬರು ಅಭ್ಯರ್ಥಿಗಳು ಕಣಕ್ಕಿಳಿದಿರುವುದು ಒಂದು ಕಡೆಯಾದರೆ, ಹಳೇಮೈಸೂರು ಭಾಗದ ಜೆಡಿಎಸ್ ಭದ್ರಕೋಟೆಯಲ್ಲಿ ಸ್ವತಃ ಮುಖ್ಯಮಂತ್ರಿ ಪುತ್ರನ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಸಚಿವ ದಿವಂಗತ ಅಂಬರೀಶ್ ಅವರ ಪತ್ನಿ ಕಣಕ್ಕಿಳಿದಿರುವುದು ಕ್ಷೇತ್ರವನ್ನು ಕ್ಷಣಕ್ಷಣದ ಕುತೂಹಲದ ಕಣವಾಗಿಸಿದೆ.
ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಪ್ರಬಲ ಆಕಾಂಕ್ಷೆ ವ್ಯಕ್ತಪಡಿಸಿ ಅದಕ್ಕಾಗಿ ಸಾಕಷ್ಟು ಪ್ರಯತ್ನವನ್ನೂ ಮಾಡಿದ್ದ ಸುಮಲತಾ ಅಂಬರೀಶ್ ಅವರು, ಕೊನೇ ಕ್ಷಣದವರೆಗೂ ಪಕ್ಷದ ಟಿಕೆಟ್ ನಿರೀಕ್ಷೆಯಲ್ಲೇ ಇದ್ದರು. ಆದರೆ, ಮೈತ್ರಿಪಕ್ಷಗಳ ಒಪ್ಪಂದದಂತೆ ಕ್ಷೇತ್ರ ಜೆಡಿಎಸ್ ಪಾಲಾಗಿ, ಮುಖ್ಯಮಂತ್ರಿಗಳ ಪುತ್ರ ನಿಖಿಲ್ ಕುಮಾರಸ್ವಾಮಿ ಅವರೇ ಅಭ್ಯರ್ಥಿ ಎಂದು ಘೋಷಣೆಯಾಗುತ್ತಲೇ ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ತಮ್ಮ ನಿರ್ಧಾರವನ್ನು ಅಂತಿಮಗೊಳಿಸಿದರು. ಆ ಬಳಿಕ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ಘೋಷಿಸಿದ್ದು, ತನ್ನ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.
ಹಾಗಾಗಿ ಸದ್ಯ ಸಕ್ಕರೆಯ ನಾಡಲ್ಲಿ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಭಾರೀ ಹಣಾಹಣಿಗೆ ಸಾಕ್ಷಿಯಾಗಿದೆ.
ಸುಮಾರು 16.85 ಲಕ್ಷ ಮತದಾರರನ್ನು ಹೊಂದಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಇದ್ದು, ಎಲ್ಲಾ ಎಂಟೂ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಶಾಸಕರೇ ಇದ್ದಾರೆ. ಆ ಮೂಲಕ ಕ್ಷೇತ್ರವಾರು ಪ್ರಾಬಲ್ಯದಲ್ಲಿ ಜೆಡಿಎಸ್ ಏಕಸ್ವಾಮ್ಯ ಮೆರೆದಿದೆ. ಆದರೆ, ಲೋಕಸಭೆಯ ಲೆಕ್ಕಾಚಾರಗಳು ವಿಧಾನಸಭಾ ಚುನಾವಣೆಯ ಮೇಲೆ ನಡೆಯಲಾರವು ಎಂಬುದಕ್ಕೆ ಸುಮಲತಾ ಅವರ ಪರ ವ್ಯಕ್ತವಾಗುತ್ತಿರುವ ಭಾರೀ ಬೆಂಬಲವೇ ನಿದರ್ಶನ. 2014ರಲ್ಲಿ ಕಾಂಗ್ರೆಸ್ಸಿನ ರಮ್ಯಾ ವಿರುದ್ಧ ಜೆಡಿಎಸ್ ನ ಸಿ ಎಸ್ ಪುಟ್ಟರಾಜು ಅವರು ಕೇವಲ 5500 ಮತಗಳ ಅಂತರದ ಪ್ರಾಯಾಸಕರ ಜಯ ದಾಖಲಿಸಿದ್ದರು. ಆದರೆ, 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಲ್ ಆರ್ ಶಿವರಾಮೇಗೌಡ ಅವರು, ಬಿಜೆಪಿಯ ಡಾ ಸಿದ್ದರಾಮಯ್ಯ ವಿರುದ್ಧ ಬರೋಬ್ಬರಿ 3.25 ಲಕ್ಷ ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದರು.
ಆದರೆ, ಈ ಬಾರಿ ಮಂಡ್ಯ ಕಣ ಸಂಪೂರ್ಣ ಸ್ಟಾರ್ ವಾರ್ ರಣರಂಗವಾಗಿದ್ದು, ಸುಮಲತಾ ಪರವಾಗಿ ಕನ್ನಡ ಚಿತ್ರರಂಗದ ಜನಪ್ರಿಯ ತಾರೆಯರು ಪ್ರಚಾರಕ್ಕೆ ಧುಮುಕಿದ್ದರೆ, ನಿಖಿಲ್ ಪರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ದಂಡೇ ಮಂಡ್ಯದಲ್ಲಿ ಠಿಕಾಣಿ ಹೂಡಿದೆ.
ರಾಜ್ಯದಲ್ಲೇ ಅತಿ ಹೆಚ್ಚು ರೈತ ಆತ್ಮಹತ್ಯೆಗಳನ್ನು ಕಂಡಿರುವ ಮಂಡ್ಯದ ಬದುಕು ನಿಂತಿರುವುದು ಕೃಷಿ ಮೇಲೆ. ಅದರಲ್ಲೂ ಕಬ್ಬು ಮತ್ತು ಭತ್ತದ ಮೇಲೆ. ಆದರೆ, ಬೆಲೆ ಕುಸಿತ, ಬೆಳೆ ನಷ್ಟದಂತಹ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಸಿಹಿ ಬೆಳೆಯುವ ರೈತನ ಬದುಕು ವಿಷವಾಗಿದೆ. ಸರಣಿ ಆತ್ಮಹತ್ಯೆಗಳಿಗೆ ಶಾಶ್ವತ ತಡೆಯೊಡ್ಡುವ ನಿಟ್ಟಿನಲ್ಲಿ ಆಮೂಲಾಗ್ರವಾಗಿ ಆಗಬೇಕಿರುವ ಕೆಲಸಗಳ ಬಗ್ಗೆ ಯಾವುದೇ ಸರ್ಕಾರವೂ ತಲೆಕೆಡಿಸಿಕೊಂಡಿಲ್ಲ. ತಾತ್ಕಾಲಿಕ ಪರಿಹಾರ, ಭರವಸೆ ಮತ್ತು ಸಂತಾಪಗಳ ಮೂಲಕ ಹೆಗ್ಗಣವನ್ನು ಒಳಗೇ ಬಿಟ್ಟು ಮೇಲೆ ದೊರಗಿಗೆ ಮಣ್ಣು ಮೆತ್ತುವ ಸಾಹಸ ಮುಂದುವರಿಯುತ್ತಲೇ ಇದೆ. ಹಾಗೇ ಅತಿ ಹೆಚ್ಚು ಹೆಣ್ಣುಭ್ರೂಣಹತ್ಯೆ, ಮರ್ಯಾದಾ ಹತ್ಯೆ, ದಲಿತರ ಮೇಲಿನ ದೌರ್ಜನಗಳ ಮೂಲಕ ಸಾಮಾಜಿಕವಾಗಿಯೂ ಇಂದಿಗೂ ಸುಧಾರಣೆ ಕಾಣದ ಜಿಲ್ಲೆಯಾಗಿಯೂ ಮಂಡ್ಯ ಕುಖ್ಯಾತಿಗೆ ಒಳಗಾಗಿದೆ.
ಆದರೆ, ಇಂತಹ ಜ್ವಲಂತ ವಿಷಯಗಳಾವೂ ಈ ಬಾರಿಯ ಚುನಾವಣೆಯಲ್ಲಿ ಪ್ರಚಾರದ ಸರಕಾಗಿ ಚುನಾವಣಾ ಚರ್ಚೆಯಾಗಿ ಬಳಕೆಗೆ ಬಂದಿಲ್ಲ. ಸ್ವತಃ ಮಹಿಳೆಯೊಬ್ಬರು ಪ್ರಬಲ ಸ್ಪರ್ಧಿಯಾಗಿದ್ದರೂ ಮಹಿಳಾ ಸಬಲೀಕರಣದಂತಹ ವಿಷಯ ಅಪ್ಪಿತಪ್ಪಿಯೂ ಪ್ರಸ್ತಾಪವಾಗಿಲ್ಲ. ಸದ್ಯಕ್ಕೆ ಮಂಡ್ಯದಲ್ಲಿ ಪ್ರತಿಧ್ವನಿಸುತ್ತಿರುವುದು ಸುಮಲತಾ ಗೌಡತಿಯೇ ಅಲ್ಲವೇ ಎಂಬುದು ಮತ್ತು ಜೋಡೆತ್ತುಗಳ ಕುರಿತ ಜಟಾಪಟಿ. ‘ಮಂಡ್ಯದ ಸೊಸೆ’ ವರ್ಸಸ್ ‘ಜಾತಿ ಮಗ’ ಎಂಬುದರ ಮೇಲೆಯೇ ಇಡೀ ಚುನಾವಣೆಯ ಚರ್ಚೆ ನಿಂತಿದ್ದು, ಪ್ರತಿ ಸಭೆ, ಪ್ರತಿ ಕಾರ್ಯಕ್ರಮದಲ್ಲೂ ಸುಮಲತಾ ಜಾತಿ ಮತ್ತು ನಿಖಿಲ್ ಕುಟುಂಬ ರಾಜಕಾರಣವೇ ಜೋರು ಸದ್ದು ಮಾಡುತ್ತಿವೆ.
ಈ ನಡುವೆ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮೈಸೂರು ಪ್ರಚಾರ ಸಭೆಯಲ್ಲಿ ಅಂಬರೀಶ್ ಬಗ್ಗೆ ಪ್ರಸ್ತಾಪಿಸಿ ಅವರ ಪತ್ನಿ ಸುಮಲತಾರನ್ನು ಗೆಲ್ಲಿಸುವಂತೆ ಕರೆ ನೀಡಿರುವುದು ಚುನಾವಣಾ ಕಣದಲ್ಲಿ ಹೊಸ ಸಂಚಲನ ಹುಟ್ಟುಹಾಕಿದೆ. ಈ ಮೊದಲು ಸುಮಲತಾ ಅವರಿಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದ್ದರೂ, ಸುಮಲತಾ ಒಂದು ವೇಳೆ ಗೆದ್ದರೆ ಬಿಜೆಪಿ ಸೇರುವುದಿಲ್ಲ ಎಂದು ಹೇಳಿದ್ದರು. ಆದರೆ, ಇದೀಗ ಮೋದಿಯವರೇ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಡ್ಯದ ಮತದಾರರು ಸುಮಲತಾ ಅವರಿಗೆ ಮತ ಹಾಕಿದರೆ, ಅದು ಬಿಜೆಪಿಗೆ ಮತ ಹಾಕಿದಂತೆ ಎಂದೇ ಭಾವಿಸುವಂತಾಗಿದೆ. ಹಾಗಾಗಿ ತಳಮಟ್ಟದಲ್ಲಿ ಮೋದಿ ಹೇಳಿಕೆ ಸುಮಲತಾ ಅವರಿಗೆ ಪೂರಕವಾಗುವುದೆ ಅಥವಾ ಮಾರಕವಾಗುವುದೆ ಎಂಬ ಚರ್ಚೆ ಈಗ ಆರಂಭವಾಗಿದೆ.
ಇತ್ತ ಜೆಡಿಎಸ್ ನಾಯಕರು ಜಾತಿಯನ್ನೇ ಪ್ರಬಲವಾಗಿ ಮುಂದೆ ಮಾಡಿ ಮತಯಾಚನೆ ಮಾಡುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗಾಗಿ ನಿಖಿಲ್ ಗೆ ಆಶೀರ್ವದಿಸಿ ಎನ್ನುತ್ತಿದ್ದಾರೆ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲಿ ಒಕ್ಕಲಿಗರನ್ನು ಹೊರತುಪಡಿಸಿ ಲಿಂಗಾಯಿತ ಮತ್ತು ಕುರುಬ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಜೊತೆಗೆ ದೊಡ್ಡ ಸಂಖ್ಯೆಯಲ್ಲಿರುವ ದಲಿತ ಮತಗಳು ಕೂಡ ನಿರ್ಣಾಯಕ. ಆದರೆ, ಈ ಬಾರಿ ಪ್ರಮುಖವಾಗಿ ಒಕ್ಕಲಿಗ ಪ್ರಾಬಲ್ಯದ ವಿರುದ್ಧ ದಲಿತ ಮತಗಳ ಧ್ರುವೀಕರಣದ ಪ್ರಯತ್ನವೂ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಪ್ರಮುಖವಾಗಿ ವಿವಿಧ ದಲಿತ ಮತ್ತು ರೈತ ಸಂಘಟನೆಗಳು ಸುಮಲತಾ ಅವರ ಪರ ನಿಂತಿವೆ.
ಜೊತೆಗೆ, ಕಾಂಗ್ರೆಸ್ ಸ್ಥಳೀಯ ನಾಯಕರು ನಿಖಿಲ್ ಪರವಾಗಿ ಪ್ರಚಾರ ಮಾಡುವ ಬದಲಾಗಿ ತಟಸ್ಥರಾಗಿ ಉಳಿದಿರುವುದು ಮತ್ತು ಕೆಲವರು ಸುಮಲತಾ ಪರವಾಗಿ ಬಹಿರಂಗ ಪ್ರಚಾರದಲ್ಲಿ ತೊಡಗಿರುವುದು ಜೆಡಿಎಸ್ ಪಾಲಿಗೆ ನುಂಗಲಾರದ ತುತ್ತಾಗಿದೆ. ಸ್ವತಃ ಸಿದ್ದರಾಮಯ್ಯ ಅವರೇ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದರೂ, ಪರಿಸ್ಥಿತಿ ಸುಧಾರಿಸಿಲ್ಲ. ದಶಕಗಳ ಜೆಡಿಎಸ್ ವಿರುದ್ಧದ ರಾಜಕಾರಣದ ಮೂಲಕವೇ ಅಸ್ತಿತ್ವ ಕಂಡುಕೊಂಡಿರುವ ಕಾಂಗ್ರೆಸ್ಸಿಗರಿಗೆ ಇದೀಗ ದಿಢೀರನೇ ಪರಸ್ಪರ ಹೆಗಲಮೇಲೆ ಕೈಹಾಕಿ ಮತ ಕೇಳುವುದು ದುಸ್ತರ ಎಂಬುದು ಒಂದು ಕಡೆಯಾದರೆ, ಪ್ರಭಾವಿ ನಾಯಕ ಚೆಲುವರಾಯಸ್ವಾಮಿ ಮತ್ತು ಸಿಎಂ ಕುಮಾರಸ್ವಾಮಿ ನಡುವಿನ ವೈಷಮ್ಯ ಮತ್ತೊಂದು ಕಡೆ. ಚುನಾವಣೆಯ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರ ನಡುವಿನ ಹೊಂದಾಣಿಕೆಗೆ ಸ್ವತಃ ಸಿದ್ದರಾಮಯ್ಯ ನಡೆಸಿದ ಪ್ರಯತ್ನ ಫಲಕೊಟ್ಟಿಲ್ಲ. ಹಾಗಾಗಿ ನಿಖಿಲ್ ಗೆ ಈಗ ಮಿತ್ರಪಕ್ಷದ ಒಳ ಮತ್ತು ಹೊರಪೆಟ್ಟುಗಳೇ ಸವಾಲಾಗಿವೆ.
ಇನ್ನು ಸುಮಲತಾ ಅವರಿಗೂ ಅಂಬರೀಶ್ ಅವರ ಒಂದು ಕಾಲದ ಆಪ್ತರಲ್ಲೇ ಹಲವರು ತಲೆನೋವಾಗಿ ಪರಿಣಮಿಸಿದ್ದು, ಅಂಬರೀಶ್ ಅವರಿಂದ ಸಾಕಷ್ಟು ಲಾಭ ಮಾಡಿಕೊಂಡು ಹಲವರು ಇದೀಗ ತೆರೆಮರೆಗೆ ಸರಿದಿದ್ದಾರೆ. ಜೊತೆಗೆ, ಸಿನಿಮಾ ನಟರನ್ನೇ ನಂಬಿಕೊಂಡು, ಅವರ ಸ್ಟಾರ್ ಗಿರಿಯನ್ನೆ ನೆಚ್ಚಿಕೊಂಡು ಚುನಾವಣೆ ಗೆಲ್ಲುವುದು ಸಾಧ್ಯವೇ? ತಳಮಟ್ಟದಲ್ಲಿ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸುವ ಪಡೆ ಇಲ್ಲದೆ ಕೇವಲ ಸಭೆ- ಪ್ರಚಾರ ಸಭೆಗಳ ಮೂಲಕವೇ ಮತ ಕ್ರೋಡೀಕರಣ ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. ಈ ನಡುವೆ ಮತದಾನದ ಹಿಂದಿನ ದಿನದ ಕರಾಮತ್ತುಗಳೇ ಚುನಾವಣೆಯ ಫಲಿತಾಂಶ ನಿರ್ಧರಿಸುವ ಮಂಡ್ಯ ಕ್ಷೇತ್ರದಲ್ಲಿ ಅಂತಹ ತಳಮಟ್ಟದ ಚಾಕಚಕ್ಯತೆ ತೋರುವ ಪಡೆಯ ಕೊರತೆ ಸುಮಲತಾ ಅವರಿಗಿದೆ. ಜೊತೆಗೆ ಅವರದೇ ಹೆಸರಿನ ಮೂವರನ್ನು ಕಣಕ್ಕಿಳಿದಿದ್ದು, ಗ್ರಾಮೀಣ ಭಾಗದ ಮತದಾರರನ್ನು ದಿಕ್ಕುತಪ್ಪಿಸುವಲ್ಲಿ ಅದು ಕೂಡ ಸಫಲವಾಗಬಹುದು ಎನ್ನಲಾಗುತ್ತಿದೆ.
ಆದರೆ, ಸದ್ಯಕಂತೂ ಪ್ರಚಾರಸಭೆಗಳು ಮತ್ತು ವ್ಯಕ್ತವಾಗುತ್ತಿರುವ ಜನಬೆಂಬಲದ ದೃಷ್ಟಿಯಲ್ಲಿ ಸುಮಲತಾ ಮತ್ತು ನಿಖಿಲ್ ನಡುವೆ ಭಾರೀ ಹಣಾಹಣಿ ಇದ್ದು, ಸಮಬಲದ ಹೋರಾಟ ಕಾಣುತ್ತಿದೆ. ಜೆಡಿಎಸ್ ಪಾಲಿಗಂತೂ ಇದು ಪ್ರತಿಷ್ಠೆಯ ಕಣ. ಹಾಗೇ ಸ್ವತಃ ಮುಖ್ಯಮಂತ್ರಿಗಳ ಪುತ್ರನೇ ಕಣದಲ್ಲಿರುವುದರಿಂದ ದೋಸ್ತಿ ಸರ್ಕಾರದ ಪಾಲಿಗೂ ಇದು ಪ್ರತಿಷ್ಠೆಯದ್ದೇ. ಆದರೆ, ಸದ್ಯದ ಸ್ಥಿತಿಯಲ್ಲಿ ಯಾರೂ ನಿರಾಳವಾಗಿರಲಾಗದ ಸ್ಥಿತಿ ಕಾಣುತ್ತಿದೆ. ಹಾಗಾಗಿ ಸ್ಟಾರ್ ವಾರ್ ಭವಿಷ್ಯವನ್ನು ಕ್ಲೈಮ್ಯಾಕ್ಸ್ ನ ಕೊನೇ ಕ್ಷಣದ ಕರಾಮತ್ತುಗಳೇ ಅಂತಿಮವಾಗಿ ಗೆಲ್ಲುವ ಕುದುರೆಯನ್ನು ನಿರ್ಧರಿಸಲಿವೆ ಎಂಬುದು ಬಡ ಬೋರೇಗೌಡನ ಅಂಬೋಣ!