ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಆಧಾರಿತ ಚಲನಚಿತ್ರ ‘ಪಿಎಂ ನರೇಂದ್ರ ಮೋದಿ’ ಬಿಡುಗಡೆಗೆ ಕೇಂದ್ರ ಚುನಾವಣಾ ಆಯೋಗ ತಡೆ ನೀಡಿದೆ.
ನಿಗದಿಯಂತೆ ಏಪ್ರಿಲ್ 11 ರಂದು (ನಾಳೆ) ಸಿನೆಮಾ ಬಿಡುಗಡೆಯಾಗಬೇಕಿತ್ತು, ಆದರೆ ಲೋಕಸಭಾ ಚುನಾವಣೆ ಮುಗಿಯುವರೆಗೂ ಬಿಡುಗಡೆ ಮಾಡಬಾರದು ಎಂದು ಚುನವಾಣಾ ಆಯೋಗ ಸೂಚನೆ ನೀಡಿದೆ.
ಪ್ರಧಾನಿ ಮೋದಿಯ ಜೀವನವನ್ನು ಆಧರಿಸಿ ನಿರ್ಮಿಸಿರುವ ‘ಪಿಎಂ ನರೇಂದ್ರ ಮೋದಿ’ ಸಿನೆಮಾ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿನ್ನೆ ತಿರಸ್ಕರಿಸಿತ್ತು. ಇದರಿಂದಾಗಿ ಚಿತ್ರತಂಡ ನಾಳೆ ಸಿನೆಮಾ ಬಿಡುಗಡೆಗೆ ಸಕಲ ಸಿದ್ಧತೆಯನ್ನು ನಡೆಸಿತ್ತು.
ಆದರೆ ಇದೀಗ ಚುನಾವಣಾ ಆಯೋಗ ಚಿತ್ರತಂಡಕ್ಕೆ ಶಾಕ್ ನೀಡಿದ್ದು, ಲೋಕಸಭಾ ಚುನಾವಣೆ ಮುಗಿಯುವವರೆಗೂ ‘ಯು’ ಸರ್ಟಿಫಿಕೇಟ್ ಪಡೆದ ಪಿಎಂ ನರೇಂದ್ರ ಮೋದಿ ಸಿನೆಮಾವನ್ನು ಬಿಡುಗಡೆ ಮಾಡಬಾರದೆಂದು ಆದೇಶ ನೀಡಿದೆ.