ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೇಶದ ರೈತ ನಾಯಕರು ಸಿಡಿದೆದ್ದಿದ್ದಾರೆ. ನರೇಂದ್ರ ಮೋದಿಗೆ ಮತ ಚಲಾಯಿಸಬಾರದು ಎಂದು ರೈತ ನಾಯಕರು ಇಡೀ ರೈತ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬಂದರೆ ಇಡೀ ದೇಶದ ರೈತರ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ, ರೈತರ ಮೇಲಿನ ಸಾಲದ ಹೊರೆ ಹಿಗ್ಗಲಿದೆ ಎಂಬುದು ಈ ರೈತ ನಾಯಕರ ಆರೋಪ.
ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ರಾಷ್ಟ್ರದ ಪ್ರಮುಖ 185 ರೈತ ಸಂಘಟನೆಗಳನ್ನೊಳಗೊಂಡ ರಾಷ್ಟ್ರೀಯ ಕಿಸಾನ್ ಮಹಾಸಂಘವು ನರೇಂದ್ರ ಮೋದಿ ರೈತರಿಗೆ ಮಾಡಿರುವ ಅನ್ಯಾಯಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ. ‘ನರೇಂದ್ರ ಮೋದಿ ಕಿಸಾನ್ ವಿರೋಧಿ’ ಎಂಬ ಕಿರುಹೊತ್ತಿಗೆಯನ್ನು ಹೊರ ತಂದಿದೆ. ನರೇಂದ್ರ ನೇತೃತ್ವದ ಎನ್ಡಿಎ ಸರ್ಕಾರ ಕೃಷಿ ವಲಯದಲ್ಲಿ ಕಂಡಿರುವ ವೈಫಲ್ಯಗಳ ಪಟ್ಟಿಯ ಜತೆಗೆ ರೈತರನ್ನು ವಂಚಿಸುತ್ತಿರುವ ಬಗ್ಗೆ ವಿವರ ನೀಡಲಾಗಿದೆ. ಈ ಕಿರುಹೊತ್ತಿಗೆಯನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.
ವಿಶೇಷ ಎಂದರೆ, ಇದೇ ಮೊದಲ ಬಾರಿಗೆ ರೈತ ಸಂಘಟನೆಗಳ ಮುಖಂಡರೆಲ್ಲರೂ ಒಟ್ಟಾಗಿ ಸೇರಿ ಮೋದಿ ಸರ್ಕಾರದ ವಿರುದ್ಧ ದನಿ ಎತ್ತಿದ್ದಾರೆ. ಈ ಹಿಂದೆಯೂ ರೈತರು ಮೋದಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದಾರೆ. ಆದರೆ, ಆ ಹೋರಾಟಗಳೆಲ್ಲವೂ ಒಂದೊಂದು ರಾಜ್ಯ ಮತ್ತು ಪ್ರದೇಶಗಳಿಗೆ ಸೀಮಿತವಾಗಿದ್ದರಿಂದ ಹೋರಾಟ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮ ಬೀರಿರಲಿಲ್ಲ. ಆದರೆ, ಈಗ ದೇಶದಲ್ಲೆಡೆಯಿಂದ ಪ್ರಮುಖ 185 ಸಂಘಟನೆಗಳ ಮುಖಂಡರು ಒಗ್ಗೂಡಿರುವುದು ವಿಶೇಷ. ಪ್ರಾದೇಶಿಕ ಮಟ್ಟದಲ್ಲಿ ಪ್ರತ್ಯೇಕ ರೈತಸಂಘಗಳಿವೆ. ರಾಷ್ಟ್ರವ್ಯಾಪಿಯಾಗಿ ಒಂದೇ ರೈತ ಸಂಘ ಇಲ್ಲ. ಈಗ ರಾಷ್ಟ್ರೀಯ ಕಿಸಾನ್ ಮಹಾಸಂಘದಡಿ ಪ್ರಾದೇಶಿಕ ಸಂಘಗಳು ಒಗ್ಗೂಡಿವೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹಲವು ರೈತನಾಯಕರು, ಮೋದಿ ಸರ್ಕಾರ ರೈತರನ್ನು ವಂಚಿಸಿದೆ, ಕಳೆದ ಐದು ವರ್ಷಗಳಲ್ಲಿ ರೈತರ ಸ್ಥಿತಿ ಸುಧಾರಿಸಲಾರದ ಮಟ್ಟಕ್ಕೆ ಇಳಿದಿದೆ, ಮತ್ತೊಂದು ಅವಧಿಗೆ ಮೋದಿ ಅಧಿಕಾರಕ್ಕೆ ಬಂದರೆ ಈ ದೇಶದಲ್ಲಿರುವ ಕೋಟ್ಯಾಂತರ ರೈತರು ಸರ್ವನಾಶವಾಗುತ್ತಾರೆ. ಅಂತಹ ಅನಾಹುತ ತಡೆಯ ಬೇಕಾದರೆ ರೈತರು ಮೋದಿ ವಿರುದ್ಧ ಮತ ಚಲಾಯಿಸಬೇಕು ಎಂದು ಹೇಳಿದ್ದಾರೆ. ಈ ಕಿರುಹೊತ್ತಿಗೆಯ ಉದ್ದೇಶ ಮೋದಿ ಸರ್ಕಾರ ರೈತರಿಗೆ ಮತ್ತು ಈ ದೇಶದ ಜನರಿಗೆ ಮಾಡಿರುವ ಅನ್ಯಾಯಗಳನ್ನು ಬಯಲಿಗೆಳೆಯುವುದಾಗಿದೆ. ದೇಶದ ಕೃಷಿ ವಲಯದ ದುಸ್ಥಿತಿ ಮತ್ತು ನಿರುದ್ಯೋಗ ಸಮಸ್ಯೆಯ ಬಗ್ಗೆ ರೈತರು ಮತ್ತು ಯುವಕರಲ್ಲಿ ಅರಿವು ಮೂಡಿಸಿ, ರಾಜಕೀಯೇತರ ಮಾರ್ಗದಲ್ಲಿ ಹೋರಾಟ ಸಂಘಟಿಸುವುದಾಗಿದೆ. ಆ ಮೂಲಕ ಯುವಕರು ಮತ್ತು ರೈತರು ಮತ ಚಲಾಯಿಸುವಾಗ ಮೋದಿ ವಿರುದ್ಧ ಮತ ಚಲಾಯಿಸುವಂತೆ ಉತ್ತೇಜಿಸುವುದಾಗಿದೆ ಎಂದು ಹರ್ಯಾಣದ ರೈತ ನಾಯಕ ಅಭಿಮನ್ಯು ಕೊಹಾರ್ ವಿವರಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರವು ರೈತರನ್ನು ಸಾಲದ ಸಂಕೋಲೆಯಿಂದ ಮುಕ್ತಿಗೊಳಿಸಲು ಯಾವೊಂದೂ ಕ್ರಮವನ್ನು ಕೈಗೊಂಡಿಲ್ಲ, ಆದರೆ, ಕಾರ್ಪೊರೆಟ್ ಗಳಿಗೆ 2.72 ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡಿದೆ. ಕಾರ್ಪೊರೆಟ್ ಬಗ್ಗೆ ಮೋದಿಗಿರುವ ಕಳಕಳಿ ರೈತರ ಮೇಲೆ ಇಲ್ಲ. ಕಾರ್ಪೊರೆಟ್ ಗಳಿಗೆ ಮನ್ನಾ ಮಾಡಿದ ಸಾಲದಲ್ಲಿ ಅರ್ಧದಷ್ಟು ರೈತರ ಸಾಲ ಮನ್ನಾ ಮಾಡಿದ್ದರೆ, ರೈತರು ಬಹುತೇಕ ಸಾಲ ಮುಕ್ತರಾಗುತ್ತಿದ್ದರು. ಆದರೆ, ಮೋದಿಗೆ ರೈತರು ಸಾಲಮುಕ್ತರಾಗಿ ಸ್ವಾಭಿಮಾನಿಗಳಾಗಿ ಬದುಕುವುದು ಬೇಕಿಲ್ಲ ಎಂದು ಅಭಿಮನ್ಯು ಕೊಹಾರ್ ಟೀಕಿಸಿದರು.
2014ರ ಚುನಾವಣೆ ವೇಳೆ ರೈತರ ಉದ್ಧಾರ ಮಾಡುವುದಾಗಿ ಭರವಸೆ ನೀಡಿ ಅಧಿಕಾರ ಗಿಟ್ಟಿಸಿದ ನರೇಂದ್ರ ಮೋದಿ ಸರ್ಕಾರವು ಆರಂಭದಿಂದಲೂ ರೈತ ವಿರೋಧಿ ನಿಲವು ತಳೆದಿದೆ. ರೈತರ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ದರ ನಿಗದಿ ಮಾಡುವಂತೆ ಡಾ.ಸ್ವಾಮಿನಾಥನ್ ಸಮಿತಿ ವರದಿಯನ್ನು ಜಾರಿ ಮಾಡಿಲ್ಲ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ನಿಗದಿ ಮಾಡುವಾಗ ಸ್ವಾಮಿನಾಥನ್ ಅವರು ಪ್ರಸ್ತಾಪಿಸಿದ ಸೂತ್ರವನ್ನು ಅನುಸರಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತವರ ಸಂಪುಟದ ಸಚಿವರು ರೈತರಿಗೆ ನೀಡಿರುವ ಕನಿಷ್ಠ ಬೆಂಬಲ ಬೆಲೆ ಕುರಿತಂತೆ ತಪ್ಪು ಮಾಹಿತಿ ನೀಡಿ ಹಾದಿ ತಪ್ಪಿಸುತ್ತಿದ್ದಾರೆ. ಕೃಷಿ ಉತ್ಪನ್ನಗಳ ವೆಚ್ಚದ ಮೇಲೆ ಶೇ.50ರಷ್ಟು ಲಾಭಾಂಶ ಇಟ್ಟು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಆ ಘೋಷಣೆ ಆಧಾರದ ಮೇಲೆ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಈ ರೀತಿ ಬೆಂಬಲ ಬೆಲೆ ನಿಗದಿ ಮಾಡುವಾಗ ಕೆಲವು ತಾಂತ್ರಿಕ ಅಂಶಗಳನ್ನು ಸರ್ಕಾರ ಪರಿಗಣಿಸಿಲ್ಲ. ಉದ್ದೇಶಪೂರ್ವಕವಾಗಿಯೇ ಅವುಗಳನ್ನು ನಿರ್ಲಕ್ಷಿಸಿದೆ. ಅಲ್ಲದೇ ಸ್ವಾಮಿನಾಥನ್ ಸಮಿತಿ ಶಿಫಾರಸಿನಂತೆಯೇ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ ಎಂದು ತಪ್ಪು ಮಾಹಿತಿಯನ್ನು ನೀಡುತ್ತಿದೆ. ಸ್ವಾಮಿನಾಥನ್ ಸಮಿತಿಯು ಬೆಂಬಲ ಬೆಲೆ ನಿಗದಿ ಮಾಡುವಾಗ ಎ-2 ಮತ್ತು ಎಫ್ಎಲ್ ಜತೆಗೆ ಸಿ-2 ಅಂಶವೂ ಒಳಗೊಳ್ಳಬೇಕು ಎಂದು ಪ್ರತಿಪಾದಿಸಿದೆ. ಆದರೆ, ಬೆಂಬಲಬೆಲೆ ನಿಗದಿ ಮಾಡುವಾಗ ಎ -2 ಮತ್ತು ಎಫ್ಎಲ್ ಅನ್ನು ಮಾತ್ರ ಪರಿಗಣಿಸಲಾಗಿದೆ. ಸಿ-2 ಕೈಬಿಡಲಾಗಿದೆ. ಆದರೆ, ಚುನಾವಣಾ ಪ್ರಚಾರ ಸಭೆಗಳಲ್ಲಿ, ಜಾಹಿರಾತುಗಳಲ್ಲಿ ಸ್ವಾಮಿನಾಥನ್ ಸಮಿತಿ ಶಿಫಾರಸಿನಂತೆಯೇ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ ಎಂದು ಪ್ರಚಾರ ಮಾಡಿ ಹಾದಿ ತಪ್ಪಿಸಲಾಗುತ್ತಿದೆ ಎಂದು ಮಧ್ಯಪ್ರದೇಶದ ರೈತ ನಾಯಕ ಶಿವಕುಮಾರ್ ಕಾಕಾಜಿ ಆರೋಪಿಸಿದ್ದಾರೆ.
ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಾಗ ವೆಚ್ಚವನ್ನು ಲೆಕ್ಕ ಹಾಕಲು ಎರಡು ವಿಧಾನ ಬಳಸಲಾಗುತ್ತದೆ. ಒಂದು ಎ2+ಎಫ್ಎಲ್, ಮತ್ತೊಂದು ಎ2+ಎಫ್ಎಲ್ ಮತ್ತು ಸಿ-2. ಇಲ್ಲಿ ಎ-2 ಎಂದರೆ, ರೈತರು ಬೆಳೆಗಾಗಿ ಮಾಡುವ ನಗದು ವೆಚ್ಚ, ಪರಿಕರಗಳ ಸ್ವರೂಪದ ವೆಚ್ಚ, ಭೂಮಿಗೆ ನೀಡುವ ಗುತ್ತಿಗೆ (ಲೀಸ್) ಸೇರಿರುತ್ತದೆ. ಎಫ್ಎಲ್ ಎಂಬುದು ಫ್ಯಾಮಿಲಿ ಲೇಬರ್ ಅಂದರೆ, ಕೃಷಿಕನ ಮನೆಯ ಸದಸ್ಯರು ದುಡಿಯುವ ದಿನಗಳ ಲೆಕ್ಕ. ಅಂದರೆ, ಎ2+ಎಫ್ಎಲ್ ವಿಧಾನದಲ್ಲಿ ಲೆಕ್ಕ ಹಾಕುವಾಗ ಇವಿಷ್ಟೂ ಅಂಶಗಳನ್ನು ಪರಿಗಣಿಸಲಾಗುತ್ತದೆ. ಇವಿಷ್ಟೆ ಅಂಶಗಳನ್ನು ಪರಿಗಣಿಸಿದರೆ ರೈತರಿಗೆ ವಾಸ್ತವಿಕವಾಗಿ ಲಾಭವಾಗುವುದಿಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ಶೇ.50ರಷ್ಟು ಲಾಭಾಂಶ ಸೇರಿಸಿ ನಿಗದಿ ಮಾಡಬೇಕೆಂಬ ಬೇಡಿಕೆಯನ್ನು ತಿರಿಸ್ಕರಿಸಿದಂತಾಗುತ್ತದೆ. ಸಿ-2 ವಿಧಾನದಲ್ಲಿ ಲೆಕ್ಕ ಹಾಕುವಾಗ ಎ2+ಎಫ್ಎಲ್ ಜತೆಗೆ ರೈತರು ಹೊಲ, ಗದ್ದೆ ಉಳಲು ಬಳಸಿದ ಟ್ರಾಕ್ಟರ್ ಬಾಡಿಗೆ, ಗೋದಾಮು ಬಾಡಿಗೆ, ನಿರ್ವಹಣಾ ವೆಚ್ಚವೂ ಸೇರಿರುತ್ತದೆ ಆದರೆ, ಸಿ-2 ಅಂಶವನ್ನು ಬಿಟ್ಟು ಬೆಂಬಲ ಬೆಲೆ ನಿಗದಿ ಮಾಡಿ ರೈತರಿಗೆ ಮೋಸ ಮಾಡಲಾಗಿದೆ ಎಂದು ದೂರಿದ್ದಾರೆ.
ಮೋದಿ ಸರ್ಕಾರವು ಕಾರ್ಪೊರೆಟ್ ಗಳಿಗೆ ಅನುಕೂಲವಾಗುವಂತೆ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಯತ್ನಿಸಿದೆ. ಬಿಜೆಪಿ ಸರ್ಕಾರಗಳಿರುವ ರಾಜ್ಯಗಳ ಮೂಲಕ ಭೂಸ್ವಾಧೀನ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಹಿಂಬಾಗಿಲಿಂದ ರೈತ ವಿರೋಧಿ ಕಾಯ್ದೆ ಜಾರಿ ಮಾಡುತ್ತಿದೆ. ಸದ್ಯಕ್ಕೆ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಜಾರಿಗೆ ಪ್ರತಿ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಸಂಸದೀಯ ಆಯ್ಕೆ ಸಮಿತಿ ಪರಾಮರ್ಶೆಗೆ ಸಲ್ಲಿಸಲಾಗಿದೆ. ಮೋದಿ ಸರ್ಕಾರ ಪ್ರಚಾರ ಮಾಡುತ್ತಿರುವ ಇ-ನಾಮ್, ಮಣ್ಣಿನ ಆರೋಗ್ಯ ಕಾರ್ಡ್, ನೀರಾವರಿ ಯೋಜನೆಗಳು ರೈತರ ಸಂಕಷ್ಟಗಳಿಗೆ ಪರಿಹಾರ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಪಂಜಾಬ್ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಹೇಳಿದ್ದಾರೆ. ಮೋದಿ ಸರ್ಕಾರ ಕಬ್ಬು ಬೆಳೆಗಾರರ ಹಿತರಕ್ಷಿಸುವ ಬದಲಿಗೆ ಸಕ್ಕರೆ ಕಾರ್ಖಾನೆ ಮಾಲೀಕರ ಪರವಾಗಿ ನಿಲವು ತಳೆದಿದೆ. ದೇಶದ ಸರ್ಕಾರೆ ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರಿಗೆ 22,000 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಪಾವತಿಗೆ ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಂಡಿಲ್ಲ. ರೈತರು ತಮಗೆ ಬರಬೇಕಾದ ಬಾಕಿ ಪಡೆಯಲಾಗದೆ, ಬ್ಯಾಂಕುಗಳಿಂದಲೂ ಸಾಲ ಸಿಗದೆ ದುಬಾರಿ ಬಡ್ಡಿಗೆ ಸಾಲ ಪಡೆಯುವ ಸಂಕಷ್ಟ ಸ್ಥಿತಿ ತಲುಪಿದ್ದಾರೆ ಎಂದು ಉತ್ತರ ಪ್ರದೇಶ ರೈತ ನಾಯಕ ಹರ್ಪಾಲ್ ಚೌಧರಿ ಹೇಳಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಸ್ಥಳೀಯ ರೈತರ ಮೇಲೆ ಗಂಭೀರವಾದ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ. ಇವುಗಳ ನಿವಾರಣೆಗೆ ಮೋದಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕದ ರೈತ ನಾಯಕ ಬಸವರಾಜ ಪಾಟೀಲ್ ಹೇಳಿದ್ದಾರೆ.
ಈಗಾಗಲೇ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದರಿಂದ ಕಾರ್ಮಿಕರ ಮೋದಿ ವಿರುದ್ಧ ತಿರುಗಿಬಿದ್ದಿದ್ದಾರೆ. ಈಗ ರೈತಸಂಘಟನೆಗಳೂ ಮೋದಿ ವಿರುದ್ಧ ತಿರುಗಿಬಿದ್ದಿವೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ನಿರ್ಣಾಯಕ ಪಾತ್ರ ವಹಿಸುವ ಕಾರ್ಮಿಕರು ಮತ್ತು ರೈತರು ಮೋದಿ ವಿರುದ್ಧ ಮತ ಚಲಾಯಿಸಿದರೆ ಮರಳಿ ಅಧಿಕಾರಕ್ಕೇರುವ ಮೋದಿ ಕನಸು ಭಗ್ನವಾಗುವುದು ಖಚಿತ.