ಅಮೇಥಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದು ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ತಾಯಿ ಸೊನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ವಾದ್ರಾ, ಭಾವ ರಾಬರ್ಟ್ ವಾದ್ರಾ, ಅವರ ಮಕ್ಕಳಾದ ರೈಹನ್ ಹಾಗೂ ಮಿರಯಾ ಸಹ ಇದ್ದರು.
ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್ ಶೋ ನಡೆಸಿದ ರಾಹುಲ್ ಅವರಿಗೆ ಸಾವಿರಾರು ಬೆಂಬಲಿಗರು ಸಾಥ್ ನೀಡಿದರು. ಅವರ ಮೇಲೆ ಪುಷ್ಪಗಳ ಸುರಿಮಳೆಗೈದರು.
ರಸ್ತೆ ರ್ಯಾಲಿ ವೇಳೆ ರಾಹುಲ್ ಅವರು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದ ಮಹತ್ವದ ಯೋಜನೆ ನ್ಯಾಯ್ ನ ಲೋಗೊ ಸಹಿತ ಟಿ-ಶರ್ಟ್ ಹಿಡಿದರು. ರ್ಯಾಲಿಯಲ್ಲಿ ಭಾಗವಹಿಸಿದ ಸೋನಿಯಾ ಗಾಂಧಿ ಅವರು ನೇರವಾಗಿ ಚುನಾವಣಾ ಕಚೇರಿಗೆ ಆಗಮಿಸಿದರು.
ಇತ್ತೀಚೆಗಷ್ಟೇ ಕೇರಳದಲ್ಲಿ ನಾಮಪತ್ರ ಸಲ್ಲಿಸಿದ್ದ ರಾಹುಲ್ ಅವರು ಇಂದು ಅಮೇಥಿಯಲ್ಲೂ ನಾಮಪತ್ರ ಸಲ್ಲಿಸಿದ್ದು, ಒಟ್ಟು ಎರಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.