ನೋಟ್ ಅಮಾನ್ಯೀಕರಣದ ನಂತರ 3 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕೋಟಾ ನೋಟುಗಳನ್ನು ವಿದೇಶದಲ್ಲಿ ಮುದ್ರಿಸಿ ಅಮಿತ್ ಶಾ ಆದೇಶದ ಮೇರೆಗೆ ಹಿಂಡನ್ ವಾಯುನೆಲೆಗೆ ಮಿಲಿಟರಿ ವಿಮಾನಗಳಲ್ಲಿ ಸಾಗಿಸಲಾಯಿತೆಂಬ ಸ್ಫೋಟಕ ಮಾಹಿತಿಯನ್ನು ಕಾಂಗ್ರೆಸ್ ಬಹಿರಂಗಪಡಿಸಿದೆ.
ನೋಟ್ ಅಮಾನ್ಯೀಕರಣ ಘೋಷಣೆಯಾದ ಕೂಡಲೇ 3 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ವಿದೇಶಗಳಲ್ಲಿ ಮುದ್ರಣಗೊಳಿಸಿ ದೆಹಲಿಯ ಹಿಂಡನ್ ವಾಯುನೆಲೆಗೆ ಮಿಲಿಟರಿ ವಿಮಾನಗಳ ಮೂಲಕ ತರಲಾಯಿತೆಂದು ಮತ್ತು ಅವುಗಳನ್ನು ರಿಸರ್ವ್ ಬ್ಯಾಂಕ್ಗೆ ಸಾಗಿಸಲು ಶೇ.35ರಿಂದ ಶೇ.40ರಷ್ಟು ವಿನಿಮಯ ಕಮಿಷನ್ ಪಡೆಯಲಾಯಿತೆಂಬ ಆತಂಕಕಾರಿ ಮಾಹಿತಿಯನ್ನು ಕಾಂಗ್ರೆಸ್ ಪಕ್ಷ ಹೊರಹಾಕಿದೆ.
ಮಂಗಳವಾರದಂದು ತುರ್ತು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ನೋಟ್ ಅಮಾನ್ಯೀಕರಣವನ್ನು ಭಾರತದ ಅತಿದೊಡ್ಡ ಹಗರಣವೆಂದು ಬಣ್ಣಿಸಿದರಲ್ಲದೆ, ಈ ಹಗರಣದಿಂದ ಯಾರಿಗೆ ಲಾಭವಾಗಿದೆ ಎಂಬುದನ್ನು ತನಿಖೆಗೆ ಒಳಪಡಿಸಬೇಕು ಎಂದೂ ಹೇಳಿದ್ದಾರೆ. ನೋಟ್ ಅಮಾನ್ಯೀಕರಣ ‘ಬಡವರ ಮೇಲಿನ ದಾಳಿ’ ಮಾತ್ರ ಆಗಿಲ್ಲ, ಕುತಂತ್ರದಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ನಿಭಾಯಿಸುವ ಮೂಲಕ ಶ್ರೀಮಂತರು ತಮ್ಮ ಅಕ್ರಮ ಹಣವನ್ನು ಬಿಳಿಯಾಗಿಸಿಕೊಳ್ಳಲು ಅದು ಅವಕಾಶ ಕಲ್ಪಿಸಿಕೊಟ್ಟಿತು ಎಂದು ಸಿಬಲ್ ಆರೋಪಿಸಿದ್ದಾರೆ.
ನೋಟ್ ನಿಷೇಧದ ನಂತರದಲ್ಲಿ ಸರ್ಕಾರ ನಡೆಸಿರುವ ಕರೆನ್ಸಿ ವಿನಿಮಯವನ್ನು ಬಯಲುಗೊಳಿಸಿವೆ ಎಂದು ಹೇಳಲಾಗಿರುವ ವಿಡೀಯೊಗಳ ತುಣುಕುಗಳನ್ನು ಪ್ರದರ್ಶಿಸಿದ ಕಪಿಲ್ ಸಿಬಲ್ ಅವರು ಇವುಗಳ ಮೂಲ ವಿಡೀಯೊ www.tnn.world ಎಂಬ ಜಾಲತಾಣದಲ್ಲಿ ಲಭ್ಯವಿವೆ.
ರಾಹುಲ್ ಎಂದು ಹೇಳಿಕೊಳ್ಳುವ RAW (Research and Analysis Wing – ಭಾರತದ ಬಾಹ್ಯ ಬೇಹುಗಾರಿಕಾ ಸಂಸ್ಥೆ) ಮಾಜಿ ನೌಕರ,ಕುಟುಕು ಕಾರ್ಯಾಚರಣೆ ನಡೆಸಿದ ಪತ್ರಕರ್ತರೊಬ್ಬರ ಜೊತೆಯಲ್ಲಿ ಸಂಭಾಷಣೆ ನಡೆಸುತ್ತಾನೆ. ತಲಾ 1 ಲಕ್ಷ ಕೋಟಿ ರೂಪಾಯಿಗಳ ಮೂರು ಸರಣಿಗಳ ನೋಟ್ಗಳನ್ನು ವಿದೇಶದಲ್ಲಿ ಮುದ್ರಣ ಮಾಡಲಾಯಿತೆಂದು ರಾಹುಲ್ ಹೇಳುತ್ತಾನೆ. ಅಲ್ಲದೆ ವಿದೇಶದಲ್ಲಿ ಮುದ್ರಿಸಲಾಯಿತೆಂದು ಹೇಳಲಾದ ಈ ನಕಲಿ ಕರೆನ್ಸಿ ನೋಟ್ಗಳನ್ನು ವಾಯುಪಡೆಯ ಸಾಗಣೆ ವಿಮಾನಗಳಲ್ಲಿ ಹಿಂಡನ್ ವಾಯುನೆಲೆಗೆ ಭಾರತಕ್ಕೆ ತರಲಾಯಿತೆಂದೂ ತಿಳಿಸುತ್ತಾನೆ. ಕರೆನ್ಸಿ ವಿನಿಮಯದ ಸಾಗಣೆ ಮತ್ತು ಉನ್ನತ ಮಟ್ಟದಲ್ಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹೆಸರು ಎರಡು ಬಾರಿ ಪ್ರಸ್ತಾಪವಾಗಿದೆ ಎಂದು ಈ ‘ಮಾಜಿ RAW ಅಧಿಕಾರಿ’ ಹೇಳುತ್ತಾನೆ. ಕರೆನ್ಸಿ ವಿನಿಮಯ ವ್ಯವಹಾರದ ಕಮಿಷನ್ ಶೇ.15ರಿಂದ ಶೇ.35-40ಕ್ಕೆ ಏರಿತೆಂದು ಅವನು ತಿಳಿಸುತ್ತಾನೆ.
ವಿಡಿಯೋ ವೀಕ್ಷಿಸಿ
ನಕಲಿ ನೋಟ್ನೊಂದಿಗೆ ಪ್ರಧಾನಿ ಕಾರ್ಯಾಲಯದ ನಂಟು?
ಕಾಂಗ್ರೆಸ್ ನಾಯಕರು ಪ್ರಸಾರ ಮಾಡಿದ ವಿಡೀಯೊದಲ್ಲಿ ಹೇಳುವಂತೆ, ಅಮಿತ್ ಶಾ ನೇತೃತ್ವದ್ದೆಂದು ಹೇಳಲಾಗಿರುವ ಚೈನಿನ ಪ್ರತಿ ಹಂತದಲ್ಲೂ ನಿಯಮಿತವಾಗಿ ಒಂದು ನಿಗದಿತ ‘ಪರ್ಸೆಂಟೇಜ್’ ಸಂದಾಯ ಮಾಡಬೇಕಿದೆ ಎಂದು ರಾಹುಲ್ ಬಾಯಿಬಿಡುತ್ತಾನೆ.
ಅಲ್ಲದೆ ಪ್ರಧಾನಿಯವರ ಕಾರ್ಯಾಲಯದಲ್ಲಿ ನಿಪುಣ್ ಶರಣ್ (ಗೌಪ್ಯ ಹೆಸರು) ಎಂಬುವವನ ನೇತೃತ್ವದಲ್ಲಿ ಒಂದು ಪ್ರತ್ಯೇಕ ಇಲಾಖೆ ಈ ಕೆಲಸದ ಮೇಲುಸ್ತುವಾರಿ ಮಾಡಲೆಂದೇ ಇದೆ ಎಂದು ಅವನು ಹೇಳುತ್ತಾನೆ. ನಿರ್ದಿಷ್ಟವಾಗಿ ಕರೆನ್ಸಿ ವಿನಿಮಯ ಕೆಲಸಕ್ಕಾಗಿ ರಿಸರ್ವ್ ಬ್ಯಾಂಕ್ನೊಂದಿಗೆ ಜೊತೆಗೂಡಿ ಅದರ ಉಸ್ತುವಾರಿ ವಹಿಸಲು ವಿವಿಧ ಇಲಾಖೆಗಳಿಂದ 26 ವ್ಯಕ್ತಿಗಳನ್ನು ನೇಮಕಗೊಳಿಸಲಾಗಿರುವ ಬಗ್ಗೆ ರಾಹುಲ್ ಪತ್ರಕರ್ತರಿಗೆ ಬಹಿರಂಗಪಡಿಸುತ್ತಾನೆ. ಅವನ ಪ್ರಕಾರ ಕರೆನ್ಸಿ ವ್ಯವಹಾರಗಳನ್ನು ನಿಯಂತ್ರಿಸಿ, ಉಸ್ತುವಾರಿ ವಹಿಸಿ, ಅವುಗಳ ಬಗ್ಗೆ ಪ್ರಧಾನಿಯವರ ಕಾರ್ಯಾಲಯದಲ್ಲಿನ ಮುಖ್ಯಸ್ಥರಿಗೆ ಮತ್ತು ಅಮಿತ್ ಶಾ ಅವರಿಗೆ ವರದಿ ನೀಡಲೆಂದೇ ಈ ಸರ್ಕಾರಿ ಸಿಬ್ಬಂದಿಗಳನ್ನು ವಿವಿಧ ರಿಸರ್ವ್ ಬ್ಯಾಂಕ್ ಕಚೇರಿಗಳಲ್ಲಿ ವರ್ಗ ಮಾಡಲಾಗಿತ್ತು.

ದೇಶದ್ರೋಹದ ಕೆಲಸವಿದು: ಕಪಿಲ್ ಸಿಬಲ್
“ಒಂದು ರಾಜಕೀಯ ಪಕ್ಷವು ಬ್ಯಾಂಕ್ಗಳ, ಸರ್ಕಾರದ ಮತ್ತು ಕಾನೂನು ಅನುಷ್ಠಾನಗೊಳಿಸುವ ಅಧಿಕಾರಿಗಳ ಜೊತೆಗೆ ಶಾಮೀಲಾಗಿದೆ ಎಂದು ಹೇಳಲಾಗುತ್ತಿರುವುದನ್ನು ಇದು ಸೂಚಿಸುತ್ತಿದ್ದು, ಇದು ನಿಜವೇ ಆಗಿದ್ದಲ್ಲಿ ಮತ್ತು ಸರ್ಕಾರದ ಬೊಕ್ಕಸವು ಈ ಪರಿ ಲೂಟಿಯಾಗಬಹುದಾದರೆ ಮುಂದಿರುವ ಅಪಾಯಗಳ ಬಗ್ಗೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಂತಹ ದುಸ್ಸಾಹಸದಲ್ಲಿ ಯಾರಾದರೂ ತೊಡಗಿದ್ದೇ ಆದಲ್ಲಿ ಅಂತಹವರು ದೇಶದ್ರೋಹಿಗಳು ಮಾತ್ರವಲ್ಲ, ಜನತೆಗೆ ವಿಶ್ವಾಸದ್ರೋಹವನ್ನೂ ಬಗೆದಿರುತ್ತಾರೆ. 2016 ಡಿಸೆಂಬರ್ 31 ರ ನಂತರದಲ್ಲಿ ಒಂದು ಗೋಡೆ ಬೀರುವಿನ ತುಂಬಾ 2000 ರೂಪಾಯಿಗಳ ಗರಿಗರಿ ಕರೆನ್ಸಿ ನೋಟ್ಗಳಿದ್ದ ದೃಶ್ಯ ಬಹಿರಂಗವಾಗಿದ್ದರೂ ನಮ್ಮ ಕಾನೂನು ಜಾರಿಗೊಳಿಸುವ ಸಂಸ್ಥೆಗಳು ಅದನ್ನು ತನಿಖೆಗೆ ಒಳಪಡಿಸುವುದಾಗಲಿ ಕನಿಷ್ಠ ಎಫ್ಐಆರ್ ದಾಖಲಿಸುವುದಾಗಲೀ ಮಾಡಿಲ್ಲ. ಚುನಾವಣೆಗಳ ನಡುವೆ ವಿರೋಧಪಕ್ಷಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಈ ಸಂಸ್ಥೆಗಳೇ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವುದು” ಎಂದು ಕಪಿಲ್ ಸಿಬಲ್ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಬಿಡುಗಡೆಗೊಳಿಸಿರುವ ವಿಡೀಯೊಗಳಿಗೆ ಪ್ರತಿಕ್ರಿಯಿಸಿ ಹೇಳಿಕೆ ನೀಡಿರುವ ರಕ್ಷಣಾ ಸಚಿವಾಲಯವು ವಿದೇಶದಲ್ಲಿ ಮುದ್ರಣಗೊಂಡ ನೋಟ್ಗಳನ್ನು ಸಾಗಿಸಲು ಯಾವುದೇ ಮಿಲಿಟರಿ ವಿಮಾನವನ್ನು ಬಳಸಲಾಗಿಲ್ಲ ಎನ್ನುತ್ತ ಆರೋಪವನ್ನು ತಳ್ಳಿಹಾಕಿದೆ. “ಇಂದು ಬಿಡುಗಡೆಯಾಗಿರುವ ವಿಡೀಯೊದಲ್ಲಿ ಆರೋಪಿಸಲಾಗಿರುವಂತೆ ನೋಟ್ ಅಮಾನ್ಯೀಕರಣದ ಸಂದರ್ಭದಲ್ಲಾಗಲೀ ಅದಕ್ಕೆ ಮೊದಲಾಗಲೀ ಅಥವಾ ಅದರ ನಂತರವಾಗಲೀ ಕರೆನ್ಸಿ ಸಾಗಿಸುವ ಕೆಲಸದ ನಿಮಿತ್ತ ಭಾರತೀಯ ವಾಯುಪಡೆ ವಿದೇಶಕ್ಕೆ ಹಾರಿರಲಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ” ಎಂಬ ರಕ್ಷಣಾ ಸಚಿವಾಲಯದ ಹೇಳಿಕೆಯನ್ನು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
More Articles
By the same author