ಹಿಂದುತ್ವದ ಪ್ರಯೋಗಶಾಲೆ ಎಂದೇ ಹೆಸರಾಗಿರುವ ಕಡಲ ತಡಿಯ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸತತ 25 ವರ್ಷಗಳ ಕಾಲ ಪಾರುಪಥ್ಯ ಮೆರೆದಿರುವ ಕೇಸರಿಪಡೆಗೆ ಇದೇ ಮೊದಲ ಬಾರಿಗೆ ಕಠಿಣ ಸವಾಲು ಎದುರಾಗಿದೆ. ಎಲ್ ಕೆ ಆಡ್ವಾಣಿಯವರ ಅಯೋಧ್ಯಾ ರಥಯಾತ್ರೆಯ ಅಲೆಯಲ್ಲಿ ಬಿಜೆಪಿಯ ವಶವಾದ ಕ್ಷೇತ್ರ, ಸಂಘಪರಿವಾರದ ಭದ್ರಕೋಟೆಯಾಗೇ ಗುರುತಿಸಿಕೊಂಡಿದೆ. ಹಾಗಾಗಿಯೇ ಸತತ ಏಳು ಬಾರಿ ಕ್ಷೇತ್ರದಲ್ಲಿ ಬಿಜೆಪಿ ವಿಜಯದ ಪತಾಕೆ ಹಾರಿಸುವುದು ಸಾಧ್ಯವಾಗಿದೆ. ಉಗ್ರ ಹಿಂದುತ್ವದ ಬಲದ ಮೇಲೆ ನಿರಂತರ ಗೆಲುವು ದಾಖಲಿಸುತ್ತಿರುವ ಬಿಜೆಪಿಗೆ, ಈ ಬಾರಿ ಕಾಂಗ್ರೆಸ್ಸಿನ ಮೃದು ಹಿಂದುತ್ವದ ದಾಳ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸುಮಾರು 17.25 ಲಕ್ಷ ಮತದಾರರನ್ನು ಹೊಂದಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಬಂಟರು ಮತ್ತು ಬಿಲ್ಲವರೇ ಪ್ರಮುಖ ಸಮುದಾಯಗಳಾಗಿದ್ದು, ಇನ್ನುಳಿದಂತೆ ಪರಿಶಿಷ್ಟ ಜಾತಿ- ಪಂಗಡ, ಮುಸ್ಲಿಂ, ಕ್ರೈಸ್ತರು ಹಾಗೂ ಬ್ರಾಹ್ಮಣರು ನಿರ್ಣಾಯಕ. ಕ್ಷೇತ್ರವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಆ ಪೈಕಿ ಏಳರಲ್ಲಿ ಬಿಜೆಪಿ ಶಾಸಕರಿದ್ದಾರೆ. ಒಬ್ಬರು ಕಾಂಗ್ರೆಸ್ ಶಾಸಕರಿದ್ದಾರೆ. ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮೂಡಬಿದ್ರೆ, ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಪುತ್ತೂರು ವಿಧಾನಸಭಾ ಕ್ಷೇತ್ರಗಳು ಬಿಜೆಪಿ ವಶದಲ್ಲಿದ್ದರೆ, ಮಂಗಳೂರು ಕ್ಷೇತ್ರವೊಂದರಲ್ಲೇ ಕಾಂಗ್ರೆಸ್ ಅಧಿಕಾರ ಹಿಡಿದಿದೆ.
1991ಕ್ಕೆ ಮುನ್ನ ಸತತ ಒಂಭತ್ತು ಬಾರಿ ಕ್ಚೇತ್ರದಲ್ಲಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ಸನ್ನು ಮಣಿಸುವ ಮೂಲಕ ಬಿಜೆಪಿ ಕರಾವಳಿಯ ತನ್ನ ಮೊದಲ ದಿಗ್ವಿಜಯ ದಾಖಲಿಸಿತ್ತು. 1991ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಬಿ ಜನಾರ್ದನ ಪೂಜಾರಿ ಅವರ ವಿರುದ್ಧ ಜಯಭೇರಿ ಭಾರಿಸುವ ಮೂಲಕ ಬಿಜೆಪಿಯ ವಿ ಧನಂಜಯ ಕುಮಾರ್ ಕ್ಷೇತ್ರದಲ್ಲಿ ಕೇಸರಿ ಧ್ವಜ ಹಾರಿಸಿದರು. ಆ ಬಳಿಕ ಈವರೆಗೆ ನಡೆದ ಏಳು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯೇ ಸತತ ಗೆಲುವು ಪಡೆದಿದ್ದು, ಆ ಪೈಕಿ ಮೊದಲ ನಾಲ್ಕರಲ್ಲಿ ಧನಂಜಯ ಕುಮಾರ್ ಬಿಜೆಪಿ ಸಂಸದರಾಗಿದ್ದರೆ, ಒಂದು ಬಾರಿ ಡಿ ವಿ ಸದಾನಂದ ಗೌಡ ಹಾಗೂ ಇತ್ತೀಚಿನ ಎರಡು ಚುನಾವಣೆಗಳಲ್ಲಿ ನಳೀನ್ ಕುಮಾರ್ ಕಟೀಲು ಬಿಜೆಪಿಯನ್ನು ಪ್ರತಿನಿಧಿಸಿದ್ದಾರೆ.
ಇತ್ತೀಚಿನ ಒಟ್ಟು ಹನ್ನೊಂದು ಲೋಕಸಭಾ ಚುನಾವಣೆಗಳ ಪೈಕಿ ಒಂಭತ್ತರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಲ್ಕು ಬಾರಿ ಜಯ ಗಳಿಸಿ(1977ರಿಂದ 1989ರವರೆಗೆ) ಐದು ಬಾರಿ ನಿರಂತರ ಸೋಲು ಕಂಡ ಬಿ ಜನಾರ್ದನ ಪೂಜಾರಿ ಅವರ ಬದಲಾಗಿ ಈ ಬಾರಿ ಕಾಂಗ್ರೆಸ್ ಮಿಥುನ್ ರೈ ಎಂಬ ಯುವ ನಾಯಕನನ್ನು ಕಣಕ್ಕಿಳಿಸಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿದಿರುವ ಬಿಜೆಪಿಯ ಉಗ್ರ ಹಿಂದುತ್ವವಾದಿ ನಳೀನ್ ಕುಮಾರ್ ವಿರುದ್ಧ ಮೃದು ಹಿಂದುತ್ವವಾದಿ ಮಿಥುನ್ ಭಾರೀ ಸವಾಲೊಡ್ಡಿದ್ದಾರೆ. ಯುವ ಕಾಂಗ್ರೆಸ್ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ಸಂಘಟನೆಗಳ ಮೂಲಕ ರಾಜಕೀಯ ಚಟುವಟಿಕೆ ಆರಂಭಿಸಿರುವ ಮಿಥುನ್ ಮತ್ತು ಎರಡು ಬಾರಿಯ ಸಂಸದ ನಳೀನ್ ಕೂಡ ಕ್ಷೇತ್ರದ ಪ್ರಬಲ ಬಂಟ ಸಮುದಾಯಕ್ಕೆ ಸೇರಿದ್ದಾರೆ.
ನಳೀನ್ ಕುಮಾರ್ ಕಟೀಲು ಅವರು ಎಂದಿನಂತೆ ಕರಾವಳಿಯ ತಮ್ಮ ಬಲವಾದ ಹಿಂದುತ್ವ ಮತ್ತು ಮೋದಿ ನಾಮಬಲವನ್ನೇ ನೆಚ್ಚಿಕೊಂಡಿದ್ದರೆ, ಮಿಥುನ್, ಮೃದು ಹಿಂದುತ್ವ ಮತ್ತು ನಳೀನ್ ಕುಮಾರ್ ಅವರ ಅಭಿವೃದ್ಧಿ ವೈಫಲ್ಯ ಮತ್ತು ಜನರ ಕೈಗೆಟುಕದ ವರಸೆಯನ್ನೇ ಅಸ್ತ್ರವಾಗಿ ಪ್ರಯೋಗಿಸುತ್ತಿದ್ದಾರೆ. ನಳೀನ್ ಕುಮಾರ್ ಅವರ ಬಗ್ಗೆ ಇರುವ ಆಡಳಿತ ವಿರೋಧಿ ಅಲೆ ಮತ್ತು ಜನತಾ ಪರಿವಾರ ಹಾಗೂ ಕಮ್ಯುನಿಸ್ಟ್ ಅಭ್ಯರ್ಥಿಗಳ ಕಣದಲ್ಲಿ ಇಲ್ಲದಿರುವುದು ಮಿಥುನ್ ಗೆ ಪೂರಕ. ಅದೇ ಹೊತ್ತಿಗೆ, ವೈಯಕ್ತಿಕವಾಗಿ ಸಾಕಷ್ಟು ನಕಾರಾತ್ಮಕ ಅಂಶಗಳಿದ್ದರೂ, ಮೋದಿ ಮತ್ತೊಮ್ಮೆ ಎಂಬ ಘೋಷಣೆ ಹಾಗೂ ಹಿಂದುತ್ವದ ಬಲ ನಳೀನ್ ಕುಮಾರಗೆ ಪೂರಕವಾಗಿವೆ ಎಂಬುದು ಕ್ಷೇತ್ರದಲ್ಲಿ ವ್ಯಾಪಕವಾಗಿರುವ ಅಭಿಪ್ರಾಯ.
ಹಾಗಾಗಿ ಕಳೆದ ಬಾರಿ ಕಾಂಗ್ರೆಸ್ಸಿನ ಜನಾರ್ದನ ಪೂಜಾರಿ ವಿರುದ್ಧ ಸುಮಾರು 1.43 ಮತಗಳ ಅಂತರದ ಜಯ ದಾಖಲಿಸಿದ್ದ ಬಿಜೆಪಿಯ ನಳೀನ್ ಕುಮಾರ್ ಕಟೀಲು, ಈ ಬಾರಿ ಕಡಲತಡಿಯ ಬಿಸಿಗಾಳಿಯ ನಡುವೆ ಇನ್ನಷ್ಟು ಬೆವರು ಸುರಿಸುತ್ತಿದ್ದಾರೆ. ನಿರಂತರ ಪ್ರಚಾರ ಮತ್ತು ಪ್ರವಾಸದ ಮೂಲಕ ಹಿಂದುತ್ವದ ಮತಗಳ ಕ್ರೋಡೀಕರಣಕ್ಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅದೇ ಹೊತ್ತಿಗೆ ಕಾಂಗ್ರೆಸ್ಸಿನ ಮತಬುಟ್ಟಿಯನ್ನಷ್ಟೇ ನೆಚ್ಚಿ ಕೂರದೆ, ಬಹುಸಂಖ್ಯಾತ ಹಿಂದುತ್ವವಾದಿಗಳನ್ನು ಮೆಚ್ಚಿಸಿ, ಕೇಸರಿಪಡೆಯ ಮತಬುಟ್ಟಿ ದೋಚುವ ಪ್ರಯತ್ನವಾಗಿ ಮಿಥುನ್, ಮಠ-ಮಂದಿರ ಸುತ್ತುತ್ತಲೇ ಇದ್ದಾರೆ. ಜೊತೆಗೆ ಬೈಪಾಸ್ ರಸ್ತೆ, ಸೇತುವೆ ನಿರ್ಮಾಣದ ನಳೀನ್ ಕುಮಾರ್ ಭರವಸೆಗಳು ಮತ್ತು ಆ ಭರವಸೆ ಈಡೇರಿಸದ ಅವರ ವೈಫಲ್ಯಗಳನ್ನೇ ಪ್ರಮುಖವಾಗಿ ಪ್ರಸ್ತಾಪಿಸುವ ಮೂಲಕ ಪ್ರತಿಸ್ಪರ್ಧಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಂಡೀಸ್, ವೀರಪ್ಪ ಮೊಯ್ಲಿ ಅವರಂತಹ ಕಾಂಗ್ರೆಸ್ ಹಿರಿಯ ನಾಯಕರು ಬೇರೆ ಬೇರೆ ಕಾರಣಗಳಿಂದಾಗಿ ಕ್ಷೇತ್ರದಲ್ಲಿ ಸಕ್ರಿಯವಾಗಿಲ್ಲ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನಲ್ಲಿ ಯುವ ನಾಯಕರ ಹೊಸ ಹವಾ ಎದ್ದಿದ್ದು, ಆ ಹವಾ ಎಷ್ಟರಮಟ್ಟಿಗೆ ಮಿಥುನ್ ಪರ ಮತವಾಗಿ ಪರಿವರ್ತನೆಯಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಅದೇ ಹೊತ್ತಿಗೆ, ‘ಮತ್ತೊಮ್ಮೆ ಮೋದಿ’ ಅಭಿಯಾನದ ಬಲದ ಮೇಲೆ, ವೈಯಕ್ತಿಕವಾಗಿ ತಮ್ಮ ವಿರುದ್ಧ ಇರುವ ಆಡಳಿತ ವಿರೋಧಿ ಅಲೆಯನ್ನು ಎಷ್ಟರಮಟ್ಟಿಗೆ ಹತ್ತಿಕ್ಕುವರು ಎಂಬುದರ ಮೇಲೆ ನಳೀನ್ ಭವಿಷ್ಯ ನಿಂತಿದೆ.
ನಳೀನ್ ಅವರಿಗೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಶಾಸಕರೇ ಇರುವುದು ದೊಡ್ಡ ಪ್ಲಸ್ ಪಾಯಿಂಟ್, ಅಲ್ಲದೆ, ಕ್ಷೇತ್ರದ ಬಂಟರ ಬಳಿಕ, ಮತ್ತೊಂದು ಪ್ರಬಲ ಬಿಲ್ಲವ ಸಮುದಾಯಕ್ಕೆ ಸೇರಿದ, ಶಾಸಕ ಸುನೀಲ್ ಕುಮಾರ್ ಸ್ವತಃ ಬಿಜೆಪಿ ಚುನಾವಣಾ ಉಸ್ತುವಾರಿ ಹೊತ್ತಿದ್ದಾರೆ. ಬಿಲ್ಲವ ಸಮುದಾಯದ ಮತ ಕೀಳಲು ಬಿಜೆಪಿ ಅಭ್ಯರ್ಥಿಗೆ ಇದು ಸಾಕಷ್ಟು ಸಹಾಯಕವಾಗಬಹುದು ಎನ್ನಲಾಗುತ್ತಿದೆ. ಜೊತೆಗೆ ಕಣದಲ್ಲಿರುವ ಎಸ್ ಡಿಪಿಐ ಅಭ್ಯರ್ಥಿ ಇಲ್ಯಾಸ್, ಪ್ರಬಲನಾದಷ್ಟೂ ಅವರು ಮುಸ್ಲಿಂ ಮತಗಳನ್ನು ಕೀಳುತ್ತಾರೆ. ಹಾಗಾಗಿ ಅಂತಿಮವಾಗಿ ಕಾಂಗ್ರೆಸ್ ಮತಬುಟ್ಟಿಗೆ ಅವರು ಕನ್ನ ಹಾಕಲಿದ್ದಾರೆ. ಆ ಬೆಳವಣಿಗೆ ಕೂಡ ನಳೀನ್ ಕುಮಾರ್ ಗೆ ಪೂರಕವೇ ಆಗಲಿದೆ ಎಂಬ ಮಾತೂ ಇದೆ.
ಒಟ್ಟಾರೆ, ಸದ್ಯಕ್ಕಂತೂ ಭಾರೀ ಹಣಾಹಣಿಯ ಕಣವಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಪರಿವರ್ತನೆಯಾಗಿದ್ದು, ಇತ್ತೀಚಿನ ವರ್ಷಗಳಲ್ಲೇ ಕಂಡರಿಯದ ಪ್ರಮಾಣ ಪೈಪೋಟಿಗೆ ಸಾಕ್ಷಿಯಾಗಿದೆ. ಬಿಜೆಪಿ ಭದ್ರಕೋಟೆಯನ್ನು ಭಗ್ನಗೊಳಿಸುವ ಕಠಿಣ ಸವಾಲು ಕಾಂಗ್ರೆಸ್ಸಿನ ಮುಂದಿದ್ದರೆ, ಎರಡೂವರೆ ದಶಕ ಕಾಲ ನಿರಂತರ ಸೋಲುಂಡ ಕಾಂಗ್ರೆಸ್ಸಿಗೆ ಮತ್ತೆ ಮೇಲೇಳಲು ಅವಕಾಶವಾಗದಂತೆ ತನ್ನ ಕೋಟೆ ಕಾಯ್ದುಕೊಳ್ಳುವ ಹವಣಿಕೆ ಬಿಜೆಪಿಯದ್ದು. ಹಾಗಾಗಿ ಸದ್ಯಕ್ಕಿದು ಎರಡು ಮದಗಜಗಳ ನಡುವಿನ ನೇರ ಹಣಾಹಣಿಯ ಕಣ.