ಕಳೆದ ತಿಂಗಳು ಆರಂಭಗೊಂಡಿದ್ದ “ನಮೋ ಟಿವಿಯಲ್ಲಿ ಪ್ರಸಾರವಾಗುವ ಯಾವುದೇ ರಾಜಕೀಯ ವಿಷಯಗಳನ್ನು ಪ್ರಸಾರ ಮಾಡಲು ಅವಕಾಶ ಇಲ್ಲ” ಎಂದು ಹೇಳಿರುವ ಚುನಾವಣಾ ಆಯೋಗವು ಟವಿಯಲ್ಲಿ ಪ್ರಸಾರ ಆಗಿರುವ ಎಲ್ಲಾ ರಾಜಕೀಯ ವಿಷಯವನ್ನು ತೆಗೆದು ಹಾಕುವಂತೆ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯ ಭಾಷಣಗಳನ್ನು 24 ಗಂಟೆ ಎಡೆಬಿಡದೆ ಪ್ರಸಾರ ಮಾಡಲು ಹಾಗೂ ಬಿಜೆಪಿ ಪರವಾದ ರಾಜಕೀಯ ಪ್ರಚಾರಕ್ಕಾಗಿ ನಮೋ ಟಿವಿಯನ್ನು ಬಿಜೆಪಿ ಇತ್ತೀಚೆಗೆ, ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರದಲ್ಲಿ ಆರಂಭಿಸಿತ್ತು.
ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗವು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಇರುವ ಯಾವುದೇ ಪ್ರಚಾರ ಸಾಮಗ್ರಿ, ಅದು ಆಯೋಗದಿಂದ ಮುಂಚಿತವಾಗಿ ಪ್ರಮಾಣೀಕರಣಗೊಂಡಿರದಿದ್ದರೆ ಅದನ್ನು ಕೂಡಲೇ ತೆಗೆಸಬೇಕು ಎಂದು ತಿಳಿಸಿದೆ.
“ನಮೋ ಟಿವಿಯು ಒಂದು ರಾಜಕೀಯ ಪಕ್ಷದಿಂದ ಹಣ ಪಡೆದಿದ್ದು, ಅದರಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ವಿಷಯವೂ ಚುನಾವಣಾ ಆಯೋಗದ ಆದೇಶದ ಪರಿಧಿಗೆ ಒಳಪಡುತ್ತದೆ..” ಎಂದು ಆಯೋಗ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
“ಯಾವುದೇ ರಾಜಕೀಯ ಪ್ರಚಾರ ಸಾಮಗ್ರಿಗಳನ್ನು ಪ್ರದರ್ಶಿಸುವ ಮೊದಲು ಸೂಕ್ತ ಪ್ರಾಧಿಕಾರದಿಂದ ಪ್ರಮಾಣೀಕರಣ ಪಡೆದಿರಬೇಕು, ಇಲ್ಲವಾದಲ್ಲಿ ಅಂತಹ ಯಾವುದೇ ಇದ್ದರೂ ಅದನ್ನು ಕೂಡಲೇ ತೆಗೆದುಹಾಕಬೇಕು, ಚುನಾವಣಾ ಆಯೋಗದ ಸೂಚನೆಗಳ ಅನ್ವಯವಾಗಿಯೇ ಅಂತಹ ಯಾವುದೇ ಪ್ರಚಾರ ಸಾಮಗ್ರಿಗೆ ಅನುಮತಿ ನೀಡತಕ್ಕದ್ದು” ಎಂದು ಪತ್ರ ಹೇಳುತ್ತದೆ.
ಕಳೆದ ತಿಂಗಳು ಇದ್ದಕ್ಕಿದ್ದಂತೆ ಧುತ್ ಎಂದು ಎಲ್ಲ ಸೆಟಲೈಟ್ ಟಿವಿ/ಡಿಟಿಎಚ್ ಸೇವೆಗಳ ಮೂಲಕ ನಮೋ ಟಿವಿ ಕಾಣಿಸಿಕೊಂಡಿತ್ತು. ಚುನಾವಣೆ ಸಮಯದಲ್ಲಿ ಇಂತಹ ಒಂದು ಚಾನೆಲ್ ಇದ್ದಕ್ಕಿದ್ದಂತೆ ಯಾವುದೇ ರೀತಿ ನೀತಿ ಅನುಸರಿಸದೇ ಶುರುವಾಗಿದ್ದ ಕುರಿತು ಪ್ರತಿಪಕ್ಷಗಳು ಅದರಲ್ಲೂ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ವ್ಯಾಪಕವಾಗಿ ಟೀಕಿಸಿದ್ದವು. ಈ ಕುರಿತು ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಿದ್ದವು.
