ಪ್ರಧಾನಿಯವರು ಬಾಲಾಕೋಟ್ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆ ಮೇಲ್ನೋಟಕ್ಕೆ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯವರ ವರದಿ ತಿಳಿಸಿದೆ ಎಂದು ಮಹಾರಾಷ್ಟ್ರದ ರಾಜ್ಯ ಚುನಾವಣಾ ಆಯೋಗದ ಮೂಲಗಳಿಂದ ತಿಳಿದುಬಂದಿದೆ. ಈ ವರದಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ ಎಂದೂ ಸಹ ಹೇಳಲಾಗಿದೆ. ಅಲ್ಲದೆ ಈ ವಿಚಾರದಲ್ಲಿ ಅಂತಿಮ ನಿರ್ಣಯವನ್ನು ಆಯೋಗವೇ ಕೈಗೊಳ್ಳಲಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ಲಾತುರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ ಮೊದಲ ಬಾರಿಯ ಮತದಾರರನ್ನು ಉದ್ದೇಶಿಸಿ, ತಮ್ಮ ಮತಗಳನ್ನು ಬಾಲಾಕೋಟ್ ವಾಯುದಾಳಿಯನ್ನು ನಡೆಸಿದ ದಿಟ್ಟ ಯೋಧರಿಗೆ ಮತ್ತು ಫುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ದಿಟ್ಟ ಯೋಧರಿಗೆ ಸಮರ್ಪಿಸಲು ಕರೆ ನೀಡಿದ್ದರು. ಈ ಮೂಲಕ ರಾಜಕೀಯ ಲಾಭಕ್ಕಾಗಿ ಸಶಸ್ತ್ರ ಪಡೆಗಳ ಬಳಕೆಯನ್ನು ನಿಷೇಧಿಸಿರುವ ಚುನಾವಣಾ ಆಯೋಗದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಒಸ್ಮನಾಬಾದ್ ಜಿಲ್ಲಾ ಚುನಾವಣಾ ಅಧಿಕಾರಿಗಳು ಮಹಾರಾಷ್ಟ್ರದ ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ವರದಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ರಾಜ್ಯ ಚುನಾವಣಾ ಆಯೋಗದ ಕಚೇರಿಯ ಮೂಲಗಳ ಪ್ರಕಾರ, ಪ್ರಧಾನಿಯವರ ಬಾಲಾಕೋಟ್ ಹೇಳಿಕೆಗೆ ಸಂಬಂಧಪಟ್ಟಂತೆ ಜಿಲ್ಲಾ ಚುನಾವಣಾಧಿಕಾರಿಯ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದ್ದು, ಆಯೋಗವು ಇದರ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದೆ.
ಮಾರ್ಚ್ 19ರಂದು ಕೇಂದ್ರ ಚುನಾವಣಾ ಆಯೋಗವು ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೂ ಪತ್ರ ಬರೆದು ಅವುಗಳ ಮುಖಂಡರು ಮತ್ತು ಅಭ್ಯರ್ಥಿಗಳು ಸೇನಾಪಡೆಗಳನ್ನು ಹಾಗು ಅವುಗಳ ಚಟುವಟಿಕೆಗಳನ್ನು ತಮ್ಮ ಪ್ರಚಾರಕಾರ್ಯದಲ್ಲಿ ಬಳಸಿಕೊಳ್ಳದಿರುವಂತೆ ನಿರ್ದೇಶಿಸಿತ್ತು. ಆದರೆ ನರೇಂದ್ರ ಮೋದಿ ಹೋದಲ್ಲೆಲ್ಲಾ ಇದನ್ನೇ ಮಾತಾಡುವ ಮೂಲಕ ಭಾರತೀಯ ಸೇನಾ ಪಡೆಗಳಿಗೆ ಅಪಮಾನಿಸುತ್ತಿದ್ದಾರೆ ಎಂಬ ಕೂಗು ಕೇಳಿಬಂದಿತ್ತು.