ಬೆಂಗಳೂರು: “ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಮೇಲೆ ರಾಜ್ಯ ಬಿಜೆಪಿ ಮತ್ತು ಐಟಿ ಇಲಾಖೆಗಳ ಮೈತ್ರಿ ಕೂಟ ದಾಳಿ ನಡೆಸಿದೆ” ಎಂದು ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ – ಜೆಡಿಎಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ತೆರಿಗೆ ಇಲಾಖೆಯು ಇಂದು ಹಲವು ಜನರ ಮನೆಗಳಲ್ಲಿ ದಾಳಿ ನಡೆಸಿದ್ದು, ಇವರಲ್ಲಿ ಹಲವರು ಕಾಂಗ್ರೆಸ್ ನ ಅರ್ಷದ್ ರಿಜ್ವಾನ್ ಅವರ ಆಪ್ತರು ಎನ್ನಲಾಗಿದೆ. ಈ ಸಂಬಂಧ ಇಂದು ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ರಿಜ್ವಾನ್ ಈ ತೆರಿಗೆ ದಾಳಿಯನ್ನು ಖಂಡಿಸಿದರು. “ಬಹಳ ನೋವಿನ ವಿಷಯವೆಂದರೆ ದಾಳಿ ಮಾಡಿರುವ ಹಲವರಲ್ಲಿ ನನಗೆ ಅವರ ಮುಖಪರಿಚಯವಾಗಲೀ, ಪರಿಚಯವಾಗಲೀ ಇಲ್ಲ, ಆದರೆ ಅವರ ಬಳಿ ನಿಮಗೂ ರಿಜ್ವಾನ್ ಗೂ ಯಾವ ಸಂಬಂಧ ಎಂದು ಕೇಳಿದ್ದಾಗಿ ತಿಳಿದು ಬಂದಿದೆ. ಇದು ಎಷ್ಟು ಸರಿ?” ಎಂದು ರಿಜ್ವಾನ್ ಪ್ರಶ್ನಿಸಿದರು.
“ಬಿಜೆಪಿಗೆ ಅಭ್ಯರ್ಥಿ ಪಿ ಸಿ ಮೋಹನ್ ಅವರಿಗೆ ಸೋಲಿನ ಭಯ ಉಂಟಾಗಿದೆ. ಕ್ಷೇತ್ರದ ಮತದಾರರು ಅವರನ್ನು ದೂರುತ್ತಿದ್ದಾರೆ. ಇಂದು ಬಿಜೆಪಿಯ ಸಂಸದರಾಗಿರುವ ಅಭ್ಯರ್ಥಿಗಳು 2014ರಲ್ಲಿ ಬೆಂಗಳೂರಿನ ಜನರಿಗೆ ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ, 10,000 ಕೋಟಿ ರೂಪಾಯಿ ಅನುದಾನವನ್ನು ಬೆಂಗಳೂರಿಗೆ ತರುವುದಾಗಿ ಹೇಳಿದ್ದರು ಒಂದೇ ಒಂದು ಪೈಸೆ ತರಲಿಲ್ಲ, ಎಐಐಎಂ ತರುವುದಾಗಿ ಹೇಳಿದ್ದರೂ ಅದೂ ಆಗಲಿಲ್ಲ. ರಾಷ್ಟ್ರೀಯ ಏರೋನಾಟಿಕಲ್ ವಿಶ್ವವಿದ್ಯಾಲಯ ಸ್ಥಾಪಿಸುತ್ತೇವೆ, ಬೆಂಗಳೂರಿನಿಂದ ದೆಹಲಿಗೆ ಹೊಸ ಬುಲೆಟ್ ರೈಲು ತರುತ್ತೇವೆ ಎಂದಿದ್ದರು. ಆದರೆ ಐದು ವರ್ಷಗಳಲ್ಲಿ ಈ ಯಾವ ಮಾತನ್ನೂ ಇವರು ಈಡೇರಿಸಿಲ್ಲ. ಹೀಗಾಗಿ ಇವರಿಗೆ ಜನರ ಬಳಿ ಹೋಗಲು ಮುಖವಿಲ್ಲ. ಈಗ ತಾವು ಸೊಲುತ್ತಿದ್ದೇವೆ ಎಂಬ ಭಯದಿಂದ ಐಟಿ ಇಲಾಖೆ ಮೂಲಕ ಹೆದರಿಸುವ ಕೆಲಸ ಬಿಜೆಪಿ ಮಾಡುತ್ತಿದೆ” ಎಂದು ಅವರು ಬಿಜೆಪಿ ಸಂಸದರು ಮತ್ತು ಬಿಜೆಪಿ ಮೇಲೆ ರಿಜ್ವಾನ್ ಆರೋಪಗಳ ಮಳೆ ಸುರಿಸಿದರು.
“ಐಟಿ ದಾಳಿಯಿಂದ ನನ್ನ ಪ್ರಚಾರವನ್ನು, ನನ್ನ ವರ್ಚಸ್ಸನ್ನು ಕುಗ್ಗಿಸುತ್ತೇನೆ ಎಂದುಕೊಂಡಿದ್ದರೆ ಅದು ಬಿಜೆಪಿಯ ಭ್ರಮೆ. ಇದರಿಂದ ಅವರಿಗೆ ಲಾಭವಾಗುವುದಿಲ್ಲ, ಇದಕ್ಕೆಲ್ಲ ನಾನು ಹೆದರುವುದು ಇಲ್ಲ. ಗೌಪ್ಯವಾಗಿಡಲು ನನ್ನ ಬಳಿ ಏನೂ ಇಲ್ಲ. ನನ್ನ ಬಳಿ ಇರುವ ಎಲ್ಲ ಆಸ್ತಿಯನ್ನೂ ಅಧಿಕೃತವಾಗಿ ಸರ್ಕಾರಕ್ಕೆ ಬಹಿರಂಗವಾಗಿ ಹೇಳಿಕೊಂಡಿದ್ದೇನೆ. ಹೀಗಾಗಿ ಯಾವ ಭಯವೂ ಇಲ್ಲ” ಎಂದರು.
ಇಂದು ಮುಂಜಾನೆಯಿಂದಲೇ ಬೆಂಗಳೂರಿನ ಸುಮಾರು 20 ಕಡೆಗಳಲ್ಲಿ ಆದಾಯ ತೆರಿಗೆ ದಾಳಿಗಳು ನಡೆದಿವೆ. 100ಕ್ಕೂ ಹೆಚ್ಚು ಅಧಿಕಾರಿಗಳು ಇಂದು ಐಟಿ ದಾಳಿ ಯಲ್ಲಿ ಪಾಲ್ಗೊಂಡಿದ್ದಾರೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರಿಗೆ ಸೇರಿದ ಡಿಕನ್ಸನ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಚಾರ ಕಚೇರಿಯ ಜೊತೆಗೆ ರಿಜ್ವಾನ್ ಆಪ್ತರಾಗಿರುವ ಮೂವರು ಉದ್ಯಮಿಗಳಾದ ಅಮಾನುಲ್ಲಾ ಖಾನ್, ಖಮಲ್ ಪಾಷಾ ಹಾಗೂ ನಯೀಜ್ ಖಾನ್ ಮೇಲೆ ಕೂಡ ಐಟಿ ದಾಳಿ ನಡೆದಿದ್ದು, ಮಹತ್ವದ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ.
ಪ್ಯಾಲೇಸ್ ಡೆಕೋರೇಷನ್ ಉದ್ಯಮ ನಡೆಸುತ್ತಿರುವ ಅಮಾನುಲ್ಲಾ ಖಾನ್, ಗೋಲ್ಡನ್ ಆರ್ಚರಿ ಉದ್ಯಮಿ ಕಮಲ್ ಪಾಷಾ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ನಯೀಜ್ ಖಾನ್ ರಿಜ್ವಾನ್ ಅರ್ಷದ್ಗೆ ಆಪ್ತರಾಗಿರುವ ಹಿನ್ನೆಲೆಯಲ್ಲಿ ಅವರ ಮೇಲೆ ದಾಳಿ ನಡೆದಿದೆ ಎನ್ನಲಾಗುತ್ತಿದೆ.