ಕಲ್ಪತರು ನಾಡಿನ ರಾಜಕಾರಣ ಸದಾ ಸ್ಥಳೀಯ ವಿಷಯಗಳ ಸುತ್ತಲೇ ಗಿರಕಿಹೊಡೆಯುವುದು ವಾಡಿಕೆ. ಅದು ಮೋದಿ ಹವಾ ಇರಲಿ, ಇಂದಿರಾ ಹವಾ ಇರಲಿ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಹಿಂದಿನಿಂದಲೂ ಬಹುತೇಕ ಚುನಾವಣೆಗಳು ನಡೆಯುವುದು ಸ್ಥಳೀಯ ವಿಷಯಗಳ ಮೇಲೆಯೇ. ಈ ಬಾರಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ತಮ್ಮ ತವರು ಜಿಲ್ಲೆ ಹಾಸನದಿಂದ ವಲಸೆ ಬಂದು ಈ ಬಾರಿ ತುಮಕೂರಿನಿಂದ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯುವುದು ಖಾತ್ರಿಯಾಗುವ ಮುನ್ನವೇ ಹಾಲಿ ಸಂಸದ ಕಾಂಗ್ರೆಸ್ಸಿನ ಎಸ್ ಪಿ ಮುದ್ದುಹನುಮೇಗೌಡ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ ಎನ್ ರಾಜಣ್ಣ ಪ್ರಬಲ ಪ್ರತಿರೋಧ ಒಡ್ಡಿದ್ದರು. ಆ ಇಬ್ಬರೂ ನಾಯಕರು ದೇವೇಗೌಡರನ್ನು ಬೆಂಬಲಿಸುವ ಪಕ್ಷದ ತೀರ್ಮಾನದ ವಿರುದ್ಧ ಸಿಡಿದು, ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರವನ್ನೂ ಸಲ್ಲಿಸಿದ್ದರು. ಹಾಗಾಗಿ ಚುನಾವಣಾ ಪ್ರಚಾರದ ಕಾವೇರುವ ಮುನ್ನವೇ ತುಮಕೂರು ಲೋಕಸಭಾ ಕ್ಷೇತ್ರ ಸಾಕಷ್ಟು ಸುದ್ದಿ ಮಾಡಿತ್ತು.
ಇದೀಗ ಕಾಂಗ್ರೆಸ್ ನಾಯಕರ ಸತತ ಪ್ರಯತ್ನದ ಬಳಿಕ ಬಂಡಾಯ ಶಮನವಾಗಿದ್ದು, ಇಬ್ಬರೂ ಹಿರಿಯ ನಾಯಕರು ತಮ್ಮ ನಾಮಪತ್ರಗಳನ್ನು ವಾಪಸು ಪಡೆದು ಮೈತ್ರಿ ಅಭ್ಯರ್ಥಿ ದೇವೇಗೌಡರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಕಾಂಗ್ರೆಸ್ ಧುರೀಣ ಸಿದ್ದರಾಮಯ್ಯ ಖುದ್ದು ತುಮಕೂರಿಗೆ ಬಂದು ಮುದ್ದುಹನುಮೇಗೌಡ ಹಾಗೂ ರಾಜಣ್ಣ ಅವರೊಂದಿಗೆ ಮಾತುಕತೆ ನಡೆಸಿ, ದೇವೇಗೌಡರ ಪರ ಪ್ರಚಾರಕ್ಕೂ ಇಬ್ಬರನ್ನು ಕರೆದೊಯ್ದಿದ್ದಾರೆ. ಬಳಿಕ ಆ ಇಬ್ಬರೂ ನಾಯಕರು ದೇವೇಗೌಡರ ಜೊತೆಯಲ್ಲಿ ಒಂದೇ ವೇದಿಕೆಯಲ್ಲಿ ಪ್ರಚಾರ ಭಾಷಣವನ್ನೂ ಮಾಡಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಈ ನಡುವೆ ಹೇಮಾವತಿ ನೀರು ವಿಷಯ ಚುನಾವಣಾ ಕಣದಲ್ಲಿ ಜೋರಾಗಿ ಸುದ್ದಿ ಮಾಡುತ್ತಿದ್ದು, ಜಿಲ್ಲೆಯ ಬರಪೀಡಿತ ಭಾಗಗಳ ದಶಕಗಳ ಬೇಡಿಕೆ ಈಡೇರಲು ಸ್ವತಃ ದೇವೇಗೌಡರು ಮತ್ತು ಎಚ್ ಡಿ ರೇವಣ್ಣ ಅವರೇ ಅಡ್ಡಿಯಾಗಿದ್ದಾರೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಆದರೆ, ಜಿಲ್ಲೆಗೆ ಹೇಮಾವತಿ ನೀರು ಬಂದಿದ್ದೇ ತಮ್ಮ ಪ್ರಯತ್ನದಿಂದ ಎಂದು ದೇವೇಗೌಡರು ಹೇಳುತ್ತಿದ್ದಾರೆ. ಹಾಗಾಗಿ ಸದ್ಯ ಹೇಮಾವತಿ ನೀರು ಕ್ಷೇತ್ರದ ತುಂಬಾ ಹರಿದಾಡುತ್ತಿದ್ದು, ಅಂತಿಮವಾಗಿ ಯಾರ ಕಡೆ ಹರಿಯಲಿದೆ, ಯಾರ ಮತಬುಟ್ಟಿಯನ್ನು ಒಣಗಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 16 ಲಕ್ಷ ಮತದಾರರಿದ್ದು ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಗಳೇ ಪ್ರಬಲವಾಗಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮತಗಳೇ ನಿರ್ಣಾಯಕವಾಗಿವೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಜಿ ಎಸ್ ಬಸವರಾಜು ಅವರು ಲಿಂಗಾಯಿತ ಸಮುದಾಯಕ್ಕೆ ಸೇರಿದವರಾಗಿದ್ದರೆ, ಮೈತ್ರಿ ಅಭ್ಯರ್ಥಿ ದೇವೇಗೌಡರು ತಮ್ಮ ತಮ್ಮ ಸಮುದಾಯದ ಮತಗಳೊಂದಿಗೆ ಪ್ರಮುಖವಾಗಿ ಕುರುಬ, ದಲಿತ ಹಾಗೂ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.
ಕ್ಷೇತ್ರವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಆ ಪೈಕಿ 4 ಕ್ಷೇತ್ರಗಳಲ್ಲಿ(ತುಮಕೂರು ನಗರ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ) ಬಿಜೆಪಿ ಶಾಸಕರಿದ್ದರೆ, ಮೂರು ಕಡೆ(ತುಮಕೂರು ಗ್ರಾಮೀಣ, ಮಧುಗಿರಿ ಮತ್ತು ಗುಬ್ಬಿ) ಜೆಡಿಎಸ್ ಹಾಗೂ ಒಂದು ಕ್ಷೇತ್ರ(ಕೊರಟಗೆರೆ)ದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜಿ ಎಸ್ ಬಸವರಾಜು ವಿರುದ್ಧ ಕಾಂಗ್ರೆಸ್ಸಿನ ಮುದ್ದುಹನುಮೇಗೌಡ ಅವರು ಸುಮಾರು 74 ಸಾವಿರ ಮತಗಳ ಅಂತರದ ಜಯ ದಾಖಲಿಸಿದ್ದರು. ಆ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎ ಕೃಷ್ಣಪ್ಪ 2.60 ಲಕ್ಷ ಮತ ಪಡೆದು ಮೂರನೇ ಸ್ಥಾನ ಪಡೆದಿದ್ದರು. ಆ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಇದೀಗ ಮೈತ್ರಿಪಕ್ಷದ ಅಭ್ಯರ್ಥಿಯಾಗಿರುವ ಗೌಡರ ಗೆಲುವು ಸಲೀಸು ಎಂಬ ಸ್ಥಿತಿ ಇರಬೇಕಿತ್ತು. ಆದರೆ, ಪರಿಸ್ಥಿತಿ ಹಾಗಿಲ್ಲ!
ಅದಕ್ಕೆ ಕಾರಣ; ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಮುನಿಸು. ಸಭ್ಯ ರಾಜಕಾರಣ ಮತ್ತು ಅಭಿವೃದ್ಧಿ ಕಾರ್ಯಗಳ ಮೂಲಕ ಕ್ಷೇತ್ರದ ಜನತೆಯ ವಿಶ್ವಾಸಕ್ಕೆ ಪಾತ್ರರಾಗಿದ್ದ ಮುದ್ದುಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ, ಜೆಡಿಎಸ್ ವರಿಷ್ಠರಿಗೆ ಅವಕಾಶ ನೀಡಿರುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿನ ಅಸಮಾಧಾನ ಪೂರ್ತಿಯಾಗಿ ಶಮನವಾಗಿಲ್ಲ. ಸ್ವತಃ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಹೇಳಿದರೂ ಪ್ರಮುಖ ನಾಯಕರು ಗೌಡರ ಪರ ಪ್ರಚಾರಕ್ಕೆ ಹೋಗಿರಲಿಲ್ಲ. ಆದರೆ, ಇದೀಗ ಸಿದ್ದರಾಮಯ್ಯ ಅವರು ಜಿಲ್ಲೆಯ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿ ಎಲ್ಲರನ್ನೂ ಗೌಡರ ಪ್ರಚಾರಸಭೆಯ ವೇದಿಕೆ ಹತ್ತಿಸಿದ್ದಾರೆ. ಆದರೆ, ಈ ಶಮನ ಯತ್ನದ ಬಳಿಕ ಮುದ್ದುಹನುಮೇಗೌಡ ಮತ್ತು ಕೆ ಎನ್ ರಾಜಣ್ಣ ಅವರು ಎಷ್ಟರಮಟ್ಟಿಗೆ ಒಮ್ಮನಸ್ಸಿನಿಂದ ಗೌಡರ ಪರ ಪ್ರಚಾರ ನಡೆಸುತ್ತಾರೆ ಮತ್ತು ಅದನ್ನು ಕಾಂಗ್ರೆಸ್ ಕಾರ್ಯಕರ್ತರು ಎಷ್ಟರಮಟ್ಟಿಗೆ ಒಪ್ಪಿ ಅನುಸರಿಸುತ್ತಾರೆ ಎಂಬುದರ ಮೇಲೆ ಗೌಡರ ಯಶ ನಿಂತಿದೆ. ಸದ್ಯಕ್ಕಂತೂ ಕಾಂಗ್ರೆಸ್ ಒಳ ಏಟಿನ ಆತಂಕ ಪೂರ್ತಿ ದೂರವಾದಂತಿಲ್ಲ.
ಅತ್ತ ಬಿಜೆಪಿ ಪಾಳೆಯದಲ್ಲೂ ಸಾಕಷ್ಟು ಆಂತರಿಕ ಇರಿಸುಮುರಿಸು, ಅಸಮಾಧಾನಗಳು ಇದ್ದು, ಸ್ವತಃ ಪಕ್ಷ ಸಂಘಟನೆ ಮತ್ತು ಜನಸಂಪರ್ಕದ ವಿಷಯದಲ್ಲಿ ಸದಾ ನಿಷ್ಕ್ರಿಯರಾಗಿರುವ ಜಿ ಎಸ್ ಬಸವರಾಜು ಅವರಿಗೆ ಟಿಕೆಟ್ ನೀಡಿರುವ ಬಗ್ಗೆಯೇ ಒಂದು ಗುಂಪಿಗೆ ಸಮಾಧಾನವಿಲ್ಲ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಬಸವರಾಜು ಬಗ್ಗೆ, ಸೊಗಡು ಶಿವಣ್ಣ ನೇತೃತ್ವದ ಬಣದ ಅಸಮಾಧಾನವಿದ್ದೇ ಇದೆ. ಆದರೆ, ಚುನಾವಣಾ ಕಣದಲ್ಲಿ ಅದು ಬಹಿರಂಗವಾಗಿ ವ್ಯಕ್ತವಾಗಿಲ್ಲ. ಸದ್ಯ ಹೇಮಾವತಿ ನೀರು ಮತ್ತು ‘ಮೋದಿ ಮತ್ತೊಮ್ಮೆ’ ಬಲದ ಮೇಲೆ ಕೇಸರಿ ಪಡೆ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರೂ, ಒಳಬೇಗುದಿಯ ಒಳಪೆಟ್ಟಿನ ಸಾಧ್ಯತೆ ತಳ್ಳಿಹಾಕಲಾಗದು.
ಈ ನಡುವೆ, ಹಾಸನ, ಮಂಡ್ಯ ಕ್ಷೇತ್ರಗಳಲ್ಲಿ ಈ ಬಾರಿ ಕಾಣಿಸಿಕೊಂಡಿರುವ ಒಂದು ಹೊಸ ವಿದ್ಯಮಾನ ತುಮಕೂರು ಕ್ಷೇತ್ರದಲ್ಲಿಯೂ ವ್ಯಾಪಕವಾಗಿದೆ. ಹಳೇಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ದಬ್ಬಾಳಿಕೆಯ ವಿರುದ್ಧ ಇದೇ ಮೊದಲ ಬಾರಿಗೆ ದಲಿತ ಸಮುದಾಯಗಳಲ್ಲಿ ದೊಡ್ಡ ಮಟ್ಟದ ಪ್ರತಿರೋಧದ ದನಿ ಮೊಳಗುತ್ತಿದ್ದು, ವಿವಿಧ ದಲಿತಪರ ಸಂಘಟನೆಗಳು ದಲಿತ ಮತಗಳ ಧ್ರುವೀಕರಣದ ಪ್ರಯತ್ನ ನಡೆಸಿವೆ. ಈ ಪ್ರಯತ್ನಗಳು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತವೆ ಮತ್ತು ಎರಡು ಪ್ರಬಲ ಸಮುದಾಯಗಳ ನಾಯಕರ ಹಣಾಹಣಿಯ ಈ ಕ್ಷೇತ್ರದಲ್ಲಿ ಅಂತಹ ಧ್ರುವೀಕರಣ ಯಾರಿಗೆ ವರವಾಗಲಿದೆ? ಯಾರಿಗೆ ಶಾಪವಾಗಲಿದೆ? ಎಂಬುದು ಕೂಡ ಚುನಾವಣೆಯ ಫಲಿತಾಂಶದ ದಿಕ್ಕನ್ನು ನಿರ್ಧರಿಸಲಿದೆ.
ಹಾಗಾಗಿ, ತುಮಕೂರು ಲೋಕಸಭಾ ಕ್ಷೇತ್ರ ಈ ಬಾರಿ ಹಲವು ಸ್ವಾರಸ್ಯಕರ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, ಕಾಂಗ್ರೆಸ್ ನಾಯಕರ ಮುನಿಸು, ದಲಿತ ಸಮುದಾಯಗಳ ಆಕ್ರೋಶ ಹಾಗೂ ಪ್ರಮುಖವಾಗಿ ಹೇಮಾವತಿಯ ನೀರು ವಿಷಯಗಳೇ ಒಟ್ಟಾರೆ ಚುನಾವಣೆಯ ಗತಿ ನಿರ್ಧರಿಸಲಿವೆ. ಅನಾಯಾಸ ಗೆಲುವಿನ ತಮ್ಮ ಸ್ವಕ್ಷೇತ್ರ ಹಾಸನವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ವಲಸೆ ಬಂದಿರುವ ದೇವೇಗೌಡರು, ಇದೀಗ ತಮ್ಮ ಸ್ವಂತ ಬಲಕ್ಕಿಂತ ಮಿತ್ರಪಕ್ಷದ ಆಸರೆಯನ್ನೇ ನೆಚ್ಚಿ ಕಣದಲ್ಲಿ ಸೆಣೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾಜಕೀಯ ಜೀವನದ ಕಟ್ಟಕಟೆಯ ಈ ಸವಾಲಿನ ಆಟದಲ್ಲಿ ‘ದೊಡ್ಡಗೌಡರು’ ತಮ್ಮ ರಾಜಕೀಯ ಚಾಣಾಕ್ಷತನ ದಾಳ ಉರುಳಿಸಿ ಗೆಲ್ಲುವರೇ ಎಂಬುದನ್ನು ಕಾದುನೋಡಬೇಕಿದೆ. ಸದ್ಯಕ್ಕಂತೂ ನೇರ ಹಣಾಹಣಿಯ ಕಣದಲ್ಲಿ ಯಾರು, ಎತ್ತ ಎಂಬುದನ್ನು ನಿರ್ಧರಿಸಲಾಗದ ಸಮಬಲದ ಪೈಪೋಟಿ ಕಾಣುತ್ತಿದೆ!