ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಇನ್ನು ದಿನಗಳು ಮಾತ್ರ. ಚುನಾವಣಾ ಹವಾ ಜೋರಾಗಿಯೇ ಇದೆ. ವಿಶೇಷವೆಂದರೆ ಎಲ್ಲರ ಚಿತ್ತ ದಿಲ್ಲಿಯತ್ತಲೇ ಇದೆ. ಆ ದೃಷ್ಟಿಗೆ ಇಲ್ಲಿಯ ಸಮಸ್ಯೆಗಳ್ಯಾವುದೂ ಕಾಣಿಸುತ್ತಲೂ ಇಲ್ಲ!
ಇತಿಹಾಸ :
1951ರಲ್ಲಿ ಲೋಕಸಭೆ ರಚನೆಗೊಂಡಾಗ ಮಂಗಳೂರು ಲೋಕಸಭಾ ಕ್ಷೇತ್ರ ಇರಲಿಲ್ಲ. ದ.ಕ. ಮತ್ತು ಉತ್ತರ ಕನ್ನಡ ಎಂಬ ಕ್ಷೇತ್ರಗಳಿತ್ತು.
ಸೌತ್ ಕೆನರಾ ಎಂಬ ಹೆಸರಿನ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬೆನಗಲ್ ಶಿವರಾಮ್ ಗೆದ್ದು ಬಂದಿದ್ದರು. 1957ರಲ್ಲಿ 2ನೇ ಚುನಾವಣೆ ನಡೆದಾಗ ಮಂಗಳೂರು ಲೋಕಸಭಾ ಕ್ಷೇತ್ರ ರಚನೆಯಾಗಿದ್ದು, ಕೊಡಗು ಕೂಡಾ ಸೇರಿಕೊಂಡಿತು. ಆ ಚುನವಣೆಯಲ್ಲಿ ಕಾಂಗ್ರೆಸ್ನ ಕೆ.ಆರ್.ಆಚಾರ್ಯ ಗೆದ್ದು ಸಂಸದರಾದರು. 1962ರ ಚುನಾವಣೆಯಲ್ಲಿ ಕಾಂಗ್ರೆಸ್ನ ಎಂ..ಎ.ಶಂಕರ್ ಆಳ್ವ, 1967ರಲ್ಲಿ ಕಾಂಗ್ರೆಸ್ನ ಸಿ.ಎ. ಪೂಣಚ್ಚ ಗೆದ್ದು ಬಂದರು. 1971ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಅಭ್ಯರ್ಥಿ ಲೋಕೇಶ್ ಶೆಟ್ಟಿ ಗೆದ್ದು ಸಂಸದರದರು. ಬಳಿಕ ನಡೆದ 1977, 1980, 1984, 1989 ಈ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್ನ ಜನಾರ್ದನ ಪೂಜಾರಿ ಗೆದ್ದು ಬಂದರು.
ನಂತರ ಈ ಕ್ಷೇತ್ರದಲ್ಲಿ ಕಾಣಿಸಿಕೊಂಡದ್ದು ಬಿಜೆಪಿ ಪಾರಮ್ಯ. 1991, 1996, 1998 ಮತ್ತು 1999ರ ಚುನಾವಣೆಯಲ್ಲಿ ಬಿಜೆಪಿಯ ವಿ.ಧನಂಜಯಕುಮಾರ್ ಗೆದ್ದು ಬಂದರು. 2004ರಲ್ಲಿ ಬಿಜಪಿಯ ಡಿ.ವಿ.ಸದಾನಂದ ಗೌಡ ಗೆದ್ದು ಸಂಸದರಾದರೆ 2009 ಮತ್ತು 2014ರಲ್ಲಿ ನಳಿನ್ಕುಮಾರ್ ಕಟೀಲ್ ಸಂಸದರಾದರು.
ಹೀಗೆ ಕ್ಷೇತ್ರ ಆರಂಭಗೊಂಡು ಸುಮಾರು ಅರ್ಧದಷ್ಟು ಅವಧಿ ಕಾಂಗ್ರೆಸ್ ಹಾಗೂ ಆ ಬಳಿಕದ ಅವಧಿಯಲ್ಲಿ ಬಿಜೆಪಿ ಇಲ್ಲಿ ಪ್ರಾಬಲ್ಯ ಇರಿಸಿಕೊಂಡಿದೆ. ಇಂತಹ ಹೊತ್ತಿನಲ್ಲಿ ಈ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಪಕ್ಷಗಳ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ಬಿಜೆಪಿಯಿಂದ ಹಾಲಿ ಸಂಸದ ನಳಿನ್ಕುಮಾರ್ ಕಟೀಲ್ ಸ್ಪರ್ಧಿಸುತ್ತಿದ್ದು, ಸಮ್ಮಿಶ್ರ ಪಕ್ಷದ ಅಭ್ಯರ್ಥಿಯಾಗಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕಣದಲ್ಲಿದ್ದಾರೆ. ಎಸ್ಡಿಪಿಐ ಕೂಡಾ ಸ್ಪರ್ಧಿಸುತ್ತಿದ್ದು, ಇಲ್ಯಾಸ್ ತುಂಬೆ ಕಣದಲ್ಲಿದ್ದಾರೆ.. ಉಳಿದಂತೆ ಪಕ್ಷೇತರರು ಕಣದಲ್ಲಿದ್ದಾರೆ.
ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದ ನಳಿನ್ಕುಮಾರ್ ಕಟೀಲ್ ಅವರಿಗೆ 10 ವರ್ಷಗಳ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಲಭಿಸಿದಾಗ ಅನೇಕರು ಅಚ್ಚರಿ ಪಟ್ಟಿದ್ದರು. ಮೊದಲ ಸಲ ಗೆದ್ದು ಬಂದ ಅವರು ಸಹಜವಾಗಿಯೇ 2ನೇ ಬಾರಿಯೂ ಟಿಕೆಟ್ ಪಡೆದುಕೊಂಡರು. ಮೋದಿ ಅಲೆಯೂ ಸೇರಿದಂತೆ ಅನೇಕ ಕಾರಣಗಳಿಗಾಗಿ ಸುಮಾರು ಒಂದೂವರೆ ಲಕ್ಷಗಳ ಮತಗಳ ಅಂತರದಲ್ಲಿ ಗೆದ್ದು ಬಂದರು. ಆದರೆ ಈ ಬಾರಿ ಅವರ ಟಿಕೆಟ್ ಗಳಿಕೆ ಅನಾಯಾಸವೇನೂ ಆಗಿರಲಿಲ್ಲ. ಪಕ್ಷದೊಳಗೆ ಅಸಮಾಧಾನದ ಅಲೆಯಿತ್ತು. ಯುವ ಸಮೂಹದ ಒಂದು ತಂಡವೇ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಕದನಕ್ಕಿಳಿಯಿತು. ಈ ಮಧ್ಯೆ ಸತ್ಯಜಿತ್ ಸುರತ್ಕಲ್ ಹೆಸರು ಮುನ್ನೆಲೆಗೆ ತರಲಾಯಿತು. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಬಾರಿ ಕಟೀಲ್ರವರಿಗೆ ಟಿಕೆಟ್ ತಪ್ಪುವುದೇನೋ ಎಂಬ ಪ್ರಚಾರವೂ ಇತ್ತು. ಆದರೆ ಪಕ್ಷದ ವರಿಷ್ಠರೊಂದಿಗೆ ಇರಿಸಿದ ಸಂಪರ್ಕ, ಪಕ್ಷದ ಸಂಘಟನಾ ಕೌಶಲ್ಯ ಇವೆರಡೂ ಕೂಡಾ ಅಸಮಾಧಾನವನ್ನು ಮೀರಿ ನಿಂತಿತು.
ಇತ್ತ ಕಾಂಗ್ರೆಸ್ ಸ್ಥಿತಿ ಕೂಡಾ ಭಿನ್ನವಾಗೇನೂ ಇರಲಿಲ್ಲ. ಸ್ಪರ್ಧಾಕಾಂಕ್ಷಿಗಳಾಗಿ ಅರ್ಧ ಡಜನ್ ನಾಯಕರಿದ್ದರು. ರಮಾನಾಥ ರೈ ಅಭ್ಯರ್ಥಿಯಾಗಬಹುದೆಂಬ ನಿರೀಕ್ಷೆ ಬಹುತೇಕರಲ್ಲಿತ್ತು. ಆದರೆ ಎಲ್ಲವನ್ನೂ ಸುಳ್ಳು ಮಾಡಿ ಯುವ ನಾಯಕ ಮಿಥುನ್ ರೈ ಟಿಕೆಟ್ ಗಿಟ್ಟಿಸಿಕೊಂಡರು.
ಕಳೆದ ಬಾರಿ ಚುನಾವಣೆ ನಡೆದಾಗ ಇಲ್ಲಿ ಕಾಂಗ್ರೆಸ್ನ ಜನಾರ್ದನ ಪೂಜಾರಿ ಸ್ಪರ್ಧಿಸಿದ್ದರು. ಈ ಕ್ಷೇತ್ರದ ಬಹುತೇಕ ಕಡೆ ಕಾಂಗ್ರೆಸ್ ಶಾಸಕರಿದ್ದರು. ಆದರೂ ಮೋದಿ ಅಲೆ ಇವೆಲ್ಲವನ್ನೂ ಹೆಮ್ಮೆಟ್ಟಿಸಿ ಬಿಜೆಪಿಗೆ ಲಕ್ಷ ಮತಗಳ ಲೀಡ್ ತಂದುಕೊಟ್ಟಿತು. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರೇ ಹೆಚ್ಚಿದ್ದಾರೆ. ಮೋದಿಯತ್ತ ಎಲ್ಲರ ಚಿತ್ತವಿದೆ. ಮತ್ತೊಂದೆಡೆ ಕಾಂಗ್ರೆಸ್ನಿಂದ ಹೊಸ ಮುಖವಿದೆ. ಹೀಗಾಗಿ ಫಲಿತಾಂಶ ಕಾದುನೋಡಬೇಕಾಗಿದೆ.
ಬಿಜೆಪಿ ಈ ಚುನಾವಣೆಯನ್ನು ಎದುರಿಸುತ್ತಿರುವುದೇ ಮೋದಿಯ ಹೆಸರಿನಲ್ಲಿ. ದೇಶ, ಸೇನೆ, ರಕ್ಷಣೆ ಮುಂತಾದ ಶಬ್ದಗಳನ್ನು ಹರಿಯಬಿಡುತ್ತಾ ಚುನಾವಣೆ ಎದುರು ನೋಡುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಕೂಡಾ ಮೋದಿಯನ್ನು ವಿರೋಧಿಸುತ್ತಾ ಕಾಲ ಕಳೆಯುತ್ತಿದೆ. ಈ ಮಧ್ಯೆ ಕ್ಷೇತ್ರದ ನಿಜವಾದ ಸಮಸ್ಯೆಗಳು ಅನಾವರಣಗೊಳ್ಳುತ್ತಲೇ ಇಲ್ಲ. ಇದು ಈ ಬಾರಿಯ ಚುನಾವಣೆಯ ವಿಶೇಷತೆ. ಇಲ್ಲಿರುವ ರಸ್ತೆ ಸಮಸ್ಯೆ, ಪರಿಸರ ಸಮಸ್ಯೆ, ಕೃಷಿಕರ ಸಮಸ್ಯೆ, ವಿದ್ಯತ್ ಸಮಸ್ಯೆ, ಬಿಎಸ್ಎನ್ಎಲ್ ಸಮಸ್ಯೆ ಇವುಗಳ್ಯಾವುದೂ ಈ ಚುನಾವಣೆಯ ಪ್ರಚಾರದ ಸಂಗತಿಗಳೇ ಆಗಿಲ್ಲ!
ನಳಿನ್ಕುಮಾರ್ ಕಟಿಲ್ 10 ವರ್ಷ ಸಂಸದರಾಗಿದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಸಾಲದು ಎಂಬ ಮಾತುಗಳು ಕೇಳಿ ಬರುತ್ತಿದೆ. ಪ್ಲೈಓವರ್ಗಳು ನೆನೆಗುದಿಗೆ ಬಿದ್ದಿರುವುದು, ಚತುಷ್ಪಥ ಹೆದ್ದಾರಿ ಆಮೆಗತಿಯಿಂದ ಸಾಗಿರುವುದು, ಬೃಹತ್ ಯೋಜನೆಗಳು ಮಂಗಳೂರಿಗೆ ಬಾರದಿರುವುದು, ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಗೊಂಡಿರುವುದು, ವಿಜಯಾ ಬ್ಯಾಂಕ್ ವಿಲೀನಗೊಂಡಿರುವುದು ಇವೆಲ್ಲಾ ಸಂಸದರ ವೈಫಲ್ಯಗಳು ಎಂದು ವಿಪಕ್ಷಗಳು ಹೇಳುತ್ತಿವೆ. ಆದರೆ ಇದನ್ನು ನಿರಾಕರಿಸುವ ಬಿಜೆಪಿ, ಕಟೀಲ್ ನಂಬರ್ 1 ಸಂಸದ ಎಂದು ಮಾಧ್ಯಮಗಳೇ ಸರ್ಟಿಫಿಕೇಟ್ ನೀಡಿವೆ. ರಾಜ್ಯ ಸರಕಾರದ ನಿರಾಸಕ್ತಿಯೇ ಮಹತ್ವದ ಯೋಜನೆಗಳು ನೆನೆಗುದಿಗೆ ಬೀಳಲು ಕಾರಣ ಎಂದು ಹೇಳುತ್ತಿವೆ. ಏನೇ ಇದ್ದರೂ ಈ ಬಾರಿಯ ಚುನಾವಣೆಯಲ್ಲಿ ಈ ಕುರಿತ ಜಿಜ್ಞಾಸೆಗಳು ಮೂಡಿರುವುದಂತೂ ಸುಳ್ಳಲ್ಲ.
ನರೇಂದ್ರ ಮೋದಿ ಅಲೆ, ಬಿಜೆಪಿ ಜೊತೆ ಸಂಘ ಪರಿವಾರದ ಕಾರ್ಯ ಪಡೆ ಇವುಗಳು ಕಟೀಲ್ಗೆ ಪೂರಕವಾದರೆ ಶಾಶ್ವತ ಯೋಜನೆಗಳ ಅನುಷ್ಠಾನ ಮಾಡದಿರುವುದು ಮೈನಸ್ ಆಗಬಹುದು. ಹಲವು ಆಕಾಂಕ್ಷಿಗಳಿದ್ದರೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವುದು, ಯುವಕರ ಒಲವು ಮಿಥುನ್ ಪಾಲಿಗೆ ಪ್ಲಸ್. ಆದರೆ ಅಭ್ಯರ್ಥಿ ಘೋಷಣೆ ವಿಳಂಬವಾಗಿರುವುದು, ಪ್ರಚಾರಕ್ಕೆ ಕಡಿಮೆ ಸಮಯ ಸಿಕ್ಕಿರುವುದು ಮೈನಸ್ ಆಗಬಹುದು. ಅಭ್ಯರ್ಥಿಗಳ ವಿದ್ಯಾಭ್ಯಾಸವು ಚುನಾವಣಾ ವಿಷಯವಾಗಬಹುದು.
ರಾಷ್ಟ್ರದಲ್ಲಿ ಕಾಂಗ್ರೆಸ್ನ, ರಾಹುಲ್ ಗಾಧಿಯ ನಿಲುವುಗಳ ಕುರಿತು ಬಿಜೆಪಿ ಪ್ರಶ್ನಿಸುತ್ತಿದೆ. ಕಾಂಗ್ರೆಸ್ ಬಿಂಬಿಸುವ ವಿಚಾರಗಳನ್ನು ಟ್ರೋಲ್ ಮಾಡುತ್ತಿದೆ. ಮಿಥುನ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಋಣಾತ್ಮಕವಾಗಿ ಬಿಂಬಿಸುವ ಪ್ರಯತ್ನಗಳೂ ಕೂಡಾ ನಡೆದಿದೆ.
ಮೋದಿ ಹೆಸರು, ಇತ್ತೀಚೆಗೆ ನಡೆದ ಸರ್ಜಿಕಲ್ ಸ್ಟೈಕ್ ಇಲ್ಲಿ ಬಿಜೆಪಿಯ ಪಾಲಿಗೆ ಪ್ಲಸ್ ಎಂದು ಅಂದುಕೊಳ್ಳಬಹುದಾದರೂ, ಮನೆಯ ಹಿರಿಯರು ಕಳೆದ 5 ವರ್ಷಗಳಲ್ಲಿ ಪಟ್ಟಿರುವ ಸಂಕಷ್ಟಗಳು ಈ ಚುನಾವಣೆಯಲ್ಲಿ ಪರಿಣಮ ಬೀರಬಹುದೆಂಬ ಲೆಕ್ಕಾಚಾರವಿದೆ. ಪ್ರತಿ ಚುನಾವಣೆಗಳಲ್ಲೂ ಕಾಂಗ್ರೆಸ್ ಎದುರಿಸುತ್ತಿರುವ ಭಿನ್ನಾಭಿಪ್ರಾಯಗಳು, ಭಿನ್ನಮತಗಳು ಈ ಚುನಾವಣೆಯಲ್ಲಿ ಮರೆಗೆ ಸರಿದಿರುವುದು ಕಾಂಗ್ರೆಸ್ ಪಾಲಿಗೆ ಧನಾತ್ಮಕವಾಗಬಹುದು.
ಕಾಂಗ್ರೆಸ್ನ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿಯವರು ಮೋದಿಯನ್ನು ಹೊಗಳಿದ್ದು, ನಳಿನ್ಗೆ ಆಶೀರ್ವದಿಸಿದ್ದು, 2 ದಿನಗಳ ತರುವಾಯ ಮಿಥುನ್ ರೈ ಗೆದ್ದೇ ಗೆಲ್ಲುತ್ತಾರೆ, ಇಲ್ಲದಿದ್ದರೆ ನಾನು ಕುದ್ರೋಳಿ ದೇವಸ್ಥಾನಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದ್ದು ಈ ಚುನಾವಣಾ ಸಂದರ್ಭದ ವಿದ್ಯಮಾನಗಳಲ್ಲೊಂದು. ಮತ್ತೊಂದೆಡೆ ಸದಾ ಹಿಂದುತ್ವದ ಮಂತ್ರವನ್ನು ಪಠಿಸುವ ಬಿಜೆಪಿಗೆ ಸಡ್ಡು ಹೊಡೆಯುವಂತೆ ಮಿಥುನ್ ರೈ ಹಿಂದುತ್ವದ ಕುರಿತು ಮತನಾಡುವುದು ಕೇಸರಿ, ಶಾಲು ಹಾಕಿ ಪ್ರಚಾರಕ್ಕೆ ಹೋಗುತ್ತಿರುವುದು, ಗೋ ಸೇವೆ ನಡೆಸುತ್ತಿರುವುದು ಗಮನಾರ್ಹವಾಗಿದೆ.
ಈ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರಗಳು ಗಣನೆಗೆ ಬರುವುದಿಲ್ಲವಾದರೂ, ಬಿಲ್ಲವ ಸಮುದಾಯದ ಬೆಳವಣಿಗೆಗಳು, ಎರಡೂ ಪಕ್ಷಗಳ ಅಭ್ಯರ್ಥಿಗಳು ಬಂಟ ಸಮುದಾಯದವರೇ ಆಗಿರುವುದು ಯಾವ ಪರಿಣಾಮ ಬೀರೀತು ಎನ್ನುವುದನ್ನು ಕೂಡಾ ನೋಡಬೇಕಾಗಿದೆ.
ಉಭಯ ಪಕ್ಷಗಳೂ ಬಹಿರಂಗ ಪ್ರಚಾರಕ್ಕಿಂತ ಮನೆ ಮನೆ ಪ್ರಚಾರಕ್ಕೆ ಹಚ್ಚಿನ ಒತ್ತು ನೀಡುತ್ತಿವೆ. ಬಹಿರಂಗ ಪ್ರಚಾರಕ್ಕಾಗಿ ಏ 13ರಂದು ಮಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಕಾಂಗ್ರೆಸ್ ಕಡೆಯಿಂದ ರಾಹುಲ್ ಗಾಂಧಿಯನ್ನು ಕರೆತರುವ ಯತ್ನಗಳೂ ನಡೆದಿವೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,24,566 ಮತದಾರರಿದ್ದು ಇವರಲ್ಲಿ 8,45,283 ಪುರುಷರು ಮತ್ತು 8,29,186 ಮಹಿಳಾ ಮತದಾರರು.