ಪ್ರಶ್ನೆ: ಮೋದಿಯವರ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸುವ ಯೋಚನೆ ನಿಮಗೆ ಹೇಗೆ ಮತ್ತು ಯಾಕೆ ಬಂತು?
ತೇಜ್ ಬಹದ್ದೂರ್: ನಾವೇನೂ ಮೋದಿಜಿ ಅಥವಾ ಭಾರತೀಯ ಜನತಾ ಪಕ್ಷದ ವಿರುದ್ಧವಿಲ್ಲ. ನಾವು ಯಾರ ವಿರುದ್ಧವೂ ಅಲ್ಲ. ನಮ್ಮ ಹೋರಾಟ ಏನಿದ್ದರೂ ಕೊಳೆತು ನಾರುತ್ತಿರುವ ದೇಶದ ವ್ಯವಸ್ಥೆಯ ವಿರುದ್ಧವಾಗಿದೆ.
ಅಧಿಕಾರಕ್ಕೆ ಬರುವ ಮೊದಲೇ ಮೋದಿಯವರು ಸೇನೆಯ ಜೊತೆ ರಾಜಕೀಯದ ಆಟವಾಡಲು ಶುರು ಮಾಡಿದ್ದರು. ನಮ್ಮ ದೇಶದಲ್ಲಿ ಸೇನಾಪಡೆಗಳನ್ನು ಹೆಚ್ಚು ಗೌರವಿಸಲಾಗುತ್ತದೆ. ಆದರೆ ಮೋದಿಯವರು ಸೇನೆಯ ಹೆಸರಿನಲ್ಲಿ ವಿಷಯಾಂತರ ಮಾಡಿ ರಾಜಕೀಯ ಲಾಭ ಗಳಿಸಲು ಯತ್ನಿಸಿದರು. (೨೦೧೩ರಲ್ಲಿ ಭಾರತ – ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನಿ ಪಡೆಗಳು ಲಾನ್ಸ್ ನಾಯಕ್ ಹೇಮರಾಜ್ ಎಂಬ ಯೋಧನನ್ನು ಕೊಂದು ಅವನ ತಲೆ ತೆಗಿದಿತ್ತು) ಹೇಮರಾಜ್ ಪ್ರಕರಣದಲ್ಲಿ ಮೋದಿಯವರು ಹೇಗೆ ಏರುಧ್ವನಿಯಲ್ಲಿ ಕೂಗಾಡಿದ್ದರೆಂದರೆ ಅವರು ಸೇನಾಪಡೆಗಳನ್ನು ಬಲಗೊಳಿಸುವರೆಂದು ಇಡೀ ದೇಶ ನಂಬಿತ್ತು.
ಆದರೆ ಆಗಿದ್ದು ಮಾತ್ರ ಅದರ ತದ್ವಿರುದ್ಧವೇ. ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಅತಿಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಕಳೆದ ವರ್ಷವೊಂದರಲ್ಲೇ ಹುತಾತ್ಮರಾದ ಯೋಧರ ಸಂಖ್ಯೆ ಹತ್ತು ವರ್ಷಗಳ ಒಟ್ಟು ಅಂಕಿಯನ್ನು ಮೀರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಹೋದ ಒಂದು ವರ್ಷದಲ್ಲೇ ಅರೆಸೇನಾಪಡೆಗಳ 997 ಯೋಧರು ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ವಾಸ್ತವ ಸಂಗತಿಗೆ ಮಾಧ್ಯಮಗಳು ಒತ್ತು ನೀಡಿಲ್ಲ. ಇದಕ್ಕೆ ಮೋದಿಯವರೇ ಕಾರಣ.
ಪ್ರಸಕ್ತ ಪರಿಸ್ಥಿತಿಯಲ್ಲಿ ಅನುಸರಿಸಲಾಗುತ್ತಿರುವ ನಿಯಮಗಳಿಂದಾಗಿ ಯೋಧರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದ್ದು, ಇದು ಹಲವರನ್ನು ಆತ್ಮಹತ್ಯೆಗೆ ದೂಡಿದೆ. ಉದಾಹರಣೆಗೆ, ಯೋಧರಿಗೆ ಕಾಲ ಪರಿಮಿತಿ ರಜೆಯನ್ನು ನಿರಾಕರಿಸಲಾಗಿದೆ ಹಾಗೂ ಅವರು ಮೊಬೈಲ್ ಫೋನ್ಗಳನ್ನು (ಸ್ಮಾರ್ಟ್ ಫೋನ್) ಬಳಸುವಂತಿಲ್ಲ. ನಮಗೆ ಕಳಪೆ ಗುಣಮಟ್ಟದ ಆಹಾರ ಪೂರೈಸಿದ ವಿರುದ್ಧ ನಾನು (ಆನ್ಲೈನ್ ವಿಡೀಯೊ ಪೋಸ್ಟ್ ಮಾಡಿ) ಧ್ವನಿ ಎತ್ತಿದ ನಂತರ ಮೊಬೈಲ್ ಫೋನ್ಗಳ ಬಳಕೆಯನ್ನೂ ನಿರ್ಬಂಧಿಸಲಾಯಿತು. ಏಕೆಂದರೆ ಆಗ ಹಲವು ಯೋಧರು ಭ್ರಷ್ಟಾಚಾರದ ವಿರುದ್ಧ ಮಾತನಾಡಲು ಪ್ರಾರಂಭಿಸಿದ್ದರು. ತನ್ನ ಪೆಟಿಗೆಯಲ್ಲಿ ಕೂಡಿಹಾಕಿದ್ದ ಅಸ್ಥಿಪಂಜರಗಳೆಲ್ಲಾ ಒಂದೊಂದಾಗೇ ಉರುಳಿ ಹೊರಬೀಳಲು ಶುರುವಾಗಿತ್ತು ಎಂದು ಸರ್ಕಾರ ಯೋಚಿಸಿತು.
ಪ್ರಧಾನಿ ಮೋದಿ ಹಲವು ಭರವಸೆಗಳನ್ನು ಕೊಟ್ಟರಾದರೂ ಅವುಗಳಲ್ಲಿ ಒಂದನ್ನೂ ಈಡೇರಿಸಲಿಲ್ಲ. ಬಿಎಸ್ಎಫ್ ನಲ್ಲಿ ಪಿಂಚಣಿಗಳನ್ನು ಮರಳಿ ನೀಡಲಾಗುವುದೆಂದು ಅವರು ಮೊದಲು ಹೇಳಿದ್ದರೂ ಸಹ ಈಗ ಅದರ ಬಗ್ಗೆ ಒಂದೇ ಒಂದು ಸೊಲ್ಲೆತ್ತಿಲ್ಲ. ಬಿಎಸ್ಎಫ್ ಯೋಧರಿಗೂ ಹುತಾತ್ಮರ ಸ್ಥಾನಮಾನ ನೀಡುವುದು ಅವರು ನೀಡಿದ್ದ ಇನ್ನೊಂದು ಆಶ್ವಾಸನೆಯಾಗಿತ್ತು. ಆದರೆ ಇದರಲ್ಲಿ ಯಾವುದೇ ಪ್ರಗತಿಯೂ ಆಗಿಲ್ಲ. ಜನರೇನೋ ಜೋರುಧ್ವನಿಯಲ್ಲಿ ಕೂಗಿಕೊಂಡು ಪ್ರಾಣತೆತ್ತ ಬಿಎಸ್ಎಫ್ ಯೋಧರನ್ನು ಹುತಾತ್ಮರೆಂದು ಕರೆಯಬಹುದು. ಆದರೆ ಅವರು ಕರ್ತವ್ಯನಿರತರಾಗಿರುವಾಗಲೇ ಸಾವನ್ನಪ್ಪಿದ್ದರೂ ಅವರಿಗೆ ಹುತಾತ್ಮರ ಸ್ಥಾನಮಾನ ನೀಡಲಾಗಿಲ್ಲ ಎಂಬುದು ವಾಸ್ತವ. ವಿವಿಧ ಅರೆಸೇನಾಪಡೆಗಳು ಮತ್ತು ಸೇನೆಯಲ್ಲಿ ದುಡಿಯುತ್ತಿರುವ ಸೈನಿಕರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅವರ ಬಗ್ಗೆ ಯಾರೂ ಚಿಂತಿಸುವುದೂ ಇಲ್ಲ.
ರೈತರ ಮತ್ತು ನೇಕಾರರ ದುಸ್ಥಿತಿಯ ಕುರಿತ ಚರ್ಚೆಗಳನ್ನು ನೀವು ನೋಡಬಹುದು. ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯಾರೂ ಕ್ರಮ ಕೈಗೊಂಡಿಲ್ಲ, ನಿಜ. ಆದರೆ ಕನಿಷ್ಟಪಕ್ಷ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯಾದರೂ ಚರ್ಚೆಯಾಗುತ್ತಿದೆಯಲ್ಲಾ… ಸೈನಿಕರ ಸಮಸ್ಯೆಗಳನ್ನು ಕುರಿತು ಯಾರೂ ಧ್ವನಿ ಎತ್ತದ ಕಾರಣ, ನಾವೇ ಮೊಟ್ಟಮೊದಲಿಗೆ ಈ ದೇಶದ ಯೋಧರ ಒಳಿತಿಗಾಗಿ ಆಂದೋಲನ ಪ್ರಾರಂಭಿಸಿದ್ದೇವೆ. ಯೋಧ ಸಂತಸದಿಂದಿದ್ದರೆ ಇಡೀ ದೇಶವೇ ನೆಮ್ಮದಿಯಿಂದಿರುತ್ತದೆ.
ಪ್ರಶ್ನೆ: ಕೊಳೆತು ನಾರುತ್ತಿರುವ ವ್ಯವಸ್ಥೆಯ ವಿರುದ್ಧ ಹೋರಾಡುವುದೇ ನಿಮ್ಮ ಗುರಿಯಾಗಿದ್ದರೆ, ನೀವು ಬೇರೆ ಎಲ್ಲಿಂದಾದರೂ ಚುನಾವಣೆಯನ್ನು ಎದುರಿಸಬಹುದಿತ್ತಲ್ಲವೇ? ನೀವು ಮೋದಿಯವರ ವಿರುದ್ಧವೇ ಸ್ಪರ್ಧಿಸಲು ಆಯ್ಕೆ ಮಾಡಿಕೊಂಡಿದ್ದೇಕೆ?
ತೇಜ್ ಬಹದ್ದೂರ್ : ಏಕೆಂದರೆ ಮೋದಿಯವರೇ ಅದನ್ನು ಮೊದಲು ಆರಂಭಿಸಿದ್ದು – ಸೈನಿಕರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು. ಇದೀಗ ನಾವು ಯೋಧರು ಅವರನ್ನು ಎದುರಿಸಿ ಅವರಿಗೆ ರಾಜಕೀಯ ಏನೆಂಬ ಪಾಠ ಹೇಳಿಕೊಡುತ್ತೇವೆ. ಈ ಕಾರಣದಿಂದಲೇ ನಾನು ಇಲ್ಲಿಂದ ಸ್ಪರ್ಧಿಸುತ್ತಿರುವುದು – ರಾಜಕಾರಣದಲ್ಲಿ ಅವರಿಗೊಂದು ಪಾಠ ಹೇಳಿಕೊಡಲು.
ಪ್ರಶ್ನೆ: ನಿಮಗೆ 10,000 ನಿವೃತ್ತ ಯೋಧರ ಬೆಂಬಲ ಇದೆ ಎಂದೂ ಅವರು ಮೋದಿಯವರ ವಿರುದ್ಧ ಪ್ರಚಾರ ಮಾಡುವರೆಂದೂ ಹೇಳಿಕೊಂಡಿದ್ದೀರಿ….
ತೇಜ್ ಬಹದ್ದೂರ್ : ನಮ್ಮೊಡನೆ 10,000 ಅಲ್ಲ, 50,000 ನಿವೃತ್ತ ಯೋಧರಿದ್ದಾರೆ. ಅವರು ನಮ್ಮ ನಿರಂತರ ಸಂಪರ್ಕದಲ್ಲೂ ಇದ್ದಾರೆ. ನಮಗೆ ಸಂಪನ್ಮೂಲಗಳ ಕೊರತೆ ಇರುವುದರಿಂದ ಅವರಿಗೆ ಊಟ, ವಸತಿಗಳ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತದೆ. ನಮಗೆ ದೊಡ್ಡ ಉದ್ಯಮಿಗಳ ಬೆಂಬಲವಿರಲು ನಾವೇನೂ ರಾಜಕಾರಣಿಗಳಲ್ಲ.
ಪ್ರಶ್ನೆ:ನಿಮ್ಮ ಬೆಂಬಲಿಗರು ಬಿಎಸ್ಎಫ್ನವರು ಮಾತ್ರವೇ ಅಥವಾ ಸೇನೆಯಿಂದಲೂ ಇದ್ದಾರೆಯೇ?
ತೇಜ್ ಬಹದ್ದೂರ್: ನಮ್ಮ ಬೆಂಬಲಿಗರು ಅರೆಸೇನಾಪಡೆಗಳು ಮತ್ತು ಸೇನೆ, ಎರಡರಲ್ಲೂ ವಿವಿಧ ಸ್ಥಳಗಳಲ್ಲಿದ್ದಾರೆ. ಆದರೆ ಯಾರೂ ಕೂಡ ಅಧಿಕಾರಿಗಳಲ್ಲ. ಅವರುಗಳ ಹುದ್ದೆ ಜೂನಿಯರ್ ಕಮಿಷನ್ಡ್ ಆಫಿಸರ್ (ಜೆಸಿಒ) ಗಿಂತ ಕೆಳಗಿನದ್ದು. ಮತ್ತು ಅವರೆಲ್ಲರೂ ನಿವೃತ್ತರಾಗಿರುವವರು. ಸೇವೆಯಲ್ಲಿರುವ ಸೈನಿಕರು ನಮ್ಮ ಜೊತೆ ಸೇರಲು ಬಯಸಿದರೂ ಸಹ ನಾವು ಅವರನ್ನು ಸೇರಿಸಿಕೊಳ್ಳಲು ಇಷ್ಟಪಡುವುದಿಲ್ಲ. ನಮ್ಮ ಸಂವಿಧಾನದಲ್ಲಿ ಅದಕ್ಕೆ ಅವಕಾಶವಿಲ್ಲ. ನಮ್ಮ ಸಂವಿಧಾನವನ್ನು ನಾವು ಗೌರವಿಸಬೇಕು.
ಪ್ರಶ್ನೆ: ನೀವು ಯುಪಿಎ ಸರ್ಕಾರದ ಸಂದರ್ಭದಲ್ಲೂ ಬಿಎಸ್ಎಫ್ನಲ್ಲೇ ಸೇವೆಯಲ್ಲಿದ್ದಿರಿ. ಮೋದಿ ಸರ್ಕಾರದ ಅವಧಿಯಲ್ಲಿ ಯೋಧರಿಗೆ ಕೆಲಸದ ವಾತಾವರಣದಲ್ಲಿ ಏನಾದರೂ ಬದಲಾವಣೆ ಇದೆಯೇ?
ತೇಜ್ ಬಹದ್ದೂರ್ : ನಾನು ಆಗಲೇ ಸ್ಪಷ್ಟವಾಗಿ ಹೇಳಿದ್ದೇನೆ, ಯಾರೂ ನಮ್ಮ ಬಗ್ಗೆ ಯೋಚಿಸಿಲ್ಲವೆಂದು. ನಾನು 21 ವರ್ಷಗಳ ಕಾಲ ಸೇವೆಯಲ್ಲೇ ಕಳೆದಿದ್ದೇನೆ. ಹಲವು ಸರ್ಕಾರಗಳು ಬಂದವು, ಹೋದವು, ಅವುಗಳನ್ನೂ ಕಂಡಿದ್ದೇನೆ. ಮೊದಲ ಬಾರಿಗೆ ಎನ್ಡಿಎ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ನಮ್ಮ ಪಿಂಚಣಿಗಳನ್ನು ನಿಲ್ಲಿಸಿಬಿಟ್ಟರು. ಸರ್ಕಾರಗಳು ಬದಲಾಗಿರಬಹುದು, ಆದರೆ ನಮ್ಮ ಸಮಸ್ಯೆಗಳು ಮಾತ್ರ ಹಾಗೆಯೇ ಉಳಿದಿವೆ.
ನಮಗೆ ಮೋದಿಯವರ ಬಗ್ಗೆ ಭರವಸೆ ಇತ್ತು. ಆದರೆ ಅವರ ಆಡಳಿತದಲ್ಲಿ ಸೇನಾಪಡೆಗಳ ರಾಜಕೀಕರಣ ಯಾವ ಮಟ್ಟ ತಲುಪಿದೆ ಎಂದರೆ ಯೋಧರು ಸೇವೆಯಲ್ಲಿ ಉಳಿಯುವ ಆಸಕ್ತಿಯನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಮೋದಿ ಸರ್ಕಾರದ ಆಳ್ವಿಕೆಯಲ್ಲೇ ಯೋಧರು ಮಿತಿಮೀರಿ ದೌರ್ಜನ್ಯಕ್ಕೊಳಗಾಗುತ್ತಿರುವುದು. ಸೇನಾಪಡೆಗಳೂ ಸಹ ತಮ್ಮದೇ ಕಾರ್ಯವಿಧಾನವನ್ನು ಹೊಂದಿರುತ್ತವೆ. ಆದರೆ ಈಗ ಎಲ್ಲವೂ ಮೋದಿಗೆ ಬೇಕಾದಂತೆ ನಡೆಯಬೇಕಾಗಿದೆ. ಅವರ ಆದೇಶವಿಲ್ಲದೆ ಏನೊಂದೂ ಮುಂದೆ ಚಲಿಸದು.
ನಮಗೆಲ್ಲಾ ಗೊತ್ತಿರುವಂತೆ ಸೇನಾಪಡೆಗಳ ಮುಖ್ಯಸ್ಥ (ಕಮಾಂಡರ್-ಇನ್-ಚೀಫ್) ರಾಷ್ಟ್ರಪತಿಗಳಾಗಿರುತ್ತಾರೆ. ಆದರೆ ಫುಲ್ವಾಮಾ ದಾಳಿಯ ನಂತರ ಸೇನಾಪಡೆಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿಕೆ ನೀಡುತ್ತಾರೆ. ಸೇನಾಪಡೆಗಳನ್ನು ಮೋದಿ ತನ್ನ ಅಡಿಯಾಳಾಗಿರಿಸಿಕೊಂಡಿದ್ದಾರೆಂದು ಇದು ಸೂಚಿಸುತ್ತದೆ.
ಮಿಲಿಟರಿಯನ್ನು ಮೋದಿ ತಮ್ಮ ಮನಸೋಇಚ್ಛೆ ನಡೆಸುತ್ತಾರೆ. ಸೇನಾಪಡೆಗಳ ಮುಖ್ಯಸ್ಥರಾರಾದರೂ ಇದನ್ನು ಪ್ರತಿಭಟಿಸಲು ನಿರ್ಧರಿಸಿದರೆ ಅವರನ್ನು ಗಂಟುಮೂಟೆ ಕಟ್ಟಿ ವಾಪಸ್ ಕಳಿಸಿ ಅವರ ಜಾಗಕ್ಕೆ ಬೇರೆ ಯಾರನ್ನಾದರೂ ತಂದು ಕೂರಿಸಲಾಗುತ್ತದೆ. ನಮ್ಮ ದೇಶದಲ್ಲಿ ಪ್ರಜಾತಂತ್ರವನ್ನು ಕೊಲೆಗೈಯಲಾಗಿದೆ.
ಪ್ರಶ್ನೆ: ಇತ್ತೀಚೆಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಬಿಜೆಪಿ ನಾಯಕ ಮುಖ್ತರ್ ಅಬ್ಬಾಸ್ ನಖ್ವಿ ಯವರು ಮೋದಿಜಿಯ ಸೇನೆ ವಾಯುದಾಳಿ ನಡೆಸಿದ್ದು ಎಂದು ನೀಡಿದ ಹೇಳಿಕೆಗಳನ್ನು ಹೇಗೆ ನೋಡುತ್ತೀರಿ?
ತೇಜ್ ಬಹದ್ದೂರ್ : ಯೋಗಿ ಆದಿತ್ಯನಾಥ್ ಮೋದಿಜಿ ಸೇನೆಯ ಬಗ್ಗೆ ಮಾತನಾಡಿದರು. ಮೋದಿಜಿಯೂ ಸೇನಾಪಡೆಗಳಿಗೆ ಸ್ವಾತಂತ್ರ್ಯ ನೀಡಿರುವುದಾಗಿ ಹೇಳಿಕೆ ನೀಡಿದರು. ಇದರ ಅರ್ಥ ಮಿಲಿಟರಿ ಅವರ ಹಿಡಿತದಲ್ಲಿದೆ ಎಂದಲ್ಲವೇನು? ಅವರು ಏನೇ ಹೇಳಲಿ ಅದು ನಡೆದೇ ತೀರುತ್ತದೆ. ಅವರು ಆದೇಶ ನೀಡಿದರೆ, ಸೇನೆಯು ಪಾಕಿಸ್ತಾನದ ವಿರುದ್ಧ ಗುಂಡಿನ ದಾಳಿ ನಡೆಸುತ್ತದೆ. ಅವರೇನಾದರೂ ದಾಳಿ ಬೇಡ, ಯೋಧರು ಸಾಯಲಿ ಎಂದು ಹೇಳಿದರೆ ಆಗ ಹಾಗೇ ಆಗುತ್ತದೆ.
ಅವರ ಹೇಳಿಕೆಗಳನ್ನು ನೋಡಿದರೆ ಮೋದಿ ಮತ್ತು ಆದಿತ್ಯನಾಥ್ ಇಬ್ಬರೂ ಔರಂಗಜೇಬನಷ್ಟೇ ಸರ್ವಾಧಿಕಾರಿಗಳೆಂದು ತೋರುತ್ತದೆ. ಒಂದಿಷ್ಟೂ ಸ್ವಾತಂತ್ರ್ಯವಿಲ್ಲ. ಇದನ್ನು ಭಾರತದ ರಾಷ್ಟ್ರಪತಿಗಳು ಗಮನಿಸಬೇಕು, ಆದರೆ ಅವರು ಏನೂ ಹೇಳುವುದಿಲ್ಲ.
ಆದರೆ ಇವುಗಳನ್ನೆಲ್ಲಾ ಅವರಿಗೆ ನೇರವಾಗಿ ಹೇಳುವರಾರು? ಅವರು ಆಲಿಸುವ ಮನಸ್ಥಿತಿಯಲ್ಲಂತೂ ಇಲ್ಲವೇ ಇಲ್ಲ. ಯಾರಾದರೂ ಮಾತನಾಡಲು ನಿರ್ಧರಿಸಿದರೆಂದರೆ, ಅವರಿಗೆ ಜಡ್ಜ್ ಲೋಯಾ ಅವರಿಗಾದಂತೆಯೇ ಆಗುತ್ತದೆ.
ನಿಮ್ಮ ಪ್ರಚಾರದ ಖರ್ಚುವೆಚ್ಚಗಳನ್ನು ಹೇಗೆ ನಿಭಾಯಿಸುತ್ತಿದ್ದೀರಿ?
ತೇಜ್ ಬಹದ್ದೂರ್ : ನಾನು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ ಮತ್ತು ಪೇಟಿಎಮ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದೇನೆ. ನೆರವು ನೀಡಲು ಬಯಸುವವರು ಇದನ್ನು ಬಳಸಬಹುದು. ಆಗಿದ್ದಾಗಲಿ, ಈ ಚುನಾವಣೆಯನ್ನು ಎದುರಿಸಲೇಬೇಕು.

ಬಿಎಸ್ಎಫ್ಗಾಗಿ ದುಡಿದ ನಿಮ್ಮ ಅನುಭವದ ಬಗ್ಗೆ ಏನು ಹೇಳುವಿರಿ?
ತೇಜ್ ಬಹದ್ದೂರ್: ನಾನು ಬಹಳ ಉತ್ಸಾಹದಿಂದಲೇ ಸೇವೆಗೆ ಸೇರಿಕೊಂಡೆ. ನನ್ನ ದೇಶಕ್ಕೆ ಸೇವೆ ಸಲ್ಲಿಸಲು ಇದೊಂದು ಅವಕಾಶ ಎಂದುಕೊಂಡೆ. ಆದರೆ ವ್ಯವಸ್ಥೆಯೊಳು ಹೊಕ್ಕಾಗ, ನನಗೆ ಸೆರೆಮನೆ ಸೇರಿದ ಅನುಭವವಾಯಿತು.
ಬಾಲಾಕೋಟ್ ವಾಯುದಾಳಿ ಮತ್ತು ಫುಲ್ವಾಮಾ ದಾಳಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಸರ್ಕಾರ ತಪ್ಪುಗಳನ್ನೆಸಗಿದೆ. ಆದರೆ ರಾಜಕಾರಣಿಗಳಿಗೆ ಇದರ ಬಗ್ಗೆ ಚಿಂತೆಯಿಲ್ಲ. ಏಕೆಂದರೆ ಅವರ ಮಕ್ಕಳು ಗುಂಡಿನ ದಾಳಿಗೆ ಒಳಗಾಗುವುದಿಲ್ಲವಲ್ಲಾ… ಸೇನೆಯನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಂದು ವೇಳೆ ಹಾಗಾಗದಿದ್ದರೆ ಅಂತಹ ದಾಳಿಗಳು ನಡೆಯುತ್ತಿರಲೇ ಇಲ್ಲ.
ಪ್ರಶ್ನೆ: ಭಾರತೀಯ ಸೇನೆಯನ್ನು ಮೋದಿಜಿ ಸೇನೆ ಎನ್ನುವವರೆಲ್ಲಾ ದೇಶದ್ರೋಹಿಗಳೆಂದು ಮಾಜಿ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ನೀಡಿರುವ ಹೇಳಿಕೆಯನ್ನು ನೀವು ಒಪ್ಪುವಿರಾ?
ತೇಜ್ ಬಹದ್ದೂರ್: ಹೌದು, ಅವರು ಸರಿಯಾಗಿಯೇ ಹೇಳಿದ್ದಾರೆ. ಯೋಗಿ ಆದಿತ್ಯನಾಥನ ಮೇಲೆ ರಾಷ್ಟ್ರದ್ರೋಹದ ಪ್ರಕರಣವನ್ನು ದಾಖಲಿಸಬೇಕು. ನಿಜ ಹೇಳಬೇಕೆಂದರೆ ವಿ.ಕೆ.ಸಿಂಗ್ ಅವರೇ ಯೋಗಿಯ ವಿರುದ್ಧ ದೂರು ನೀಡಬೇಕು.
ನಿಮಗೆ ಬೇರೆ ರಾಜಕೀಯ ಪಕ್ಷಗಳ ಬೆಂಬಲ ಸಿಗುತ್ತಿದೆಯೇ?
ತೇಜ್ ಬಹದ್ದೂರ್: ಆಮ್ ಆದ್ಮಿ ಪಕ್ಷವು ನಮ್ಮನ್ನು ಬೆಂಬಲಿಸುವುದಾಗಿ ಹೇಳಿದ್ದರೂ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ನಾವು ಸಮಾಜವಾದಿ ಪಕ್ಷವನ್ನೂ ಕೇಳಿಕೊಂಡಿದ್ದೇವೆ. ಅಖಿಲೇಶ್ಜಿ ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ. ಸುಹಲ್ದೇವ್ ಭಾರತೀಯ ಸಮಾಜವಾದಿ ಪಕ್ಷದ ಓಮ್ ಪ್ರಕಾಶ್ ರಾಜ್ಭರ್ ಅವರು ನನ್ನನ್ನು ಬೆಂಬಲಿಸುತ್ತೇನೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ವಾರಣಾಸಿಯ ಜನತೆ ನಿಮ್ಮನ್ನು ಬೆಂಬಲಿಸಬಹುದೆಂದು ನಿಮಗೆ ಅನಿಸುತ್ತಿದೆಯೇ?
ತೇಜ್ ಬಹದ್ದೂರ್: ಇಲ್ಲಿಗೆ ಬಂದು ಕಾಶಿಯ ಜನತೆಯನ್ನು ಭೇಟಿಯಾದ ನಂತರ, ಮೋದಿಯವರು ಭಾರೀ ಅಂತರದಲ್ಲೇ ಸೋಲಬೇಕಾಗುವುದೆಂಬ ಅಭಿಪ್ರಾಯ ವ್ಯಾಪಕವಾಗುತ್ತಿದೆ. ಯಾರಿಗೆ ಗೊತ್ತು?
ಗೆಲುವು ಅಥವಾ ಸೋಲಿಗೆ ಕಾರಣವಾಗಬಹುದಾದಂತಹ, ನಿಮ್ಮ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಅತಿದೊಡ್ಡ ವ್ಯತ್ಯಾಸವೇನೆಂದು ನಿಮ್ಮ ಅನಿಸಿಕೆ?
ತೇಜ್ ಬಹದ್ದೂರ್: ನಮ್ಮಿಬ್ಬರ ನಡುವಿನ ಅತಿದೊಡ್ಡ ವ್ಯತ್ಯಾಸವೆಂದರೆ ನಿಜ ಚೌಕೀದಾರ ಮತ್ತು ನಕಲಿ ಚೌಕೀದಾರನ ಮಧ್ಯೆ ಇರುವ ವ್ಯತ್ಯಾಸವೇ ಆಗಿದೆ. ನಿಜ ಚೌಕೀದಾರ V/s ಫೇಕ್ ಚೌಕೀದಾರ – ಇದೇ ನನ್ನ ಘೋಷಣೆಯಾಗಿದೆ. ಇದೇ ನನ್ನ ಸಮರ ಕೂಗೂ ಆಗಿದೆ.
More Articles
By the same author