ನಿರುದ್ಯೋಗ ಸಮಸ್ಯೆ 45 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಎನ್ಎಸ್ಎಸ್ಒ ಅಂಕಿಅಂಶಗಳನ್ನೇ ನಾಶಮಾಡಲು ಯತ್ನಿಸಿದರು. ಯುಪಿಎ ಅವಧಿಗಿಂತ ತಮ್ಮ ಅವಧಿಯಲ್ಲೇ ದೇಶದ ಆರ್ಥಿಕ ಅಭಿವೃದ್ಧಿ ಹೆಚ್ಚಿದೆ ಎಂಬುದನ್ನು ಬಿಂಬಿಸಲು ಜಿಡಿಪಿ ಅಂಕಿ ಅಂಶಗಳನ್ನು ತಿದ್ದಿದರು. ಇದೀಗ ದೇಶದ ಜಿಡಿಪಿ ಅಂಕಿಅಂಶಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಷ್ಟೇ ಅಲ್ಲಾ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅನುಮಾನಗಳು ಎದ್ದಿವೆ. ಮೋದಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಅಂಕಿಅಂಶಗಳ ಪಾವಿತ್ರ್ಯತೆ ಮತ್ತು ವಿಶ್ವಾಸಾರ್ಹತೆ ನಶಿಸಿದೆ.
ಮೋದಿ ಸರ್ಕಾರವು ಮನಮೋಹನ್ ಸಿಂಗ್ ಸರ್ಕಾರದ ಅವಧಿಗಿಂತ ಹೆಚ್ಚು ಅಭಿವೃದ್ಧಿ ಸಾಧಿಸಿದೆ ಎಂಬಂತಹ ಜಿಡಿಪಿ ಅಂಕಿಅಂಶಗಳು ಹೊರಬಿದ್ದಿವೆ. 2017ರ ವಿತ್ತೀಯ ವರ್ಷದ ಜಿಡಿಪಿ ಶೇ.8.2ರಷ್ಟು ದಾಖಲಾಗಿದೆ ಎಂದು ಪ್ರಕಟಿಸಲಾಗಿದೆ. ಇದು 2012 ರಿಂದೀಚೆಗೆ ಅತಿಗರಿಷ್ಠ ಜಿಡಿಪಿ ಅಭಿವೃದ್ಧಿ ಪ್ರಮಾಣವಾಗಿದೆ. ಆದರೆ, 2016ರಲ್ಲಿ ಅಪನಗದೀಕರಣ ಜಾರಿ ಮಾಡಿದ ಮೋದಿ ಸರ್ಕಾರದ ತರ್ತರಹಿತ ನೀತಿಯಿಂದಾಗಿ ದೇಶದ ಜಿಡಿಪಿ ಭರೋಬ್ಬರಿ ಶೇ.2ರಷ್ಟು ಕುಸಿದಿತ್ತು. ಅಸಂಘಟಿತ ವಲಯದಲ್ಲಿ ಆರ್ಥಿಕತೆ ಕುಸಿತದ ಜತೆಗೆ ನಿರುದ್ಯೋಗ ಸಮಸ್ಯೆ ತೀವ್ರವಾಗಿತ್ತು. ಇಡೀ ಆರ್ಥಿಕ ಚಟುವಟಿಕೆಗೆ ಗರ ಬಡದಿತಂಹ ಪರಿಸ್ಥಿತಿ ಇತ್ತು. ಹೀಗಿದ್ದೂ 2017ರಲ್ಲಿ ಜಿಡಿಪಿ ಶೇ.8.2ರಷ್ಟು ದಾಖಲಾಗಲು ಹೇಗೆ ಸಾಧ್ಯ? ಒಂದೋ ಅದಕ್ಕೂ ಹಿಂದಿನ ವರ್ಷಗಳಲ್ಲಿ ಜಿಡಿಪಿ ಪ್ರಮಾಣ 2017ಕ್ಕಿಂತಲೂ ಹೆಚ್ಚಿರಬೇಕು, ಇಲ್ಲವೇ ಮೋದಿ ಸರ್ಕಾರವು ಜಿಡಿಪಿ ಅಂಕಿ ಅಂಶಗಳನ್ನು ತಿರುಚಿರಬೇಕು.
ದೇಶದ ಅಭಿವೃದ್ಧಿಯನ್ನು ಜಿಡಿಪಿ ಮೂಲಕ ಅಳೆಯಲಾಗುತ್ತದೆ. ಅದೇ ರೀತಿ ಜಿಡಿಪಿ ಅಳತೆಗೆ ಹಲವು ಮಾನದಂಡಗಳಿವೆ. ಅವೆಲ್ಲವನ್ನೂ ಕ್ರೋಢೀಕರಿಸಿದ ನಂತರ ಜಿಡಿಪಿ ಅಂಕಿಅಂಶಗಳನ್ನು ಪ್ರಕಟಿಸಲಾಗುತ್ತದೆ.
ಆರ್ಥಿಕ ಅಭಿವೃದ್ಧಿಯಾಗಲು ನೇರ ಕಾರಣವಾಗುವ 12 ಮಾನದಂಡಗಳ ರಿಯಲ್ ಟೈಮ್ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ‘ಮಿಂಟ್’ ಪತ್ರಿಕೆ ತುಲನಾತ್ಮಕ ಅಧ್ಯಯನ ನಡೆಸಿದೆ. ಈ ಪೈಕಿ ಒಂಭತ್ತು ಮಾನದಂಡಗಳಲ್ಲಿ ಮನಮೋಹನ್ ಸಿಂಗ್ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ದಾಖಲಾಗಿದೆ. ನರೇಂದ್ರ ಮೋದಿ ಅವಧಿಯಲ್ಲಿ ಮೂರರಲ್ಲಿ ಮಾತ್ರ ಅಭಿವೃದ್ಧಿ ದಾಖಲೆಯಾಗಿದೆ. ಅವುಗಳ ವಿವರ ಇಲ್ಲಿದೆ.
ದೇಶೀಯ ಮಾರುಕಟ್ಟೆಯಲ್ಲಿ ದ್ವಿಚಕ್ರವಾಹನ ಮಾರಾಟ: ಮನಮೋಹನ್ ಸಿಂಗ್ ಅವರ ಅಧಿಕಾರದ ಅವಧಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮೋಟಾರ್ ಸೈಕಲ್ ಮಾರಾಟವು ವಾರ್ಷಿಕ ಶೇ.12.44ರಷ್ಟು ಅಭಿವೃದ್ಧಿಯಾಗಿದೆ. ನರೇಂದ್ರಮೋದಿ ಸರ್ಕಾರದ ಅವಧಿಯಲ್ಲಿ ಶೇ.5.35ರಷ್ಟಾಗಿದೆ. ಸ್ಕೂಟರ್ ಮಾರಾಟ ಪ್ರಮಾಣವು ಮನಮೋಹನ್ ಸಿಂಗ್ ಅವಧಿಯಲ್ಲಿ ಶೇ.25.7ರಷ್ಟಾಗಿದ್ದರೆ, ಮೋದಿ ಅವಧಿಯಲ್ಲಿ ಕೇವಲ ಶೇ.13.21ರಷ್ಟಾಗಿದೆ. ಮೋಟಾರ್ ಸೈಕಲ್ ಮಾರಾಟವು ಮೋದಿ ಅವಧಿಯಲ್ಲಿ ಗಣನೀಯವಾಗಿ ತಗ್ಗಿರುವುದು, ಕೃಷಿ ವಲಯವು ದುಸ್ಥಿತಿಗೆ ತಲುಪಿರುವ ಮತ್ತು ಗ್ರಾಮೀಣ ಪ್ರದೇಶದ ಜನರ ಖರೀದಿಸುವ ಶಕ್ತಿಯು ತಗ್ಗಿರುವುದಕ್ಕೆ ಸಂಕೇತವಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟ: ಕಾರುಗಳ ಮಾರಾಟವು ನಗರ ಪ್ರದೇಶದ ಜನರು ಆರ್ಥಿಕವಾಗಿ ಎಷ್ಟರ ಮಟ್ಟಿಗೆ ಸುಸ್ಥಿರವಾಗಿದ್ದಾರೆ, ಸುಧಾರಿಸಿದ್ದಾರೆ ಎಂಬುದರ ಸಂಕೇತ. ಒಬ್ಬ ವ್ಯಕ್ತಿ ಕಾರು ಅಥವಾ ಬೈಕ್ ಖರೀದಿಸುತ್ತಾನೆ ಎಂದರೆ, ಆತ ತಾನು ಬರುವ ವರ್ಷಗಳಲ್ಲಿ ಮಾಸಿಕ ಸಮಾನ ಕಂತುಗಳನ್ನು (ಇಎಂಐ) ಪಾವತಿಸುವ ಶಕ್ತಿಹೊಂದಿದ್ದಾನೆ, ಆತ್ಮವಿಶ್ವಾಸದಿಂದ ಇದ್ದಾನೆ ಎಂದರ್ಥ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಾರುಗಳ ಮಾರಾಟವು ವಾರ್ಷಿಕ ಶೇ.7.92ರಷ್ಟು ಬೆಳವಣಿಗೆಯಾಗಿದ್ದರೆ, ಮೋದಿ ಅವಧಿಯಲ್ಲಿ ಕೇವಲ ಶೇ.4.42ರಷ್ಟು ಮಾತ್ರ ಬೆಳವಣಿಗೆಯಾಗಿದೆ. ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿದ್ದ 2009-10 ಮತ್ತು 2010-11ರಲ್ಲಿ ಕಾರುಗಳ ಮಾರಾಟವು ಕ್ರಮವಾಗಿ ಶೇ.25.22 ರಷ್ಟು ಮತ್ತು ಶೇ.29.09 ರಷ್ಟು ಬೆಳವಣಿಗೆಯಾಗಿದೆ. ಮೋದಿ ಸರ್ಕಾರದ ಅವಧಿಯಲ್ಲಿ ನಗರ ಪ್ರದೇಶದ ಜನರು ಅಷ್ಟು ಸಂತುಷ್ಟರಾಗಿರಲಿಲ್ಲ ಮತ್ತು ಆರ್ಥಿಕತೆ ಬಗ್ಗೆ ಅಷ್ಟು ಆತ್ಮವಿಶ್ವಾಸದಿಂದ ಇರಲಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ದೇಶೀಯ ಮಾರುಕಟ್ಟೆಯಲ್ಲಿ ಟ್ರ್ಯಾಕ್ಟರ್ ಗಳ ಮಾರಾಟ: ಟ್ರ್ಯಾಕ್ಟರುಗಳ ಮಾರಾಟವು ಸುಸ್ಥಿತಿಯಲ್ಲಿರುವ ರೈತರು ಆರ್ಥಿಕತೆಯನ್ನು ಬಗ್ಗೆ ಎಷ್ಟು ವಿಶ್ವಾಸದಿಂದ ಇದ್ದಾರೆ ಎಂಬುದನ್ನು ಸೂಚಿಸುತ್ತದೆ. ಮೋದಿ ಸರ್ಕಾರದ ಅವಧಿಯಲ್ಲಿ ಟ್ರ್ಯಾಕ್ಟರುಗಳ ಮಾರಾಟವು ವಾರ್ಷಿಕ ಶೇ.4.49ರಷ್ಟು ಬೆಳವಣಿಗೆಯಾಗಿದೆ. ಆದರೆ, ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ವಾಕ್ಷಿಕ ಶೇ.15.73ರಷ್ಟು ಮಾರಾಟ ಬೆಳವಣಿಗೆಯಾಗಿದೆ. ಇದು ಮೋದಿ ಸರ್ಕಾರದ ಅವಧಿಯಲ್ಲಿ ಕೃಷಿ ವಲಯದಲ್ಲಿ ತೀವ್ರ ಸಂಕಷ್ಟ ಇದ್ದದ್ದನ್ನು ಸೂಚಿಸುತ್ತದೆ. ಅಂದರೆ, ಮೋದಿ ಸರ್ಕಾರವು ಕೃಷಿ ವಲಯವನ್ನು ನಿರ್ಲಕ್ಷಿಸಿತ್ತು. 2013-14ನೇ ಸಾಲಿನಲ್ಲಿ 6,34,000 ಟ್ರ್ಯಾಕ್ಟರುಗಳ ಮಾರಾಟವಾಗಿದ್ದರೆ, ಮೋದಿ ಅವಧಿಯಲ್ಲಿ ಅಂದರೆ, 2015-16ನೇ ಸಾಲಿನಲ್ಲಿ ಟ್ರ್ಯಾಕ್ಟರ್ ಮಾರಾಟ 4,94,000ಕ್ಕೆ ಕುಸಿದಿತ್ತು.
ವೈಯಕ್ತಿಕ ಸಾಲದ ಬೆಳವಣಿಗೆ: ಜನರು ಪಡೆಯುವ ಗೃಹಸಾಲ, ವಾಹನಸಾಲ, ಶೈಕ್ಷಣಿಕ ಸಾಲ ಸೇರಿದಂತೆ ಪಡೆಯುವ ವೈಯಕ್ತಿಕ ಸಾಲವು ಒಟ್ಟಾರೆ ಜನರು ತಮ್ಮ ಭವಿಷ್ಯದ ಆರ್ಥಿಕತೆ ಸುಭದ್ರವಾಗಿದೆ ಎಂದು ಭಾವಿಸುವುದರ ಸಂಕೇತ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ವೈಯಕ್ತಿಕ ಸಾಲವು ಶೇ.22.47ರಷ್ಟು ಬೆಳವಣಿಗೆ ಆಗಿದ್ದರೆ, ಮೋದಿ ಅವಧಿಯಲ್ಲಿ ಇದು 19.92ರಷ್ಟು ಮಾತ್ರ.
ವಿಮಾನದಲ್ಲಿ ಪ್ರಯಾಣಿಸುವರ ಸಂಖ್ಯೆ: ವಿಮಾನದಲ್ಲಿ ಸಂಚರಿಸುವವ ಪ್ರಮಾಣ ನರೇಂದ್ರಮೋದಿ ಅವರ ಅವಧಿಯಲ್ಲಿ ಹೆಚ್ಚಳವಾಗಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ವಿಮಾನಯಾನಕ್ಕಾಗಿ ರೂಪಿಸಿದ ಮೂಲಭೂತ ಸೌಲಭ್ಯಗಳು ಮೋದಿ ಅಧಿಕಾರಕ್ಕೆ ಬಂದ ನಂತರ ಫಲಕೊಡಲಾರಂಭಿಸಿದವು. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ವಾರ್ಷಿಕ ಶೇ.9.20ರಷ್ಟು ಹೆಚ್ಚಳವಾಗಿದ್ದರೆ, ಮೋದಿ ಅವಧಿಯಲ್ಲಿ ಇದು ಶೇ.15.28ರಷ್ಟಾಗಿದೆ.
ಭಾರತೀಯ ರೈಲ್ವೆಗೆ ಪ್ರಯಾಣಿಕರಿಂದ ಆದಾಯ: ಬಹಳಷ್ಟು ಜನರು ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದಕ್ಕೆ ಮೋದಿ ಸರ್ಕಾರವನ್ನು ಅಭಿನಂದಿಸುತ್ತಾರೆ. ಆದರೆ, ಮೋದಿ ಸರ್ಕಾರವು ರೈಲ್ವೆಗೆ ನಷ್ಟಮಾಡಿ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಿದೆ. ಮೋದಿ ಸರ್ಕಾರವು ರೈಲ್ವೆಯ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಎಸಿ ಪ್ರಯಾಣದರವನ್ನು ಗಣನೀಯವಾಗಿ ಏರಿಕೆ ಮಾಡಿದೆ. ಹೀಗಾಗಿ ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಪ್ರತಿ ವರ್ಷ ಭಾರತೀಯ ರೈಲ್ವೆಗೆ ಪ್ರಯಾಣಿಕರ ಮೂಲದ ಆದಾಯವು ಶೇ.10.81ರಷ್ಟು ಬೆಳವಣಿಗೆ ಸಾಧಿಸಿದ್ದರೆ, ಮೋದಿ ಅವಧಿಯಲ್ಲಿ ಇದು ಶೇ.7.32ಕ್ಕೆ ತಗ್ಗಿದೆ.
ದೇಶೀಯ ಸರಕು ಸಾಗಣೆ ವಾಹನಗಳ ಮಾರಾಟ: ಗ್ರಾಹಕರ ಖರೀದಿಸುವ ಶಕ್ತಿ ಹೆಚ್ಚಿದಂತೆ ಹೂಡಿಕೆಯೂ ಹೆಚ್ಚಾಗುತ್ತದೆ. ಇದನ್ನು ಪತ್ತೆ ಹಚ್ಚಬೇಕಾದರೆ ದೇಶೀಯ ಮಾರುಕಟ್ಟೆಯಲ್ಲಿ ಸರಕು ಸಾಗಣೆ ವಾಹನಗಳ ಮಾರಾಟ ಹೇಗಿದೆ ಎಂಬುದನ್ನು ಗಮನಿಸಬೇಕು. ಸರಕು ಸಾಗಣೆ ವಾಹನಗಳ ಮಾರಾಟ ಹೆಚ್ಚಳವಾಗಿದೆ ಎಂದರೆ ದೇಶದ ಆರ್ಥಿಕ ಚಟುವಟಿಕೆಗಳು ತ್ವರಿತಗತಿಯಲ್ಲಿ ಸಾಗಿವೆ ಎಂದೇ ಅರ್ಥ. ಮನಮೋಹನ್ ಸಿಂಗ್ ಅವಧಿಯಲ್ಲಿ ಸರಕು ಸಾಗಣೆ ವಾಹನಗಳ ಮಾರಾಟವು ವಾರ್ಷಿಕ ಶೇ.10.50ರಷ್ಟು ಬೆಳವಣಿಗೆ ಸಾಧಿಸಿದೆ. ಆದರೆ, ಮೋದಿ ಅವಧಿಯಲ್ಲಿ ಇದು ಶೇ.9.74ಕ್ಕೆ ತಗ್ಗಿದೆ.

ಸಿಮೆಂಟ್ ಉತ್ಪಾದನೆ: ಸಿಮೆಂಟ್ ಉತ್ಪಾದನೆಯ ಪ್ರಮಾಣವು ದೇಶದಲ್ಲಿನ ನಿರ್ಮಾಣ ಚಟುವಟಿಕೆಗಳು ಸಾಗಿರುವ ದಿಕ್ಕನ್ನು ಸೂಚಿಸುತ್ತದೆ. ಹಾಗೆಯೇ ನಿರ್ಮಾಣ ಚಟುವಟಿಕೆಗಳು ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿರುವುದನ್ನು ಸಂಕೇತಿಸುತ್ತದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಸಿಮೆಂಟ್ ಉತ್ಪಾದನೆ ಪ್ರಮಾಣವು ವಾರ್ಷಿಕ ಶೇ.7.05ರಷ್ಟು ಬೆಳವಣಿಗೆ ದಾಖಲಿಸಿದೆ. ಆದರೆ, ಮೋದಿ ಸರ್ಕಾರ ಅವಧಿಯಲ್ಲಿ ಇದು ಶೇ.4.32ಕ್ಕೆ ಕುಸಿದಿದೆ. ಮೋದಿ ಸರ್ಕಾರದ ಅವಧಿಯಲ್ಲಿ ರಸ್ತೆಗಳ ನಿರ್ಮಾಣ ಹೆಚ್ಚಳವಾದ್ದರಿಂದ ಸಿಮೆಂಟ್ ಉತ್ಪಾದನೆ ವಾಸ್ತವವಾಗಿ ಹೆಚ್ಚಳವಾಗಬೇಕಿತ್ತು. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ವಲಯದಲ್ಲಿ ಹೂಡಿಕೆ ಹರಿದು ಬಂದ ಪ್ರಮಾಣದಲ್ಲಿ ಖಾಸಗಿ ವಲಯದಿಂದ ಹೂಡಿಕೆ ಹರಿದು ಬರಲಿಲ್ಲ. ಕೃಷಿ ತೊರೆದವರು ಸಲೀಸಾಗಿ ನಿರ್ಮಾಣ ವಲಯದಲ್ಲಿ ಕೆಲಸ ಗಿಟ್ಟಿಸುತ್ತಾರೆ. ಆದರೆ, ಮೋದಿ ಅವಧಿಯಲ್ಲಿ ಸೀಮೆಂಟ್ ಉತ್ಪಾದನೆ ತಗ್ಗಿರುವುದು ದೇಶದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಿಲ್ಲ ಎಂಬುದನ್ನೂ ಸೂಚಿಸುತ್ತದೆ.
ಸಿದ್ದಕಬ್ಬಿಣ ಬಳಕೆ: ಸಿದ್ದ ಕಬ್ಬಿಣ ಬಳಕೆಯು ದೇಶದ ಆರ್ಥಿಕ ಚಟುವಟಿಕೆಯನ್ನು ಸಂಕೇತಿಸುತ್ತದೆ. ಯಾವುದೇ ಮೂಲಭೂ ಸೌಲಭ್ಯ ನಿರ್ಮಾಣಕ್ಕೂ ಕಬ್ಬಿಣ ಅತ್ಯವಶ್ಯಕವಾಗಿರುವುದರಿಂದ ಕಬ್ಬಿಣ ಬಳಕೆ ಹೆಚ್ಚಳ ಆರ್ಥಿಕ ಚಟುವಟಿಕೆ ಚೇತರಿಕೆ ಹಾದಿಯಲ್ಲಿರುವುದನ್ನು ಸೂಚಿಸುತ್ತದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಸಿದ್ದ ಕಬ್ಬಿಣ ಬಳೆಕೆಯು ವಾರ್ಷಿಕ ಶೇ.7.18ರಷ್ಟು ಬೆಳವಣಿಗೆ ದಾಖಲಿಸಿದ್ದರೆ, ಮೋದಿ ಅವಧಿಯಲ್ಲಿ ಇದು ಶೇ.5.18ಕ್ಕೆ ತಗ್ಗಿದೆ. ಅಂದರೆ ಮೋದಿ ಅವಧಿಯಲ್ಲಿ ದೇಶದಲ್ಲಿ ಹೂಡಿಕೆ ಪ್ರಮಾಣವು ಗಣನೀಯವಾಗಿ ತಗ್ಗಿದ್ದನ್ನು ಪ್ರಾತಿನಿಧಿಕವಾಗಿ ಸೂಚಿಸುತ್ತದೆ.
ಆದಾಯ ತೆರಿಗೆ ಬೆಳವಣಿಗೆ: ಆದಾಯ ತೆರಿಗೆ ಬೆಳವಣಿಗೆಯು ಸಂಘಟಿತ ವಲಯದಲ್ಲಿನ ಆರ್ಥಿಕತೆಯು ಸಮರ್ಥವಾಗಿದೆಯೇ ಎಂಬುದನ್ನು ಸೂಚಿಸುತ್ತದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಆದಾಯ ತೆರಿಗೆ ಹೆಚ್ಚಳವಾಗಿರುವ ಬಗ್ಗೆ ಸಾಕಷ್ಟು ಮಾತನಾಡಲಾಗಿದೆ. ವಸ್ತುಸ್ಥಿತಿ ಏನೆಂದರೆ ಮನಮೋಹನ್ ಸಿಂಗ್ ಅವಧಿಯಲ್ಲಿ ಆದಾಯ ತೆರಿಗೆ ಬೆಳವಣಿಗೆಯು ವಾರ್ಷಿಕ ಶೇ.17.53ರಷ್ಟಿತ್ತು. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ ಇದು ಶೇ.16.85ರಷ್ಟು ಮಾತ್ರ.
ಕಾರ್ಪೊರೆಟ್ ತೆರಿಗೆ ಬೆಳವಣಿಗೆ: ಕಂಪನಿಗಳು ಹೆಚ್ಚಿನ ವಹಿವಾಟು ನಡೆಸಿ, ಲಾಭ ಮಾಡಿದಾಗ ಹೆಚ್ಚಿನ ತೆರಿಗೆ ಪಾವತಿಸುತ್ತವೆ. ಖರೀದಿದಾರರು ಹೆಚ್ಚಿದ್ದಾಗ ಕಂಪನಿಗಳು ಹೆಚ್ಚು ಮಾರಾಟ ಮಾಡುತ್ತವೆ. ದೇಶದಲ್ಲಿ ಆರ್ಥಿಕತೆ ಸುಭಿಕ್ಷವಾಗಿದ್ದರೆ ಜನರು ಹೆಚ್ಚೆಚ್ಚು ಕೊಳ್ಳುತ್ತಾರೆ. ಅದು ಒಟ್ಟಾರೆ ಆರ್ಥಿಕತೆ ಸರಿದಾರಿಯಲ್ಲಿದ್ದಾಗ ಮಾತ್ರ ಸಾಧ್ಯ. ಮನಮೋಹನ್ ಸಿಂಗ್ ಅವಧಿಯಲ್ಲಿ ಕಾರ್ಪೊರೆಟ್ ತೆರಿಗೆ ವಾರ್ಷಿಕ ಶೇ.13.09ರಷ್ಟು ಹೆಚ್ಚಳ ಸಾಧಿಸಿದೆ. ಆದರೆ, ಮೋದಿ ಅವಧಿಯಲ್ಲಿ ಇದು ಶೇ.11.20ಕ್ಕೆ ತಗ್ಗಿದೆ. ಇದರರ್ಥ ಮೋದಿ ಅಧಿಕಾರದ ಅವಧಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚನ್ನಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ.
ಪೆಟ್ರೋಲಿಯಂ ಉತ್ಪನ್ನಗಳ ಬಳಕೆ : ಇಂಧನವು ಆರ್ಥಿಕಗೆ ಕೀಳೆಣ್ಣೆ ಇದ್ದಂತೆ. ಹೆಚ್ಚೆಚ್ಚು ಪೆಟ್ರೊಲಿಯಂ ಉತ್ಪನ್ನ ಬಳಕೆಯಾದಷ್ಟೂ ಅದು ಆರ್ಥಿಕ ಚಟುವಟಿಕೆ ಉತ್ತೇಜನಕಾರಿಯಾಗಿರುವುದನ್ನು ಸೂಚಿಸುತ್ತದೆ. ಈ ಲೆಕ್ಕದಲ್ಲಿ ಮೋದಿ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಶೇ.5.19ರಷ್ಟಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಶೇ.3.47ರಷ್ಟಿತ್ತು. ವಸ್ತುಸ್ಥಿತಿ ಏನೆಂದರೆ 2011-2014ರ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ತೀವ್ರವಾಗಿ ಏರಿತ್ತು. 2014-2017 ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕುಸಿದಿತ್ತು. ಈ ಕಾರಣಕ್ಕಾಗಿಯೂ ಮೋದಿ ಅವಧಿಯಲ್ಲಿ ಪೆಟ್ರೋಲಿಯಂ ಬಳಕೆ ಹೆಚ್ಚಿರಬಹುದು.
More Articles
By the same author
3 Comments
ಮೋದಿ ಭಕ್ತಿ ತರಹ ನಿಮ್ಮದೂ ಕೂಡ ಕಾಂಗ್ರೆಸ್ ಭಕ್ತಿಯಾಗಿದೆ ಅಂತ ಕಾಣುತ್ತಾ ಇದೆ.
ಟ್ರೂತ್ ಹೆಸರಿನಲ್ಲಿ ಸುಳ್ಳನ್ನು ಬೇರೊಂದು ರೀತಿಯಲ್ಲಿ ಹೇಳುತ್ತಾ ಇದ್ದೀರಿ.
ಜಾಗತೀಕರಣ ಎಂತೆಂಥಹ ಅನಾಹುತಗಳನ್ನು ಮಾಡಿದೆ. ಎಷ್ಟೆಲ್ಲಾ ಸ್ಥಳೀಯ ಆರ್ಥಿಕ ಚಟುವಟುಕೆಗಳನ್ನು ನಾಶ ಮಾಡಿದೆ. ಮನಮೋಹನ್ ಸಿಂಗ್ ಅದರ ಒಬ್ಖ ಮುಖ್ಯ ಪ್ರವರ್ತಕರಲ್ವೇ. ಕಾಂಗ್ರೆಸ್ ತಾನೆ ಈ ದೇಶ ಇಂದು ಈ ಸ್ಥಿತಿಗೆ ಬರೋದಿಕ್ಕೆ ಮುಖ್ಯ ಕಾರಣ.
ಮೋದಿ ಬಂದು ಅಳಿದುಳಿದವನ್ನೆಲ್ಲಾ ಸರ್ವ ನಾಶ ಮಾಡಿದರು.
ಮೋದಿಯ ಸುಳ್ಳುಗಳನ್ನು ಹೇಳುತ್ತಾ ಕಾಂಗ್ರೆಸ್ಸಿನ ವಕ್ತಾರರಂತೆ ವರ್ತಿಸಿದರೆ ಅದೂ ಕೂಡ ಭಾರಿ ಅಪಾಯಕಾರಿಯಾದುದು.
ದಯವಿಟ್ಟು ಲೇಖನ ಮತ್ತೊಮ್ಮೆ ಓದಿ.. ಯಾವುದೇ ಅಂಶದ ಬಗ್ಗೆ ತಕರಾರಿದ್ದರೆ ಖಂಡಿತಾ ತಿಳಿಸಿ. ಲೇಖನ ನರೇಂದ್ರ ಮೋದಿ ಆಡಳಿತ ಹಾಗೂ ಮನಮೋಹನ್ ಸಿಂಗ್ ಆಡಳಿತವನ್ನು ಹೋಲಿಕೆಯಲ್ಲಿ ಅವಲೋಕಿಸಿದೆ. ಹಾಗೂ ಈ ಲೇಖನ ಅನುವಾದಿತ ಲೇಖನ ಎಂದು ತಿಳಿಸಲಾಗಿದೆ.
ಮೋದಿ ಭಕ್ತರು ಸತ್ಯವನ್ನು ಎಂದೂ ಒಪ್ಪುವುದಿಲ್ಲ.