ಆನಂದ್ ಪಟವರ್ದನ್ ಸಿನಿಮಾಗಳು ಸಾಮಾನ್ಯವಾಗಿ ವಾಸ್ತವದ ಸುತ್ತ ಭರವಸೆಯ ಬೆಳಕು ನೀಡುವ ಪ್ರಯತ್ನವಾಗಿ ನಿರೂಪಣೆಗೊಳ್ಳುತ್ತವೆ. ‘ರಾಮ್ ಕೇ ನಾಮ್’ ಅಥವಾ ‘ವಾರ್ ಆಂಡ್ ಪೀಸ್’ ಮೊದಲಾದವು ವಾಸ್ತವಿಕ ಕತೆಯುಳ್ಳ ಮತ್ತು ಪ್ರಜಾ-ಕೇಂದ್ರಿತ ಸಿನಿಮಾಗಳು, ಸಾಮಾಜಿಕ ನಂಬಿಕೆಗಳು ಮತ್ತು ಕೊಳ್ಳುಬಾಕತನ ಕಲ್ಪನೆಗಳನ್ನು ಪ್ರಶ್ನಿಸುವ ಕಥಾನಕವುಳ್ಳವುಗಳು. ಆದರೆ ಇತ್ತೀಚೆಗೆ ಬಿಡುಗಡೆಯಾಗಿರುವ ಅವರ ನಾಲ್ಕು ಗಂಟೆಗಳ ಧೀರ್ಘ ಸಾಕ್ಷ್ಯಚಿತ್ರ ನಿರೀಕ್ಷೆಗಳಿಗೆ ಭಿನ್ನವಾಗಿ ನಿರೂಪಣೆಗೊಂಡಿದೆ.
‘ರೀಸನ್’ ಕೇವಲ ಆನಂದ್ ಪಟವರ್ಧನ್ ಸಿನಿಮಾವಲ್ಲ. ಭಾರತದ ಸಮಕಾಲೀನ ರಕ್ತಸಿಕ್ತ ಬಹುಸಂಖ್ಯಾತವಾದಿ (ಮೆಜಾರಿಟೇರಿಯನ್) ರೂಪಾಂತರದ ಇತಿಹಾಸದಲ್ಲಿನ ಒಂದು ಪಾಠವದು. ಸಿನಿಮಾ ನಿರ್ದೇಶಕರ ಸಿಗ್ನೇಚರ್ ಶೈಲಿಯಾದ ತೀವ್ರವಾದ ಮತ್ತು ಭರವಸೆ ಎರಡನ್ನೂ ಬುಟ್ಟಿಯಲ್ಲಿಟ್ಟುಕೊಂಡು ಮನಕಲಕುವ ಅನುಭವವನ್ನು ಹಿಂದೂ ರಾಷ್ಟ್ರದ ನಿರ್ಮಾಣದ ಪ್ರಕ್ರಿಯೆಯ ಸುತ್ತ ಕಟ್ಟಿ ಕೊಡುತ್ತದೆ. ಕೆಲವೊಂದು ವಾಸ್ತವಾಂಶಗಳು ದಿಗ್ಭ್ರಮೆ ಹುಟ್ಟಿಸುತ್ತವೆ, ಆದರೆ ಅಷ್ಟೇ ಅಪಾಯಕಾರಿ. ಪ್ರಾಮಾಣಿಕವಾಗಿ ಹೇಳುವುದಾದಲ್ಲಿ, ‘ರೀಸನ್’ ಒಂದು ಸಾಕ್ಷ್ಯಚಿತ್ರ ಎಂದು ಅನಿಸುವುದೇ ಇಲ್ಲ, ಅದೊಂದು, ಒಂದೇ ಬಾರಿ ಕುಳಿತು ಓದಬೇಕಾದ ಪುಸ್ತಕ, ಗ್ರಂಥ ಎನ್ನಬಹುದು.
ಎಂಟು ಅಧ್ಯಾಯಗಳಿರುವ ಸಾಕ್ಷ್ಯಚಿತ್ರ ನರೇಂದರ್ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರ ಜೀವನದ (ಮರಣ) ಜೊತೆಗೆ ತೆರೆದುಕೊಳ್ಳುತ್ತದೆ. ಅವರಿಬ್ಬರೂ ವಿಚಾರವಾದ, ಸಮಾನತೆ ಮತ್ತು ನ್ಯಾಯವನ್ನು ಪ್ರಚಾರ ಮಾಡಿದ ಕಾರಣಕ್ಕಾಗಿ ಕೊಲೆಯಾದವರು. ಒಂದರ್ಥದಲ್ಲಿ, ‘ರೀಸನ್’ ಸಿನಿಮಾ ಆ ಹುತಾತ್ಮರಿಗೆ ಸಲ್ಲಿಸಿದ ಶ್ರದ್ಧಾಂಜಲಿ. ಇಬ್ಬರು ವಿಚಾರವಾದಿಗಳ ಹೋರಾಟವನ್ನು ತೋರಿಸುತ್ತಾ ಪ್ರತಿರೋಧದ ಕೆಚ್ಚೆದೆಯನ್ನು ಸಾಕ್ಷ್ಯಚಿತ್ರ ಕಟ್ಟಿಕೊಡುತ್ತದೆ. ಹೇಗೆ ‘ಸನಾತನ ಸಂಸ್ಥೆ’ ಎನ್ನುವ ಗೋವಾ ಮೂಲದ ಸಂಘಟನೆ ಎರಡೂ ಕೊಲೆಗಳನ್ನು ಯೋಜಿಸಿತು, ಭಾರತದ ಜಾತ್ಯಾತೀತವಾದದ ನರಗಳ ಮೇಲೆ ದ್ವೇಷದ ರಕ್ತವನ್ನು ಹರಿಸಿತು ಎಂದು ಬಹಿರಂಗಪಡಿಸುತ್ತದೆ.
ಸನಾತನ ಸಂಸ್ಥೆಯ ನಿಜವಾದ ಪ್ರವೃತ್ತಿಯನ್ನು ಹೊರೆಡಹುತ್ತಲೇ ಪಟವರ್ಧನ್ ಸ್ವತಃ ತಾವೇ ಧೈರ್ಯದ ಧ್ವನಿಯಾಗಿದ್ದಾರೆ. ಒಂದು ದೃಶ್ಯದಲ್ಲಿ, ಸನಾತನ ಸಂಸ್ಥೆಯ ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ವಕ್ತಾರ ಎಂ. ಎಂ. ಕಲಬುರ್ಗಿ ಅವರ ಕೊಲೆಯ ನಂತರ ಪ್ರತಿಭಟನೆಗಳನ್ನು ಆಯೋಜಿಸಿದ ವಿಷಯದಲ್ಲಿ ಪಟವರ್ಧನ್ ಅವರೊಂದಿಗೆ ಜಗಳಕ್ಕೇ ಬರುತ್ತಾರೆ. ಪತ್ರಿಕಾ ಗೋಷ್ಠಿಯ ಚಿತ್ರೀಕರಣ ನಡೆಸುತ್ತಿದ್ದ ನಿರ್ದೇಶಕ ಪಟವರ್ಧನ್ ಕ್ಯಾಮರಾದ ಹಿಂದಿನಿಂದ ತಲೆ ಎತ್ತಿ ಸಿಟ್ಟಿನ ಪ್ರತಿರೋಧ ತೋರಿಸುತ್ತಾರೆ. ನಿಗೂಢವಾಗಿ ಕೊಲೆಯಾದ ಜನರ ಭಾವಚಿತ್ರಗಳಿಗೆ ಕ್ರಾಸ್ ಚಿಹ್ನೆ ಹಾಕಿ ಪೋಸ್ಟ್ ಮಾಡುವ ಸಂಸ್ಥೆಯ ವಕ್ತಾರನಿಗೆ ಅಂತಹ ಪ್ರತಿರೋಧ ತೋರಿಸುವುದು ನಿಜಕ್ಕೂ ದಿಟ್ಟತನ.

ಸಾಕ್ಷ್ಯಚಿತ್ರ ನಿಧಾನವಾಗಿ ದಲಿತ ಪ್ರತಿರೋಧಗಳು ಮತ್ತು ಅವರ ವಿರುದ್ಧ ಹೆಚ್ಚಾಗುವ ದೌರ್ಜನ್ಯಗಳ ಸುತ್ತ ತಿರುಗುತ್ತದೆ. ಊನಾದ ಪ್ರಕರಣ, ದೇಶದಾದ್ಯಂತ ದಲಿತ ಚಳವಳಿ, ಜಿಗ್ನೇಶ್ ಮೇವಾನಿ ಮೊದಲಾದ ದಲಿತ ನಾಯಕರ ಏಳಿಗೆ, ಜನಸಮೂಹ ನಾಯಕರ ಜೊತೆಗೆ ಧ್ವನಿಗೂಡಿಸಿ ದನಗಳ ಕಳೇಬರವನ್ನು ಎತ್ತದೆ ಇರಲು ನಿರ್ಧರಿಸುವುದು ಮೊದಲಾದ ವಿವರಗಳು ಇವೆ. ಸಾಕ್ಷ್ಯಚಿತ್ರದಲ್ಲಿ ಭರವಸೆಯ ಬೆಳಕು ಕಾಣುವುದು ಈ ಹಂತದಲ್ಲಿ. ಪಟವರ್ಧನ್ ಸಣ್ಣ ಶಬ್ದಗಳಲ್ಲಿಯೇ ನಿಬ್ಬೆರಗಾಗಿಸುವ ಶಕ್ತಿ ಹೊಂದಿದ್ದಾರೆ. ಒಂದು ಶಾಟ್ನಲ್ಲಿ ಚಾಣಕ್ಯನನ್ನು ‘ವಂಚಕ ಬ್ರಾಹ್ಮಣ’ ಎಂದು ಅವರು ಕರೆಯುತ್ತಾರೆ. ಶೀತಲ್ ಸಾಥೆ ಅವರು ದಲಿತ್ ಸಭಾದಲ್ಲಿ ಹಾಡಿದ ಹಾಡು ಒಂದು ಸುಂದರ ದೃಶ್ಯ.
ದಲಿತರ ಮೇಲೆ ದಮನ ನಡೆಸುವವರ ಕುರಿತು ಪರಿಣಾಮಕಾರಿಯಯಾಗಿ ಚಿತ್ರಿಸಿದ ನಂತರ ಸಾಕ್ಷ್ಯಚಿತ್ರ ಬಹುಸಂಖ್ಯಾತವಾದಿ ರಾಜಕಾರಣದ ವಿರುದ್ಧ ವಿದ್ಯಾರ್ಥಿ ಸಮುದಾಯ ತೋರಿದ ಪ್ರತಿರೋಧನ ಕಡೆಗೆ ತಿರುಗಿಕೊಳ್ಳುತ್ತದೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಕರಣಗಳನ್ನು ವಿವರವಾಗಿ ತೋರಿಸಲಾಗಿದೆ. ರೋಹಿತ್ ವೆಮುಲಾ ಆತ್ಮಹತ್ಯೆ ಮತ್ತು ಸಾಕ್ಷಿ ಪ್ರಜ್ಞೆಯನ್ನು ಎತ್ತಿ ಹಿಡಿದ ಅವರ ಆತ್ಮಹತ್ಯೆ ಪತ್ರ ಭರವಸೆಯ ಕಿರಣಗಳು. ಪಟವರ್ಧನ್ ಅವರ ಮಾಂತ್ರಿಕ ಧ್ವನಿಯಲ್ಲಿ ವೆಮುಲಾರ ಮಾತುಗಳನ್ನು ಕೇಳುವಾಗ ಮಂತ್ರಮುಗ್ಧರಾಗಿಬಿಡುತ್ತೇವೆ.
ಹಾಸ್ಯಕ್ಕೂ ಸಾಕ್ಷ್ಯಚಿತ್ರದಲ್ಲಿ ಅವಕಾಶವಿದೆ. ನಮಗೆಲ್ಲಾ ತಿಳಿದಿರುವ ಎದೆ ಉಬ್ಬಿಸಿ ಮಾತನಾಡುವ ಮಾಧ್ಯಮ ನಿರೂಪಕನೊಬ್ಬ ಉಮರ್ ಖಾಲಿದ್ ಮೇಲೆ ರೇಗಾಡುವಾಗ ಬಹಳ ಮಜವಾಗಿದೆ. ಆ ನಿರೂಪಕನ ಧ್ವನಿ ಅವನು ಮಾಡುವ ಸದ್ದಿನೊಳಗೇ ಉಡುಗಿ ಹೋಗಿದೆ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಜೈಲಿಗೆ ಹೋದ ಐವರು ಬಿಜೆಪಿ ನಾಯಕರ ಹೆಸರು ಹೇಳಿ ನೋಡೋಣ ಎಂದು ಎಬಿವಿಪಿ ನಾಯಕರಿಗೆ ಕೇಳಿದಾಗ ಅವರ ಬಾಯಿಂದ ಮಾತೇ ಹೊರಡದಂತಾಗುವ ದೃಶ್ಯ ತಮಾಷೆಯ ಜೊತೆಜೊತೆಗೇ ಸತ್ಯವನ್ನು ಹೊರಗಿಡುತ್ತದೆ.

ಸಾಕ್ಷ್ಯಚಿತ್ರ ಅಂತಿಮವಾಗಿ ದಾದ್ರಿಯ ಮೊಹಮ್ಮದ್ ಅಖ್ಲಾಕ್ ಗ್ರಾಮದತ್ತ ತೆರಳುತ್ತದೆ. ಸಮೂಹ ಸನ್ನಿಯಲ್ಲಿ ಜನರ ಗುಂಪು ಸಂಶಯದಲ್ಲೇ ವ್ಯಕ್ತಿಯ ಕೊಲೆ ಮಾಡುತ್ತಾರೆ. ಪಟವರ್ಧನ್ ಬಲಿಪಶುಗಳು ಮತ್ತು ಕೊಲೆ ಮಾಡಿದವರು ಇಬ್ಬರನ್ನೂ ತೋರಿಸುತ್ತಾರೆ. ಇಲ್ಲಿ ನಿಜಕ್ಕೂ ನಮ್ಮ ಮನಕಲಕುವ ದೃಶ್ಯವೆಂದರೆ ಭಾರತೀಯ ವಾಯುಸೇನೆಯಲ್ಲಿರುವ ಅಖ್ಲಾಕ್ನ ಮಗ ಮೊಹಮ್ಮದ್ ಸಿರಾಜ್ ಹೇಳುವ ಮಾತು. ಪಟವರ್ಧನ್ ಅವರಿಗೆ ಆತ, “ಭಾರತದಂತಹ ದೇಶ ಮತ್ತೊಂದಿಲ್ಲ, ನಾನು ಇಲ್ಲಿ ಹುಟ್ಟುವ ಅದೃಷ್ಟ ಪಡೆದಿದ್ದೇನೆ” ಎಂದು ಹೇಳುತ್ತಾನೆ.
ಒಟ್ಟಾರೆ ಹೇಳಬೇಕೆಂದರೆ ‘ರೀಸನ್’ ನಿಮ್ಮ ಕಣ್ಣೊಳಗಿನ ಸೂರ್ಯನಂತೆ. ಅಹಿತಕರ, ಆದರೆ ಸೂರ್ಯ ಇನ್ನೂ ಅಸ್ತಿತ್ವದಲ್ಲಿದ್ದಾನೆ ಎನ್ನುವ ಖಚಿತ ಭರವಸೆ ಸಿಗುತ್ತದೆ. ನಾವೆಲ್ಲರೂ ಈ ಕೂಡಲೇ ನೋಡಬೇಕಾದ ಸಾಕ್ಷ್ಯಚಿತ್ರವಿದು. ಭಾರತದ ಸಾಮಾಜಿಕ ಪರಿಸರದಲ್ಲಿ ರಿಪೇರಿ ಮಾಡಲಾಗದ ಕಂದಕಗಳನ್ನು ಸೃಷ್ಟಿಸಲು ಶತಾಯ ಗತಾಯ ಪ್ರಯತ್ನ ಮಾಡುವ ಪಡೆಗಳ ವಿರುದ್ಧ ನಮ್ಮ ವಾದವನ್ನು ಅದು ತೀಕ್ಷ್ಣಗೊಳಿಸುತ್ತದೆ.
ಲೇಖಕ ಶಾ ಆಲಂ ಖಾನ್ ಅವರು ದೆಹಲಿಯ AIIMS ನಲ್ಲಿ ಆರ್ತೋಪಿಡಿಕ್ಸ್ ವಿಷಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಮ್ಯಾನ್ ವಿದ್ ವೈಟ್ ಬೇರ್ಡ್ ಅವರ ಕೃತಿ.

ಶಾ ಆಲಂ ಖಾನ್
(ಲೇಖನದಲ್ಲಿ ವ್ಯಕ್ತಗೊಂಡಿರುವ ಅಭಿಪ್ರಾಯಗಳು ಲೇಖಕರ ವೈಯಕ್ತಿಕವಾದವು)