ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆ ಸಂದರ್ಭದಲ್ಲಿ (2008) ರಚನೆಗೊಂಡ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಫಲಿತಾಂಶದ ಬಗ್ಗೆ ಈ ಬಾರಿ ಕೂಡ ಹೆಚ್ಚಿನ ಕುತೂಹಲವೇನೂ ಇಲ್ಲ. ಏಕೆಂದರೆ ಇಲ್ಲಿ ಗೆಲ್ಲುವವರು ಯಾರು ಎಂಬುದು ಸುಲಭದ ಲೆಕ್ಕಾಚಾರ ಎನ್ನುತ್ತಾರೆ ಚುನಾವಣಾ ವಿಶ್ಲೇಷಕರು.
ಈ ಕ್ಷೇತ್ರ ಹಿಂದೆ ಹೀಗಿರಲಿಲ್ಲ, ಕನಕಪುರ ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನದ್ದೇ ಪಾರುಪತ್ಯವಾಗಿದ್ದರೂ ಸಮಬಲದ ಹೋರಾಟ ನೀಡುತ್ತಿದ್ದ ಜನತಾ ಪರಿವಾರ ಮೂರು ಬಾರಿ, ಬಿಜೆಪಿ ಒಮ್ಮೆ ಗೆದ್ದಿತ್ತು. ಎಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಮುಂತಾದ ಘಟಾಘಟಿ ನಾಯಕರ ಸ್ಪರ್ಧೆಯನ್ನು ಕಂಡಿರುವ ಮತ್ತು ಅದೇ ಕಾರಣಕ್ಕೆ ಪ್ರತಿ ಚುನಾವಣೆಯಲ್ಲಿಯೂ ರಾಜ್ಯದ ಗಮನ ಸೆಳೆಯುತ್ತಿರುವ ಈ ಕ್ಷೇತ್ರ, ಈ ಬಾರಿಯೂ ಸಾಕಷ್ಟು ಗಮನ ಸೆಳೆದಿದೆ.
ಈಗ ಬೆಂಗಳೂರು ನಗರದ ಕೆಲವು ಭಾಗ ಅಂದರೆ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಒಟ್ಟಾರೆ ನಗರ ಮತ್ತು ಗ್ರಾಮೀಣ ಭಾಗದ ವಿಧಾನಸಭಾ ಕ್ಷೇತ್ರಗಳ ಸಮ್ಮಿಲನದಿಂದ ಈ ಕ್ಷೇತ್ರ ರೂಪಗೊಂಡಿದೆ. ಈ ಕ್ಷೇತ್ರ ರಚೆನೆಗೊಂಡ ಪ್ರಾರಂಭದಲ್ಲಿ; ಎಂದರೆ 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ, ಜೆಡಿಎಸ್ನ ಎಚ್. ಡಿ. ಕುಮಾರಸ್ವಾಮಿ ಸ್ಪರ್ಧಿಸಿ, ಗೆದ್ದಿದ್ದರು. ನಂತರ ಅವರ ರಾಜೀನಾಮೆಯಿಂದಾಗಿ 2013ರಲ್ಲಿ ನಡೆದ ಉಪಚುನಾವಣೆಯಲ್ಲಿ ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನೇ ಕಣಕ್ಕಿಳಿಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.
2014ರಲ್ಲಿ ಡಿ.ಕೆ. ಸುರೇಶ್ ಕುಮಾರ್ ಗೆಲುವಿನ ಅಂತರವನ್ನು ಎರಡೂವರೆ ಲಕ್ಷಕ್ಕೆ ಹೆಚ್ಚಿಸಿಕೊಂಡಿದ್ದರು.
ಕ್ರಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಜಿದ್ದಿನ ಹೋರಾಟದಿಂದಾಗಿಯೇ ರಾಜ್ಯದ ಗಮನ ಸೆಳೆಯುತ್ತಿದ್ದ ಈ ಕ್ಷೇತ್ರದಲ್ಲಿ ಬಿಜೆಪಿಯು 2009ರಲ್ಲಿಯೇ ತನ್ನ ತಾಕತ್ತು ತೋರಿಸಿತ್ತಾದರೂ ಕಾಂಗ್ರೆಸ್ ನ ನಿದ್ರೆಗೆಡಿಸುವಲ್ಲಿ ಇದುವರೆಗೂ ಯಶಸ್ವಿಯಾಗಿಲ್ಲ. ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೇ ಒಂದಾಗಿ, ಈ ಬಾರಿ ಒಗ್ಗಟ್ಟಿನಿಂದ ಡಿ.ಕೆ. ಸುರೇಶ್ ಬೆನ್ನಿಗೆ ನಿಂತಿರುವುದರಿಂದ ‘ಮತ್ತೊಮ್ಮೆ ಮೋದಿ’ ಅಲೆ ನಡುವೆಯೂ ಬಿಜೆಪಿ ಏದುರುಸಿರು ಬಿಡುವ ಸ್ಥಿತಿಯಲ್ಲಿದೆ.
ಕ್ಷೇತ್ರ ವ್ಯಾಪ್ತಿಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರದಲ್ಲಿ ದೋಸ್ತಿಪಕ್ಷಗಳ ಶಾಸಕರಿದ್ದಾರೆ. ಅದರಲ್ಲೂ ನಾಲ್ವರು ಕಾಂಗ್ರೆಸ್ ಪಕ್ಷದವರು. ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಮಾತ್ರ ಬಿಜೆಪಿ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಆದರೂ ನಗರ ಭಾಗದ ಮತದಾರರು ಈ ಚುನಾವಣೆಯಲ್ಲಿ ಮೋದಿಯ ಕೈ ಹಿಡಿಯಲಿದ್ದಾರೆ ಎಂಬ ಭರವಸೆಯಿಂದ ಬಿಜೆಪಿ ಬಿರುಸಿನ ಪ್ರಚಾರ ನಡೆಸಿದೆ. ಸಂಸದರಾಗಿ ಕ್ಷೇತ್ರದಾದ್ಯಂತ ಓಡಾಡಿಕೊಂಡಿದ್ದ ಡಿ.ಕೆ. ಸುರೇಶ್ ಒಳ್ಳೆಯ ಕೆಲಸಗಾರ ಎಂಬ ಮೆಚ್ಚುಗೆ ಪಡೆದಿದ್ದಾರೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ನಾಯಕರೂ ಅವರನ್ನು ಹೋದಲ್ಲಿ ಬಂದಲ್ಲಿ ಅಪ್ಪಿಕೊಳ್ಳುತ್ತಿದ್ದಾರೆ.
ಆಂತರಿಕ ಕಿತ್ತಾಟದಿಂದಾಗಿ ಸೊರಗಿದಂತೆ ಕಾಣುವ ಬಿಜೆಪಿ, ಟಿಕೆಟ್ ನೀಡುವುದಕ್ಕೇ ದೊಡ್ಡ ಸರ್ಕಸ್ ಮಾಡಿತ್ತು. ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್, ಮಾಜಿ ಸಚಿವ ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್, ಕನಕಪುರದ ನಂದಿನಿಗೌಡ ಪೈಪೋಟಿಗಿಳಿದಿದ್ದರು. ಯೋಗೇಶ್ವರ್ ತಮ್ಮ ಬದಲು ಮಗಳಿಗೆ ಟಿಕೆಟ್ ನೀಡುವಂತೆ ಹಠ ಹಿಡಿದಿದ್ದರು. ಮೊದಲಿಗೆ ಟಿಕೆಟ್ ನೀಡಿದರೆ ಒಂದು ಕೈ ನೋಡುವ ಎಂದುಕೊಂಡಿದ್ದ ಮಾಜಿ ವಿಧಾನಪರಿಷತ್ ಸದಸ್ಯ ಅಶ್ವತ್ಥ್ ನಾರಾಯಣ ಈ ಒಳಜಗಳವನ್ನು ನೋಡಿ ಸುಮ್ಮನಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿ ಅವರನ್ನೇ ಕಣಕ್ಕಿಳಿಸಿತು.
ಟಿಕೆಟ್ ಹಂಚಿಕೆಯಲ್ಲಿನ ವಿಳಂಬ, ಕ್ಷೇತ್ರದ ಮತದಾರರಿಗೆ (ಬೆಂಗಳೂರು ನಗರ ಬಿಟ್ಟು) ಪರಿಚಯವಿಲ್ಲದೇ ಇರುವುದು ಅಶ್ವತ್ಥ್ ನಾರಾಯಣ ಅವರಿಗೆ ತೊಡಕಾಗಿ ಪರಿಣಮಿಸಿದೆ. ಗ್ರಾಮಾಂತರ ಭಾಗದಲ್ಲಿ ಪಕ್ಷದ ಸಂಘಟನೆ ಕೂಡ ಬಿಗಿ ಹಿಡಿತದಲ್ಲಿಲ್ಲ. ಕಳೆದ ಚುನಾವಣೆಯಲ್ಲಿ ಡಿ ಕೆ ಸುರೇಶ್ 6.52 ಲಕ್ಷ ಮತ ಪಡೆದಿದ್ದರೆ, ಜೆಡಿಎಸ್ ನ ಪ್ರಭಾಕರ ರೆಡ್ಡಿ 3.17 ಲಕ್ಷ ಮತಪಡೆದಿದ್ದರು. ಬಿಜೆಪಿಯ ಮುನಿರಾಜುಗೌಡ 4.21 ಲಕ್ಷ ಮತ ಪಡೆದಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾದರೆ 9.7 ಲಕ್ಷ ಮತಗಳಷ್ಟು ದೋಸ್ತಿಪಕ್ಷಗಳ ಪಾಲಾಗಬೇಕು. ಒಂದಿಷ್ಟು ಹೆಚ್ಚು ಕಡಿಮೆಯಾದರೂ, ಬಿಜೆಪಿಗೆ ಹತ್ತಿರ ಬರಲೇನೂ ಸಾಧ್ಯವಾಗದು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.
ಬಿಜೆಪಿ ಮೋದಿ ಸಾಧನೆಯನ್ನು, ಡಿಕೆ ಸಹೋದರರ ದಬ್ಬಾಳಿಕೆಯ ವಿಷಯನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದರೆ, ಡಿಕೆ ಸಹೋದರರು, ಮಾಡಿದ ಕೆಲಸ, ರಾಜ್ಯದ ಅಭಿವೃದ್ಧಿ ಯೋಜನೆ, ಮೇಕೆದಾಟು ಅಣೆಕಟ್ಟು ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನ ನಾಯಕರು ಒಂದಾಗಿದ್ದರೂ, ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ಈ ಎರಡೂ ಪಕ್ಷಗಳ ತಳಮಟ್ಟದ ಕಾರ್ಯಕರ್ತರಿಗೆ ಈ ಹೊಂದಾಣಿಕೆಯನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಒಕ್ಕಲಿಗರ ಮತ ಒಡೆದುಹೋಗದಂತೆ ಎಚ್ಚರಿಕೆ ಕ್ರಮಗಳನ್ನು ದೋಸ್ತಿ ಪಕ್ಷಗಳು ತೆಗೆದುಕೊಳ್ಳುತ್ತಿವೆ. ಇದರಲ್ಲಿ ಎಷ್ಟು ಯಶಸ್ವಿಯಾಗುತ್ತವೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿವೆ.
BJP.