ರಾಜ್ಯದ ದಕ್ಷಿಣ ತುತ್ತತುದಿಯ ಗುಡ್ಡಗಾಡು ಜಿಲ್ಲೆ ಚಾಮರಾಜನಗರ ಅತ್ಯಂತ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಆ ಚಹರೆ ಕಳಚಿಕೊಂಡು ಅಭಿವೃದ್ಧಿಯ ಸ್ಪರ್ಶ ಪಡೆಯುತ್ತಿದೆ. ಹಾಗಾಗಿ, ಕಾಂಗ್ರೆಸ್ಸಿನ ಭದ್ರಕೋಟೆ ಎಂದೇ ಭಾವಿಸಲಾಗಿರುವ ಕ್ಷೇತ್ರದಲ್ಲಿ ಈ ಬಾರಿ ಅಭಿವೃದ್ಧಿ ವರ್ಸಸ್ ‘ಮೋದಿ ಮತ್ತೊಮ್ಮೆ’ ನೆಲೆಯಲ್ಲಿಯೇ ಚುನಾವಣಾ ಕಣ ಕಾವೇರಿದೆ.
ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ನಡುವಿನ ಕದನ ಕಣವಾಗಿರುವ ಮೀಸಲು ಕ್ಷೇತ್ರದಲ್ಲಿ, ಕಳೆದ 2009 ಮತ್ತು 2014 ಚುನಾವಣೆಗಳಲ್ಲಿ ಬಿಜೆಪಿ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. ಈ ಬಾರಿಯೂ ಬಿಜೆಪಿ ಮತ್ತು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಳೆದ ಎರಡು ಬಾರಿ ಬಿಜೆಪಿ ಅಭ್ಯರ್ಥಿ ವಿರುದ್ಧ ಜಯಭೇರಿ ಭಾರಿಸಿ ಸಂಸದರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ಸಿನ ಆರ್ ಧ್ರುವನಾರಾಯಣ ಈ ಬಾರಿಯೂ ಕಣಕ್ಕಿಳಿದಿದ್ದು, ಹ್ಯಾಟ್ರಿಕ್ ಗೆಲುವಿಗಾಗಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯಿಂದ ಕಳೆದೆರಡು ಬಾರಿ ಅಭ್ಯರ್ಥಿಯಾಗಿ ಧ್ರುವನಾರಾಯಣ ಅವರಿಗೆ ಪೈಪೋಟಿ ನೀಡಿದ್ದ ಎ ಆರ್ ಕೃಷ್ಣಮೂರ್ತಿ ಈ ಬಾರಿ ಕಾಂಗ್ರೆಸ್ ಸೇರಿದ್ದು, ತಮ್ಮ ಮಾಜಿ ಪ್ರತಿಸ್ಪರ್ಧಿಯೊಂದಿಗೆ ಕೈಜೋಡಿಸಿದ್ದಾರೆ. ಹಾಗಾಗಿ ಬಿಜೆಪಿ ಈ ಬಾರಿ, ರಾಜಕೀಯ ನಿವೃತ್ತಿ ಘೋಷಿಸಿ ತೆರೆಮರೆಗೆ ಸರಿದಿದ್ದ ವಿ ಶ್ರೀನಿವಾಸ್ ಪ್ರಸಾದ್ ಅವರನ್ನೇ ಕಣಕ್ಕಿಳಿಸಿದೆ.
ಶ್ರೀನಿವಾಸ್ ಪ್ರಸಾದ್ ಕೂಡ 1980ರಿಂದ 99ರ ನಡುವೆ ಕಾಂಗ್ರೆಸ್ಸಿನಿಂದ ನಾಲ್ಕು ಬಾರಿ ಹಾಗೂ ಜೆಡಿಯುನಿಂದ ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದರು ಮತ್ತು ಕೇಂದ್ರದಲ್ಲಿ ಸಚಿವರಾಗಿ ವಿವಿಧ ಖಾತೆಗಳನ್ನೂ ನಿರ್ವಹಿಸಿದ ಹಿರಿಯ ನಾಯಕ. ಈಗ ಅನಾರೋಗ್ಯ ಮತ್ತು ಇಳಿವಯಸ್ಸಿನ ನಡುವೆಯೂ ಆರನೇ ಬಾರಿಗೆ ಆಯ್ಕೆ ಬಯಸಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.
ಸುಮಾರು 16.86 ಲಕ್ಷ ಮತದಾರರನ್ನು ಹೊಂದಿರುವ ಮೀಸಲು ಕ್ಷೇತ್ರದಲ್ಲಿ ಪ್ರಮುಖವಾಗಿ ಪರಿಶಿಷ್ಟ ಜಾತಿ, ಪಂಗಡ, ಬುಡಕಟ್ಟು ಸಮುದಾಯ, ಆದಿವಾಸಿಗಳು ನಿರ್ಣಾಯಕ ಬಲ ಹೊಂದಿದ್ದಾರೆ. ದಲಿತ ಸಮುದಾಯಗಳ ಬಾಹುಳ್ಯದ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯವನ್ನೂ ಹೊಂದಿರುವ ಕ್ಷೇತ್ರದಲ್ಲಿ, ಕುರುಬರು, ನಾಯಕರು ಹಾಗೂ ಉಪ್ಪಾರ ಸಮುದಾಯಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಅಲ್ಲದೆ, ಕ್ರೈಸ್ತರು ಸೇರಿದಂತೆ ಅಲ್ಪಸಂಖ್ಯಾತರ ಸಂಖ್ಯೆಯೂ ಗಣನೀಯವಾಗಿದೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಆ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ; ಚಾಮರಾಜನಗರ, ಹನೂರು, ವರುಣಾ ಹಾಗೂ ಎಚ್ ಡಿ ಕೋಟೆ, ಕಾಂಗ್ರೆಸ್ ಶಾಸಕರಿದ್ದರೆ, ಎರಡು ಕಡೆ; ಗುಂಡ್ಲುಪೇಟೆ ಹಾಗೂ ನಂಜನಗೂಡು, ಬಿಜೆಪಿ ಶಾಕರಿದ್ದಾರೆ. ಜಿಡಿಎಸ್(ಟಿ ನರಸೀಪುರ) ಹಾಗೂ ಬಿಎಸ್ಪಿ(ಕೊಳ್ಳೇಗಾಲ) ತಲಾ ಒಬ್ಬ ಶಾಸಕರನ್ನು ಹೊಂದಿವೆ.
ದೇಶದ ಲೋಕಸಭಾ ಸದಸ್ಯರಲ್ಲೆ ಕ್ಷೇತ್ರ ಅಭಿವೃದ್ಧಿ ನಿಧಿ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್ಸಿನ ಧ್ರುವನಾರಾಯಣ್, ಪ್ರಮುಖವಾಗಿ ತಮ್ಮ ಅವಧಿಯಲ್ಲಿ, ತಾವು ಪ್ರತಿಪಕ್ಷ ಸದಸ್ಯನಾಗಿದ್ದರೂ ಅತಿ ಹೆಚ್ಚು ಅನುದಾನ ತಂದು, ರಾಷ್ಟ್ರೀಯ ಹೆದ್ದಾರಿ, ಕೇಂದ್ರೀಯ ವಿದ್ಯಾಲಯ, ಏಕಲವ್ಯ ವಿಶೇಷ ಶಾಲೆಗಳ ಆರಂಭವೂ ಸೇರಿ ಮಾಡಿರುವ ಅಭಿವೃದ್ಧಿ ಕಾರ್ಯ, ಕ್ಷೇತ್ರದ ಮತದಾರರೊಂದಿಗೆ ಇರುವ ನಿರಂತರ ಸಂಪರ್ಕ ಹಾಗೂ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ. ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಳಚಿ ಅಭಿವೃದ್ಧಿಯ ಹಳಿಗೆ ತರುವ ತಮ್ಮ ಪ್ರಯತ್ನಗಳೇ ತಮಗೆ ಮತ್ತೊಂದು ಅವಕಾಶ ಕೊಡಲಿವೆ ಎಂಬ ವಿಶ್ವಾಸ ಅವರದ್ದು.
ಅದರೊಂದಿಗೆ ಕ್ಷೇತ್ರದಲ್ಲಿ ಸಾಕಷ್ಟು ಬಲ ಹೊಂದಿರುವ ಜೆಡಿಎಸ್ ಈ ಬಾರಿ ತಮ್ಮೊಂದಿಗೆ ಕೈಜೋಡಿಸಿದೆ. ಅಲ್ಲದೆ, ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಬಲ ಪೈಪೋಟಿ ನೀಡಿದ್ದ ಕ್ಷೇತ್ರದ ಪ್ರಭಾವಿ ನಾಯಕ ಎ ಆರ್ ಕೃಷ್ಣಮೂರ್ತಿ ಅವರು ಸ್ವತಃ ಕಾಂಗ್ರೆಸ್ಸಿಗೆ ಸೇರಿ, ತಮ್ಮ ಕೈ ಬಲಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ, ಪ್ರಬಲ ಮೋದಿ ಅಲೆಯ ನಡುವೆಯೂ ಕಳೆದ ಬಾರಿ ಬರೋಬ್ಬರಿ 1.41 ಲಕ್ಷ ಮತಗಳ ಅಂತರದ ಜಯ ಗಳಿಸಿರುವ ತಮಗೆ ಈ ಬಾರಿ ಹೆಚ್ಚು ಅನುಕೂಲಕರ ವಾತಾವರಣ ಇದೆ ಎಂಬ ಆಶಾಭಾವನೆ ಹೊಂದಿದ್ದಾರೆ. ಜೊತೆಗೆ, ಪ್ರಭಾವಿ ನಾಯಕರಾದ ಸಿದ್ದರಾಮಯ್ಯ, ಎಚ್ ಸಿ ಮಹದೇವಪ್ಪ ಮತ್ತಿತರರು ಧ್ರವ ನಾರಾಯಣ ಪರ ಒಗ್ಗಟ್ಟಿನ ಪ್ರಚಾರ ನಡೆಸಿದ್ದಾರೆ.
ಮತ್ತೊಂದು ಕಡೆ; ಟಿಕೆಟ್ ಆಕಾಂಕ್ಷಿಗಳ ತೀವ್ರ ಪೈಪೋಟಿ, ಗುಂಪುಗಾರಿಕೆ ಮತ್ತು ಭಿನ್ನಮತದ ನಡುವೆ ಅಚ್ಚರಿ ಎಂಬಂತೆ ಬಿಜೆಪಿ ಹೈಕಮಾಂಡ್ ಹಿರಿಯ ನಾಯಕ ವಿ ಶ್ರೀನಿವಾಸ ಪ್ರಸಾದ್ ಅವರನ್ನೇ ಕಣಕ್ಕಿಳಿಸಿದೆ. ಆ ಮೂಲಕ ಪಕ್ಷದೊಳಗಿನ ಭಿನ್ನಮತ ಶಮನ ಮತ್ತು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಗುರಿ ಸಾಧಿಸಿದೆ. ಆದರೆ ಅನಾರೋಗ್ಯದ ಕಾರಣದಿಂದಲೇ ಸಕ್ರಿಯ ರಾಜಕಾರಣದಿಂದ ಬದಿಗೆ ಸರಿದಿದ್ದ ಪ್ರಸಾದ್ ಅವರಿಗೆ ಪ್ರಚಾರ ಮತ್ತು ಪ್ರವಾಸವೇ ಪ್ರಾಯಾಸದಾಯಕವಾಗಿದೆ. ಆದರೆ, ಮತ್ತೊಮ್ಮೆ ಮೋದಿ ಅಲೆ ಹಾಗೂ ಈ ಹಿಂದೆ ಸಂಸದರಾಗಿ ತಾವು ಹೊಂದಿದ್ದ ಜನಪ್ರಿಯತೆಯನ್ನೇ ನೆಚ್ಚಿ ಅವರು, ಮತದಾರನ ಆಶೀರ್ವಾದದ ನಿರೀಕ್ಷೆಯಲ್ಲಿದ್ದಾರೆ.
ಅಲ್ಲದೆ ಕಳೆದ ಬಾರಿ ಕ್ಷೇತ್ರದ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವುದರಲ್ಲೂ ತನ್ನ ಖಾತೆ ತೆರೆಯದೇ ಇದ್ದ ಬಿಜೆಪಿ, ಇದೀಗ ಎರಡು ಕ್ಷೇತ್ರಗಳಲ್ಲಿ ತನ್ನ ಶಾಸಕರನ್ನು ಹೊಂದಿದೆ. ಜೊತೆಗೆ ವರುಣಾ ಸೇರಿದಂತೆ ಕೆಲವು ಕ್ಷೇತ್ರಗಲ್ಲಿ ಬಿಜೆಪಿ ಇದೀಗ ಸಾಕಷ್ಟು ಬಲವೃದ್ಧಿಸಿಕೊಂಡಿದೆ. ಆ ಹಿನ್ನೆಲೆಯಲ್ಲಿ ಪ್ರಸಾದ್ ಅವರಿಗೆ ಈ ಹಿಂದಿನ ಲೋಕಸಭಾ ಚುನಾವಣೆಗಿಂತ ಹೆಚ್ಚಿನ ಬೆಂಬಲ ಇದೆ ಎನ್ನಲಾಗುತ್ತಿದೆ. ಅದೇ ಹೊತ್ತಿಗೆ ಕಳೆದ ಬಾರಿ ಏಳು ಕಡೆ ತನ್ನ ಶಾಸಕರನ್ನು ಹೊಂದಿದ್ದ ಕಾಂಗ್ರೆಸ್, ಈ ಬಾರಿ ಕೇವಲ ನಾಲ್ಕು ಕಡೆ ಮಾತ್ರ ತನ್ನ ಶಾಸಕರನ್ನು ಹೊಂದಿದ್ದು, ಒಂದು ಕಡೆ ಮಿತ್ರ ಜೆಡಿಎಸ್ ಶಾಸಕರಿದ್ದಾರೆ. ಅಲ್ಲದೆ, ಒಂದು ಕ್ಷೇತ್ರದಲ್ಲಿ ಶಾಸಕರನ್ನೂ ಹೊಂದಿರುವ ಬಿಎಸ್ ಪಿ ಕೂಡ ಡಾ. ಎಂ ಶಿವಕುಮಾರ್ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಅದು ಕೂಡ ಸಾಕಷ್ಟು ಮತಗಳನ್ನು ಕಿತ್ತುಕೊಳ್ಳಲಿದೆ. ಬಿಎಸ್ ಪಿ ಹೆಚ್ಚು ಮತ ಕಿತ್ತಷ್ಟೂ ಕಾಂಗ್ರೆಸ್ಸಿಗೆ ಪೆಟ್ಟು ಎಂಬುದು ಸರಳ ಲೆಕ್ಕಾಚಾರ.
ಬಹುಸಂಖ್ಯಾತ ದಲಿತ ಮತಗಳು ವ್ಯಕ್ತಿಗತವಾಗಿ ಹರಿಯಲಿವೆಯೇ ಅಥವಾ ಪಕ್ಷ-ಸಿದ್ಧಾಂತ ನೋಡಿ ಹರಿಯಲಿವೆಯೇ ಎಂಬುದು ಈ ಬಾರಿಯ ನಿರ್ಣಾಯಕ ಅಂಶವಾಗಿದ್ದು, ತಮ್ಮ ಮತ್ತು ಮೋದಿಯವರ ವೈಯಕ್ತಿಕ ವ್ಯಕ್ತಿತ್ವ ಹಾಗೂ ವರ್ಚಸ್ಸು ನೋಡಿ ದಲಿತರು ತಮ್ಮೊಂದಿಗೇ ನಿಲ್ಲುತ್ತಾರೆ ಎಂಬ ವಿಶ್ವಾಸ ಶ್ರೀನಿವಾಸ ಪ್ರಸಾದ್ ಅವರದ್ದಾದರೆ, ತಮ್ಮ ಪಕ್ಷದ ದಲಿತರು-ಹಿಂದುಳಿದವರ ಪರ ನೀತಿ-ನಿಲುವು ಹಾಗೂ ವೈಯಕ್ತಿಕವಾಗಿ ತಾವು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ತಂದಿರುವ ಬದಲಾವಣೆಗಾಗಿ ಈ ಬಾರಿ ಮತದಾರ ಮತ್ತೊಮ್ಮೆ ಆಶೀರ್ವದಿಸುತ್ತಾನೆ ಎಂಬ ಭರವಸೆ ಧ್ರುವನಾರಾಯಣ ಅವರದ್ದು.
ವಿಶ್ವಾಸ ಮತ್ತು ಭರವಸೆಗಳ ನಡುವೆ, ಹೊಯ್ದಾಡುತ್ತಿರುವ ರಾಜ್ಯದ ತುತ್ತತುದಿಯ ಕ್ಷೇತ್ರದಲ್ಲಿ ಸದ್ಯಕ್ಕಂತೂ ನೇರ ಹಣಾಹಣಿ ಇದ್ದು, ಮತದಾರರ ಮನವೊಲಿಸುವ ತುರುಸಿನ ಪೈಪೋಟಿ ಕಾಣುತ್ತಿದೆ.
ಈ ಬಾರಿ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಬಿಎಸ್ಪಿ ಜಯಭೇರಿ ಗಳಿಸಲಿ. ..