ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಮೊಳಕಾಲ್ಮೂರು (ಬಿಜೆಪಿ), ಚಳ್ಳಕೆರೆ(ಕಾಂಗ್ರೆಸ್), ಚಿತ್ರದುರ್ಗ(ಬಿಜೆಪಿ), ಹಿರಿಯೂರು(ಬಿಜೆಪಿ), ಹೊಸದುರ್ಗ(ಬಿಜೆಪಿ), ಹೊಳಲ್ಕೆರೆ (ಬಿಜೆಪಿ), ನೆರೆಯ ತುಮಕೂರು ಜಿಲ್ಲೆಯ ಸಿರಾ(ಜೆಡಿಎಸ್), ಪಾವಗಡ(ಕಾಂಗ್ರೆಸ್) ಸೇರಿದಂತೆ ಒಟ್ಟು 8 ವಿಧಾನನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಹಿನ್ನೆಲೆ:
ಇದುವರೆಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
1952ರಲ್ಲಿ ಕಾಂಗ್ರೆಸ್ನ ಎಸ್.ನಿಜಲಿಂಗಪ್ಪ, 1957 ರಲ್ಲಿ ಪ್ರಜಾ ಸೋಶಿಯಲಿಸ್ಟ್ ಪಕ್ಷದ ಜೆ.ಎಂ.ಮಹಮದ್ ಇಮಾಂ, 1962ರಲ್ಲಿ ಕಾಂಗ್ರೆಸ್ನ ಎಸ್.ವೀರಬಸಪ್ಪ, 1967 ರಲ್ಲಿ ಸ್ವತಂತ್ರ ಪಾರ್ಟಿಯಿಂದ ಜೆ.ಎಂ.ಮಹ್ಮದ್ ಇಮಾಂ, 1971ರಲ್ಲಿ ಎನ್ಪಿಜೆ ಕೊಂಡಜ್ಜಿ ಬಸಪ್ಪ, 1977 ರಲ್ಲಿ ಕೆ.ಮಲ್ಲಣ್ಣ ಕಾಂಗ್ರೆಸ್, 1980ರಲ್ಲಿ ಕಾಂಗ್ರೆಸ್ ಕೆ.ಮಲ್ಲಣ್ಣ, 1984ರಲ್ಲಿ ಕಾಂಗ್ರೆಸ್ನ ಕೆ.ಎಚ್.ರಂಗನಾಥ್ 1989 ಮತ್ತು 1991ರಲ್ಲಿ ಕಾಂಗ್ರೆಸ್ ಸಿ.ಪಿ.ಮೂಡಲ ಗಿರಿಯಪ್ಪ, 1996 ರಲ್ಲಿ ಜನತಾದಳದ ಪಿ. ಕೋದಂಡರಾಮಯ್ಯ, 1998ರಲ್ಲಿ ಮತ್ತೆ ಸಿ.ಪಿ.ಮೂಡಲಗಿರಿಯಪ್ಪ, 1999ರಲ್ಲಿ ಜನತಾದಳದ ಯು ಶಶಿಕುಮಾರ್,2004ರಲ್ಲಿ ಕಾಂಗ್ರೆಸ್ ಎನ್.ವೈ.ಹನುಮಂತಪ್ಪ, 2009ರಲ್ಲಿ ಬಿಜೆಪಿಯ ಜನಾರ್ಧನಸ್ವಾಮಿ ಹಾಗೂ 2014ರಲ್ಲಿ ಕಾಂಗ್ರೆಸಿನಿಂದ ಬಿ.ಎನ್. ಚಂದ್ರಪ್ಪಆಯ್ಕೆಯಾಗಿದ್ದಾರೆ.
ಪ್ರಸಕ್ತ 2019ರ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಬಿ.ಎನ್.ಚಂದ್ರಪ್ಪ ಹಾಗೂ ಬಿಜೆಪಿಯ ಎ.ನಾರಾಯಣಸ್ವಾಮಿ ನಡುವೆ ನೇರ ಹಣಾಹಣಿ ಇದೆ. ಚುನಾವಣೆಯಲ್ಲಿ ಸ್ಥಳೀಯ ವಿಷಯಗಳಾಗಿ ಭದ್ರಾ ಮೇಲ್ದಂಡೆ ಹಾಗೂ ನೇರ ರೈಲ್ವೆ ಮಾರ್ಗ ಯೋಜನೆಗಳಿದ್ದರೂ ಅದು ಚುನಾವಣೆಯಲ್ಲಿ ಮತಗಳಿಕೆಯ ಪರವಾಗಿಯೋ, ವಿರೋಧವಾಗಿಯೋ ಕೆಲಸ ಮಾಡುವುದು ಅನುಮಾನ. ಹೀಗಾಗಿ ಬಿಜೆಪಿ ಮೋದಿ ಅಲೆಯ ಬೆನ್ನು ಹತ್ತಿದ್ದರೆ, ಕಾಂಗ್ರೆಸ್ ಯುಪಿಎ ಅವಧಿಯಲ್ಲಿ ಹಾಗೂ ಸಿದ್ದರಾಮಯ್ಯ ಅವಧಿಯಲ್ಲಾದ ಯೋಜನೆಗಳನ್ನು ನಂಬಿಕೊಂಡಿದೆ.
ಕ್ಷೇತ್ರದ ಇತಿಹಾಸ ಗಮನಿಸಿದಾಗ ಅತಿ ಹೆಚ್ಚು ಬಾರಿ ಕಾಂಗ್ರೆಸ್ಗೆ ಒಲಿದ ಹೆಗ್ಗಳಿಕೆ ಇದೆ. 1996ರ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪ್ರತಿಸ್ಪರ್ಧಿ ಪಕ್ಷಗಳ ಜತೆ ಸೋಲು ಗೆಲುವಿನ ಏಣಿಯಾಟ ಆಡುತ್ತಲೇ ಬಂದಿದೆ. ಹಾಲಿ ಸಂಸದ ಬಿ.ಎನ್.ಚಂದ್ರಪ್ಪ ತಮ್ಮ ಸಜ್ಜನಿಕೆಯ ಇಮೇಜು ಹಾಗೂ ಮೈತ್ರಿಬಲದ ಕಾರಣದಿಂದ ತಮ್ಮ ಬಲ ಹೆಚ್ಚಿಸಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಮೋದಿ ಅಲೆಯ ತಳಹದಿ ಮೇಲೆ ನಿಂತಿದ್ದಾರೆ.
ಇತರ ಕ್ಷೇತ್ರಗಳಲ್ಲಿರುವಂತೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯಗಳು ಇಲ್ಲದಿರುವುದು ಕಾಂಗ್ರೆಸ್ಗೆ ವರದಾನವಾಗಿದೆ. ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇರುವುದು ಬಿಜೆಪಿಗೆ ವರದಾನ ವಾಗಿದೆ. ಲೋಕಸಭಾ ಕ್ಷೇತ್ರದ ಎಲ್ಲ ಪಕ್ಷದ ಶಾಸಕರೂ ತಮ್ಮ ತಮ್ಮ ಕ್ಷೇತ್ರ ದಲ್ಲಿ ಲೀಡ್ ಕೊಡಬೇಕಾದ ಪರೋಕ್ಷ ಒತ್ತಡಕ್ಕೆ ಸಿಲುಕಿದ್ದು, ಅಘೋಷಿತ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ವಿಶೇಷವಾಗಿ ಲೋಕಸಭಾ ವ್ಯಾಪ್ತಿಯಲ್ಲಿರುವ ಐದು ಬಿಜೆಪಿ ಶಾಸಕರಿಗೆ ತಮ್ಮ ಪ್ರಾಬಲ್ಯ ತೋರಿಸಬೇಕಾದ ಸವಾಲು ಇದ್ದರೆ, ಕಾಂಗ್ರೆಸ್ನ ಇಬ್ಬರು ಹಾಗೂ ಜೆಡಿಎಸ್ ಒಬ್ಬರು ಶಾಸಕರಿಗೂ ಇದೇ ತೆರನಾದ ಒತ್ತಡ ಇದ್ದು, ಕ್ಷೇತ್ರ ದಿನದಿನಕ್ಕೂ ಕಾವೇರುತ್ತಿದೆ.
ಕಳೆದ ಬಾರಿ ಕಾಂಗ್ರೆಸ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಒಟ್ಟು ಐದು ಶಾಸಕರ ಬೆಂಬಲ ಶ್ರೀರಕ್ಷೆಯಾಗಿತ್ತು. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನೊಳಗೊಂಡಂತೆ ಇಬ್ಬರು ಕಾಂಗ್ರೆಸ್ ಹಾಗೂ ಒಬ್ಬರು ಮಿತ್ರ ಪಕ್ಷದ ಜೆಡಿಎಸ್ ಶಾಸಕರು ಇದ್ದಾರೆ. ಆದರೆ, ಶಾಸಕರ ಬಲದ ಕೊರತೆ ಕಾಡದಿರುವಷ್ಟು ಮೈತ್ರಿಬಲ ಕಾಂಗ್ರೆಸ್ಗೆ ಒತ್ತಾಸೆಯಾಗಿ ನಿಂತಿದೆ. ಕಳೆದ ಸಲ ಇಬ್ಬರು ಶಾಸಕರ ಬಲದಲ್ಲಿ ಮಾತ್ರ ಅಖಾಡಕ್ಕಿಳಿದಿದ್ದ ಬಿಜೆಪಿ ಈಗ ಐದು ಶಾಸಕರ ಬೆಂಬಲದೊಂದಿಗೆ ಅಖಾಡಕ್ಕಿಳಿದಿದೆ.
ಲೋಕಸಭೆಯಲ್ಲಿ ಜಾತಿ ಸಮೀಕರಣವೂ ಒಂದು ಮಟ್ಟಿಗೆ ನಡೆಯುತ್ತಿದೆ. ಪ್ರಮುಖವಾಗಿ ಅಭ್ಯರ್ಥಿಗಳಿಬ್ಬರೂ ಎಡಗೈ ಸಮುದಾಯದವರೇ ಆಗಿರುವುದರಿಂದ ಮಾದಿಗ ಸಮುದಾಯದ ಓಟು ಯಾರು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುತ್ತಾರೆ? ಎನ್ನುವ ಜಿಜ್ಞಾಸೆ ಇದೆ. ಕಾಂಗ್ರೆಸ್ಗೆ ಅಹಿಂದ ಮತಗಳಿಕೆಯ ವಿಶ್ವಾಸವಿದ್ದರೆ, ಬಿಜೆಪಿಗೆ ಮೇಲ್ಜಾತಿಗಳೇ ನಿರ್ಣಾಯಕವಾಗಿರುವ ಕ್ಷೇತ್ರಗಳ ಭರವಸೆ ಇದೆ. ಈ ನಡುವೆ ಮೋದಿ ಅಲೆ ಜಾತಿ ಮೀರಿ ಪ್ರಭಾವ ಬೀರಲಿದೆ ಎನ್ನುವ ಲೆಕ್ಕಾಚಾರದಲ್ಲಿದೆ.
ಆಡಳಿತ ವಿರೋಧಿ ಅಲೆ: ಆಡಳಿತ ವಿರೋಧಿ ಅಲೆ ಅಂದಾಕ್ಷಣ ಅದು ರಾಜ್ಯದ್ದೋ, ಕೇಂದ್ರದ್ದೋ ಆಗಿರಬೇಕಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯಾ ಕ್ಷೇತ್ರಗಳಲ್ಲಿ ಮತದಾರರ ಅಮಿತ ಭರವಸೆ ಯಿಂದ ಆಯ್ಕೆಯಾದ ಶಾಸಕರು ಅವರ ನಿರೀಕ್ಷೆಗಳನ್ನು ದಯನೀಯವಾಗಿ ಸೋಲಿಸುತ್ತಿರುವ ಬಗ್ಗೆ ವ್ಯಾಪಕ ಅಸಮಾಧಾನ ಎದ್ದಿದೆ. ಇದೂ ಕೂಡಾ ಒಂದು ಪ್ರಮುಖಾಂಶವಾಗಿ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರಲಿದೆ.
ಸದಾಶಿವ ವರದಿ ವಿಷಯ
ಚಿತ್ರದುರ್ಗ ಲೋಕಸಭೆಯಲ್ಲಿ ಲಾಗಾಯ್ತಿನಿಂದಲೂ ಹೆಚ್ಚು ಸುದ್ದಿ ಮಾಡಿದ ಕ್ಷೇತ್ರವಲ್ಲ. ಆದರೆ, ಈ ಬಾರಿ ಸದಾಶಿವ ಆಯೋಗದ ವರದಿ ನೆಲೆಯಲ್ಲಿ ಹೆಚ್ಚು ಚರ್ಚೆಗೆ ಗ್ರಾಸವೊದಗಿಸಿರುವ ಕ್ಷೇತ್ರವಾಗಿದೆ. ನ್ಯಾ.ಸದಾಶಿವ ವರದಿಗೆ ಪ್ರತಿರೋಧ ಒಡ್ಡುತ್ತಿರುವ ಜಾತಿಗಳು ಈ ಬಾರಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿವೆ. ಅಷ್ಟು ಮಾತ್ರವಲ್ಲ, ನ್ಯಾ.ಸದಾಶಿವ ಆಯೋಗದ ವರದಿ ಸ್ವೀಕರಿಸಿ, ಅದರ ಜಾರಿಗೆ ಪ್ರಯತ್ನಿಸಿದರು ಎನ್ನುವ ಕಾರಣಕ್ಕೆ ಎ.ನಾರಾಯಣಸ್ವಾಮಿಗೆ ನೇರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಬಿ.ಎನ್.ಚಂದ್ರಪ್ಪ ಸಹಾ ಮಾದಿಗ ಸಮುದಾಯಕ್ಕೆ ಸೇರಿದ್ದರೂ ಮೃದು ಆಯ್ಕೆ(ಸಾಫ್ಟ್ ಚಾಯ್ಸ್) ಎನ್ನುವ ಕಾರಣಕ್ಕೆ ಒಲವು ತೋರಿಸುತ್ತಿದ್ದಾರೆ. ಆದರೆ, ಈ ಅಂಶ ತಳಹಂತದಲ್ಲಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎನ್ನುವ ಜಿಜ್ಞಾಸೆ ಇದ್ದೇ ಇದೆ.
ಚಿತ್ರದುರ್ಗದಲ್ಲಿ ಏ.9 ರಂದು ನಡೆದ ಪ್ರಧಾನಿ ಮೋದಿ ರ್ಯಾಲಿ ಬಿಜೆಪಿ ಅಭ್ಯರ್ಥಿಗೆ ಭಾರೀ ಬೆಂಬಲ ತಂದುಕೊಡುತ್ತದೆ ಎಂದು ನಂಬಲಾಗಿತ್ತು. ಆದರೆ ಅಂತಹ ಯಾವುದೇ ಬದಲಾವಣೆ ಈ ರ್ಯಾಲಿ ತರದೇ ಇರುವುದು ಬಿಜೆಪಿಯಲ್ಲಿ ಸಹ ಒಂದು ಮಟ್ಟಿಗಿನ ಅಸಮಧಾನಕ್ಕೆ ಕಾರಣವಾಗಿದೆ
ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಕಾಂಗ್ರೆಸ್ 4,67,372 (42.6%) ಮತ ಗಳಿಸಿದ್ದರೆ, ಬಿಜೆಪಿಯ ಜನಾರ್ಧನಸ್ವಾಮಿ 3,66,220 (33.4%) ಹಾಗೂ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಿದ್ದ ಗೂಳಿಹಟ್ಟಿ ಡಿ.ಶೇಖರ್ ಜೆಡಿಎಸ್ 2,02,108 ಮತಗಳನ್ನು ಗಳಿಸಿದ್ದರು.
ಪ್ರಸ್ತುತ ಚುನಾವಣೆಯಲ್ಲಿ ಪುರುಷ- 8,89,274 ಮಹಿಳೆ- 8,71,009, ಇತರೆ-104, ಒಟ್ಟು- 17,60,389 ಮತದಾರರಿದ್ದಾರೆ. 2014ರ ಚುನಾವಣೆಯಲ್ಲಿದ್ದ ಮತದಾರರ ಸಂಖ್ಯೆಗಿಂತ ಸದ್ಯ 1,27,345 ಮತದಾರರು ಹೆಚ್ಚಾಗಿದ್ದಾರೆ.