ಕಾಂಗ್ರೆಸ್ ಮತ್ತು ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಬಗ್ಗೆ ಈಗಾಗಲೇ ಸಾಕಷ್ಟು ಜನರು ಬರೆದಿದ್ದಾರೆ. ಹಾಗಾಗಿ ನಾನು ಹೆಚ್ಚೇನೂ ಬರೆಯುವುದಿಲ್ಲ. ಆ ಎರಡೂ ಪಕ್ಷಗಳು ರಾಷ್ಟ್ರ ಹಿತದೃಷ್ಟಿಯಿಂದ ಕಾನೂನಿಗೆ ತಿದ್ದುಪಡಿ ತರಬೇಕೆಂದು ಹೇಳಿಕೊಂಡಿರುವ ಎರಡು ವಿಚಾರಗಳನ್ನು ಮಾತ್ರ ಇಲ್ಲಿ ಹೇಳಬೇಕೆಂದುಕೊಂಡಿದ್ದೇನೆ.
ಎರಡೂ ಪಕ್ಷಗಳು ಕಾಶ್ಮೀರದ ಪ್ರಸ್ತಾವವನ್ನು ತಮ್ಮ ಪ್ರಣಾಳಿಕೆಯಲ್ಲಿ ತಂದಿವೆ.
ಜಮ್ಮು ಕಾಶ್ಮೀರಕ್ಕೆ ಸಂವಿಧಾನವು ಕೊಡಮಾಡಿರುವ ವಿಶೇಷ ರಾಜ್ಯದ ಸ್ಥಾನಮಾನವನ್ನು ರದ್ದು ಮಾಡುವುದಾಗಿ ಬಿಜೆಪಿ ಹೇಳಿಕೊಂಡಿದೆ. ಇದು ಮತದಾರರ ಕಿವಿ ಮೇಲೆ ಇಡುತ್ತಿರುವ ಹೂ ಎಂಬುದು ಅದಕ್ಕೂ ಗೊತ್ತಿದೆ. ಏಕೆಂದರೆ ಅದನ್ನು ರದ್ದು ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕೆ ಅನೇಕ ಕಾನೂನು ಮತ್ತು ಸಾಂವಿಧಾನಿಕÀ ತೊಡಕುಗಳಿವೆ.
ಅಷ್ಟಕ್ಕೂ ಬಿಜೆಪಿಗೆ ಕಾಶ್ಮೀರಿಗಳು ಬೇಡ. ಆದರೆ ಕಾಶ್ಮೀರದ ಭೂಭಾಗ ಮಾತ್ರ ಬೇಕು. ಈಗಿರುವ ಕಾನೂನಿನಲ್ಲಿ ಕಾಶ್ಮೀರದ ಹೊರಗಿನ ಜನರು ಅಲ್ಲಿ ಭೂಮಿ ಖರೀದಿಸುವಂತಿಲ್ಲ. ಬಹುಶಃ ಮೋದಿಯ ಗೆಣೆಕಾರ ಅದಾನಿಯಂತವರಿಗೆ ಅಲ್ಲಿ ಭೂಮಿ ಕೊಡಿಸಿ ಅಲ್ಲೇನಾದರೂ ಉದ್ದಿಮೆ ಸ್ಥಾಪಿಸುವ ಹುನ್ನಾರವೂ ಇದ್ದೀತು. ನಮ್ಮ ಕಡೆ ಒಂದು ಒಂದು ಗಾದೆ ಮಾತಿದೆ ‘ಲಾಭ ಇಲ್ಲದೆ ಶೆಟ್ಟಿ ಬೊಳ್ಳ ಹೋಗಲಾರ’! ಚತ್ತಿಸ್ ಗಡದ ಹಸಿರುವಲಯದ 1,70,000 ಹೆಕ್ಟೇರ್ ಪ್ರದೇಶದ ಕಾಡಿನಲ್ಲಿ ಗಣಿಗಾರಿಕೆಗೆ ಅದಾನಿ ಗ್ರೂಪ್ ಗೆ ಇದೇ ಫೆಬ್ರವರಿಯಲ್ಲಿ ಕೊಟ್ಟಿರುವುದನ್ನು ಮರೆಯಲಾದೀತೇ? ಇದೇ ಅದಾನಿಯನ್ನು ಪುಟ್ಟ ಪುಟ್ಟ ಮಕ್ಕಳೂ ಸೇರಿದಂತೆ ಇಡೀ ಆಷ್ಟ್ರೇಯಲಿಯವೇ ಪ್ರತಿಭಟಿಸಿತ್ತು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಕಾಶ್ಮಿರಿಗಳಿಗೆ ಪಾಕಿಸ್ತಾನವನ್ನು ಇಲ್ಲವೇ ಭಾರತದೊಡನೆ ಸೇರಿಕೊಳ್ಳುವ ಆಯ್ಕೆ ಅವರ ಮುಂದಿತ್ತು. ಆದರೆ ಅವರು ತಾವು ಯಾವುದನ್ನೂ ಆಯ್ಕೆ ಮಾಡಿಕೊಳ್ಳದೆ ಸ್ವತಂತ್ರವಾಗಿರಲು ಬಯಸಿದರು. ಆದರೆ ಪಾಕಿಸ್ತಾನ ತಮ್ಮ ಮೇಲೆ ಏರಿ ಬಂದಾಗ ಅವರು ಭಾರತದ ಸಹಾಯವನ್ನು ಕೇಳಿದರು. ಈಗ ಜಮ್ಮು ಕಾಶ್ಮೀರ ಭಾರತದ ಭಾಗ. ನಮ್ಮ ದೇಶದ 29 ರಾಜ್ಯಗಳಲ್ಲಿ ಅದೂ ಒಂದು. ಜೊತೆ ಜೊತೆಗೆ ಕಾಶ್ಮೀರಿಗಳು ತಮ್ಮ ‘ಕಾಶ್ಮೀರಿಯತ್’ ಅನ್ನು ಉಳಿಸಿಕೊಂಡಿದ್ದಾರೆ.
ಬಾಲ್ಯದಲ್ಲಿ ಸೇನೆ ತನ್ನ ಮೇಲೆ, ತನ್ನ ಹೆತ್ತವರ ಮೇಲೆ ನಡೆಸಿದ ದೌರ್ಜನ್ಯದಿಂದಾಗಿ ಕೈಗೆ ಗನ್ ಮತ್ತು ಕಲ್ಲುಗಳನ್ನು ಎತ್ತಿಕೊಂಡ ಹಲವು ಕಾಶ್ಮೀರಿಗಳಿದ್ದಾರೆ. ಪುಲ್ವಾಮ ಘಟನೆಯಲ್ಲಿ ತನ್ನನ್ನು ಸ್ಪೋಟಿಸಿಕೊಂಡ ಯುವಕನಿಗೆ ಅಂತಹದೊಂದು ಕಹಿ ಬಾಲ್ಯ ಇತ್ತೆಂಬುದು ವರದಿಗಳಿಂದ ತಿಳಿದುಬಂದಿದೆ.
ಸಂವಿಧಾನದ 370 ನೇ ವಿಧಿಯನ್ವಯ ಕಾಶ್ಮೀರಕ್ಕೆ ಕೊಡಮಾಡಿರುವ ವಿಷೇಶ ಸವಲತ್ತುಗಳನ್ನು ರದ್ದು ಮಾಡುವುದಾಗಿ ಬಿಜೆಪಿ ಹೇಳಿದರೆ ತಾನು ಅಧಿಕಾರಕ್ಕೆ ಬಂದರೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದಾಗಿ ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಜಮ್ಮು ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಸೇನೆಗೆ ಇರುವ ಪರಮಾಧಿಕಾರದ ಬಗ್ಗೆಯೂ ತಂತಮ್ಮ ಪ್ರಣಾಳಿಕೆಯಲ್ಲಿ ಹೇಳಿಕೊಂಡಿವೆ.
ಮಣಿಪುರ, ಮೇಘಾಲಯ, ನಾಗಲ್ಯಾಂಡ್, ತ್ರಿಪುರ, ಹಿಮಾಚಲ ಪ್ರದೇಶ.ಅಸ್ಸಾಂ, ಮಿಜೋರಾಂ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಸೇನೆಗೆ ಪರಮಾಧಿಕಾರವಿದೆ. ಇದನ್ನು ಸಶಸ್ತ್ರ ಪಡೆಗಳ ವಿಶೇಶ ಅಧಿಕಾರ ಕಾಯ್ದೆ- ಅಪ್ಸಾ [ Armed Forces Special power act- 1952) –ಎಂದು ಕರೆಯಲಾಗುತ್ತದೆ . ಈ ರಾಜ್ಯಗಳಲ್ಲಿರುವ ಬಂಡುಕೋರ ಸಂಘಟನೆಗಳಿಗೆ ನಮ್ಮ ಗಡಿಯನ್ನು ಹಂಚಿಕೊಂಡಿರುವ, ಪಾಕಿಸ್ತಾನ, ಚೀನಾ, ಮಯನ್ಮಾರು, ನೇಪಾಳ. ಬಾಂಗ್ಲಾ ಮುಂತಾದ ಕಡೆಗಳಿಂದ ಶಸ್ತ್ರಾಸ್ತ್ರಗಳ ಪೂರೈಕೆಯಾಗುತ್ತದೆ. ಹಾಗಾಗಿ ಸೇನೆ ಇಲ್ಲಿ ಮೈಯ್ಯೆಲ್ಲಾ ಕಣ್ಣಾಗಿರುತ್ತದೆ. ಸೇನೆಗೆ ಯಾರ ಮೇಲಾದರೂ ದೇಶ ದ್ರೋಹಿಗಳು, ಸಮಾಜ ಘಾತುಕರು, ಉಗ್ರಗಾಮಿಗಳೆಂದು ಶಂಕೆ ಉಂಟಾದಲ್ಲಿ ಎಲ್ಲಿಗೆ ಬೇಕಾದರೂ ನುಗ್ಗಿ ವಾರಂಟ್ ಇಲ್ಲದೆ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಬಹುದು.. ಶಂಕೆಗೊಳಗಾದವರನ್ನು ಗುಂಡು ಹೊಡೆದು ಕೊಂದರೂ ಅದನ್ನು ಯಾರೂ ಪ್ರಶ್ನಿಸಲಾರರು. ಈ ಅಧಿಕಾರ ಬಲದಿಂದ ಸೇನಾ ಪಡೆಗಳು ಅಲ್ಲಿನ ಜನರ ಮೇಲೆ ದೌರ್ಜನ್ಯವೆಸಗಿದ, ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಎಷ್ಟೋ ಉದಾಹರಣೆಗಳಿವೆ.

ನಿಮಗೆ ನೆನಪಿರಬಹುದು. ಇರೋಮ್ ಶರ್ಮಿಳಾ ಎಂಬ 28 ವರ್ಷದ ಯುವತಿ ಇದೇ ಅಪ್ಸಾ ಕಾನೂನನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಳು. ತನ್ನ ಬದುಕಿನ ಗುಣಾತ್ಮಕವಾದ ಹದಿನೇಳು ವರ್ಷಗಳನ್ನು ಈಕೆ ಜೈಲಿನಲ್ಲಿ ಕಳೆದಿದ್ದಳು.
2004 ರಲ್ಲಿ ಮಣಿಪುರದ ಮಹಿಳೆಯರು ತಮ್ಮ ಮೇಲೆ ಸೇನೆ ಎಸಗುತ್ತಿದ್ದ ಅತ್ಯಾಚಾರವನ್ನು ವಿರೋಧಿಸಿ ಅಸ್ಸಾಂ ರೈಫಲ್ಸ್ ನ 17ನೇ ಬೆಟಾಲಿಯನ್ ನ ಕೇಂದ್ರದೆದುರು ಬೆತ್ತಲೆ ಪ್ರತಿಭಟನೆ ನಡೆಸಿದ್ದರು. ‘Indian Army Rape US! ’ (ಭಾರತದ ಸೈನ್ಯವೇ ನಮ್ಮನ್ನು ಬಲಾತ್ಕರಿಸು) ‘Indian Army Take Our Flesh (ಭಾರತದ ಸೈನ್ಯವೇ ನಮ್ಮ ಮಾಂಸ ಕಿತ್ತುಕೋ) ಎಂಬ ಬ್ಯಾನರ್ ಗಳನ್ನು ಅವರು ಹಿಡಿದಿದ್ದರು. ಸೈನಿಕರ ಬಂದೂಕಿನ ನಳಿಗೆಯೆದುರು ಆ ತಾಯಂದಿರ ಬೆತ್ತಲೇ ದೇಹಗಳೇ ಆಯುಧಗಳಾಗಿದ್ದವು. ಈ ಘಟನೆಯಿಂದಾಗಿ ಸಮಸ್ತ ಭಾರತವೇ ದಿಗ್ಭ್ರಮೆಗೊಂಡು ಈಶಾನ್ಯ ರಾಜ್ಯಗಳೆಡೆಗೆ ತಲ್ಲಣದ ನೋಟ ಬೀರಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲೂ ಇದು ದೊಡ್ಡ ಸುದ್ದಿ ಮಾಡಿತ್ತು.
ಬಿಜೆಪಿ ಅಪ್ಸಾದ ಬಗ್ಗೆ ಏನನ್ನೂ ಹೇಳಿಕೊಳ್ಳದ ಕಾರಣ ಅದು ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬಹುದು. ಆದರೆ ಕಾಂಗ್ರೇಸ್ 1952 ರ ಈ ಅಪ್ಸಾ ಕಾಯಿದೆಯನ್ನು ತಿದ್ದುಪಡಿ ಮಾಡುವುದಾಗಿ ಸ್ಪಷ್ಟವಾಗಿ ಹೇಳಿಕೊಂಡಿದೆ. ಸ್ಥಳೀಯ ಜನರು ಮತ್ತು ಮಾನವ ಹಕ್ಕು ಹೋರಾಟಗಾರರು ಬಹುಕಾಲದಿಂದಲೂ ಈ ಕಾಯ್ದೆಯ ರದ್ದತಿಗಾಗಿ ಒತ್ತಾಯಿಸುತ್ತಿದ್ದಾರೆ. ಒಬ್ಬ ಮಹಿಳೆಯಾಗಿ, ಈಶಾನ್ಯ ರಾಜ್ಯಗಳ ಬದುಕಿನ ವೈವಿಧ್ಯತೆಯ ಉಳಿವಿಗಾಗಿ ಕಾಂಗ್ರೆಸ್ ಪಕ್ಷ ನಡೆಯನ್ನು ನಾನು ಸ್ವಾಗತಿಸುತ್ತೇನೆ.
ಐಪಿಸಿ ಸೆಕ್ಷನ್ 124A; ದೇಶದ್ರೋಹಿ ಕಾಯಿದೆ: ವಿರೋಧಿ ಧ್ವನಿಯನ್ನು ಹತ್ತಿಕ್ಕಲು, ಅಡಗಿಸಲು ಮೋದಿ ಸರಕಾರ ಬಳಸುತ್ತಿದೆ..
ಅಭಿಪ್ರಾಯ ಬೇಧವೇ ಪ್ರಜಾಪ್ರಭುತ್ವದ ಸೊಬಗು ಆದರೆ ಕಾಶ್ಮೀರಿತನವನ್ನು ಉಳಿಸಿಕೊಳ್ಳುವುದಕ್ಕಾಗಿ ಧ್ವನಿಯೆತ್ತುತ್ತಿರುವ ಕಾ²äÃರಿಗಳನ್ನು, ವಿದ್ಯಾರ್ಥಿಗಳನ್ನು ಮೋದಿ ಪಡೆ ‘ತುಕ್ಡೆ ತುಕ್ಡೆ ಗ್ಯಾಂಗ್’ ಎಂದು ಕರೆದು ಅವರ ದನಿಯಡಗಿಸಲು ಪ್ರಯತ್ನಿಸಿತ್ತು.. ಕ್ರಮೇಣ ಕೇಂದ್ರ ಸರಕಾರ ಆ ಗ್ಯಾಂಗ್ ನ ವ್ಯಾಖ್ಯೆಯನ್ನು ವಿಸ್ತರಿಸಿ ಕೇಂದ್ರ ಸರಕಾರದ ಅರ್ಥಾತ್ ಮೋದಿ ನಡೆಯನ್ನು ಪ್ರಶ್ನಿಸಿದವರನ್ನೆಲ್ಲಾ ಈ ಗ್ಯಾಂಗ್ ಗೆ ಸೇರ್ಪಡಿಸುತ್ತಾ ಹೋಗುತ್ತಿದೆ. ಅದಕ್ಕಾಗಿ ಅವರು ಉಪಯೋಗಿಸಿಕೊಳ್ಳುತ್ತಿರುವುದು ಇಂಡಿಯನ್ ಪೀನಲ್ ಕೋಡ್ ನ ಸೆಕ್ಷನ್ 124A ನ್ನು. ಇದು ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ‘ದೇಶದ್ರೋಹಿ’ ಎಂದು ಘೋಷಿಸಿ ಶಿಕ್ಷಿಸಲು ಬ್ರಿಟಿಷರು ಜಾರಿಗೆ ತಂದಿದ್ದ ರಾಜದ್ರೋಹದ ಕರಾಳ ಸೆಕ್ಷನ್ ಇದು. ಗಾಂಧೀಜಿ, ಭಗತ್ ಸಿಂಗ್ ಮೊದಲಾದವರನ್ನು ಈ ಸೆಕ್ಷನ್ ಅಡಿ ಜೈಲಿಗೆ ಕಳಿಸಲಾಗಿತ್ತು. ಇತ್ತೀಚೆಗೆ ಎರಡು ವರ್ಷಗಳ ಹಿಂದೆ JNU ವಿದ್ಯ್ಯಾಥಿಗಳನ್ನು ಬಗ್ಗು ಬಡಿಯಲು ಕೇಂದ್ರ ಸರಕಾರವು ಈ ಕಾನೂನನ್ನು ಉಪಯೋಗಿಸಿಕೊಂಡಿತ್ತು. ಕನ್ನಯ್ಯ ಕುಮಾರ್ ಮೇಲೆ ಈ ಸೆಕ್ಷನ್ ಹಾಕಿ ಸೆಡಿಶನ್ ಚಾರ್ಜ್ ಹಾಕಿ ಬಂಧಿಸಿತ್ತು. ಮಣಿಪುರದ ಬಿಜೆಪಿ ಸರಕಾರವು ಪತ್ರಕರ್ತ ಕಿಶೋರ್ ಚಂದ್ರ ವಾಂಗ್ಕೆಮ್ ಅನ್ನು ನಾಲ್ಕು ತಿಂಗಳ ಹಿಂದೆ ಬಂದಿಸಿದ್ದು ಮೊನ್ನೆ ಮಣಿಪುರ ಹೈಕೋರ್ಟಿನ ಆದೇಶದ ಮೇರೆಗೆ ಮೊನ್ನೆ ಬಿಡುಗಡೆಗೊಳಿಸಿದೆ. ಮೊನ್ನೆ ಗೃಹಮಂತ್ರಿ ರಾಜನಾಥ್ ಮಾತ್ರ ಬಿಜೆಪಿ ಅಧಿಕಾರಕ್ಕೆ ಬಂದರೆ ‘ದೇಶದ್ರೋಹಿ’ ಕಾನೂನನ್ನು ಇನ್ನಷ್ಟು ಕಠಿಣಗೊಳಿಸುವುದಾಗಿ ಹೇಳಿಕೆ ಇತ್ತಿದ್ದಾರೆ.

ಗುಜರಾತಿನ ಹಾರ್ಧಿಕ್ ಪಟೇಲ್, ಕಾನ್ಪುರದ ಕಲಾವಿದ ಅಸೀಮ್ ತ್ರಿವೇದಿ, ಛತ್ತಿಸ್ ಗಡದ ಬಿನಾಯಕ್ ಸೇನ್, ಶಿರೋಮಣಿ ಅಕಾಲಿ ದಳದ ಸಿಮ್ರನ್ಜೀತ್ ಸಿಂಗ್ ಮಾನ್, ಆಂಧ್ರ ಪ್ರದೇಶದ ಜನಪ್ರತಿನಿಧಿ ಅಕ್ಬರುದ್ಧಿನ್ ಓವೈಸಿ ಇವರೆಲ್ಲರೂ ಅಯಂಟಿ ನೇಷನಲಿಸ್ಟ್ [ದೇಶದ್ರೋಹಿಗಳು] ಎಂಬ ಆರೋಪದಡಿ ಬಂ¢üತರಾಗಿದ್ದರು. ಈ ಕಾನೂನಿನ ದುರುಪಯೋಗದ ಭಯದಲ್ಲೇ ಅನೇಕ ಚಿಂತಕರು, ಬರಹಗಾರರು, ಕಲಾವಿದರು ಕತ್ತಿಯ ಮೊನೆಯ ಬದುಕನ್ನು ಬದುಕುತ್ತಿದ್ದಾರೆ ಈಗ ಕಾಂಗ್ರೆಸ್ 124A ಸೆಕ್ಷನ್ ರದ್ದುಗೊಳಿಸುವುದಾಗಿ ಹೇಳಿದೆ.
ಕಾನೂನು ಕಾಲದಿಂದ ಕಾಲಕ್ಕೆ ವರ್ತಮಾನಕ್ಕನುಗುಣವಾಗಿ ಪರಿಷ್ಕೃತಗೊಳ್ಳುತ್ತಿರಬೇಕು. ತಿದ್ದುಪಡಿಗಳಿಗೆ ಒಳಗಾಗಲೇ ಬೇಕು.

ಉಷಾ ಕಟ್ಟೆಮನೆ.
Disclaimer: The views expressed in the articles are those of the authors and do not necessarily represent or reflect the views of TruthIndia
More Articles
By the same author