ಭಾರತ ಇಂದು ಸ್ವಾತಂತ್ರ್ಯದ ಬೆಳಕನ್ನು ಕಾಣುವಂತಾಗಬೇಕಾದರೆ ಅಂದು ಸಾವಿರಾರು ಜನ ನೆತ್ತರು ಹರಿಸಿದ್ದಾರೆ, ಲಕ್ಷಾಂತರ ಮಂದಿ ಗೋರಿಯಾಗಿದ್ದಾರೆ. ಭಾರತದ ಚರಿತ್ರೆಯ ಪುಟಗಳಲ್ಲಿ ಜಲಿಯನ್ವಾಲಾಬಾಗ್ ಹತ್ಯಾಕಾಂಡ ಅಳಿಸಲಾರದ ಮುದ್ರೆ ಒತ್ತಿಬಿಟ್ಟಿದೆ. 1919ರಲ್ಲಿ ಪಂಜಾಬ ಪ್ರಾಂತ್ಯ ಅಮೃತಸರದ ಜಲಿಯನ್ವಾಲಾಬಾಗ್ ಎಂಬ ಉದ್ಯಾನವನದಲ್ಲಿ ಬ್ರಿಟಿಷರು ಭಾರತೀಯರ ಮೇಲೆ ನಡೆಸಿದ ಗುಂಡಿನ ದಾಳಿ ಸಾವಿರಾರು ಶಾಂತಿಯುತ ಚಳವಳಿಕಾರರ, ಜನಸಾಮಾನ್ಯರ ಜೀವ ಬಲಿಪಡೆದುಕೊಂಡಿತ್ತು.
ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅತ್ಯಂತ ಘೋರ ಕೃತ್ಯಗಳಲ್ಲಿ ಪ್ರಮುಖ ಎನಿಸಿರುವ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ನಡೆದು ಒಂದು ನೂರು ವರ್ಷಗಳೇ ಕಳೆದರೂ ಬ್ರಿಟಿಷ್ ಸರ್ಕಾರ ಇನ್ನೂ ಕ್ಷಮೆ ಯಾಚಿಸಲು ಹಿಂದೆಮುಂದೆ ನೋಡುತ್ತಿದೆ. ಇಂದು ಭಾರತದ ಬ್ರಿಟೀಷ್ ರಾಯಭಾರಿ ಜಲಿಯನ್ವಾಲಾ ಬಾಗ್ ಘಟನೆಯನ್ನು ಬ್ರಿಟೀಷ್ ಭಾರತದ ಚರಿತ್ರೆಯಲ್ಲಿನ ನಾಚಿಕೆಗೇಡಿನ ಕೃತ್ಯ ಎಂದು ಕರೆದಿದ್ದಾರೆ.
ಹತ್ಯಾಕಾಂಡದಲ್ಲಿ ಜೀವತ್ಯಾಗ ಮಾಡಿದ ಸಾವಿರಾರು ಹುತಾತ್ಮರಿಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತಿತರರು ಸೇರಿದಂತೆ ನೂರಾರು ಗಣ್ಯರು ಇಂದು ಗೌರವ ಸಮರ್ಪಿಸಿದರು.
ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ನೂರನೇ ಸಂಸ್ಮರಣ ದಿನವಾದ ಇಂದು ಭಾರತದ ಬ್ರಿಟೀಷ್ ಹೈ ಕಮೀಷನರ್ ಡೊಮಿನಿಕ್ ಅಸ್ಕ್ವಿತ್ ಅವರು ಪಂಜಾಬದ ಅಮೃತಸರದಲ್ಲಿರುವ ಸ್ಮಾರಕಕ್ಕೆ ಭೇಟಿ ನೀಡಿ ಹೂಗುಚ್ಛವನ್ನರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಅವರು ಸಂದರ್ಶಕರ ದಿನಚರಿಯಲ್ಲಿ ಬರೆಯುತ್ತಾ, ನೂರು ವರ್ಷಗಳ ಹಿಂದೆ ಜಲಿಯನ್ವಾಲಾಬಾಗ್ನಲ್ಲಿ ನಡೆದ ಘಟನೆಗಳು ಬ್ರಿಟೀಷ್ ಭಾರತದ ಚರಿತ್ರೆಯಲ್ಲಿ ಇಂದು ನಾಚಿಕೆಗೇಡಿನ ಕೃತ್ಯವನ್ನು ಬಿಂಬಿಸುತ್ತದೆ. ಅಂದು ಏನು ನಡೆದಿತ್ತು ಎಂಬುದರ ಬಗ್ಗೆ ಮತ್ತು ಸಾವುನೋವುಗಳು ಸಂಭವಿಸಿದ್ದರ ಬಗ್ಗೆ ನಾವು ವಿಷಾದಿಸುತ್ತೇವೆ. ಇಂದು ಬ್ರಿಟನ್ ಮತ್ತು ಭಾರತ ದೇಶಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ 21ನೇ ಶತಮಾನದ ಪಾಲುದಾರಿಕೆಯನ್ನು ಬೆಳೆಸಿ ಮುಂದುವರಿಸುವಲ್ಲಿ ಬದ್ಧತೆ ತೋರಿವೆ ಎಂದು ನನಗೆ ಸಂತಸವಾಗುತ್ತಿದೆ. ಎಂದಿದ್ದಾರೆ.
ಜಲಿಯನ್ವಾಲಾ ಬಾಗ್ ಹತ್ಯಾಕಾಂಡದಲ್ಲಿ ಜೀವ ಕಳೆದುಕೊಂಡವರನ್ನು ಸ್ಮರಿಸುತ್ತಾ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಇಂದು ಘೋರ ಜಲಿಯನ್ವಾಲಾಬಾಗ್ ಹತ್ಯಾಕಾಂಡದ 100ನೇ ವರ್ಷದಂದು ಆ ಕರಾಳ ದಿನದಂದು ಹುತಾತ್ಮರಾದ ಎಲ್ಲರಿಗೂ ಭಾರತ ಶ್ರದ್ಧಾಂಜಲಿ ಅರ್ಪಿಸುತ್ತದೆ. ಅವರ ಶೌರ್ಯ ಮತ್ತು ಬಲುದಾನಗಳನ್ನು ಎಂದೂ ಮರೆಯಲಾಗದು. ಅವರು ಹೆಮ್ಮೆ ಪಡುವಂತಹ ಭಾರತವನ್ನು ನಿರ್ಮಿಸಲು ಇನ್ನಷ್ಟು ಹೆಚ್ಚು ಶ್ರಮಪಡುವಂತೆ ಅವರ ನೆನಪುಗಳೇ ನಮಗೆ ಸ್ಫೂರ್ತಿದಾಯಕವಾಗಿವೆ.
ಅಮೃತಸರದ ಸುವರ್ಣ ಮಂದಿರದಲ್ಲಿ ಪೂಜೆ ಸಲ್ಲಿಸಿ ಜಲಿಯನ್ವಾಲಾಬಾಗ್ ಸ್ಮಾರಕದಲ್ಲಿ ಹೂಗಚ್ಛವಿರಿಸಿದ ರಾಹುಲ್ ಗಾಂಧಿ ಹುತಾತ್ಮರಿಗೆ ಗೌರವ ಸಮರ್ಪಿಸಿದರು.
ಇತ್ತೀಚೆಗೆ ಬ್ರಿಟೀಷ್ ಪ್ರಧಾನಿ ತೆರೇಸಾ ಮೇ ಜಲಿಯನ್ವಾಲಾಬಾಗ್ ಹತ್ಯಾಕಾಂಡವನ್ನು ಬ್ರಿಟೀಷ್ ಭಾರತದ ಚರಿತ್ರೆಯಲ್ಲಿನ ನಾಚಿಕೆಗೇಡಿನ ಕೃತ್ಯ ಎಂದಿದ್ದರೂ ಅಧಿಕೃತವಾಗಿ ಕ್ಷಮಾಯಾಚನೆಗೆ ಮುಂದಾಗಿರಲಿಲ್ಲ. ಜಲಿಯನ್ವಾಲಾಬಾಗ್ ಘಟನೆಯ ನೂರು ವರ್ಷದ ನೆನಪಿನ ಸಂದರ್ಭದಲ್ಲಿ ಪಂಜಾಬದ ಮುಖ್ಯಮಂತ್ರಿ ಅಮರೀಂದರ ಸಿಂಗ್ ಮಾತನಾಡಿ, ಬ್ರಿಟೀಷ್ ಪ್ರಧಾನಿಯವರು ವ್ಯಕ್ತಪಡಿಸಿರುವ ವಿಷಾದವಷ್ಟೇ ಸಾಕಾಗುವುದಿಲ್ಲವೆಂದೂ ಬ್ರಿಟನ್ ಸರ್ಕಾರ ಅಧಿಕೃತವಾಗಿ ಕ್ಷಮೆ ಯಾಚಿಸಬೇಕೆಂದು ಹೇಳಿದ್ದಾರೆ. ನಿನ್ನೆ ಸಂಜೆ ಜಲಿಯನ್ವಾಲಾಬಾಗ್ ಹುತಾತ್ಮರನ್ನು ಸ್ಮರಿಸಿ ನೂರಾರು ಮಂದಿ ಕೈಗಳಲ್ಲಿ ಮೋಂಬತ್ತಿ ಹಿಡಿದು ನಡೆಸಿದ ಮರೆವಣಿಗೆಯಲ್ಲಿ ಮುಖ್ಯಮಂತ್ರಿ ಅಮರೀಂದರ ಸಿಂಗ್ ಮತ್ತು ರಾಜ್ಯಪಾಲ ವಿಪಿಎಸ್ ಬದನೋರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
1919ರ ಏಪ್ರಿಲ್ನಲ್ಲಿ ಬೈಸಾಖಿಯ ದಿನ, ಅಮೃತಸರದ ಜಲಿಯನ್ವಾಲಾ ಬಾಗ್ ಎಂಬ ಉದ್ಯಾನವನದಲ್ಲಿ ಸ್ವಾತಂತ್ರ್ಯ ಚಳವಳಿಕಾರರು ಜನಸಾಮಾನ್ಯರನ್ನು ಸೇರಿಸಿ ಶಾಂತಿಯುತವಾಗಿ ಸಭೆ ಮಾಡುತ್ತಿದ್ದಾಗ ಕರ್ನಲ್ ರೆಜಿನಾಲ್ಡ್ ಡೈಯರ್ ಎಂಬ ಬ್ರಿಟೀಷ್ ಅಧಿಕಾರಿಯ ಆದೇಶದ ಮೇರೆಗೆ ಸಾವಿರಾರು ಅಮಾಯಕ ಭಾರತೀಯ ಪ್ರಜೆಗಳ ಮೇಲೆ ಗುಂಡು ಹಾರಿಸಲಾಯಿತು. ಸಣ್ಣ ದ್ವಾರದ ಉದ್ಯಾನವನವನ್ನು ತಡೆಹಿಡಿದ ಬ್ರಿಟೀಷ್ ಪೊಲೀಸರು ಮಕ್ಕಳು, ಮಹಿಳೆಯರು, ಶಸ್ತ್ರಾಸ್ತ್ರವಿಲ್ಲದ ಪುರುಷರು, ಯಾರೆಂದರವರ ಮೇಲೆ ಗುಂಡಿನ ಮಳೆ ಸುರಿಸಿ ಸಹಸ್ರಾರು ಮಂದಿಯ ಪ್ರಾಣ ತೆಗೆದರು. ಜನ ದಿಕ್ಕಾಪಾಲಾಗಿ ಓಡಿ ಅಲ್ಲೇ ಇದ್ದ ಬಾವಿಯೊಳಗೆ ಬಿದ್ದಾಗಲೂ ಬ್ರಿಟೀಷರ ಕೋವಿಗಳು ಬಾವಿಗಳೊಳಗೆ ಇಣುಕಿದ್ದಕ್ಕೆ ಬಾವಿಯ ಗೋಡೆಗಳೊಳಗೆಲ್ಲಾ ಗುಂಡುಗಳು ಬಿದ್ದ ಗುರುತುಗಳು ಹಸಿಯಾಗಿವೆ. ಈ ಹತ್ಯಾಕಾಂಡ ಬ್ರಿಟೀಷರ ವಿರುದ್ಧ ಭಾರತೀಯರು ನಡೆಸಿದ ಸ್ವಾತಂತ್ರ್ಯ ಚಳವಳಿಯ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ಇದು ಭಗತ್ ಸಿಂಗ್ನಂತಹ ಅಸಂಖ್ಯಾತ ಯುವಜನರನ್ನು ಸ್ವಾತಂತ್ರ್ಯ ಚಳವಳಿಗೆ ಧುಮುಕಲು ಪ್ರೇರೇಪಿಸಿತು.
ಭಾರತದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಜಲಿಯನ್ವಾಲಾಬಾಗ್ ಹುತಾತ್ಮರ ಸ್ಮರಣಾರ್ಥ ನಾಣ್ಯ ಮತ್ತು ಪೋಸ್ಟಲ್ ಸ್ಟಾಂಪ್ನ್ನು ಬಿಡುಗಡೆ ಮಾಡಲಿದ್ದಾರೆ.
ನಡೆದಿರುವ ಘೋರ ಕೃತ್ಯಕ್ಕಾಗಿ ಹತ್ಯಾಕಾಂಡದಲ್ಲಿ ಜೀವ ಕಳೆದುಕೊಂಡವರಿಗೆ ಸರ್ಕಾರ ಸ್ಪಷ್ಟವಾದ ಮತ್ತು ತಿಳಿಯಾದ ಮಾತುಗಳಲ್ಲಿ ಪೂರ್ಣವಾದ ಕ್ಷಮಾಯಾಚನೆ ಮಾಡಬೇಕಿದೆ ಎಂದು ಬ್ರಿಟನ್ನಿನ ವಿರೋಧ ಪಕ್ಷವಾಗಿರುವ ಲೇಬರ್ ಪಕ್ಷದ ನಾಯಕ ಜೆರಿಮಿ ಕಾರ್ಬಿನ್ ಒತ್ತಾಯಿಸಿದ್ದಾರೆ. 2013ರಲ್ಲಿ ಅಂದಿನ ಬ್ರಿಟೀಷ್ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರೂನ್ ಸಹ ಅಮೃತಸರಕ್ಕೆ ಭೇಟಿ ಕೊಟ್ಟಾಗ ಜಲಿಯನ್ವಾಲಾ ಬಾಗ್ ಘಟನೆಯನ್ನು ತೀರಾ ನಾಚಿಕೆಗೇಡಿನದ್ದು ಎಂದಿದ್ದರೇ ಹೊರತು ಅವರೂ ಕ್ಷಮೆ ಯಾಚಿಸಿರಲಿಲ್ಲ.
ಭಾರತದ ವಿಮೋಚನಾ ಚಳವಳಿಯಷ್ಟೇ ಅಲ್ಲ, ಮಾನವ ಚರಿತ್ರೆಯಲ್ಲೇ ಎಂದೂ ಮರೆಯಲಾರದ ಕರಾಳ ಅಧ್ಯಾಯ ಜಲಿಯನ್ವಾಲಾಬಾಗ್ ಹತ್ಯಾಕಾಂಡ ಎನ್ನಬಹುದು.