“ನಾನು ಹೇಗೂ ಗೆಲ್ಲುತ್ತೇನೆ. ಆದರೆ ಮುಸ್ಲಿಮರು ನನಗೆ ಓಟು ಹಾಕದಿದ್ದರೆ ಮುಂದೆ ಅವರಿಗೆ ಕೆಲಸ ಮಾಡಿಕೊಡುವುದಿಲ್ಲ” ಎಂದು ಮುಸ್ಲಿಂ ಮತದಾರರನ್ನು ಉದ್ದೇಶಿಸಿ ಪರೋಕ್ಷ ಬೆದರಿಕೆ ಒಡ್ಡಿದ್ದ ಕೇಂದ್ರ ಸಚಿವೆ ಮನೇಕಾ ಗಾಂಧಿಗೆ ಚುನಾವಣಾ ಆಯೋಗ ಶೊಕಾಸ್ ನೋಟೀಸ್ ಜಾರಿ ಮಾಡಿದೆ.
ಏಪ್ರಿಲ್ 11ರ ಗುರುವಾರದಂದು ಉತ್ತರಪ್ರದೇಶದ ಸುಲ್ತಾನಪುರದಲ್ಲಿ ಪ್ರಚಾರ ನಡೆಸುತ್ತಾ ಕೇಂದ್ರ ಸಚಿವೆ ಮನೇಕಾ ಗಾಂಧಿ ಮುಸ್ಲಿಮ್ ಸಮುದಾಯದ ಜನರನ್ನು ತನಗೇ ಮತ ಚಲಾಯಿಸುವಂತೆ ಒತ್ತಡ ಹೇರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಒಂದು ವೇಳೆ ಮುಸ್ಲಿಮರು ತನಗೆ ಮತ ಚಲಾಯಿಸದೇ ಹೋದಲ್ಲಿ ಮತ್ತು ತಾನು ಗೆದ್ದಾಗ ಅವರಿಗಾಗಿ ಕೆಲಸ ಮಾಡುವುದಿಲ್ಲ ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರು.
“ಇದು ಮುಖ್ಯ. ನಾನು ಗೆಲ್ಲುತ್ತಿದ್ದೇನೆ. ಜನರ ಪ್ರೀತಿ ಮತ್ತು ಬೆಂಬಲದಿಂದ ನಾನು ಗೆಲ್ಲುತ್ತಿದ್ದೇನೆ. ಆದರೆ ಮುಸ್ಲಿಮರ ಬೆಂಬಲವಿಲ್ಲದೇ ಗೆದ್ದರೆ ನನಗೆ ಅಷ್ಟು ಖುಷಿ ಆಗುವುದಿಲ್ಲ. ದಿಲ್ ಖಟ್ಟಾ ಹೋ ಜಾಯೇಗಾ (ಮನಸಿಗೆ ಕಹಿ ಎನಿಸುತ್ತದೆ). ಆಗ ನನ್ನ ಬಳಿ ಯಾರಾದರೂ ಕೆಲಸ ಮಾಡಿಕೊಡಿ ಎಂದು ಮುಸ್ಲಿಮರು ಬಂದರೆ ಆಗ ನಾನು ಯೋಚಿಸಬೇಕಾಗುತ್ತದೆ. ಇದೆಲ್ಲಾ ಕೊಟ್ಟು ತೆಗೆದುಕೊಳ್ಳುವ ವ್ಯವಹಾರ. ಅಲ್ಲವೇ? ನಾವೆಲ್ಲಾ ಮಹಾತ್ಮಾ ಗಾಂಧಿ ಮಕ್ಕಳಲ್ಲ , ಅಲ್ಲವೇ? (ನಗು). ನಾವು ಕೊಡುತ್ತಲೇ ಹೋಗುವುದು ನಂತರ ಸೋಲುವುದು ಅಲ್ಲ. ನೀವು ಬೆಂಬಲಿಸಲಿ, ಬೆಂಬಲಿಸದೇ ಇರಲಿ, ಗೆಲುವಂತೂ ಆಗುತ್ತೆ” ಎಂದಿದ್ದಾರೆ.
ಚುನಾವಣಾ ಆಯೋಗವು ಈ ವಿಚಾರವನ್ನು ಗಮನಿಸಿದೆ ಎಂದು ಉಪ ಮುಖ್ಯ ಚುನಾವಣಾ ಅಧಿಕಾರಿ ಬಿ.ಆರ್.ತಿವಾರಿ ತಿಳಿಸಿದ್ದಾರೆ. ಜಿಲ್ಲೆಯ ಚುನಾವಣಾ ಅಧಿಕಾರಿಯೂ ಆಗಿರುವ ಸುಲ್ತಾನಪುರದ ಜಿಲ್ಲಾಧಿಕಾರಿ ಮನೇಕಾ ಗಾಂಧಿಯವರಿಗೆ ಕಾರಣ ಕೇಳಿ (ಶೋ ಕಾಸ್) ನೋಟೀಸ್ ನೀಡಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ವರದಿಯೊಂದನ್ನು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಚೋದನಾಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಏಪ್ರಿಲ್ 12ರ ಶುಕ್ರವಾರದಂದು ಸ್ಪಷ್ಟೀಕರಣ ನೀಡಿರುವ ಬಿಜೆಪಿ ನಾಯಕಿ ಮನೇಕಾ ಗಾಂಧಿ, ತನ್ನ ಭಾಷಣದ ಅಪೂರ್ಣ ಮತ್ತು ಸಾಂದರ್ಭಿಕವಲ್ಲದ ಭಾಗವನ್ನು ಯಾವುದೋ ಒಂದು ಮಾಧ್ಯಮ ವಾಹಿನಿ ಪ್ರಸಾರ ಮಾಡಿದ್ದಾಗಿ ತಿಳಿಸಿದ್ದಾರೆ.
“ನಾನು ನಮ್ಮ ಅಲ್ಪಸಂಖ್ಯಾತ ಘಟಕದ ಸಭೆ ಕರೆದಿದ್ದೆ. ಆ ಒಂದು ವಾಕ್ಯವನ್ನು ಅಪೂರ್ಣವಾಗಿ ಮತ್ತು ಸಂದರ್ಭಕ್ಕೆ ಸರಿ ಹೊಂದದಂತೆ ವಾಹಿನಿಯೊಂದು ಪ್ರಸಾರ ಮಾಡುತ್ತಿದೆ” ಎಂದು ಮನೇಕಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
2014ರಲ್ಲಿ ಪಿಲಿಬಿಟ್ನಿಂದ ಸಂಸದೆಯಾಗಿ ಆಯ್ಕೆಯಾಗಿರುವ ಮನೇಕಾ ಗಾಂಧಿ, 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಸುಲ್ತಾನಪುರ ಮತಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಚುನಾವಣೆಯಲ್ಲಿ ಸಂಸದನಾಗಿ ಗೆಲ್ಲುವ ಯಾವುದೇ ಅಭ್ಯರ್ಥಿ ತನ್ನ ಕ್ಷೇತ್ರದಲ್ಲಿ ತನಗೆ ಮತ ಹಾಕಿದ, ಮತ ಹಾಕದ ಎಲ್ಲರನ್ನೂ ಸಮಾನರಾಗಿ ನೋಡಬೇಕು, ಪ್ರತಿಯೊಬ್ಬರ ಪ್ರತಿನಿಧಿಯಾಗಿ ಸಂಸತ್ತಿನಲ್ಲಿ ಪ್ರತಿನಿಧಿಸಿಬೇಕು. ಸಂವಿಧಾನ ಈ ಕರ್ತವ್ಯವನ್ನು ಅವರ ಮೇಲೆ ವಹಿಸಿರುತ್ತದೆ. ಸಂಸದರೊಬ್ಬರು ಪ್ರಮಾಣವಚನ ಸ್ವೀಕರಿಸುವಾಗ ತಾನು ಕೆಲಸ ನಿರ್ವಹಿಸುವಾಗ ಯಾವುದೇ ಜಾತಿ, ಧರ್ಮ, ವರ್ಗ ಬೇಧ ಎಣಿಸದೇ ಸೇವೆ ಸಲ್ಲಿಸುತ್ತೇನೆ ಎಂಬ ಪ್ರಮಾಣವಚನ ತೆಗೆದುಕೊಂಡಿರುತ್ತಾರೆ. ಆದರೆ ಮನೇಕಾ ಗಾಂಧಿಯವರ ಮಾತುಗಳು ಸಂವಿಧಾನ ವಿರೋಧಿಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಆಯೋಗ ನೋಟೀಸ್ ನೀಡಿದೆ.
ಮನೇಕಾ ಗಾಂಧಿ ಸುಲ್ತಾನಪುರದ ಪ್ರಚಾರ ಭಾಷಣದಲ್ಲಿ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯ ವಿಡೀಯೊ ತುಣುಕು ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.
Maneka Gandhi threatening voters that she will watch booth wise votes to decide whom to be helped once she wins.
Sakshi Maharaj says as a ‘Sanyasi’ he’ll curse people if they won’t vote for him!BJP is a Party with a Difference 😁
pic.twitter.com/sG1X65WJ5s— Ravi Nair (@t_d_h_nair) April 12, 2019